ದೊಂಬಿದಾಸ್!

7

ದೊಂಬಿದಾಸ್!

Published:
Updated:
ದೊಂಬಿದಾಸ್!

ಈ ದೊಂಬಿದಾಸರ ಸಭೆಯಲ್ಲಿ ಕೆ.ರಾಮದಾಸ್ ಪರಮಾನಂದದಿಂದ ಸಂಭ್ರಮಿಸುತ್ತಿದ್ದಾರೆ. ದೊಂಬಿದಾಸ ಎಂಬ ಹೆಸರು ಕೇಳಿಯೇ ಪುಲಕಿತರಾಗಿಬಿಟ್ಟಿದ್ದಾರೆ! ತಾವು ಮಾಡುತ್ತಿರುವ ಕೆಲಸ `ದೊಂಬಿ' ಎಂದುಕೊಂಡು ಈ ಖುಷಿಯೊ ಅಥವಾ ತಮ್ಮ ಹೆಸರಿನ ಮುಂದೆ `ದಾಸ' ಇರುವುದು ಕಾರಣವೊ ನನಗೆ ತಿಳಿಯದು.ಅವರ ಈ ಸಂಭ್ರಮ ಕಂಡು, ರಾಮದಾಸ್‌ಗೆ ಇಷ್ಟ ಇದ್ದರೆ - ಈ ಸ್ವತಂತ್ರ ಭಾರತದಲ್ಲಿ ಇದಕ್ಕಾಗಿ ಸ್ವತಂತ್ರ ಕಾನೂನು ಕಟ್ಟಳೆಗಳು ಯಾಕೆ ಆಗಬಾರದು ಅನ್ನಿಸುತ್ತಿದೆ.ಸ್ವಾತಂತ್ರ ಪೂರ್ವದ ಮನು ಸಂವಿಧಾನದ ಸಾಮಾಜಿಕ ಕಟ್ಟುಕಟ್ಟಳೆಗಳಲ್ಲಿ ಹುಟ್ಟು ಮತ್ತು ಜಾತಿ ಬೇರ್ಪಡಲ್ಲ. ಒಂದು ಜಾತಿಗೆ ಇನ್ನೊಂದು ಜಾತಿಯು ಮದುವೆಯಾಗಿ ಕೂಡಿ ಹುಟ್ಟುವ ಶಿಶು ಸಂತಾನವೂ ಹೊಸದೊಂದು ಜಾತಿಯಾಗಿ ಬಿಡುತ್ತಿತ್ತು. ಆ ರೀತಿ ಆಗುತ್ತಿದ್ದುದು ಈಗ ನಿಂತಿದೆ. ಆದರೆ ಸ್ವಾತಂತ್ರ್ಯ ನಂತರದ ಸಂವಿಧಾನದಲ್ಲಾದರೂ ಹುಟ್ಟಿನಿಂದ ಜಾತಿಯನ್ನು ಯಾಕೆ ಬೇರ್ಪಡಿಸಬಾರದು? ಜಾತಿಯೂ ಯಾಕೆ ಆಯ್ಕೆಯಾಗಬಾರದು?ಉದಾ: ಕೆ.ರಾಮದಾಸ್‌ರಿಗೆ ದೊಂಬಿದಾಸರಾಗಬೇಕೆಂದು ಅವರು ಅದನ್ನು ಡಿಕ್ಲೇರ್ ಮಾಡಿಕೊಳ್ಳುವ ಹಕ್ಕಿರಲಿ. ಇದು ಸಂವಿಧಾನಾತ್ಮಕ ಹಕ್ಕಾಗಲಿ. ಇದರಿಂದ ಕೆಲವು ಜಾತಿ ಅನುಕೂಲ ಇರುತ್ತೆ, ಅದಕ್ಕಾಗಿ ಕೆಲವರು ಆಗಬಹುದು ಎಂಬ ಅನುಮಾನ ಸಹಜ. ಅದಕ್ಕಾಗಿ ರಾಮದಾಸ್ ಮೊಮ್ಮಗ/ಮೊಮ್ಮಗಳಿಗೆ ಅಂದರೆ ಮೂರನೆ ಜನರೇಷನ್‌ಗೆ ಆ ಅನುಕೂಲದ ಹಕ್ಕು ದೊರೆಯುವಂತಾಗಲಿ. ಇದಕ್ಕೆ ಆಯಾಯ ಜಾತಿಯ ಕುಲಸ್ಥರು ಒಪ್ಪದೇ ಇರಬಹುದು. ಆದರೆ ಸಂವಿಧಾನದ ಹಕ್ಕಾಗಲು ಏನಂತೆ?ಇದರಿಂದ ಎರಡು ಮೂರು ಬದಲಾವಣೆ ಆಗುತ್ತೆ: ಜಾತಿಗೂ ಹುಟ್ಟಿಗೂ ಸಂಬಂಧ ಇಲ್ಲ; ನಿಲ್ಲಿಸಿದ ಏಣಿಯಂತಿರುವ ಜಾತಿಯು ಸಾಮಾಜಿಕ ಮೆಟ್ಟಿಲನ್ನು ನಿರಾಕರಿಸಿದಂತೆ; ಏಣಿಯಂತೆ ನಿಂತಿರುವ ಸಾಮಾಜಿಕ ತಾರತಮ್ಯದ ಜಾತಿಯನ್ನು ಮಲಗಿಸಿದರೆ ಆಗ ಜಾತಿಗಳು ಒಂದೊಂದು ಸಾಂಸ್ಕೃತಿಕ ಸಮುದಾಯವಾಗಿ ವರ್ತಿಸಬಹುದು. ಜೊತೆಗೇ ಹುಟ್ಟು ಮದುವೆ ಸಾವುಗಳಲ್ಲಿನ ಆಚರಣೆ, ಉಡುಪು ಆಹಾರ ಇತ್ಯಾದಿಗಳಲ್ಲಿ ಯಾರಾರಿಗೆ ಯಾವಾವ ರೀತಿ ಇಷ್ಟವೊ ಅದದಾಗಲು ಏನು ಅಡ್ಡಿಯಾಗಿದೆ?ಈ ರೀತಿ ಹೇಳುವ ನನ್ನನ್ನು ಜಾತಿಪರ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿರಿ. ಏಣಿಯಂತೆ ಒಬ್ಬರ ಮೇಲೊಬ್ಬರು ನಿಂತಿರುವ ಜಾತಿಯನ್ನು ಮಲಗಿಸಿ ಅದು ಮೇಲು ಕೀಳಿಲ್ಲದೆ ಒಡನಾಡಲು ಸಾಧ್ಯವೆ ಎಂದು ಹುಡುಕುತ್ತಿದ್ದೇನೆ.ಇನ್ನೂರು ವರ್ಷದ ಕೆಳಗೆ ಅಬ್ರಾಹ್ಮಣ ಜಾತಿಯೊಂದು ತಾನು ಬ್ರಾಹ್ಮಣ ಎಂದು ಹೋರಾಡಿ ಹೋರಾಡಿ ಈಗ ಬ್ರಾಹ್ಮಣ ಎಂದೇ ಒಪ್ಪಿತವಾಗಿರುವಾಗ ಇದು ಯಾಕೆ ಆಗಬಾರದು? ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಈಡಿಗರನ್ನು ಒಕ್ಕಲಿಗರೆಂದೇ ಪರಿಗಣಿಸಿ ಈಗ ಕೊಟ್ಟು ತಂದು ಮಾಡುವುದೂ ನಡೆಯುತ್ತಿದೆ. ಹೀಗಿರುವಾಗ ಇದು ಯಾಕೆ ಆಗಬಾರದು?ಇಲ್ಲಿ ನನ್ನ ಆಶಯವನ್ನಷ್ಟೆ ಪರಿಗಣಿಸಿರಿ. ಜಾತಿಗೂ ಹುಟ್ಟಿಗೂ ಸಂಬಂಧ ಇರುವುದರ ಹುಟ್ಟಡಗಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry