ಸೋಮವಾರ, ಮೇ 17, 2021
23 °C

ದೊಡ್ಡಹೊಟ್ಟೆ ರಂಗನಾಥಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲಿನಲ್ಲಿ ಶುಕ್ರವಾರ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ದೇವಸ್ಥಾನದಿಂದ ಛತ್ರಿ, ಚಾಮರ, ಪಲ್ಲಕ್ಕಿಗಳೊಂದಿಗೆ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಮೂರ್ತಿಯನ್ನು ತೇರುಬೀದಿವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಡೊಳ್ಳು, ನಗಾರಿ, ಚಮಾಳ, ಬಾಣಪ್ಪ, ಸೋಮನ ಕುಣಿತಗಳು ಮೆರವಣಿಗೆಗೆ ರಂಗು ನೀಡಿದ್ದವು. ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಕೂರಿಸಲಾಯಿತು. ಮೊದಲಿಗೆ ರಥಾರೋಹಣೋತ್ಸವ, ತೆಂಗಿನಕಾಯಿ ಸೇವೆ ಮತ್ತಿತರ ಪೂಜಾ ವಿಧಿವಿಧಾನಗಳು ನಡೆದ ನಂತರ ಮಹಾಪೂಜೆ ನೆರವೇರಿಸಲಾಯಿತು.ನಂತರ ನೆರೆದಿದ್ದ ಭಕ್ತರು ಜಯಘೋಷಗಳೊಂದಿಗೆ ಪೂರ್ವಾಭಿಮುಖವಾಗಿ ಇರುವ ರಂಗನಾಥಸ್ವಾಮಿಯ ಬೆಟ್ಟದ ಕಡೆ ರಥವನ್ನು ಎಳೆದರು. ಭಕ್ತರು ದಾರಿಯುದ್ದಕ್ಕೂ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ದೂರದ ಊರುಗಳಿಂದ ಬಂದಿದ್ದ ಭಕ್ತರು ದೇವರಿಗೆ ಮಂಗಳಾರತಿ ಮಾಡಿಸಿದರು. ರಥೋತ್ಸವದ ನಂತರ ಮಹಾಮಂಗಳಾರತಿ, ಮಣೇವು, ಉರುಳುಸೇವೆ, ಪಾನಕಪೂಜೆಗಳು ನಡೆದವು. ರಥದ ಮುಂದೆ ವಿಶೇಷ ದೊಡ್ಡೆಡೆ ಸೇವೆ ನಡೆಸಲಾಯಿತು. ಸಿಂಹೋತ್ಸವ, ಹೂವಿನಪಲ್ಲಕ್ಕಿ ಉತ್ಸವ ಮತ್ತು ಅಶ್ವವಾಹನ ಪಾರ‌್ವಟೋತ್ಸವಗಳು ನಡೆದವು.ಏಳೂರ ಜಾತ್ರೆ
: ರಥೋತ್ಸವ ಲೋಕದೊಳಲು ಗ್ರಾಮದಲ್ಲಿ ನಡೆದರೂ, ಸುತ್ತಲಿನ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ, ಇಡೇಹಳ್ಳಿ, ಗುಂಡೇರಿ, ಬೊಮ್ಮನಕಟ್ಟೆ ಸೇರಿದಂತೆ 7 ಹಳ್ಳಿಗಳ ಜನ ಒಗ್ಗಟ್ಟಾಗಿ ಈ ಜಾತ್ರೆ ನಡೆಸುತ್ತಾರೆ. ಹೀಗಾಗಿ ಇದು `ಏಳೂರ ಜಾತ್ರೆ~ ಎಂದೇ ಪ್ರಸಿದ್ಧಿ. ಬೆಟ್ಟದ ಮೇಲಿನ ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯುವುದೂ ಸೇರಿದಂತೆ ಜಾತ್ರೆಯ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ.ಜಾತ್ರೆಗೆ ಬರುವ ಮಕ್ಕಳಿಗೆ ಕುಡಿಯಲು ಹಾಲು, ತಲೆಗೆ ಹರಳೆಣ್ಣೆ ಕೊಡುವುದು, ಭಕ್ತರಿಗೆ ಕುಡಿಯುವ ನೀರು ವಿತರಿಸುವುದು ಇಲ್ಲಿನ ವಿಶೇಷ. ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಗುಡ್ಡದ ಸಾಂತೇನಹಳ್ಳಿಯ ಬಸಪ್ಪ, ಹಾಲಪ್ಪ, ಉಜ್ಜಿನಪ್ಪ ಅವರ ಮನೆತನದವರು ಈ ಕಾರ್ಯ ನಡೆಸುತ್ತಾರೆ.

ತಿರುಮಲಾಪುರದ ಯಾದವ ಭಕ್ತರಿಂದ ಕೋಲಾಟ, ಕರಡಿಮೇಳ, ಭಜನೆ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.