ಗುರುವಾರ , ನವೆಂಬರ್ 21, 2019
24 °C

`ದೈವಾರಾಧನೆಯಿಂದ ಯುವಪೀಳಿಗೆ ವಿಮುಖ'

Published:
Updated:

ಸುರತ್ಕಲ್: `ದೈವಾರಾಧನೆ ಎನ್ನುವುದು ಹಿರಿಯರಿಗೆ ಮಾತ್ರ ಸಂಬಂಧಿಸಿದ್ದು ಎನ್ನುವಂತಾಗಿದೆ. ಇಂದಿನ ಯುವಪಿಳಿಗೆ ದೈವಾರಾಧನೆಯಿಂದ ವಿಮುಖಗೊಳ್ಳುತ್ತಿದೆ.  ಇಂತಹ ಸಂದರ್ಭದಲ್ಲಿ ನೇಮಗಳಲ್ಲಿ ಕಾಲಕ್ಕೆ ಹೊಂದಿಕೊಳ್ಳುವ ಬದಲಾವಣೆ ಮಾಡುತ್ತಾ ಸಂಪ್ರದಾಯ ನಾಶವಾಗದಂತೆ ನಂಬಿಕೆಯನ್ನು ಬೆಳೆಸುವ ಕೆಲಸ ಮಾಡ ಬೇಕಿದೆ' ಎಂದು ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಲಹೆ ನೀಡಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಗುರು ನಿತ್ಯಾನಂದ ಕಲಾ ರಂಗ ಆಶ್ರಯದಲ್ಲಿ ಶ್ರೀಧರ್ಮರಸು ಉಳ್ಳಾಯ ದೈವಸ್ಥಾನದ ಆಡಳಿತ ಮಂಡಳಿಯ ಸಹಕಾರದಲ್ಲಿ ಭಾನುವಾರ ಖಂಡಿಗೆ ಬೀಡು ಕ್ಷೇತ್ರದಲ್ಲಿ ನಡೆದ ದೈವಾರಾಧನೆಯ ಚೌಕಟ್ಟು ಚಾವಡಿ ಕೂಟ ಉದ್ಘಾಟಿಸಿ ಅವರು ಮಾತನಾಡಿದರು. ತೆಂಗಿನ ಗಿಡಕ್ಕೆ ನೀರು ಎರೆಯುವ ಮೂಲಕ ಚಾವಡಿ ಕೂಟ ಉದ್ಘಾಟಿಸಿದ ಅಜಿತ್ ಕುಮಾರ್ ರೈ, ದೈವಾರಾಧನೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕಲಾವಿದ ಕ್ಷೇಮಾಭಿವೃದ್ಧಿಗೆ ಟ್ರಸ್ಟ್ ಆರಂಭಿಸುವುದಾಗಿ ತಿಳಿಸಿ ಇದಕ್ಕಾಗಿ ತನ್ನ ಮೊದಲ ದೇಣಿಗೆಯಾಗಿ ಒಂದು ಲಕ್ಷದ ಐದು ಸಾವಿರ ರೂಪಾಯಿ ಇಂದೇ ತೆಗೆದಿಡುವುದಾಗಿ ತಿಳಿಸಿದರು.ಚರ್ಚೆ: ಆ ಬಳಿಕ ದೈವಾರಾಧನೆ ಅವಹೇಳನ ಯಾರು ಯಾರಿಂದ?ಯಾವಾಗ? ನಡೆಯುತ್ತದೆ ಎನ್ನುವ ಬಗ್ಗೆ ಚರ್ಚೆ ನಡೆಯಿತು.

ಕಲಾವಿದರು ಜನರತ್ತ, ಜನರು  ಕಲಾವಿದರತ್ತ ಬೆರಳು ತೋರಿಸುತ್ತಲೇ ಆರೋಪ- ಪ್ರತ್ಯಾರೋಪಗಳು ನಡೆದವು.  ವೇದಿಕೆ ಮೇಲೆ ಆರಾಧನೆ ಮಾಡುವುದು ತಪ್ಪು ಎನ್ನುವುದು ನರ್ತನ ಕಲಾವಿದರ ಆರೋಪವಾದರೆ, ಕುಡಿದು ಬಂದು ದೈವಾರಾಧನೆ ಮಾಡುವುದು, ಇಂಗ್ಲಿಷ್ ಭಾಷೆ ಪ್ರಯೋಗಿಸಿ ನುಡಿಕಟ್ಟು ನೀಡುವುದು, ನಾಟಕೀಯ ವೇಷ ಭೂಷಣ ತೊಡುವುದು ನಿಜವಾದ ಅವಹೇಳನ ಎಂದು ದೂರಿದರು.ದೈವಾರಾಧನೆಯನ್ನು ವೇದಿಕೆಯ ಮೇಲೆ ಪ್ರದರ್ಶನಗೊಳಿಸುವ ಬಗ್ಗೆ ಬಿಗುವಿನ ಚರ್ಚೆನಡೆದು ಪರ ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡು ಮೂಲ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ವೇದಿಕೆ ಮೇಲೆ ಪ್ರದರ್ಶನ ಮಾಡುವ ಬಗ್ಗೆ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು. ಬಳಿಕ ಈ ನಿರ್ಧಾರವನ್ನು ತುಳು ನಾಟಕ ಕಲಾವಿದರ ಪರವಾಗಿ ಅಕಾಡೆಮಿ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಯಿತು.ಚರ್ಚೆಯಲ್ಲಿ ಆದಿತ್ಯ ಮುಕ್ಕಾಲ್ದಿ, ಡಾ.ವೈ.ಎನ್.ಶೆಟ್ಟಿ, ಪರಮಾನಂದ ಸಾಲ್ಯಾನ್, ಕೃಷ್ಣಪ್ಪ ಪೂಜಾರಿ ಹಳೆಯಂಗಡಿ, ಕಮಲಾಕ್ಷ ಗಂಧಕಾಡು, ಸಾರಂತಾಯ ಗರೋಡಿ ಸಸಿಹಿತ್ಲು ಇಲ್ಲಿನ ಆಡಳಿತ ಮೊಕ್ತೇಸರ ಯಾದವ ಜಿ.ಬಂಗೇರ, ದೇವರಾಜ ಡಿ.ಬಾಳ ಉಪಸ್ಥಿತರಿದ್ದರು. ತುಳು ಅಕಾಡೆಮಿ ಅಧ್ಯಕ್ಷ ಉಮನಾಥ ಕೋಟ್ಯಾನ್ ಅಧ್ಯಕ್ಯತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎನ್.ಕೆ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)