ದೊಡ್ಡಕಲ್ಲಸಂದ್ರ: ಗುಂಪು ಘರ್ಷಣೆ-ಇಬ್ಬರಿಗೆ ಗುಂಡೇಟು

ಮಂಗಳವಾರ, ಜೂಲೈ 23, 2019
25 °C

ದೊಡ್ಡಕಲ್ಲಸಂದ್ರ: ಗುಂಪು ಘರ್ಷಣೆ-ಇಬ್ಬರಿಗೆ ಗುಂಡೇಟು

Published:
Updated:

ಬೆಂಗಳೂರು: ಸುಬ್ರಹ್ಮಣ್ಯಪುರ ಸಮೀಪದ ದೊಡ್ಡಕಲ್ಲಸಂದ್ರದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಒಂದು ಗುಂಪಿನ ಸದಸ್ಯನೊಬ್ಬ ಎದುರಾಳಿಗಳ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.ಘಟನೆಯಲ್ಲಿ ಇಬ್ಬರಿಗೆ ಗುಂಡೇಟು ಬಿದ್ದಿದ್ದು, ಐದಾರು ಮಂದಿ ಗಾಯಗೊಂಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಹಬೀಬ್ ಮತ್ತು ಶ್ರೀನಾಥ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದೊಡ್ಡಕಲ್ಲಸಂದ್ರ ನಿವಾಸಿಗಳಾದ ಮುನಿವೆಂಕಟಪ್ಪ ಮತ್ತು ದೇವರಾಜು ಎಂಬುವರ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಇಬ್ಬರೂ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು, ಅಕ್ಕಪಕ್ಕದಲ್ಲೇ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಮುನಿವೆಂಕಟಪ್ಪನ ಪುತ್ರ ಹೇಮಂತ್‌ಕುಮಾರ್ ರಾತ್ರಿ ತಡವಾಗಿ ಮನೆಗೆ ಬಂದರು. ಇದರಿಂದ ಕೋಪಗೊಂಡ ಅವರು ಮಗನನ್ನು ಮನೆಯಿಂದ ಹೊರಗೆ ನಿಲ್ಲಿಸಿ ಬೈದರು.ಈ ಸಂದರ್ಭದಲ್ಲಿ ತನ್ನ ಮನೆಯ ಬಳಿ ನಿಂತಿದ್ದ ದೇವರಾಜು ಮತ್ತು ಕುಟುಂಬದವರಿಗೂ ಮುನಿವೆಂಕಟಪ್ಪ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನೆಯೊಳಗೆ ಹೋಗುವಂತೆ ಧಮಕಿ ಹಾಕಿದರು. ಇದರಿಂದಾಗಿ ಎರಡು ಗುಂಪಿನವರ ನಡುವೆ ವಾಗ್ವಾದ ನಡೆದು, ದೇವರಾಜುವಿನ ಅಪಾರ್ಟ್‌ಮೆಂಟ್‌ನ ಮೇಲೆ ಕಲ್ಲು ತೂರಲಾಯಿತು. ಪ್ರತಿಯಾಗಿ ದೇವರಾಜು, ಸಹಚರರು ಮುನಿವೆಂಕಟಪ್ಪನ ಕಾರನ್ನು ಜಖಂಗೊಳಿಸಿದರು.ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರರು ಬಡಿದಾಡಿಕೊಂಡರು. ಈ ಹಂತದಲ್ಲಿ ದೇವರಾಜುವಿನ ಅಂಗರಕ್ಷಕ ತಮ್ಮಯ್ಯ ಎಂಬಾತ ನಾಡ ಪಿಸ್ತೂಲ್‌ನಿಂದ ಎದುರಾಳಿಗಳ ಮೇಲೆ ಮೂರು ಸುತ್ತು ಗುಂಡು ಹಾರಿಸಿದ. ಈ ವೇಳೆ ಶ್ರೀನಾಥ್ ಮತ್ತು ಹಬೀಬ್‌ನ ಕಾಲುಗಳಿಗೆ ಗುಂಡು ತಗುಲಿತು ಎಂದು ಪೊಲೀಸರು ಹೇಳಿದ್ದಾರೆ.ಶ್ರೀನಾಥ್‌ನ ಕಾಲುಗಳಿಗೆ ಆರು ಗುಂಡು ಮತ್ತು ಹಬೀಬ್‌ನ ಕಾಲುಗಳಿಗೆ ಎರಡು ಗುಂಡು ಹೊಕ್ಕಿದ್ದವು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಿ ಗುಂಡುಗಳನ್ನು ಹೊರ ತೆಗೆಯಲಾಗಿದೆ. ಘಟನೆ ಸಂಬಂಧ ದೂರು ಹಾಗೂ ಪ್ರತಿದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ದೇವರಾಜು, ನಾಗರಾಜು, ಮಧುಸೂದನ್, ತಮ್ಮಯ್ಯ, ಅಫ್ಜರ್‌ಖಾನ್, ಮುನಿವೆಂಕಟಪ್ಪ, ಪ್ರಸನ್ನ, ನದೀಮ್, ಮಂಜುನಾಥ್ ಮತ್ತು ಹೇಮಂತ್‌ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry