ಬುಧವಾರ, ನವೆಂಬರ್ 20, 2019
20 °C

ದೊಡ್ಡಕೆರೆ ಅಭಿವೃದ್ಧಿಗೆ ಮೊರೆ

Published:
Updated:

ಕೊಣನೂರು: ಐತಿಹಾಸಿಕ ಹಿನ್ನೆಲೆ ಇರುವ ಕೊಣನೂರಿನ ದೊಡ್ಡಕೆರೆಯನ್ನು ಅಭಿವೃದ್ದಿ ಮಾಡಿದ್ದರೆ ಏನೆಲ್ಲಾ ಉಪಯೋಗ ಆಗುತ್ತಿತ್ತು. ಆದರೆ ಎಲ್ಲರೂ ನಿರಾಸಕ್ತಿ ತಾಳಿದ್ದರಿಂದ ಕೆರೆ ಅಭಿವೃದ್ಧಿ ಕಾಣದೆ ಉಳಿದುಕೊಂಡಿದೆ.ಅಂದಾಜು 218 ಎಕರೆ ವಿಸ್ತೀರ್ಣವುಳ್ಳ ಕೆರೆಯ ದಂಡೆ ಮೇಲೆ ಪಟ್ಟಣ ನಿರ್ಮಾಣವಾಗಿರುವ ಕಾರಣ ಊರಿನ ಸೌಂದರ್ಯಕ್ಕೊಂದು ಮುಕುಟ ಮಣಿಯಾಗಿದೆ. ಕೆರೆ ತಟದಲ್ಲಿ ಐತಿಹಾಸಿಕ ಕೆರೆಕೋಡಿಯಮ್ಮ ದೇವಸ್ಥಾನ ಹಾಗೂ ಕೊತ್ತಲ ಗಣಪತಿ ದೇಗುಲವಿದೆ. ಅಲ್ಲಿ ಪರಿಸರ ಬೆಳೆಸಿ ಪುಟ್ಟದಾದ ಉದ್ಯಾನ, ಬೋಟ್ ವ್ಯವಸ್ಥೆ ಕಲ್ಪಿಸಿದ್ದರೆ ಸುಂದರ ಪ್ರವಾಸಿ ತಾಣ ಮಾಡಬಹುದಿತ್ತು. ಈ ರೀತಿಯ ಅಭಿವೃದ್ಧಿ ಕೆಲಸ ಅಲ್ಲಿ ಯಾರಿಗೂ ಬೇಡವಾಗಿದೆ. ಬದಲಾಗಿ ದೇವಸ್ಥಾ ನದ ಬಳಿ ಕೆರೆ ತಟದಲ್ಲಿ ವಾತಾವರಣ ಸಂಪೂರ್ಣ ಕಲುಷಿತ ಗೊಂಡಿದೆ.ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳೇ ಇದಕ್ಕೆ ಸಾಕ್ಷಿ. ಇದು ನೋಡುಗರಿಗೂ ಅಸಹ್ಯ ಹುಟ್ಟಿಸುತ್ತದೆ. ಮಳೆಗಾಲ ಬಂದರೆ ಊರಿನ ಚರಂಡಿಯ ಕೊಳಕು ನೀರೆಲ್ಲಾ ಕೆರೆಗೆ ಸೇರುತ್ತದೆ. ಇದರಿಂದ ನೀರು ಕಲುಷಿತಗೊಂಡು ಮೀನು ಸಾಕಾಣಿಕೆಗೆ ತೊಂದರೆಯಾಗುತ್ತಿದೆ.ಈ ಕೆರೆಗೆ ಅರಕಲಗೂಡು ಭಾಗದಿಂದ ಹಳ್ಳದ ಕಡೆಗೆ ಬರುವ ಹತ್ತಾರು ಕೆರೆ- ಕಟ್ಟೆಗಳ ನೀರು ಬಂದು ಸೇರುತ್ತದೆ. ಇದಲ್ಲದೇ ಹಾರಂಗಿ ಮತ್ತು ಹೇಮಾವತಿ ನಾಲೆಗಳ ನೀರು ಬರುತ್ತದೆ. ಹೀಗಾಗಿ ಕೆರೆಯಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತದೆ. ಮಳೆಗಾಲ ಶುರವಾದರೆ ಕೆರೆಕೋಡಿ ಹಳ್ಳದಲ್ಲಿ ಹಾಲ್ನೊರೆಯುಕ್ಕಿಸಿ ಧುಮ್ಮಿಕ್ಕುವ ಜಲಧಾರೆ ನೋಡುಗರ ಮನ ಸೆಳೆಯುತ್ತದೆ. ಸಂಬಂಧಪಟ್ಟವರು ಮನಸ್ಸು ಮಾಡಿದ್ದರೆ ಕೆರೆ ನೀರು ಬಳಸಿ ಅಲ್ಲೊಂದು ಕಿರು ವಿದ್ಯುತ್ ಉತ್ಪಾದನಾ ಯೋಜನೆಯನ್ನು ಸ್ಥಾಪಿಸಬಹುದಿತ್ತು ಎಂಬುದು ಕೆಲವರ ಅಭಿಪ್ರಾಯ.ಕೆರೆ ಮೂಲಕ ನೂರಾರು ಎಕರೆ ಅಡಿಕೆ ತೋಟ ಹಾಗೂ ಬತ್ತದ ಬೆಳೆಗೆ ನೀರೊದಗಿಸುತ್ತದೆ. ಕೋಡಿ ಹಳ್ಳದಲ್ಲಿ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಕಾವೇರಿ ನದಿಗೆ ಹರಿದು ವ್ಯರ್ಥವಾಗುತ್ತದೆ. ಕೆರೆ ಒಡಲಲ್ಲಿ ಹುದುಗಿರುವ ಹೂಳು ತೆಗೆದು ಯಾವುದೋ ಕಾಲವಾಗಿದೆ. ಒತ್ತುವರಿಗೆ ಒಳಗಾಗಿರುವ ಕೆರೆ ಮೂಲ ವಿಸ್ತೀರ್ಣ ಹೆಚ್ಚಿಸಿ ಕಾಲ ಕಾಲಕ್ಕೆ ಹೂಳು ತೆಗೆದರೆ ನೀರಿನ ಶೇಖರಣಾ ಸಾಮರ್ಥ್ಯ ಇನ್ನೂ ಅಧಿಕಗೊಳ್ಳಲಿದೆ.ಸುಮಾರು 1 ಕಿ.ಮೀ. ಉದ್ದದ ಕೆರೆಯ ಏರಿ ತಿರುವು ಹಳ್ಳದಿಂದ ಕೂಡಿದ್ದು ತೀರ ಕಿರಿದಾಗಿದೆ. ಆದರೂ ಇದೇ ಏರಿ ಮೇಲೆ ನಿತ್ಯ ಕೆ.ಎಸ್.ಆರ್.ಟಿ.ಸಿ. ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಈವರೆಗೆ ಸಾಕಷ್ಟು ವಾಹನ ಗಳು ಕೆರೆಗೆ ಉರುಳಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಕೆರೆ ಏರಿ ವಿಸ್ತರಿಸಿ ಕೆರೆಕೋಡಿ ಹಳ್ಳದ ಕೋಡಿ ದುರಸ್ತಿ ಪಡಿಸಿಲ್ಲ ಎಂಬುದು ಸಾರ್ವಜನಿಕರ ಕೊರಗು.ಮೀನಿಗೆ ಪ್ರಸಿದ್ಧಿ: ಕೆರೆ ಬಳಿ ಇರುವ ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಮಾರಾಟಕ್ಕೂ ಅಪಾರ ಪ್ರಸಿದ್ದಿ ಪಡೆದಿದೆ. ದೂರದ ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣಗಳಿಗೆ ಇಲ್ಲಿಂದಲೇ ಸಾಕಷ್ಟು ಮೀನುಗಳನ್ನು ಕೊಂಡೊಯ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಾರೆ. ಹೀಗಾಗಿ ಇಲ್ಲಿನ ಮೀನುಗಳಿಗೆ ಬಹಳಷ್ಟು ಬೇಡಿಕೆ ಇದೆ ಎನ್ನುತ್ತಾರೆ ಸ್ಥಳೀಯರು.

 

ಪ್ರತಿಕ್ರಿಯಿಸಿ (+)