ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮೃತ ದೇಹವನ್ನಿಟ್ಟು ರಸ್ತೆ ತಡೆ

ಆದಿನಾರಾಯಣಹೊಸಹಳ್ಳಿ ಟೆರ್ರಾಫಾರ್ಮಾ ಬಳಿ ಕಸದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
Last Updated 17 ಅಕ್ಟೋಬರ್ 2015, 11:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಗುರುವಾರ ಸಂಜೆ  ಬೈಕ್‌ ಸವಾರ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಜನ ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ತ್ಯಾಮಗೊಂಡ್ಲು ಪೊಲೀಸ್‌ ಠಾಣೆ ವ್ಯಾಪ್ತಿಯ ತುಮಕೂರು–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 207ರ ಆದಿನಾರಾಯಣಹೊಸಹಳ್ಳಿ ಮೃತ ದೇಹವನ್ನಿಟ್ಟು  ರಸ್ತೆ ತಡೆ ನಡೆಸಿದರು. ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ನೇತೃತ್ವದಲ್ಲಿ  ಈ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ತಂಬೇನಹಳ್ಳಿ ನಿವಾಸಿ ರಮೇಶ್‌ (32) ಮೃತ ವ್ಯಕ್ತಿ. ನ್ಯೂಜಿ ಸೀಡ್ಸ್‌ ಕಂಪೆನಿಯಲ್ಲಿ ಕ್ಷೇತ್ರ ವಿಸ್ತರಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್‌ ಗುರುವಾರ ಸಂಜೆ  ತುಮಕೂರು ಕಡೆಯಿಂದ ಬರುವಾಗ ಆದಿನಾರಾಯಣಹೊಸಹಳ್ಳಿ ಟೆರ್ರಾಫಾರ್ಮಾ ಬಳ್ಳಿ ಬಿಬಿಎಂಪಿ ಕಸ ತುಂಬಿದ್ದ ಲಾರಿ ಅವರಿಗೆ ಡಿಕ್ಕಿ ಹೊಡೆದಿದೆ.

‘ಒಂದು ವಾರದಲ್ಲಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಅ.5 ದ್ಯಾವಸಂದ್ರದ ಮೃತ್ಯುಂಜಯ ಎಂಬುವವರು ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

‘ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳ ಸಂಖ್ಯೆ ಮಿತಿಮೀರಿದೆ. ಅದರಲ್ಲೂ ಸಂಜೆ ವೇಳೆ ಚಾಲಕರು ಕುಡಿದ ಅಮಲಿನಲ್ಲಿ ಲಾರಿಗಳನ್ನು ಓಡಿಸುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ತಾಲ್ಲೂಕಿಗೆ ಕಸ ತರುವುದನ್ನು ನಿಲ್ಲಿಸುವವರೆಗೂ ಈ ಭಾಗದ ಜನರು ಲಾರಿಗಳಿಗೆ ಸಿಲುಕಿ ಹಾಗೂ ಕಸದ ವಾಸನೆಯಿಂದ ರೋಗಗಳಿಗೆ ತುತ್ತಾಗಿ ಸಾಯುವುದು ನಿಲ್ಲುವುದಿಲ್ಲ’ ಎಂದು ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಲಾರಿಯ ಸಂಖ್ಯೆ ನೀಡಿ ದೂರು ನೀಡಿದ್ದರೂ, ಲಾರಿ ಹಾಗೂ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿಲ್ಲ. ಬೆಳ್ಳಿಗಿನಿಂದಲೂ ಮೃತ ದೇಹದೊಂದಿಗೆ ರಸ್ತೆ ತಡೆ ನಡೆಸಲಾಗುತ್ತಿದೆ. ಆದರೆ ಬಿಬಿಎಂಪಿ ಅಧಿಕಾರಿಗಳು ಸೌಜನ್ಯಕ್ಕೂ ಸ್ಥಳಕ್ಕೆ ಭೇಟಿ ನೀಡಿ ಉತ್ತರ ನೀಡಿಲ್ಲ’ ಎಂದು ದೂರಿದರು.

ರಾಜ್ಯ ರೈತ ಶಕ್ತಿ ಸಂಘದ ರಾಜ್ಯ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್‌, ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸುನೀಲ್‌ಕುಮಾರ್‌, ಉಪಾಧ್ಯಕ್ಷ ಮುನೇಗೌಡ ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು. 

ಪರಿಹಾರಕ್ಕೆ ಒತ್ತಾಯ: ಬಿಬಿಎಂಪಿ ಕಸದ ಅವೈಜ್ಞಾನಿಕ ವಿಲೇವಾರಿ ಈ ಭಾಗದ ಜನರ ಬದುಕಿಗೆ ಮಾರಕವಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಿರಾದ ಪಟ್ಟನಾಯಕನಹಳ್ಳಿ  ನಂಜಾವದೂತ ಸ್ವಾಮೀಜಿ ಹೇಳಿದರು. ಅವರು ತುಮಕೂರು ಕಡೆಗೆ ತೆರಳುವ ಮಾರ್ಗ ಮಧ್ಯೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮೃತರ ಸಂಬಂಧಿಗಳಿಗೆ ಸಾಂತ್ವಾನ ಹೇಳಿದರು.

ಭರವಸೆ: ಬಿಬಿಎಂಪಿ ಕಸ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿರುವ ಬಗ್ಗೆ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ವೆಂಕಟರಮಣಯ್ಯ ಭರವಸೆ ನೀಡಿದರು. 

ಲಾರಿಗಳ ಬಂದ್‌: ಪ್ರತಿಭಟನೆ ನಡೆಯುತ್ತಿದ್ದರಿಂದ ಶುಕ್ರವಾರ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿದ ಯಾವುದೇ ಲಾರಿಗಳು ತಾಲ್ಲೂಕಿನ ಎರಡೂ ಕಸ ವಿಲೇವಾರಿ ಘಟಕಗಳಿಗೆ  ಬಂದಿರಲಿಲ್ಲ.

ವ್ಯಕ್ತಿ ಸಾವು
ಆಂಬುಲೆನ್ಸ್‌ ಬರುವುದು ತಡವಾಗಿದ್ದರಿಂದ ರಕ್ತದ ಒತ್ತಡ ಕಡಿಮೆಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 207ರ ಆದಿನಾರಾಯಣಹೊಸಹಳ್ಳಿ ಸಮೀಪ ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ನಡೆದಿದೆ.
  
 ಗ್ರಾಮದ ಸೋಮಣ್ಣ(60) ಮೃತ ವ್ಯಕ್ತಿ. ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ರಮೇಶ್‌ ಎಂಬಾತನ ಮೃತ ದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದುದ್ದರಿಂದ ಆಂಬುಲೆನ್ಸ್‌ ಬರುವುದು ತಡವಾಯಿತು. ಗೋರಘಟ್ಟ ಗ್ರಾಮದಿಂದ ಕರೆತರಲಾಗಿದ್ದ ಆಟೊದಲ್ಲಿಯೇ ಸೋಮಣ್ಣ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT