ದೊಡ್ಡಕ್ಕಿ ಅನ್ನ ತಿನ್ನದಿದ್ದರೆ ಹೇಗಣ್ಣ?

7

ದೊಡ್ಡಕ್ಕಿ ಅನ್ನ ತಿನ್ನದಿದ್ದರೆ ಹೇಗಣ್ಣ?

Published:
Updated:

ಗೌರಿಬಿದನೂರು  ತಾಲ್ಲೂಕಿನ ಬಹುತೇಕ ಗ್ರಾಮಗಳ ಜೋಗು ಪ್ರದೇಶದಲ್ಲಿ  ದೊಡ್ಡಬತ್ತ (ತೆಲುಗಿನಲ್ಲಿ ಪೆದ್ದೊಡ್ಡಲು) ಬೆಳೆಯುತ್ತಿದ್ದರು.  ಆದರೆ ಇಂದು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಹಿಂದೆ  ಸಮೃದ್ಧವಾಗಿ ಮಳೆ ಬೀಳುತ್ತಿದ್ದರಿಂದ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಬಿತ್ತನೆ ಮಾಡುತ್ತಿದ್ದ ದೇಸಿ ತಳಿ ಬತ್ತ ಇದು.ನೀರಾವರಿ ಸೌಲಭ್ಯವಿರುವ ರೈತರು ಬತ್ತದ ಇತರೆ  ತಳಿಗಳನ್ನು ಬೆಳೆದರೆ, ನೀರಿನ ಸೌಲಭ್ಯವಿಲ್ಲದ ಸಣ್ಣ ರೈತರು ತಮ್ಮ ಜೋಗು ಪ್ರದೇಶದ  ಭೂಮಿಯಲ್ಲಿ ದೊಡ್ಡ ಬತ್ತವನ್ನು  ಬಿತ್ತನೆ ಮಾಡುತ್ತಿದ್ದರು. ಒಬೊಬ್ಬರು 10ರಿಂದ 15 ಕ್ವಿಂಟಲ್ ಬತ್ತ  ಬೆಳೆದು, ವರ್ಷ ಪೂರ್ತಿ ಹಬ್ಬ ಹರಿದಿನಗಳಲ್ಲಿ ಈ ಅಕ್ಕಿಯನ್ನು ಬಳಸುತ್ತಿದ್ದರು.ಈ ರೀತಿ ಬತ್ತ ಬೆಳೆದುಕೊಳ್ಳುವುದು ಆಗ ರೈತರಿಗೆ ಅನಿವಾರ್ಯವಾಗಿತ್ತು. ಆದರೆ ಇಂದು ಮಳೆ ಕೊರತೆ, ಜೊತೆಗೆ  ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ  ಪಡಿತರ ಅಕ್ಕಿ ವಿತರಣೆ ಮಾಡುವುದರಿಂದ ಈ ಬತ್ತವನ್ನು ಅಷ್ಟಾಗಿ ಯಾವ ರೈತರೂ ಬೆಳೆಯುತ್ತಿಲ್ಲ.ಅಪರೂಪಕ್ಕೆ  ಅಲ್ಲೊಬ್ಬ ಇಲ್ಲೊಬ್ಬರು ಇಂದಿಗೂ ಈ ತಳಿಯ ಬತ್ತ ಬಿತ್ತನೆ ಮಾಡುವುದು ಕಾಣಬಹುದು  ಎನ್ನುತ್ತಾರೆ ರೆಡ್ಡಿ ದ್ಯಾವರಹಳ್ಳಿ ರೈತ ವೆಂಕಟೇಶಪ್ಪ.ಬೆಟ್ಟದ ತಪ್ಪಲಿನಲ್ಲಿ  ಈ ಬತ್ತ ಬಿತ್ತನೆ ಮಾಡಿರುವ ರೈತ ವೆಂಕಟೇಶಪ್ಪ ಹೇಳುವ ಪ್ರಕಾರ, ಈ ವರ್ಷ ಮಳೆ  ತಡವಾಗಿರುವುದರಿಂದ ಬಿತ್ತನೆಯೂ ತಡವಾಗಿದೆ. ಸಕಾಲಕ್ಕೆ ಮಳೆ ಬಂದಿದ್ದರೆ ಈ ಸಮಯಕ್ಕೆ ತೆನೆ ಬಿಡುವ ಹಂತಕ್ಕೆ ಬೆಳೆಯುತ್ತಿತ್ತು, ಉತ್ತಮ ಇಳುವರಿ ಬರುತ್ತಿತ್ತು. ಆದರೆ  ತಡವಾಗಿ ಬಿತ್ತನೆ ಮಾಡಿರುವುದರಿಂದ ಅಷ್ಟಾಗಿ ಇಳುವರಿ ಬರುವುದಿಲ್ಲ. ಆದರೂ ಈ ವರ್ಷ ಎರಡು-ಮೂರು ಕ್ವಿಂಟಲ್ ಬತ್ತಕ್ಕೆ ಮೋಸವಿಲ್ಲ ಎನ್ನುತ್ತಾರೆ. ಇತರೆ ತಳಿಗಳಿಗಿಂತ ಈ ಬತ್ತ ಹಾಗೂ ಅಕ್ಕಿ ಎರಡು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ದೊಡ್ಡ ಭತ್ತ ಎಂದು ಹೆಸರಿದೆ. ಪ್ರತಿ ವರ್ಷ ಬಿತ್ತನೆ ಮಾಡಲು ಈ ಬೀಜವನ್ನು ಸಂರಕ್ಷಿಸಲಾಗುತ್ತದೆ.  ಬಿತ್ತನೆ ಮಾಡುವ ಇತರೆ ರೈತರು ನನ್ನಿಂದ ಬೀಜದ ಬತ್ತ ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ.ಾಲಿಷ್ ಇಲ್ಲದ ಈ ಅಕ್ಕಿಯ ಅನ್ನ ಹೆಚ್ಚು ರುಚಿಕರ. ಹಬ್ಬ ಹರಿದಿನಗಳಲ್ಲಿ  ಕಜ್ಜಾಯ, ಹಸಿ ತಂಬಿಟ್ಟು, ಚಕ್ಕುಲಿ ಹೀಗೆ ಅನೇಕ ಬಗೆ  ಸಿಹಿ ಪದಾರ್ಥ, ಖಾದ್ಯ ತಯಾರಿಸಲು ಇಂದಿಗೂ  ಈ ಅಕ್ಕಿ ಬಳಸುತ್ತಾರೆ.  ಕೆಲವು ರೈತರು ಹಣಕ್ಕೆ ಇಲ್ಲವೆ ಬದಲಿಯಾಗಿ ಈ ಅಕ್ಕಿಯನ್ನು ಪಡೆಯುತ್ತಾರೆ.  ಇದರಲ್ಲಿ  ಔಷಧೀಯ ಗುಣ ಹಾಗೂ ಪೌಷ್ಟಿಕಾಂಶ ಹೆಚ್ಚು.ಕೀಲು ನೋವು, ರಕ್ತದೊತ್ತಡ, ಮಧುಮೇಹ ಈ ರೀತಿ ಕಾಯಿಲೆಗಳಿಗೆ ಒಳ್ಳೆಯದು. ನಾರಿನಾಂಶ ಹೆಚ್ಚಿರುವುದರಿಂದ ಹಲವಾರು ಕಾಯಿಲೆ ನಿವಾರಣೆಗೆ ದೊಡ್ಡ ಅಕ್ಕಿ ರಾಮಬಾಣ ಎನ್ನುತ್ತಾರೆ ವೆಂಕಟೇಶಪ್ಪ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry