ಮಂಗಳವಾರ, ಏಪ್ರಿಲ್ 13, 2021
29 °C

ದೊಡ್ಡದು ಎಂಬ ಧೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದೊಂದು ಬಹಳ ದೊಡ್ಡ ಸಭೆ.  ಉದ್ಯಮಶೀಲ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಅವರ ಸಾಮಾಜಿಕ ಕಳಕಳಿ-ಸಾಧನೆಗಳನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತಿತ್ತು.  ಭಾರತದ ಬಹುದೊಡ್ಡ ಉದ್ಯಮಿಯೊಬ್ಬರು ಯುವಕರಿಗೆ ಬುದ್ಧಿವಾದ ಹೇಳುತ್ತಿದ್ದರು. ಅವರ ಬುದ್ಧಿವಾದ ಹೀಗೆ ಸಾಗಿತ್ತು- “ಹಣ ಸಂಪಾದಿಸುವುದನ್ನು ಎಂದೂ ನಿಲ್ಲಿಸಬೇಡಿ; ಹೆಚ್ಚು ಹೆಚ್ಚು ಹಣ ಸಂಪಾದಿಸಿ. ಬೇಕಾದರೆ ಅದನ್ನು ದಾನ ಮಾಡಿ, ಆದರೆ ಹಣ ಸಂಪಾದಿಸುವುದನ್ನು ಮಾತ್ರ ನಿಲ್ಲಿಸಬೇಡಿ. ನಿಮ್ಮ ವಾಣಿಜ್ಯೋದ್ಯಮ ಸದಾ ಬೆಳೆಯುತ್ತಿರಬೇಕು.  ಉದ್ಯಮಗಳಿಗೆ ಇದೊಂದೇ ದಾರಿ. ಬೆಳೆಯುವುದನ್ನು ನಿಲ್ಲಿಸಿದರೆ ಸಾಯಬೇಕಾದೀತು,  ಆದ್ದರಿಂದ ನಿಮ್ಮ ಉದ್ಯಮ ಸದಾ ಬೆಳೆಯುತ್ತಿರುವಂತೆಯೇ ನೋಡಿಕೊಳ್ಳಿ. ಕನಿಷ್ಟ ಐದುನೂರು ವರ್ಷಗಳಾಚೆಗೆ ನಿಮ್ಮ ಉದ್ಯಮದ ಸ್ವರೂಪ ಹೇಗಿರಬೇಕೆಂದು ಒಂದು ದರ್ಶನ, ಒಂದು ಕಾಣ್ಕೆ ನಿಮಗೆ ಇರಲಿ.  ಯಾವಾಗಲೂ ದೊಡ್ಡ ಬಹುದೊಡ್ಡ ಕನಸನ್ನು ಕಾಣಿರಿ.  ನಿಮ್ಮ ಕನಸನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ......”“ಆದರೆ ಸ್ನೇಹಿತರೆ...... ಎಲ್ಲವನ್ನೂ ನೈತಿಕ ಚೌಕಟ್ಟಿನಲ್ಲೇ ಸಾಧಿಸಿ, ಅನೈತಿಕ ಮಾರ್ಗ ಹಿಡಿಯುವುದು ಬೇಡ; ನಾವು ಎಲ್ಲಾ ಧರ್ಮಗಳನ್ನು ಗೌರವಿಸೋಣ, ಎಲ್ಲಾ ದೇಶದವರನ್ನೂ ಗೌರವಿಸೋಣ.  ಎಲ್ಲಿ ಕೋಮು ಸೌಹಾರ್ದ ಇಲ್ಲವೋ ಅಲ್ಲಿ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ಪ್ರಗತಿ ಸಾಧಿಸಬೇಕಾದರೆ ಜಾತ್ಯತೀತ ವಾತಾವರಣ ಬೇಕು. ನಾವು ಎಲ್ಲಾ ದೇಶಗಳನ್ನು ಗೌರವಿಸೋಣ, ಎಲ್ಲ ದೇಶದ, ಎಲ್ಲ ಧರ್ಮಗಳ, ಎಲ್ಲ ಜನಾಂಗಗಳ ಜನರನ್ನು ಗೌರವಿಸೋಣ.  ನಮ್ಮ ಉದ್ಯಮ ರಾಷ್ಟ್ರೀಯ ಗಡಿಗಳಿಂದಾಚೆಗೆ ಅಂತರರಾಷ್ಟ್ರೀಯವಾಗಿ ಬೆಳೆಯಬೇಕು. ಜಾಗತೀಕರಣ ಎಂದರೆ ಏನು ಗೊತ್ತೆ? ಎಲ್ಲಿ ವಸ್ತುಗಳು ಸುಲಭ ಬೆಲೆಯಲ್ಲಿ ಸಿಗುತ್ತದೋ ಅಲ್ಲಿ ಅದನ್ನು ಕೊಂಡು, ಎಲ್ಲಿ  ಶ್ರಮಿಕರು ಕಡಿಮೆ ಬೆಲೆಯಲ್ಲಿ ಸಿಗುತ್ತಾರೋ ಮತ್ತು ಕೌಶಲವನ್ನು ಪಡೆದಿದ್ದಾರೋ ಅಲ್ಲಿ ವಸ್ತುಗಳನ್ನು ತಯಾರಿಸಿ, ಅತ್ಯಂತ ಹೆಚ್ಚು ಬೆಲೆ ಎಲ್ಲಿ ದೊರೆಯುತ್ತದೋ ಅಲ್ಲಿ ಮಾರುವುದೇ ಜಾಗತೀಕರಣ......”“ಆದರೆ ಸ್ನೇಹಿತರೆ, ಈ ಭೂಮಿ ಹಸಿರಾಗಿಯೇ ಉಳಿಯಬೇಕು.  ನಮ್ಮ ಮಕ್ಕಳು, ಮೊಮ್ಮಕ್ಕಳು ಬದುಕಿ ಬಾಳಲು ಹಸನಾಗಿರಬೇಕು.  ಇಂಗಾಲದ ಡೈ ಆಕ್ಸೈಡನ್ನು ಹೆಚ್ಚಾಗಿ ವಾತಾವರಣಕ್ಕೆ ಬಿಡುಗಡೆ ಮಾಡಿ ಜಾಗತಿಕ ತಾಪಮಾನಕ್ಕೆ ಕಾರಣರಾಗುವುದು ಬೇಡ.  ಇರುವುದು ಒಂದೇ ಭೂಮಿ.  ಇದನ್ನು ನಾವು ಹಾಳುಗೆಡುವುದು ಬೇಡ” ಹೀಗೆ ಭಾಷಣ ಸಾಗುತ್ತಿತ್ತು.  ದೊಡ್ಡದಾದ ಕನಸನ್ನು ಕಾಣುವುದೇ ಆದರ್ಶ ಎಂಬ ಈ ಭಾಷಣ ಕೇಳಿ ಸ್ಪೂರ್ತಿಗೊಂಡ ಯುವಕರು ಆಗಾಗ ಶಿಳ್ಳೆ ಹಾಕುತ್ತಿದ್ದರು.  ಕರತಾಡನ ಮಾಡುತ್ತಿದ್ದರು. ಬಹುಶಃ ಅವರೆಲ್ಲರಲ್ಲೂ ಈ ಸ್ಪೂರ್ತಿಯುತವಾದ ಭಾಷಣ ಕೇಳಿ ಹೊಸ ಕನಸುಗಳು ಅಂಕುರವಾಗಿಬಿಟ್ಟಿತ್ತು.  ಅಲ್ಲಿ ಸೇರಿದ್ದ ಉದ್ಯಮಶೀಲರಾದ ಯಶಸ್ವಿ ಉದ್ಯಮಿಗಳು ಭಾಷಣಕಾರನ ಸಾಧನೆಗಳನ್ನು ಕಂಡು ಕೇಳಿ ದಂಗಾಗಿ ಹೋಗಿದ್ದರು.  ನವ ಉತ್ಸಾಹ ತುಂಬಿತುಳುಕುತ್ತಿದ್ದ ಆ ವಾತಾವರಣದಲ್ಲಿ ಬದುಕಿನ ಬಹುಮುಖ್ಯ ಪ್ರಶ್ನೆಗಳು ಅಪ್ರಸ್ತುತ ಎನಿಸುವಷ್ಟು ಅಂಚಿಗೆ ಹೋಗಿ ನಿಂತಿತ್ತು. ಕಾಡುವ ಈ ಪ್ರಶ್ನೆಗಳು ಯಾವುವೆಂದರೆ   ಎಣೆಯಿಲ್ಲದ ಆರ್ಥಿಕ ಪ್ರಗತಿ ಮತ್ತು ಹಸಿರು ಭೂಮಿ ಒಟ್ಟಿಗೆ ಇರಲು ಹೇಗೆ ಸಾಧ್ಯ?  ಪ್ರತಿಯೊಬ್ಬನೂ ದೊಡ್ಡದಾಗಿ ಬೆಳೆಯುವ ಕನಸು ಹೊತ್ತು ಹೊರಟರೆ ಎಂದರೆ ಎಲ್ಲರೂ ಬಿಲಿಯನ್ ಡಾಲರ್ ಬಿಸಿನೆಸ್‌ಗಳನ್ನು ಬೆಳೆಸಿದರೆ ಈ ಭಾರವನ್ನು ನಮ್ಮ ಭೂಮಿ ಹೇಗೆ ತಾನೆ ತಾಳಿಕೊಳ್ಳಬಲ್ಲದು.  ಈ ಉದ್ಯಮಗಳಿಂದ ಯಥೇಚ್ಛವಾಗಿ ಹಣ ಸಂಪಾದಿಸುವ ಶ್ರೀಮಂತರ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯ. ಇವರು ತಮ್ಮ ಹಣ ಬಲದಿಂದ ಪ್ರಕೃತಿ ಸಂಪನ್ಮೂಲಗಳನ್ನು ಧ್ವಂಸ ಮಾಡುವ ದುಷ್ಟಶಕ್ತಿಗಳಾಗಿ ಪರಿಣಮಿಸುವುದಿಲ್ಲವೆ? ಈ ಭಾಷಣದಲ್ಲಿ ನಮ್ಮ ಜವಾಬ್ದಾರಿಯ ಕುರಿತು ಮಾತುಗಳಿದ್ದರೂ ಆ ಮಾತುಗಳು ತಮ್ಮ ಉದ್ಯಮಕ್ಕೆ ಕಳಂಕ ಬರದಿರಲು ಕನಿಷ್ಠ ಎಷ್ಟು ಬೇಕೋ ಅಷ್ಟು ಮಾತ್ರ.ಕೋಮುಸೌಹಾರ್ದ ಬೇಕಾದದ್ದು ಆರ್ಥಿಕ ಪ್ರಗತಿ ಸಾಧಿಸಲು, ಮನುಷ್ಯನ ನೆಮ್ಮದಿಗಾಗಿ ಈ ಮೌಲ್ಯ ಎಂಬುದು  ಈ ಸಂದರ್ಭದಲ್ಲಿ ಎರಡನೆಯ ಮಾತು. ಅಂತರರಾಷ್ಟ್ರೀಯ  ಸೌಹಾರ್ದ, ಇತರ ಮನುಷ್ಯರ ಬಗ್ಗೆ ಗೌರವ ಇತ್ಯಾದಿಗಳು ಉದ್ಯಮ ವಿಸ್ತರಣೆಗೆ ಎಷ್ಟು ಬೇಕೊ ಅಷ್ಟು ಇದ್ದರೆ ಸಾಕು. ಒಟ್ಟಿನಲ್ಲಿ ಉದ್ಯಮ ಒಂದು ಬೆಳೆಯುತ್ತಿದ್ದರೆ ಸಾಕು ಉಳಿದೆಲ್ಲವೂ ಸುಸೂತ್ರ ಎಂಬ ನಂಬಿಕೆ ಇದು. ಇಲ್ಲಿ ಮನುಷ್ಯ ಉದ್ಯಮದ ಪರ್ಯಾಯ ರೂಪವಾಗುತ್ತಿದ್ದಾನೆ. ಉದ್ಯಮದ ಹೊರತಾಗಿ ಅವನಿಗೆ ಬೇರೆಯಾದ ಅಸ್ತಿತ್ವವೇ ಇಲ್ಲ!  ಪರಿಸರದ ಕಾಳಜಿಗಳ ಬಗ್ಗೆ ಮಾತನಾಡುವ ಮೂಲಕ ಆ ಸಂಬಂಧದ ಅಪರಾಧಿ ಪ್ರಜ್ಞೆಯನ್ನು ಕೊಂಚ ಶಮನ ಮಾಡಿಕೊಳ್ಳಬಹುದು.ಬದುಕುವುದಕ್ಕಿಂತ ಉದ್ಯಮ ಬೆಳೆಸುವುದು, ಹಣಗಳಿಸುವುದು ಬಹಳಮುಖ್ಯ ಎಂದು ಭಾವಿಸುವುದು ಇಂದಿನ ಜನಪ್ರಿಯ ಮೌಲ್ಯವಾಗಿರುವುದಕ್ಕೆ ಕಾರಣ ನಮ್ಮ ನಡುವೆ ಇರುವ ಇಂತಹ ಯಶಸ್ವೀ ಉದ್ಯಮಿಗಳು. ಈ ಉದ್ಯಮಿಗಳ  ಜೀವನದೃಷ್ಟಿ ನಮ್ಮ ಯುವಜನತೆಯ ಜೀವನಾದರ್ಶವಾಗುವುದಾದರೆ, ಇವರು ನಮ್ಮ ಶಿಕ್ಷಣವನ್ನು ನಿಯಂತ್ರಿಸುವುದಾದರೆ ಹುಟ್ಟುವ ಸುಶಿಕ್ಷಿತರು ಹೇಗಿರಬಹುದು, ಅವರು ನಿಯಂತ್ರಿಸುವ ನಮ್ಮ ಪರಿಸರ ಹೇಗಿರುತ್ತದೆ?ಭಾಷಣಕಾರನಾದ ಈ ಉದ್ಯಮಿ ವೈಯಕ್ತಿಕ ಬದುಕಿನಲ್ಲಿ ಮೌಲ್ಯವಂತನೇ ಆದರೂ ಅವನ ಉದ್ಯಮದ ಬದುಕಿನಲ್ಲಿ  ಈತನ ಬದ್ಧತೆ ಉದ್ಯಮಕ್ಕೆ ಮತ್ತು ಗ್ರಾಹಕರಿಗೆ ಮಾತ್ರ. ದೇಶ ಪ್ರೇಮ, ಬಡವರ ಮೇಲಿನ ಕಳಕಳಿ ಎಂಬ ಮೌಲ್ಯಗಳು ಉದ್ಯಮಕ್ಕೆ ಪೂರಕವಾದ ಉಪಯುಕ್ತ ಮೌಲ್ಯಗಳು ಅಷ್ಟೆ! ಇದು ಒಬ್ಬ ವ್ಯಕ್ತಿಯ ಸಮಸ್ಯೆ ಎನ್ನುವುದಕ್ಕಿಂತ ಉದ್ಯಮ-ಉದ್ಯಮಶೀಲತೆ ಹುಟ್ಟು ಹಾಕುವ ಮನೋಧರ್ಮದ ಸ್ವರೂಪವೇ ಹೀಗೆ ಇರುತ್ತದೆ ಎಂದು ಭಾವಿಸಬಹುದೆ?  ಐದುನೂರು ವರ್ಷಗಳ ನಂತರ ಪರಿಸರಹೇಗಿರಬೇಕು ಎಂಬ ಬಗ್ಗೆ ನಿಜವಾದ ಕಳಕಳಿ ಇವರಿಗೆ ಇದೆಯೆ? ಇಂದಿನ ವಾಸ್ತವ ಪರಿಸ್ಥಿತಿಯ ಮುಂದುವರಿದ ಭಾಗ ಹೇಗಿರುತ್ತದೆ ಎಂದು ಇವರು ಊಹಿಸಲಾರರೆ? ಆದರೆ ಇವರಿಗೆ ಆ ವಿಚಾರ ಬೇಕಿಲ್ಲ. ಈಗ ನನ್ನ ಮುದ್ದು ಆಲೋಚನೆ  ದೊಡ್ಡದು- ಮತ್ತೂ ದೊಡ್ಡದು  ಎಂಬ ಕನಸು ಕಾಣುತ್ತ ಬೆಳೆಯತ್ತಲೇ ಇರಬೇಕು. ಐದುನೂರು ವರ್ಷದಾಚೆಗೆ ಕನಸುಕಾಣಿ ಎನ್ನುತ್ತಿರುವ ಇವರಿಗೆ ವರ್ತಮಾನದಲ್ಲೆೀ ದುರಂತ ಮಯವಾಗಿರುವ ನಮ್ಮ ಪರಿಸರ ಕಣ್ಣಿಗೇ ಕಾಣುತ್ತಿಲ್ಲ.  ಈ ಚರ್ಚೆಯ ಹಿನ್ನಲೆಯಲ್ಲಿ ಎರಡು ಮುಖ್ಯ ಅಂಶಗಳನ್ನು ಚರ್ಚಿಸೋಣ. ಮೊದಲನೆಯದಾಗಿ ಉದ್ಯಮ ಎಂಬುದು ಉಳಿಯಬೇಕಾದರೆ ಅದು ಸದಾ ಕಾಲವೂ ವಿಸ್ತರಿಸುತ್ತಲೇ ಇರಬೇಕು. ಇದು ಕ್ಯಾನ್ಸರ್ ರೋಗದಂತೆ, ಈ ವಿಸ್ತಾರ ಒಂದು ಅಸಹಜ ಬೆಳವಣಿಗೆ, ಅನಾರೋಗ್ಯ ಮನಸ್ಸಿನ ಆಶಯ.  ಮನುಷ್ಯ ದೇಹದ ವಿಚಾರವಾಗಿ ನೋಡಿದರೆ ಅವನು ಕೆಲವು ಕಾಲ ಬೆಳೆದು ಅನಂತರ ತನ್ನ ಬೆಳವಣಿಗೆಯನ್ನು ಎಂದರೆ ಮತ್ತಷ್ಟು ವಿಸ್ತಾರಗೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಿ ಬದುಕಲು ಪ್ರಾರಂಭಿಸುತ್ತಾನೆ.  ಕೊನೆಗೆ ಸಾಯುವುದು ಸ್ವಾಭಾವಿಕ.  ಉದ್ಯಮಗಳು ಹೀಗೆ ಆದರೆ ಒಳಿತು.  ಹೊಸ ಮನುಷ್ಯರು ಈ ಜಗತ್ತಿಗೆ ಸೇರುವಂತೆ ಹಳೆ ಉದ್ಯಮಗಳು ಸತ್ತು ಹೊಸ ಉದ್ಯಮಗಳು ತಲೆ ಎತ್ತುತ್ತವೆ.  ಸದಾ ಬದುಕುತ್ತ ಸದಾ ವಿಸ್ತಾರಗೊಳ್ಳುವುದು ಮನುಷ್ಯನ ಗುಣ ಅಲ್ಲ. ಅದು ಸಜೀವಿಗಳ ಲಕ್ಷಣವೂ ಅಲ್ಲ. ಅದು ಹಿರಣ್ಯಕಶಿಪುವಿನಂತಹ ರಾಕ್ಷಸನ ಅವಾಸ್ತವ ಆಶಯ.  ಇಂತಹ ಒಂದು ಉದ್ಯಮದ ಕಾಣ್ಕೆಗೆ ಮೌಲ್ಯದ ಬಣ್ಣ ಕಟ್ಟಿದಾಕ್ಷಣ ಅದು ತನ್ನ ಪಾಪಗಳನ್ನು ತೊಳೆದುಕೊಂಡು ಶುಭ್ರವಾಗಿ ಬಿಡಲು ಸಾಧ್ಯವಿಲ್ಲ.  ಮೌಲ್ಯವೇ ಪ್ರಧಾನವಾಗಿ, ಉದ್ಯಮ ಎರಡನೆಯ ಸ್ಥಾನಕ್ಕೆ ಸೇರಿದರೆ ಯಾರೂ ಕೂಡ ದೊಡ್ಡ ಬಹುದೊಡ್ಡ ಉದ್ಯಮಗಳನ್ನು ಕಟ್ಟಲು ಇಂದಿನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಸಾಧ್ಯವೇ ಇಲ್ಲ.  ಇಂದಿನ ನಮ್ಮ  ಸಾಮಾಜಿಕ ರಾಜಕೀಯ ಪರಿಸರದಲ್ಲಿ ಕಟ್ಟುನಿಟ್ಟಾದ ಮೌಲ್ಯವಂತನಿಗೆ ಅತಿ ದೊಡ್ಡದಾದ ಉದ್ಯಮವನ್ನು ಕಟ್ಟುವುದು ಸಾಧ್ಯವೇ ಇಲ್ಲ. ಮುಖ್ಯವಾದ ಪ್ರಶ್ನೆ ಏನೆಂದರೆ ಎಣೆಯಿಲ್ಲದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಸಮಾಜ ಎರಡೂ ಒಟ್ಟಿಗೆ ಹೋಗುವುದು ಸಾಧ್ಯವಿಲ್ಲ.  ದುರಾಸೆ ಪ್ರಧಾನವಾದ ಬದುಕು ಎಲ್ಲೆಲ್ಲೂ ತಾಂಡವವಾಡುತ್ತಿರುವ ಇಂದಿನ ಸಾಮಾಜಿಕ ಪರಿಸರದಲ್ಲಿ ಅಪಾರ ಹಣ ಸಂಪಾದಿಸಿಯೂ ಸಂಯಮದಿಂದ ಬದುಕಬಲ್ಲವರು ಎಲ್ಲೋ ಕೆಲವರು.  ನಮ್ಮ ಈ ಭಾಷಣಕಾರನೂ ವೈಯಕ್ತಿಕ ಬದುಕಿನಲ್ಲಿ ಸರಳನಾಗಿರುವುದನ್ನು ಯಾರೂ ಪ್ರಶ್ನಿಸುವುದಿಲ್ಲ.  ಆದರೆ ಯಾವ ಆದರ್ಶವನ್ನು ಈತ ತನ್ನ ಉದ್ಯಮಶೀಲತೆಯನ್ನು ಸಮರ್ಥಿಸಿಕೊಳ್ಳಲು ಪ್ರತಿಪಾದಿಸುತ್ತಿದ್ದಾನೋ ಆ ಆದರ್ಶ ಪೃಥ್ವಿಯನ್ನು ಬಹಳ ಕಾಲ ಹಸಿರಾಗಿ ಇಡುವುದಿಲ್ಲ ಎಂಬುದಂತೂ ಎಲ್ಲರಿಗೂ ತಿಳಿಯುವ ವಿಷಯ. 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.