ಸೋಮವಾರ, ನವೆಂಬರ್ 18, 2019
26 °C
ಕಥೆ

ದೇಹವೂ ಜೀವವೂ

Published:
Updated:

ಅದು ಗತಕಾಲ ಎಂದರೆ ಗತ ಕಾಲ, ಇಲ್ಲ ಎಂದರೆ ಈ ಕಾಲ. ಅದೊಂದು ದೂರದ ಮರೆಯ ಕುಗ್ರಾಮ. ಅದಕ್ಕೆ ಸುತ್ತಿಕೊಂಡಂತೆ ಹತ್ತಾರು ಕಾಲುದಾರಿಯ ಹಳ್ಳಿಗಳು. ಅಲ್ಲೊಬ್ಬಳು ಮುಪ್ಪಾನು ಮುದುಕಿ. ಊರೂರು ಅಲೆದು ಬಾಳೆಹಣ್ಣು ಮಾರುವುದು ಅವಳ ನಿತ್ಯ ಕಾಯಕ. ದಿಕ್ಕೆಟ್ಟ ತನ್ನ ಮೊಮ್ಮಕ್ಕಳ ಸೊಂಟಕ್ಕೆ ಕಟ್ಟಿಕೊಂಡು ದಣಿದ ಕೈ, ಕಾಲುಗಳಿಂದ ಬದುಕಿನ ತೆಪ್ಪವ ತೇಲಿಸುತ್ತಿದ್ದಳು.ಆ ಹಳ್ಳಿಗಳ ಯಾರು ಯಾರೋ ಪೇಟೆಗಳ ನಾಜೂಕು ಚಾಕರಿಗೆ ಹಾರಿ ಹೋಗುತ್ತಿದ್ದರೂ ಮುದುಕಿ ಮಾತ್ರ ಬಾಳೆಹಣ್ಣು ಮಾರಿ ಬದುಕುವುದನ್ನು ಬಿಟ್ಟಿರಲಿಲ್ಲ. ರಸವತ್ತಾದ ಒಳ್ಳೊಳ್ಳೆಯ ಬಾಳೆಹಣ್ಣುಗಳನ್ನೇ ಅವಳು ಕೇಳಿದವರ ಬೆಲೆಗೇ ಕೊಟ್ಟು ಬಿಡುತ್ತಿದ್ದಳು. ಬಾಳೆಕಾಯಿ ಗೊನೆಗಳ ತಂದು ಗುಡಾಣಗಳಲ್ಲಿ ಮಾಗಿಸಿ ಒಂದೊಂದೇ ಚಿಪ್ಪನ್ನು ಉಪಾಯವಾಗಿ ಬುಟ್ಟಿಯಲ್ಲಿಟ್ಟು ಕಣ್ಣತುಂಬ ಚಿನ್ನದ ಬಣ್ಣದ ಆ ಹಣ್ಣುಗಳ ತುಂಬಿಕೊಂಡು, ಬುಟ್ಟಿಗೊಮ್ಮೆ ಮುಟ್ಟಿ ಕೈ ಮುಗಿದು ತಲೆ ಮೇಲೆ ಹೊತ್ತಿ ನಡೆದಳು ಎಂದರೆ ಆ ಚಿನ್ನದ, ರನ್ನದ ಸೂರ್ಯನೇ ಅವಳ ಬಾಳೆಹಣ್ಣಿನ ಆಸೆಯಲ್ಲಿ ಹಿಂಬಾಲಿಸಿ ಬರುವಂತೆ ಅವಳ ನೆರಳಿಗೆ ಅಂಟಿಕೊಂಡಂತೆಯೇ ಸಾಗುತ್ತಿದ್ದ.ಮೊಮ್ಮಕ್ಕಳು ಒಂದಾದರೂ ಬಾಳೆಹಣ್ಣು ಕೊಡು ಎಂದರೂ ಮುದುಕಿ ಒಪ್ಪುತ್ತಿರಲಿಲ್ಲ. ತಾನು ಕೂಡ ಎಂದಾದರೂ ಒಂದು ಬಾಳೆಹಣ್ಣನ್ನು ತಿಂದಿರಲಿಲ್ಲ. ಅವಳ ಬಾಳಿನ ಪಾಲಿಗೆ ಒಂದು ಬಾಳೆಹಣ್ಣನ್ನು ಮಾರಲಾಗದೆ ಸುಮ್ಮನೆ ಕಳೆದುಕೊಂಡೆ ಎಂದರೆ ಆ ದಿನದ ಒಂದು ತುತ್ತನ್ನು ಕಳೆದುಕೊಂಡಂತೆಯೇ ಆಗುತ್ತಿತ್ತು. ಹಾಗಾಗಿ ಆಕೆ ಯಾರೊಬ್ಬರಿಗೂ ಬಿಟ್ಟಿಯಾಗಿ ಎಂದೂ ಒಂದು ಬಾಳೆಹಣ್ಣನ್ನು ಕೊಟ್ಟಿರಲಿಲ್ಲ.ಈ ಒಂದೊಂದು ಬಾಳೆಹಣ್ಣು ಕೂಡ ಯಾರು ಯಾರದೊ ಒಂದೊಂದು ತುತ್ತು... ಅದನ್ನು ತಾನು ತಿಂದುಬಿಟ್ಟರೆ ತುತ್ತು ಕಿತ್ತುಕೊಂಡ ಅನ್ಯಾಯಕ್ಕೆ ತಾನೇಕೆ ತುತ್ತಾಗಬೇಕೆಂದು ಕಠಿಣ ವ್ರತದಂತೆ ತಿನ್ನುವ ಆಸೆಯನ್ನೇ ಬಿಟ್ಟುಬಿಟ್ಟಿದ್ದಳು. ಇಂತಹ ಅವಳ ನಿಷ್ಠೆಯ ಕಾಯಕದ ಒಂದು ದಿನ, ಅಷ್ಟೂ ಕಾಲದ ತನಕ ಆ ಮುದುಕಿಯ ದೇಹದಲ್ಲಿ ವಾಸವಿದ್ದ ಅವಳ ಜೀವ ಬಹಳ ನೊಂದುಕೊಂಡಿತು.`ಅಲ್ಲಾ ಯೀ ಮುದ್ಕಿ ಒಂದಿನುವಾದ್ರೂ ತಕಮಾ ನೀನೊಂದು ಬಾಳೆಹಣ್ಣು ತಿನ್ನಮ್ಮ ಅಂತೇನಾರ ಕೊಟ್ಲೇ... ಯಂತಾ ಜಿಪುಣಿ ಇವಳು... ಕಾಲಾಮುಟ್ಟಾ ನೋಡ್ತನೇ ಬಂದಿವ್ನಿ... ಒಂದಿನುವಾದ್ರೂ ತಾನಾದ್ರೂ ಒಂದ್ಬಾಳೆಯಣ್ಣ ತಿಂದ್ಲೇ... ಯಾರು ಯಾರಿಗೊ ಸಾಲಾ ಕೊಟ್ಟು ಬಾಳೆಹಣ್ಣು ತಿನಿಸುದ್ಲು... ಹಾದಿಬೀದಿಲೋಗೋರ ಮ್ಯೋಲಿರುವಷ್ಟು ಪ್ರೀತಿನಾದ್ರೂ ತನ್ ಜೀವುದು ಮ್ಯೋಲೆ ಯೀ ಮುದ್ಕಿ ತೋರ‌ರ್ದೆ ವೋದ್ಲಲ್ಲಾ... ಇವುಳಿಗೇನು ಮಾಡಬೇಕು...' ಸುಮಾರು ದಿನಗಳ ತನಕ ಮುದುಕಿಯ ಜೀವ ವಿಚಾರ ಮಾಡಿತು.ಮುದುಕಿಗೆ ಜೀವದ ಒಳ ತಲ್ಲಣ ತಿಳಿಯಲಿಲ್ಲ. ಅವಳು ಆ ಜೀವದ ಬಗ್ಗೆ ಯಾವತ್ತೂ ಚಿಂತಿಸಿರಲಿಲ್ಲ. `ನಾನೇನು ಯೀ ಮನುಸ್ರ ಯಾಸ ಆಕಂದು ವುಟ್ಟಿಬತ್ತಿನಿ ಅಂತಾ ಆಸೆ ಪಟ್ಟಿದ್ನೇ... ಯಂಗೊ ವುಟ್ಟಿವಿನಿ, ಯಂಗೋ ಸಾಯ್ತಿನಿ... ಅದುರ್ರ‌ಮದ್ದೆದೆಲಿ ನಾಕು ದಿನದ ಸಂತೇಲಿ ನಿಯತ್ತಾಗಿ ಇದ್ರೆ ಸಾಕು ಶಿವನೇ' ಅನ್ನೋದು ಮುದುಕಿಯ ವೇದಾಂತ. ಹಾಗೊಂದು ದಿನ ಮುದುಕಿಯ ಕನಸಿನಲ್ಲಿ ಅವಳ ಜೀವ ಎದ್ದು ಕೂತು ಕೇಳಿತು... `ಅಲ್ಲಮ್ಮೋ ತಾಯೀ, ನಾನು ಬಯ್ಸಿ ಬಯ್ಸಿ ಬಾಳೆಹಣ್ಣ ತಿನಬೇಕಂತ ಅಂಪರಿತಿನಿ... ಒಂದಾದ್ರೂ ಹಣ್ಣ ಕೊಟ್ಟೇನಮ್ಮೋ...' ಎಂದು ಜಗಳ ತೆಗೆಯಿತು. ಮುದುಕಿಗೆ ಸಿಟ್ಟಾಯಿತು.`ನೀನು ನಿನ್ ಕರ್ಮಕ್ಕೆ ನಂದೇಹ್ದಲಿ ಇಲ್ಲೆ ತನಕ ಇದ್ದೀಯೇ... ನನ್ನೊಳಗಿದ್ದೀಯೆ ಅಂತಾ ನನುಗೇನಾರ ಲಂಚ ಕೊಡು ಅಂತಾ ನಾನೇನಾರ ನಿನ್ನಾ ಒಂದಿನಾದ್ರೂ ಕೇಳಿದ್ನಾ... ವೋಕಲಿ ನಿನ್ನ ಬಿಟ್ಟುಬುಟ್ಟು ಕದ್ದುಮುಚ್ಚಿ ನಾನೇನಾರ ವೊಟ್ಟೆತುಂಬಾ ತಿನಕಂದಿದ್ದಿನಾ... ಅನ್ನಾಯ ಆಡಬ್ಯಾಡ... ನಿನುಗು ನಾನ್ಯಾವ ಹಣ್ಣು ಕೊಡುಕಾಗುವುದಿಲ್ಲಾ... ಹಿಂಡ್ಮೊಮ್ಮಕ್ಕಳು ಹಸ್ಕಂದು ಕಾಯ್ತಿರ‌ರ್ತವೆ... ನಿನಗೊಂದು ಹಣ್ಣ ಕೊಟ್ಟೆ ಅಂದ್ರೆ ನನ ಮೊಮ್ಮಕ್ಳುಳಿಗೊಂದು ತುತ್ತು ಕಮ್ಮಿಯಾಯ್ತದೆ...' ಮುದುಕಿ ಬಲವಾಗಿ ಸಮರ್ಥಿಸಿಕೊಂಡಳು.ಮುದುಕಿಯ ಜೀವ ಮುನಿಸಿಕೊಂಡಿತು. `ನನ್ನಾಸೆಗೆ ಯಿವುಳು ವೊಪ್ಲಿಲ್ಲ ಅಂದ್ರೆ ಇವುಳಾಸೆಗೆ ತಕ್ಕಂತೆ ನಾನ್ಯಾಕೆ ಇವುಳ ದೇಹ್ದೆಲಿ ಬದ್ಕಿರಬೇಕು... ಇವುಳ್ನೇ ಬಿಟ್ಟು ಎಲ್ಲಿಗಾರ ವೊಂಟೋಗಬಹುದಲ್ಲಾ...' ಅಳೆದೂ ಸುರಿದು ಲೆಕ್ಕ ಮಾಡಿತು. ಅಜ್ಜಿ ಮೊಮ್ಮಕ್ಕಳನ್ನೆಲ್ಲಾ ಕರುಳ ಬಳ್ಳಿಯಿಂದ ನುಲಿದುಕೊಂಡಿರುವಂತೆ ರಮ್ಯ ಲೋಕದ ಸುಂದರ ಕನಸಿನ ಅನಂತತೆಯ ಕಥೆಯನ್ನು ಹೇಳಿ ದಣಿದ ದೇಹಕ್ಕೆ ನಿದ್ದೆಯ ನೀರು ಕುಡಿಸುತ್ತಿದ್ದಳು. ಛೇ... ಯಿಂತಾ ವೊತ್ತಲಿ ಇವುಳ ದೇಹದಿಂದ ಎದ್ದು ಹೋದರೆ ದೇವರು ಮೆಚ್ಚನು ಎಂದುಕೊಂಡು ಮುದುಕಿಯ ಜೀವ ಸುಮ್ಮನಾಯಿತು. ಬೆಳಗಾಯಿತು, ಘಮಘಮ ಬಾಳೆಹಣ್ಣುಗಳು ಘಮಾಯಿಸುತ್ತಿದ್ದವು.ಬೇವಿನಟ್ಟಿಕಾಳಿಯಂತೆ ಮುದುಕಿ ಯಾರಿಗೂ ಒಂದೂ ಹಣ್ಣು ಬಿಟ್ಟಿಯಾಗಿ ಕೊಡದೆ ಬುಟ್ಟಿಯಲ್ಲಿಟ್ಟು ಏಳೂರುಗಳ ಹಾದಿ ಹಿಡಿದಳು. ಅಜ್ಜಿಯ ಮೇಲೆ ಜೀವಕ್ಕೆ ವಿಪರೀತ ಕೋಪ ಬಂತು... `ಅಲ್ಲಾ ಯೀ ಮುದ್ಕಿ ಗುಟುಕು ನೀರು ಬಿಟ್ಟು ನಮಗೇನೂ ಕೊಡೋದಿಲ್ಲವಲ್ಲಾ... ತಾಳು, ಇವತ್ತು ಇವಳಿಗೆ ಒಂದು ಗತಿ ಕಾಣಿಸ್ತೀನಿ' ಎಂದು ಮುದುಕಿಯ ದೇಹದ ಜೊತೆ ಅಸಹಕಾರ ತೋರಿತು. ಯಾವತ್ತೂ ಹೊರೆ ಎನಿಸದಿದ್ದ ಬಾಳೆಹಣ್ಣಿನ ಬುಟ್ಟಿ ಹೆಬ್ಬಂಡೆಯ ಬಾರದಂತೆ ಭಾಸವಾಯಿತು.`ಯವ್ವಾ ತಾಯೀ ಎಲ್ಲಿದ್ದೀಯವ್ವಾ... ಯಾವತ್ತೂ ಯಿಸ್ಟು ಸುಸ್ತಾಗಿರ್ರ‌ಲಿಲ್ಲವಲ್ಲವ್ವಾ...?' ಎಂದು ನೆನೆಯುತ್ತ ತನ್ನ ತಾಯಿ ಎಂದೋ ಆ ಗತಕಾಲದಲ್ಲಿ ದಿಕ್ಕೆಟ್ಟು ನೆತ್ತಿ ಮೇಲೆ ಬಾಳೆಹಣ್ಣಿನ ಬುಟ್ಟಿ ಹೊರೆಸಿ... `ವೋಗು... ಇದೇ ಇನ್ಮೇಲೆ ನಿನ್ ಜೀವ್ನ ಯಾಪಾರ... ಇದ್ರೆಲೇ ಬದಿಕವೋಗು...' ಎಂದಿದ್ದು ಭಾವದಲ್ಲಿ ಪ್ರತಿಧ್ವನಿಸಿತು. ಬಾಲ್ಯ ಕಾಲದ ಆ ಎಲ್ಲಾ ನೆನಪುಗಳ ಹೊತ್ತು ನಡೆಯಲು ಮುದುಕಿಗೆ ಮನಸ್ಸಾಗಲಿಲ್ಲ. `ಅಯ್ಯಪ್ಪಾ... ಇಲ್ಲೇ ಎಲ್ಲಾರ ಒಂದ್ಮುರುದ ನೆಳ್ಳೆಲಿ ಒಂದ್ಗಳ್ಗೆ ತಳಾರಿಸ್ಕಮ ಅಂದ್ರೂ ಯೆಲ್ಲೂ ನೀರೂ, ನೆಳ್ಳೂ ಕಾಣ್ತಿಲ್ಲವಲ್ಲಪ್ಪಾ...' ಎಂದು ಹೊರಲಾರದೆ ಎಳೆದಾಡುತ್ತ ನಿರ್ಜನವಾದ ಆ ಬೆಟ್ಟಗುಡ್ಡಗಳ ಮರೆಯ ದಾರಿಯನ್ನು ಮುದುಕಿ ಎದುರಾದಳು.ಜೀವ ಎದೆಯಲ್ಲಿ ಸಿಕ್ಕಿಹಾಕಿಕೊಂಡಂತೆ ಮುದುಕಿಯ ದೇಹವನ್ನು ಜಗ್ಗಿತು. ಒಂದು ಗಳಿಗೆ ಕೂತುಕೊಳ್ಳುವ ಎಂದರೆ ಬುಟ್ಟಿಯನ್ನು ಇಳಿಸಬೇಕು... ತಲೆ ಸುತ್ತುವಂತಿರುವ ಈಗ ಬುಟ್ಟಿಯನ್ನು ಹೇಗಪ್ಪಾ ಕೆಳಗಿಳಿಸುವುದೂ... ಅಕಸ್ಮಾತ್ ಬಿದ್ದುಬಿಟ್ಟರೆ ಕಳಿತ ಬಾಳೆಹಣ್ಣುಗಳು ನಜ್ಜುಗುಜ್ಜಾದರೆ ಏನು ಮಾಡಲಪ್ಪಾ ಶಿವನೇ... ಅಯ್ಯೋ ಉಸ್ಸೋ ಎನ್ನುತ್ತಾ ಅಜ್ಜಿ ಕಣ್ಣು ಕತ್ತಲಿಟ್ಟರೂ ಜಗ್ಗದೆ ಕಾಲಾಂತರದ ಹೆಜ್ಜೆಗಳ ಹಾಗೇ ಇಟ್ಟಳು. ಮುದುಕಿಯ ಜೀವ ಒಂದು ಕ್ಷಣ ಕನಿಕರಿಸಿ... ನನಗೊಂದು ಬಾಳೆಹಣ್ಣು ಈಗ್ಲಾದ್ರೂ ಕೊಡಮ್ಮೋ ಎಂದಿತು.ಮುದುಕಿ ಎತ್ತರದ ತಿರುವಿನ ಆ ದಾರಿಯನ್ನು ಕ್ರಮಿಸಿ ಇಳಿಜಾರಿನಲ್ಲಿ ಮುಗ್ಗರಿಸುವಂತೆ ನಡೆಯುತ್ತಿದ್ದಳಾದರೂ ಬಾಳೆಹಣ್ಣಿನ ಬುಟ್ಟಿ ಜಾರಿ ಬೀಳದಂತೆ ಜಾಗ್ರತೆ ವಹಿಸಿದ್ದಳು. ಅಲ್ಲೊಂದು ಯಾವುದೊ ಬಂಡಿ ಸಾಗುತ್ತಿತ್ತು. ಕೂಗಿಕೊಂಡಳು... ಬಂಡಿಯವನು ಮುದುಕಿಯನ್ನು ಹತ್ತಿಸಿಕೊಂಡ. ಅಜ್ಜಿಗೆ ಜೀವ ಹಿಂತಿರುಗಿ ಬಂದಂತಾಗಿತ್ತು.ಇವತ್ತು ತನಗೇನಾಯಿತು ಎಂದು ನೆನೆದು ಅಲ್ಲಿ ಆ ಮೊಮ್ಮಕ್ಕಳು ಏನು ಮಾಡುತ್ತಿದ್ದಾವೊ... ಅಕಸ್ಮಾತ್ ತಾನೊಂದು ಬೆಟ್ಟದ ಹಾದಿಯ ಭಿಕಾರಿ ಹೆಣವಾಗಿ ಹೋದರೆ ಅವು ನಾಳೆ ಏನಾಗುತ್ತವೋ ಎಂದು ಯೋಚಿಸಿ ಅಧೀರಳಾಗಿದ್ದಳು. ಬಂಡಿಯವನು ಅವಳತ್ತ ನೋಡದೆಯೇ, `ವ್ಯಾಪಾರ ಸಾಪಾರಯೆಲ್ಲಾ ಸುಖುವೇನಮ್ಮೋ' ಎಂದು ಕೇಳಿದ. `ಯಾ ಯಾಪಾರ ಸಾಪಾರ ಶಿವನೇ... ಸಾವೊ ಸುಖವೊ ದಿಕ್ಕಿಲ್ಲ ಶಿವನೇ' ಎಂದು ಒಗಟಾಗಿ ನುಡಿದಳು. `ಕಾಲಾಮುಟ್ಟಾ ವ್ಯಾಪಾರ ಮಾಡ್ತನೇ ಇದ್ದೀಯಲ್ಲಮ್ಮೋ', `ಅಯ್ಯೋ ನಂದ್ಯಾವ ಯಾಪಾರುವಪ್ಪಾ... ವೊಟ್ಟೆಪಾಡು...', `ಏನೂ, ಕಾಸೂ ಕರೀಮಣಿನೂ ಸಂಪಾದ್ನೆ ಮಾಡಲೇ ಇಲ್ಲವೇ...', `ಅದಾ ಯಾಕಪ್ಪ ಮಾಡ್ಬೇಕು...', `ಅಂಗಾದ್ರೆ ವ್ಯಾಪಾರವನ್ನು ಬಿಟ್ಟುಬಿಡಮ್ಮೋ...', `ದುಡ್ಡುಗೆ ನಾ ಯಾಪಾರ ಮಾಡ್ತಿಲ್ಲ ಕನಪ್ಪಾ...', `ಮತ್ಯಾವುದಕ್ಕೆ ಇಷ್ಟೆಲ್ಲಾ ಕಷ್ಟ... ಊರೂರು ಸುತ್ತೋದು... ಕಾಲ ಬದಲಾಗಿ ಎಲ್ರೂ ಹಣದ ಆನೆಮೇಲೆ ಕೂತು ಸವಾರಿ ಮಾಡೋವಾಗ... ಇದ್ಯಾವುದಮ್ಮೋ ನಿನ್ನ ಹಳೇ ಕಾಲದ ಬಾಳೆಹಣ್ಣಿನ ವ್ಯಾಪಾರ...ಈ ಕಾಲ್ದೆಲಿ ನಿನ್ನ ವ್ಯಾಪಾರ ನಡೀತದೇನಮ್ಮೋ...', `ನಡೀಲಿ ಬಿಡ್ಲಿ ನಾನಂತು ನಡೀಬೇಕಲ್ಲಪ್ಪಾ...', `ಜೀವನವೂ ವ್ಯಾಪಾರವೂ ಒಂದೇ ಏನಮ್ಮೋ', `ಅಯ್ಯೋ ಅಂತಾ ದೊಡ್ಮಾತ ನನುಗ್ಯಾಕಪ್ಪ ಕೇಳಿಯೇ... ನೆತ್ತಿಮ್ಯೋಕೆ ವೊತಾರೆಲೇ ಸೂರ್ಯ ಬಂದು ಕುತ್ಕತನೆ... ನಡೀ ಮುದ್ಕಿ ಅಂತಾನೆ, ನನುಪಾಡ್ಗೆ ನಾ ನಡೀತೀನಿ... ಸಂದೆಯಾಯ್ತದೆ, ನಿಂತ್ಕೋ ಮುದ್ಕಿ ಅಂತಾನೆ... ವೊತ್ತಾಯ್ತು ತಾಳಮ್ಮೋ ಅಂತಾನೆ. ಅಂಗೇ ನೆತ್ತಿಮ್ಯೋಲಿಂದ ಜಾರ್ರ‌ಕಂದು ಮುಳಿಕತನೆ... ನಿಚ್ಚಾಲು ಇದೇ ಚಾಕ್ರೀ...' ಅಷ್ಟು ಹೇಳಿದ ಮುದುಕಿ ಬಂಡಿ ನಿಲ್ಲಿಸಲು ಕೋರಿದಳು. ಮತ್ತೊಂದು ಕಾಲುದಾರಿಯ ಊರತ್ತ ನಡೆದು ಆಕೆ ಹಣ್ಣು ಮಾರಬೇಕಿತ್ತು.ಬಂಡಿಯವನು `ಬರ್ರ‌ಲೇನಮ್ಮೋ' ಎಂದು ಮುಂದಾದ. `ತಾಳಪ್ಪ' ಎಂದು ಮುದುಕಿ ಆತನಿಗೆ ಕೃತಜ್ಞತೆಯಾಗಿ ಒಂದು ಬಾಳೆಹಣ್ಣು ನೀಡಿದಳು. `ಇದು ತನಗೊ ಇಲ್ಲವೇ ದೇವರಿಗೊ?' ಎಂದು ಆತ ಕೇಳಿದ. `ನಿನಗೆ ಬೇಕಾದರೆ ನೀನು ತಕೊ... ದೇವರಿಗೆ ಬೇಕಾದರೆ ದೇವರಿಗೆ ಕೊಡು' ಎಂದು ಗಾಡಿಯಿಂದ ಬುಟ್ಟಿ ಸರಿಸಿ ತಲೆ ಮೇಲೆ ಹೊತ್ತುಕೊಂಡು ತಿರುವಿನ ದಾರಿಯತ್ತ ನಡೆದಳು. ಬಂಡಿ ಮರೆಯಾಯಿತು. ಕಾಲ ಸರಿಯುತ್ತಿತ್ತು. ಮತ್ತೆ ಮುದುಕಿಯ ಜೀವ ಪಿರ್ಯಾದೆ ತೆಗೆಯಿತು.`ಅಲ್ಲಮ್ಮೋ ಆ ಬಂಡಿಯವನಿಗಿಂತ್ಲೂ ನಾನು ಕಡೆಯಾಗೋದ್ನೇ...' ಎಂದು ಜೀವವು ಮುದುಕಿಯ ಎದೆಗೆ ಗುದ್ದಿತು. ಮುದುಕಿ ಏನೂ ಮಾತನಾಡಲಿಲ್ಲ. ಕತ್ತಲಾಗಿತ್ತು. ಮೊಮ್ಮಕ್ಕಳಿಗೆ ಗಂಜಿ ಕುಡಿಸಿ ಅದೇ ಅಂಗಳದಲ್ಲಿ ಮತ್ತದೇ ರಮ್ಯ ಮಾಂತ್ರಿಕ ಕಥೆಯ ಹೇಳುತ್ತಿದ್ದಳು. ನಿನ್ನ ದನಿಯನ್ನೇ ಉಡುಗಿಸಿಬಿಡುವೆ ಎಂಬಂತೆ ಜೀವವು ಮುದುಕಿಯ ಗಂಟಲನ್ನು ಹಿಚುಕುತ್ತಿತ್ತು. ತನ್ನ ದೇಹವ ನೀನೇ ತಿಂದುಕೊಳ್ಳುವುದಾದರೆ ತಿಂದುಕೊ. ಕೊಂದದ್ದಕ್ಕೂ ತಿಂದದ್ದಕ್ಕೂ ಆಗ ಪಾಪ-ಪುಣ್ಯವೂ ಇರುವುದಿಲ್ಲ. ಹಾಗೇ ತನಗೂ ಯಾವ ಸ್ವರ್ಗ ನರಕವೂ ಇರೋದಿಲ್ಲ ಎಂದು ಮುದುಕಿ ಮನದಲ್ಲೇ ಅಂದುಕೊಂಡಳು. ಹೀಗೆ ಹಗಲೂ ರಾತ್ರಿ ಎಷ್ಟೋ ದಿನಗಳ ತನಕ ಮುದುಕಿಗೂ ಅವಳ ಜೀವಕ್ಕೂ ಮುನಿಸಲ್ಲೇ ಗುದ್ದಾಟ ನಡೆಯುತ್ತಲೇ ಇತ್ತು.ಆ ಜೀವಕ್ಕೂ ರೋಸಿ ಹೋಗಿತ್ತು. ನಾಳೆಯೊ, ನಾಳಿದ್ದೊ ನೋಡಿಕೊಂಡು ಹಿರಿಮೊಮ್ಮಗಳ ತಲೆಮೇಲೆ ಈ ಬುಟ್ಟಿಹೊರಿಸಿ ಶಿವಾ ಎಂದು ಕಣ್ಣು ಮುಚ್ಚುವುದೇ ಲೇಸೆಂದು ಅತ್ತ ಆ ಮುದುಕಿಯೂ ತೀರ್ಮಾನಿಸಿದ್ದಳು. ಆ ಮೊಮ್ಮಗಳಿಗೊ ಮುದುಕಿಯ ಹಳೆ ಕಾಲದ ಆ ಚಾಕರಿ ಇಷ್ಟವಿರಲಿಲ್ಲ. ಆ ಮಾಯದ ಹೆದ್ದಾರಿಯ ಜಾತ್ರೆಗೆ ಕರೆದುಕೊಂಡು ಹೋಗಿ ತನ್ನನ್ನು ಅಲ್ಲಿ ಬಿಟ್ಟುಬಿಡೊ... ಅಲ್ಲೆಲ್ಲೂ ತಾನು ಕಳೆದು ಹೋಗುವುದಿಲ್ಲಾ ಎಂದು ಹುಮ್ಮಸ್ಸು ತೋರುತ್ತಿದ್ದಳು. ಇಂತಿರಲು ಒಂದು ದಿನ ಹೆಪ್ಪುಗಟ್ಟಿದ ಮಳೆ ಗಾಳಿಯ ಒಂದು ಸಂಜೆಯು ದಿಢೀರ್ ಎಂದು ಬಂದು ಮುದುಕಿಯ ತಲೆಮೇಲೆ ಕವುಚಿಕೊಂಡಿತು. ತನ್ನ ಜೀವ ಈಗ ತನ್ನ ಕೈಯಲ್ಲಿ ಇಲ್ಲ ಎಂದು ಮುದುಕಿಗೆ ಖಚಿತವಾಯಿತು.ಕಣ್ಣುಗಳು ಮಂಜಾಗುತ್ತಿದ್ದವು. ಬಿರುಗಾಳಿ ಮುದುಕಿಯನ್ನು ತರಗೆಲೆಯ ಜೊತೆ ಸುತ್ತಿಕೊಂಡು ಹಾರಿಹೋಗಲು ಹವಣಿಸುತ್ತಿತ್ತು. ಜೀವ ಕಿಚ್ಚಿನಿಂದ ಉರಿಯುತ್ತಿತ್ತು. ಮುದುಕಿಯ ಎದೆ ನಡುಗುತ್ತಿತ್ತು. ಬಡಪಾಯಿ ಮುದುಕಿ ಅಷ್ಟಾದರೂ ಬಾಳೆಹಣ್ಣಿನ ಬುಟ್ಟಿಯನ್ನು ಉಪಾಯವಾಗಿ ಮರದಡಿ ಇಳಿಸಿ, ಮರಕ್ಕೆ ತಾನೇ ಒರಗಿಕೊಂಡು ಬುಟ್ಟಿಯತ್ತ ಒಂದು ಎಚ್ಚರವ ಇಟ್ಟು ಗುಡುಗುತ್ತಿರುವ ಆಕಾಶದತ್ತ ಚಿತ್ತವ ನೆಟ್ಟು ತೇಲುಗಣ್ಣು ಮಾಡುತ್ತಿದ್ದಳು. ಅವಳ ಜೀವ ಬಾಯಿಗೆ ಬಂದು ಕೂತಿತ್ತು. ಬೊಚ್ಚುಬಾಯಿ ಮುದುಕಿ ಜೀವವನ್ನು ಸಾಧ್ಯಂತ ಅದುಮಿ ಹಿಡಿದು ನುಂಗಿಕೊಳ್ಳಲು ಅಳಿದುಳಿದ ಶಕ್ತಿಯನ್ನೆಲ್ಲ ಗಂಟಲಿಗೆ ತಂದುಕೊಳ್ಳುತ್ತಿದ್ದಳಾದರೂ ಆ ಹಟಕ್ಕೆ ಬಿದ್ದ ಜೀವ ಉಬ್ಬಿಕೊಂಡು ಗಂಟಲ ನರಗಳೇ ತುಂಡಾಗುವಂತೆ ಸಂಬಂಧವನ್ನು ಕಿತ್ತುಕೊಳ್ಳುತ್ತಿತ್ತು.ಹತಾಶೆಯ ನಿಟ್ಟುಸಿರಿನ ಜೊತೆಗೇ ಮುದುಕಿಯ ಜೀವವು ಹೊರಬಂದು ಅದೇ ಬಾಳೆಹಣ್ಣಿನ ಬುಟ್ಟಿಯಲ್ಲಿ ಹೋಗಿ ಕೂತುಕೊಂಡಿತು. ಮುದುಕಿಯ ದೇಹ ಅನಾಥವಾಗಿ ಹಾಗೇ ಮರಕ್ಕೆ ವಾಲಿಕೊಂಡು ಬುಟ್ಟಿಯನ್ನೇ ಕಾಯುತ್ತಿರುವಂತೆ ಒರಗಿತ್ತು. ಅತ್ತ ಆ ಅಜ್ಜಿಯ ಮೊಮ್ಮಕ್ಕಳು ಅಜ್ಜಿ ಇನ್ನೂ ಬಂದಿಲ್ಲವಲ್ಲಾ ಎಂದು ಕಂಗಲಾಗಿ ಮಾಯಾ ಜಗತ್ತಿನ ವ್ಯಾಪಾರದ ಹೆದ್ದಾರಿಯತ್ತ ಹೋಗಿ, ಆ ದೈತ್ಯ ರಸ್ತೆ ಸಾಲುಗಳ ದಾಟಲಾರದೆ ಚಡಪಡಿಸುತ್ತಿದ್ದವು. ಕಾಲವು ಮನುಷ್ಯರ ಧರ್ಮ-ಕರ್ಮಗಳ ನಿತ್ಯ ವ್ಯಾಪಾರದ ನೀತಿ-ಅನೀತಿಗಳ ಗುಣಿಸುತ್ತ ಸಾಗುತ್ತಿತ್ತು. ಹಾಗೆ ಬಂದಿದ್ದ ಬಿರುಗಾಳಿ ಹಾಗೇ ಬಳಸಿಕೊಂಡು ಮರೆಯಾಗಿತ್ತು. ಕತ್ತಲು ಮುಸುಕಿತ್ತು.ಬುಟ್ಟಿಯಲ್ಲಿದ್ದ ಬಾಳೆಹಣ್ಣುಗಳ ಮೇಲೆ ಹೋಗಿ ಕೂತಿದ್ದ ಮುದುಕಿಯ ಜೀವವು ಹಣ್ಣು ತಿನ್ನಲಾಗದೆ ಮರಳಿ ಮುದುಕಿಯ ದೇಹಕ್ಕೂ ಹಿಂತಿರುಗಲು ಒಪ್ಪದೆ ಮುಂದೇನು ಮಾಡುವುದೊ ಎಂದು ಮಿಕಿ ಮಿಕಿ ನೋಡುತ್ತಾ ಅಲ್ಲೇ ಕೂತಿತ್ತು. ದೇಹವಿಲ್ಲದೆ ಜೀವ ಆ ಬಾಳೆಹಣ್ಣನ್ನು ತಿನ್ನಲು ಸಾಧ್ಯವಿರಲಿಲ್ಲ. ದೇಹ ದೊಡ್ಡದೊ, ಜೀವ ಹಿರಿದೊ.. ಇಹದ ಸುಖವೋ, ಪರದ ಸುಖವೋ, ಈ ಗಳಿಗೆಯೇ ಅನಂತವೊ ನಾಳೆಯೇ ಅಮರವೋ, ನಾನೇ ಹೆಚ್ಚೋ ಈ ಮುದುಕಿ ಹೆಚ್ಚೋ..., ಈ ಲೋಕದ ಕಷ್ಟವೇ ಮುಖ್ಯವೋ ಸುಖದ ಆಸೆಯೇ ಮುಖ್ಯವೋ- ಪರಿಹಾರ ಕಾಣದೆ ಜೀವ ತರ್ಕ ಮಾಡುತ್ತಿತ್ತು. ಹಾಗಾದರೆ ಈ ಮುದುಕಿಯ ದೇಹಕ್ಕೂ, ಅವಳ ಬಾಳಿನ ವ್ಯಾಪಾರಕ್ಕೂ, ತನಗೂ ಯಾವ ಸಂಬಂಧ... ಈ ದೇಹದ ಜೀತ ಮಾಡುವುದೇ ಜೀವದ ಕಾಯಕವೇ... ತನ್ನ ಆಸೆಯ ಸುಳಿಯಲ್ಲಿ ಸಿಲುಕಿ ತಾನು ಎಲ್ಲೆಲ್ಲಿಗೊ ಹೋಗಿ ಯೋಚಿಸುತ್ತಿರುವೆ ಎಂದು ಜೀವವು ವಿಷಾದದಲ್ಲಿ ವಿದಾಯದ ಕೊನೆಯ ನೋಟವನ್ನು ನಿರ್ಜೀವವಾದ ಮುದುಕಿಯ ದೇಹದತ್ತ ಬೀರಿತ್ತು.ಅದೇ ವೇಳೆಗೆ ಯಾರೋ ಅಲ್ಲಿಗೆ ಮಾಯದಲಿ ಬಂದಿಳಿದರು. ಜೀವಕ್ಕೆ ಗಲಿಬಿಲಿಯಾಯಿತು. ಬಂದವರು ಧರ್ಮಕರ್ಮಗಳನ್ನೆಲ್ಲಾ ಚೆನ್ನಾಗಿ ಬಲ್ಲಂತಿದ್ದರು. ಆ ಮುದುಕಿಯ ಜೀವ ಇದೆಯೊ ಇಲ್ಲವೋ... ಅದರಾಸೆ ಏನೋ ಎತ್ತೋ ಅದಕ್ಕೆ ಒಂದು ಹಣ್ಣು ತಿನ್ನಿಸಿ ಮುದುಕಿಗೆ ನೀರು ಕುಡಿಸಿ ಎಂದು ದಿವ್ಯವಾದ ದನಿಯಲ್ಲಿ ಪ್ರಕೃತಿಯಂತಿದ್ದ ಆ ಹೆಂಗಸು ತನ್ನ ಪುರುಷನಿಗೆ ಹೇಳುತ್ತಿದ್ದಳು. ಆ ಮಾತು ಆಲಿಸಿದ ಕೂಡಲೇ ಜೀವಕ್ಕೆ ಬಹಳ ಆನಂದವಾಯಿತು.ಓಹೋ... ಈ ಲೋಕದ ಜಂಜಡಗಳಲ್ಲಿ ತನ್ನ ಪರವಾಗಿಯೂ ಕೇಳುವ ಯಾರೋ ಇದ್ದಾರೆಂದು ಹಾರಿಹೋಗಿ ಮುದುಕಿಯ ದೇಹವನ್ನು ಸೇರಿಕೊಂಡಿತು. ಮುದುಕಿ ಉಸಿರೆಳೆದುಕೊಂಡಳು. ತನ್ನ ತಾಯನ್ನು ಕರೆದಂತೆ ಆ ದಿವ್ಯವಾದ ಹೆಂಗಸು ಕರೆದ ಕೂಡಲೇ ಮುದುಕಿ ಎಚ್ಚರಗೊಂಡಳು. ಬಾಳೆಹಣ್ಣಿನ ಬುಟ್ಟಿಗೆ ಆಕೆಯ ಪುರುಷ ನಾಲ್ಕಾಣಿಯನ್ನು ಹಾಕಿ ನೀನೇ ತಿನ್ನಿಸು ಎಂದು ಕೊಟ್ಟ. `ತಿನ್ನು ಬಡಪಾಯಿ ಜೀವವೇ ತಿನ್ನು' ಎಂದು ಆಕೆ ಪ್ರೀತಿಯಿಂದ ಕೈಯಾರೆ ತಿನಿಸಿದಳು. ಮುದುಕಿ ಗಟಗಟನೆ ನೀರು ಕುಡಿದಳು. ಜೀವ ಆಸೆಯನ್ನು ಮೀರಿತ್ತು. ಹೋದ ಜೀವ ಬಂದಂತಾಗಿ ಮುದುಕಿಗೆ ಅರಿವಾಗಿತ್ತು.ಶಿವಶಿವಾ ಇದೇನಪ್ಪಾ ನಿನ್ನ ಮಾಯೆ, ಸತ್ತೇ ಹೋದೆ ಎಂದುಕೊಂಡಿದ್ದೆನಲ್ಲಾ ಎಂದು ಮುದುಕಿ ಅಚ್ಚರಿಯಿಂದ ಎದ್ದುನಿಂತಳು. ದಿಗಂತದಲ್ಲಿ ಬೆಳದಿಂಗಳ ಚಂದಿರ ನೊರೆಹಾಲ ಬೆಳಕ ಅಲ್ಲೆಲ್ಲಾ ಚೆಲ್ಲಿ ನಗಾಡುತ್ತಿದ್ದ. ಅಯ್ಯೋ ಅಲ್ಲಿ ಆ ಮೊಮ್ಮಕ್ಕಳು ಏನು ಮಾಡುತ್ತಿದ್ದಾವೊ ಎಂದು ಮುದುಕಿ ಲಗುಬಗೆಯಿಂದ ಬುಟ್ಟಿಯನ್ನು ಹೊತ್ತುಕೊಂಡು ಬಿರಬಿರನೆ ಹೆಜ್ಜೆ ಹಾಕಿದಳು. ಅವಳ ಬೆನ್ನ ಹಿಂದೆಯೇ ಚಂದಿರ ಹಿಂಬಾಲಿಸುತ್ತಿದ್ದ. ತಂಗಾಳಿಯ ಜೀವ ಪಲ್ಲವಿಸುತ್ತಿತ್ತು. ತಾನು ಕಂಡದ್ದು ಕನಸೇ ಇರಬೇಕೇನೊ ಎಂದು ನೆನೆಯುತ್ತ ಮುದುಕಿ ನಾಳೆ ನಾಳೆಯ ಕನಸುಗಳನ್ನೆಲ್ಲಾ ತನ್ನ ಬಾಳೆಹಣ್ಣಿನ ಬುಟ್ಟಿಯಲ್ಲೇ ಹೊತ್ತುಕೊಂಡು ಇವನ್ನೆಲ್ಲಾ ಮೊಮ್ಮಕ್ಕಳಿಗೆ ಆದಷ್ಟು ಬೇಗ ಕೊಟ್ಟುಬಿಡಬೇಕೆಂಬ ದುಗುಡದಲ್ಲಿ ದಾರಿ ಸಾಗುತ್ತಿದ್ದಳು...

 

ಪ್ರತಿಕ್ರಿಯಿಸಿ (+)