ಭಾನುವಾರ, ಜೂನ್ 20, 2021
25 °C

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಎಸ್.ಆರ್.ನಾಯಕ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಎಸ್.ಆರ್.ನಾಯಕ್ ಭೇಟಿ

ದೊಡ್ಡಬಳ್ಳಾಪುರ: `ರಾಜ್ಯದ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಲ್ಲಿರುವಷ್ಟು ಕೊಳಕು ಹಾಗೂ ಅವ್ಯವಸ್ಥೆಯನ್ನು ನಾನೆಲ್ಲಿಯೂ ಕಂಡಿಲ್ಲ. ಇಲ್ಲಿ ನಿಜಕ್ಕೂ ಹೇಳುವವರು -ಕೇಳುವವರು ಯಾರು ಇಲ್ಲ~ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್. ನಾಯಕ್ ಅವರು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ವೈದ್ಯರನ್ನು ತರಾಟೆಗೆ ತಗೆದುಕೊಂಡರು.ನಗರದ ವಿವಿಧ ಇಲಾಖೆಗಳಿಗೆ ಭೇಟಿ ನೀಡಲು ಸೋಮವಾರ ಪಟ್ಟಣಕ್ಕೆ ಬಂದಿದ್ದ ನಾಯಕ್ ಅವರು ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಒಂದು ವಾರದಲ್ಲಿ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ ವರದಿ ನೀಡಬೇಕು. ಇಲ್ಲವಾದರೆ ಮತ್ತೊಮ್ಮೆ  ಭೇಟಿ ನೀಡಿ ಇಲ್ಲಿನ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಸಾರ್ವಜನಿಕರು ಆಸ್ಪತ್ರೆ ಅವ್ಯವಸ್ಥೆಗಳ ಬಗ್ಗೆ  ದೂರು ನೀಡಿದರು.ಮೆಚ್ಚುಗೆ: ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಅವರು ಅಲ್ಲಿನ ಸ್ವಚ್ಛತೆ ಬಗ್ಗೆ ಮೆಚ್ಚುಗೆ ಸೂಚಿಸಿದರು.ಸಭೆ: ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಎಸ್.ಆರ್.ನಾಯಕ್, ನಗರದಲ್ಲಿ ಹದಗೆಟ್ಟಿರುವ ರಸ್ತೆಗಳು, ಕುಡಿಯುವ ನೀರು ಸಮಸ್ಯೆ ಹಾಗೂ ಪ್ಲಾಸ್ಟಿಕ್‌ನಿಂದ ಉಂಟಾಗಿರುವ ಅವಾಂತರಗಳನ್ನು ನಗರಸಭೆ ಸರಿಪಡಿಸಬೇಕು ಎಂದು ಹೇಳಿದರು.ಅರ್ಜಿಗಳಿಲ್ಲದೇ ಬಂದ ಜನ: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಸಾರ್ವಜನಿಕರ ಸಭೆ ನಡೆಸುತ್ತಿದ್ದಾಗ ದೂರುಗಳನ್ನು ಹೊತ್ತು ಬಂದ ಬಹುತೇಕ ಸಾರ್ವಜನಿಕರು ಯಾವುದೇ ಅರ್ಜಿ, ದಾಖಲೆ ಇಲ್ಲದೆ ಕೇವಲ ಬಾಯಿ ಮಾತಿನಲ್ಲಿ ದೂರುಗಳನ್ನು ಹೇಳಲು ಮುಂದಾದರು.

 

ಇದಕ್ಕೆ ಬೇಸರ ವ್ಯಕ್ತಪಡಿಸಿದ ನಾಯಕ್, ಕನಿಷ್ಠ ಒಂದು ಅರ್ಜಿ ಬರೆದು ದೂರು ನೀಡಬೇಕು ಎನ್ನುವ ಸಾಮಾನ್ಯ ತಿಳಿವಳಿಕೆಯು ಇಲ್ಲವಾದರೆ  ಸಮಸ್ಯೆಗಳು ಬಗೆಹರಿಯುವುದಾದರು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.ಪೊಲೀಸರಿಗೆ ತರಾಟೆ

 ತಮ್ಮ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ದೂರು ನೀಡಿ ಮೂರು ದಿನಗಳ ನಂತರ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿಕೊಂಡಿದ್ದಾರೆ. ಆದರೆ ರಾಜಕೀಯ ಒತ್ತಡಕ್ಕೆ ಮಣಿದು ಹಲ್ಲೆ ನಡೆಸಿದವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಲ್ಲೂಕಿನ ಸೊಣ್ಣಮಾರನಹಳ್ಳಿ ಗ್ರಾಮದ ನಿವಾಸಿ ರಾಮಕ್ಕ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ಅವರಿಗೆ ದೂರು ಸಲ್ಲಿಸಿದರು.ಸ್ಥಳದಲ್ಲೆ ಹಾಜರಿದ್ದ ಡಿವೈಎಸ್‌ಪಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಆರೋಪಿಗಳು ಎಷ್ಟೇ ದೊಡ್ಡವರಾಗಿದ್ದರು ಕಾನೂನೂನಿನ ಮುಂದೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.