ದೇಹ ದೇಗುಲ

7

ದೇಹ ದೇಗುಲ

Published:
Updated:
ದೇಹ ದೇಗುಲ

ಮೊದಲ ಚಿತ್ರದಲ್ಲೇ ದೇಹವನ್ನು ಆರು ಮಡಿಕೆಗಳಿಗೆ ಒಗ್ಗಿಸಿಕೊಂಡು ಗಮನ ಸೆಳೆದವರು ನಟ ಚಿರಂಜೀವಿ ಸರ್ಜಾ. ದೇಹವನ್ನು ಹುರಿಗಟ್ಟಿಸಿಕೊಳ್ಳುವ ಕಲೆ ಅವರಿಗೆ ರಕ್ತಗತವಾಗಿ ಬಂದಿದೆ. ಸೋದರಮಾವ ಅರ್ಜುನ್ ಸರ್ಜಾ ಗರಡಿಯಲ್ಲಿ ಪಳಗಿರುವ ಚಿರುಗೆ ಅಭಿನಯದ ಜೊತೆಗೆ ವ್ಯಾಯಾಮ ಕಲೆಯೂ ಕರಗತ.`ಸಿನಿಮಾ ಹೀರೋ ಎಂದರೆ ಅದಕ್ಕೆ ಪೂರಕವಾದ ದೇಹಾಕೃತಿ ಅತ್ಯಗತ್ಯ. ಅದರಲ್ಲೂ ಸಾಹಸ ಸನ್ನಿವೇಶಗಳಲ್ಲಿ ನಾಯಕ ದೇಹ ಸೌಂದರ್ಯ ಪ್ರದರ್ಶಿಸಿದಾಗಲೇ ಮಾಸ್ ಪ್ರೇಕ್ಷಕರಿಗೆ ಮೆಚ್ಚುಗೆಯಾಗುವುದು. ಹಾಗಂತ ಕೇವಲ ದೇಹದಂಡನೆಗೆ ಒತ್ತುಕೊಡುವುದು ತಪ್ಪಾಗುತ್ತದೆ' ಎನ್ನುತ್ತಾರೆ ಚಿರಂಜೀವಿ. ಅವರ ಪ್ರಕಾರ ಜಿಮ್‌ನಲ್ಲಿ ಬೆವರಿಳಿಸುವ ಪರಿಗೂ ಮಿತಿ ಬೇಕು.ಆರೋಗ್ಯವನ್ನು ಕಾಪಾಡಿಕೊಳ್ಳುವುದಷ್ಟೇ ಕಸರತ್ತಿನ ಗುರಿಯಾಗಬೇಕು ಎಂಬ ನಿಲುವು ಅವರದು.

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯುಳ್ಳ ಸರ್ಜಾ ಕುಟುಂಬದಲ್ಲಿ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಯಂತೆ. ಜೊತೆಗೆ ವ್ಯಾಯಾಮವೂ ಕಡ್ಡಾಯ. ವ್ಯಾಯಾಮಶಾಲೆಯಲ್ಲಿ ಎಷ್ಟು ಹೊತ್ತು, ಹೇಗೆ ಕಳೆಯುತ್ತೇವೆಯೋ ಅದಕ್ಕೆ ಅನುಗುಣವಾಗಿಯೇ ಆಹಾರ ಸೇವನೆ ಮಾಡಬೇಕು.ಎಣ್ಣೆ, ಜಿಡ್ಡಿನಿಂದ ಕೂಡಿದ ಆಹಾರ ಇಲ್ಲವೇ ಇಲ್ಲವೆನ್ನವಷ್ಟು ಅಪರೂಪವಂತೆ. ಮಾಂಸಾಹಾರ ಸೇವನೆಗೆ ಮಿತಿ ಹಾಕಿಕೊಂಡಿದ್ದಾರೆ. ಖಾರ ಹಾಗೂ ಕೊಬ್ಬಿನ ಅಂಶಗಳಿರುವ ಪದಾರ್ಥಗಳನ್ನು ಸೇವಿಸುವುದಿಲ್ಲ ಎನ್ನುವ ದೃಢ ನಿರ್ಧಾರ ಅವರದು. ಮೊಟ್ಟೆ, ಮಾಂಸಾಹಾರ ಸೇವಿಸಿದರೂ ಕಾಲೇಜು ದಿನಗಳಲ್ಲಿಯೇ ಜಿಮ್ ಹೊಕ್ಕ ಚಿರಂಜೀವಿ ಆ ದಿನಗಳಿಂದಲೂ ನಾಯಕನ ಪಾತ್ರಕ್ಕೆ ಸೂಕ್ತವಾದ ರೀತಿಯಲ್ಲಿ ದೇಹವನ್ನು ಅಣಿಗೊಳಿಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾದವರು. ತುಸು ಎಚ್ಚರ ತಪ್ಪಿದರೂ ಅಪಾಯಕಾರಿ ಎಂಬ ಪಾಠ ಹೇಳಿಕೊಟ್ಟವರು ಅರ್ಜುನ್ ಸರ್ಜಾ.ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಜಿಮ್‌ನಲ್ಲಿ ಚಿರು ಕಾಲ ಕಳೆಯುತ್ತಾರೆ. ಅದು ದಿನಚರಿಯಾಗಿದ್ದರೂ ಒಮ್ಮೆಲೆಗೇ ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುವುದಿಲ್ಲ. ಅದಕ್ಕೂ ಸೂಕ್ತ ವಿಧಾನಗಳನ್ನು ಅನುಸರಿಸುತ್ತಾರೆ. ಆರಂಭದಲ್ಲೇ ಹೆಚ್ಚು ತೂಕವನ್ನು ದೇಹದ ಮೇಲೆ ಹೊರುವ ಪ್ರಯತ್ನ ಘಾಸಿ ಉಂಟುಮಾಡುವ ಅಪಾಯವಿರುತ್ತದೆ ಎನ್ನುತ್ತಾರೆ ಅವರು. ವ್ಯಾಯಾಮ ಶಾಲೆಗಿಂತಲೂ ದೇಹಕ್ಕೆ ಹೆಚ್ಚು ಆರೋಗ್ಯಪೂರ್ಣ ಮತ್ತು ಉಲ್ಲಾಸ ನೀಡುವ ಶ್ರಮವೆಂದರೆ ಓಡುವುದು.ಇದು ಇಡೀ ದೇಹಕ್ಕೆ ಏಕಕಾಲದಲ್ಲಿ ಮತ್ತು ಯಾವುದೇ ತೊಂದರೆಗಳು ಎದುರಾಗದಂತೆ ಶ್ರಮ ನೀಡುವ ಸುಲಭ ಮಾರ್ಗ. ಹೀಗಾಗಿ ದಿನಕ್ಕೆ ಕನಿಷ್ಠ 10 ಕಿ.ಮೀ. ಓಡಲೇಬೇಕೆಂಬ ನಿಯಮವನ್ನು ಅವರು ಹಾಕಿಕೊಂಡಿದ್ದಾರೆ. `ಚಿತ್ರೀಕರಣದಲ್ಲಿ ತೊಡಗುವುದರಿಂದ ಕೆಲವೊಮ್ಮೆ ಇದನ್ನು ಪಾಲಿಸುವುದು ಕಷ್ಟವಾಗುತ್ತದೆ. ಒಂದು ದಿನ ಈ ಅಭ್ಯಾಸ ತಪ್ಪಿದರೂ ಆಲಸ್ಯ ಬಂದುಬಿಡುತ್ತದೆ. ಹೀಗಾಗಿ ಎಷ್ಟೇ ಬಿಜಿಯಾಗಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ಬೆವರು ಹರಿಸುತ್ತೇನೆ' ಎನ್ನುತ್ತಾರೆ.`ಒಮ್ಮೆ ಈ ಅಭ್ಯಾಸದಲ್ಲಿ ತೊಡಗಿಕೊಂಡ ಬಳಿಕ ಒಂದೇ ಬಾರಿಗೆ ಅದನ್ನು ತ್ಯಜಿಸಿದರೆ ಆರೋಗ್ಯ ಹಾಗೂ ದೇಹಾಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಅಭ್ಯಾಸದಲ್ಲಿ ನಿರತವಾಗಿದ್ದಾಗಲೂ ಎಚ್ಚರ ಅತ್ಯಗತ್ಯ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯುವುದೂ ಸರಿಯಲ್ಲ. ಹಾಗೆಯೇ ದೇಹದಂಡನೆ ಮಾಡುತ್ತೇವೆ ಎಂದು ಸಿಕ್ಕಿದ್ದನ್ನೆಲ್ಲಾ ತಿಂದರೆ ದೇಹದ ಮೇಲೆ ಕೆಟ್ಟಪರಿಣಾಮ ಉಂಟಾಗುತ್ತದೆ.ನಾವು ಸೇವಿಸುವ ಆಹಾರ ಮತ್ತು ದೇಹಕ್ಕೆ ನೀಡುವ ಶ್ರಮ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು. ಒಂದರಲ್ಲಿ ವ್ಯತ್ಯಾಸ ಉಂಟಾದರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ' ಎನ್ನುವ ಚಿರು ಸಿಕ್ಸ್‌ಪ್ಯಾಕ್‌ಗೆ ದೇಹವನ್ನು ಅಣಿಗೊಳಿಸುವುದು ಮತ್ತು ಅದನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ, ಕಠಿಣ ಪರಿಶ್ರಮ ಮತ್ತು ಮಾನಸಿಕ ಸಮತೋಲನವೂ ಅತ್ಯಗತ್ಯ. ಎಲ್ಲವೂ ಮಿತಿಯಲ್ಲಿರಲಿ ಎಂಬ ಸಲಹೆಯನ್ನೂ ನೀಡುತ್ತಾರೆ.-

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry