ಗುರುವಾರ , ಜೂನ್ 24, 2021
29 °C

ದೈಹಿಕ ಶಿಕ್ಷಣ ಬೋಧನೆಯಿಂದ ಸಮಾಜಕ್ಕೆ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ದೈಹಿಕ ಶಿಕ್ಷಣವನ್ನು ಪದವಿಯಲ್ಲಿ ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ರಮ ಶ್ಲಾಘನೀಯ ಎಂದು ಮೈಸೂರು ವಿಶ್ವವಿದ್ಯಾಲಯದ  ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎಸ್. ಶೇಷಣ್ಣ ಅಭಿಪ್ರಾಯಪಟ್ಟರು.ಗುಲ್ಬರ್ಗ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ `ಪದವಿ ಮಟ್ಟದಲ್ಲಿ ದೈಹಿಕ ಶಿಕ್ಷಣ ಐಚ್ಛಿಕ ವಿಷಯ ಅಳವಡಿಕೆ~ ಕುರಿತು ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ದೈಹಿಕ ಶಿಕ್ಷಣದ ಪ್ರಾತಃಸ್ಮರಣೀಯರು ಎಂದು ಕರೆಸಿಕೊಳ್ಳುವ ಗ್ರೀಕ್ ದೇಶದವರು ಸಾವಿರಾರು ವರ್ಷಗಳ ಹಿಂದೆಯೇ ಶರೀರ, ಬುದ್ಧಿ ಮತ್ತು ಆತ್ಮ ಈ ಮೂರು ಆಯಾಮಗಳನ್ನು ಗುರುತಿಸಿ ಅದಕ್ಕೆ ತಕ್ಕುದಾದ ಶಿಕ್ಷಣವನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.ದೈಹಿಕ ಶಿಕ್ಷಣವನ್ನು ಕೇವಲ ಕ್ರೀಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ ಇದರಿಂದ ಸಮಾಜಕ್ಕೆ ಹೆಚ್ಚಿನ ಲಾಭವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಬಾರಿ ಪಠ್ಯಕ್ರಮವನ್ನು ಸಹ ಸಿದ್ಧಪಡಿಸಲಾಗಿದೆ. ಆದರೆ ಇದಕ್ಕೆ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ದೈಹಿಕ ಶಿಕ್ಷಣವನ್ನು ಪದವಿ ಮಟ್ಟದಲ್ಲಿ ಐಚ್ಛಿಕ ವಿಷಯವನ್ನಾಗಿ ಅಳವಡಿಸಿದಾಗ ಕ್ರೀಡಾ ಚಟುವಟಿಕೆ ಜೊತೆಗೆ ತರಗತಿಯಲ್ಲಿ ಎದುರಾಗಬಹುದಾದ ಆತಂಕಗಳ ನಿವಾರಣೆಗೆ ಈ ಕಾರ್ಯಾಗಾರ ಧೈರ್ಯ, ಸ್ಥೈರ್ಯವನ್ನು ನೀಡಲಿ ಎಂಬ ಆಶಯ ವ್ಯಕ್ತಪಡಿಸಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಎಲ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ಆರ್.ಬಿ. ಮಾಲಿಪಾಟೀಲ ಅತಿಥಿಗಳಾಗಿದ್ದರು. ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷ ಡಾ. ಎಂ.ಎಸ್. ಪಾಸೋಡಿ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.