ದೈಹಿಕ ಶಿಕ್ಷಣ ಪಠ್ಯ ಸೇರಿದ ಕರಾಟೆ!

7
`ಸ್ವಯಂ ರಕ್ಷಣಾ' ಸಾಮರ್ಥ್ಯ ಬೆಳೆಸಲು ಕ್ರಮ

ದೈಹಿಕ ಶಿಕ್ಷಣ ಪಠ್ಯ ಸೇರಿದ ಕರಾಟೆ!

Published:
Updated:

ಗುಲ್ಬರ್ಗ: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಸ್ವಯಂ ರಕ್ಷಣಾ ಸಾಮರ್ಥ್ಯ ಬೆಳೆಸುವ ಉದ್ದೇಶದಿಂದ ಅವರಿಗೆ `ಕರಾಟೆ ತರಬೇತಿ' ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಆ ಮೂಲಕ ದೈಹಿಕ ಶಿಕ್ಷಣದ ಜತೆ ಕರಾಟೆಯನ್ನೂ ಸೇರಿಸಿದೆ. ಜಿಲ್ಲೆಯ 263 ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರು ಸೆಪ್ಟೆಂಬರ್ 30ರಿಂದ ಕರಾಟೆ ತರಬೇತಿ ಪಡೆಯಲಿದ್ದಾರೆ.ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ವಾರದಲ್ಲಿ ಎರಡು ಅವಧಿ ಕರಾಟೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಅಲ್ಲದೇ, ಹೆಣ್ಣು ಮಕ್ಕಳು ಪ್ರತಿಕೂಲ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರನ್ನಾಗಿ ಮಾಡುವುದು ಶಿಕ್ಷಣ ಇಲಾಖೆಯ ಮುಖ್ಯ ಗುರಿಯಾಗಿದೆ.ಇದಕ್ಕಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಸ್.ಎಂ.ಎ) ಯೋಜನೆಯಡಿ ಸೂಕ್ತ ಅನುದಾನ ಬಳಸಲು  ನಿರ್ಧರಿಸಿದೆ.

ಪ್ರತಿ ಶಾಲೆಗಳಿಗೆ ತೆರಳಿ ಕರಾಟೆ ಕಲಿಸುವಷ್ಟು ತರಬೇತುದಾರರು ಲಭ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಕರಾಟೆಯನ್ನು ನಿಯಮಿತವಾಗಿ ಶಾಲಾ ಅವಧಿಯಲ್ಲಿ ಕಲಿಸುವ ಮೂಲಕ ಕರಾಟೆಯನ್ನು `ದೈಹಿಕ ಶಿಕ್ಷಣದ ಭಾಗ'ವನ್ನಾಗಿ ಮಾಡಲು ಮುಂದಾಗಿದೆ. ಹೀಗಾಗಿ, ಕರಾಟೆ ಇನ್ನು ಮುಂದೆ ದೈಹಿಕ ಶಿಕ್ಷಣದ ಪಠ್ಯವಾಗಿ ಉಳಿಯಲಿದೆ.ಶಿಕ್ಷಕರಿಗೆ ತರಬೇತಿ: `ಪ್ರತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಇತರೆ ಉತ್ಸಾಹಿ ವಿಷಯ ಶಿಕ್ಷಕರ (ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದ ಶಾಲೆಗಳಲ್ಲಿ) ಪಟ್ಟಿ  ತಯಾರಿಸಬೇಕು. ಸೆಪ್ಟೆಂಬರ್ 16ರಿಂದ 28ರ ವರೆಗೆ (ಒಟ್ಟು 12 ದಿನಗಳು) ಎಲ್ಲ ಶಿಕ್ಷಕರಿಗೆ ಬ್ಲಾಕ್ ಹಂತದಲ್ಲಿ ತರಬೇತಿ ನೀಡಬೇಕು.ತರಬೇತಿ ನೀಡಲು ಇಬ್ಬರು ತರಬೇತುದಾರರನ್ನು ಒಳಗೊಂಡ ತಂಡವನ್ನು ಜಿಲ್ಲೆಯಲ್ಲಿರುವ ಬ್ಲಾಕ್‌ಗಳ ಸಂಖ್ಯೆಗೆ ಅನುಗುಣವಾಗಿ ರಚಿಸಬೇಕು' ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.`ತರಬೇತಿಗೆ ಹಾಜರಾಗುವ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಸಾರಿಗೆ ವ್ಯವಸ್ಥೆ (ಕಡಿಮೆ ವೆಚ್ಚ ಭರಿಸುವುದು) ಕಲ್ಪಿಸಬೇಕು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವ ಕರಾಟೆ ತರಬೇತುದಾರರಿಗೆ ಪ್ರತಿ ದಿನ ರೂ. 200ರಂತೆ ಗೌರವಧನ ಪಾವತಿಸಬೇಕು. ತರಬೇತಿ ಅವಧಿಯಲ್ಲಿ ಲಘು ಉಪಹಾರ ಮತ್ತು ಚಹಾ ನೀಡಬೇಕು' ಎಂದು ಸೂಚಿಸಲಾಗಿದೆ.ತರಬೇತಿ ಪಡೆದ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಷಯ ಶಿಕ್ಷಕರು ಸೆ. 30ರಿಂದ ತಮ್ಮ ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ಆರಂಭಿಸಬೇಕು.ದೈಹಿಕ ಶಿಕ್ಷಣಕ್ಕೆ ಮೀಸಲಾದ ಒಂದು ಅವಧಿ ಹಾಗೂ ಸಂಗೀತ, ಕ್ರಾಫ್ಟ್ ಹಾಗೂ ಚಿತ್ರಕಲೆಯ ಒಂದು ಅವಧಿಯನ್ನು (ಒಟ್ಟು ಎರಡು ಅವಧಿ) ತರಬೇತಿ ನೀಡಲು ಬಳಸಬೇಕು ಎಂದು ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry