ಸೋಮವಾರ, ಮಾರ್ಚ್ 8, 2021
30 °C
ಕಮಲನಗರ ಆಸ್ಪತ್ರೆಗೆ ಆರೋಗ್ಯ ಸಿಬ್ಬಂದಿ ಕೊರತೆ

ದೊಡ್ಡಾಸ್ಪತ್ರೆ ದೊಡ್ಡ ಸಮಸ್ಯೆ: ಪರದಾಟ

ಪ್ರಜಾವಾಣಿ ವಾರ್ತೆ/ ಪ್ರಶಾಂತ ಮಠಪತಿ Updated:

ಅಕ್ಷರ ಗಾತ್ರ : | |

ದೊಡ್ಡಾಸ್ಪತ್ರೆ ದೊಡ್ಡ ಸಮಸ್ಯೆ: ಪರದಾಟ

ಕಮಲನಗರ: ಇಲ್ಲಿನ ಆಸ್ಪತ್ರೆ ಈ ಭಾಗದಲ್ಲಿಯೇ ಅತಿ ದೊಡ್ಡ  ಸರ್ಕಾರಿ ಆಸ್ಪತ್ರೆ. ಹಾಗೆಯೇ ಇಲ್ಲಿಯ ಸಮಸ್ಯೆಗಳು ದೊಡ್ಡವೇ ಎಂಬಂತಿವೆ.ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ವೈದ್ಯರ ಹಾಗೂ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇವೆ. ಇದರಿಂದ ಸಾರ್ವಜನಿಕರು ತೊಂದರೆಗೆ ಈಡಾಗಿದ್ದಾರೆ. ಸರ್ಕಾರವು 1999 ರಲ್ಲಿ ಕಮಲನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿತು. 6 ಹಾಸಿಗೆ ಆಸ್ಪತ್ರೆಯು 30ಹಾಸಿಗೆಗೆ ಬಡ್ತಿ ಪಡೆಯಿತು. ಆದರೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಅಗತ್ಯ ಸೌಲಭ್ಯಗಳು ಅಷ್ಟಕಷ್ಟೇ.ಇಲ್ಲಿ 3 ವೈದ್ಯಾಧಿಕಾರಿ ಹುದ್ದೆ, 1 ದಂತ ವೈದ್ಯ. 1 ಎಕ್ಸರೇ ಟೆಕ್ನಿಷಿಯನ್‌, 1 ಎಕ್ಸರೇ ಅಟೆಂಡರ್‌, 7 ಗ್ರೂಪ್‌  ‘ಡಿ’ ನೌಕರರು, 1 ಅಡುಗೆ ಸಿಬ್ಬಂದಿ, 1 ಸ್ಟಾಫ್‌ ನರ್ಸ್‌, 1 ಎಸ್‌ಡಿಎ, 1 ಎಫ್‌ಡಿಎ, 1 ಕ್ಲರ್ಕ್‌ ಕಂ ಟೈಪಿಸ್ಟ್‌ ಹಾಗೂ ವಾಹನ ಚಾಲಕರ 1 ಹುದ್ದೆ ಹೀಗೆ ಒಟ್ಟು 20 ಹುದ್ದೆಗಳು ಖಾಲಿ ಇವೆ.  ಕ್ಷ – ಕಿರಣ ಯಂತ್ರ, ದಂತ ಆಸನ, ಶಸ್ತ್ರ ಚಿಕಿತ್ಸೆ ಸಲಕರಣೆಗಳಿಲ್ಲದೆ ಪಕ್ಕದ ಮಹಾರಾಷ್ಟ್ರದ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯ ಎಂದು ರೋಗಿಗಳು ಗೋಳು ತೋಡಿಕೊಂಡರು.ಕಮಲನಗರವು ಬೀದರ್‌–ನಾಂದೇಡ್‌ ಅಂತರ್‌ರಾಜ್ಯ ಹೆದ್ದಾರಿ ಮೇಲಿರುವ ಪ್ರಮುಖ ಹೋಬಳಿ ಕೇಂದ್ರ. ಈ ರಸ್ತೆ ಮೇಲೆ ಅಪಘಾತಗಳು ಸಂಭವಿಸುವುದು ಈಚೆಗೆ ಸಾಮಾನ್ಯ. ಬೀದರ್‌ ಜಿಲ್ಲಾ ಆಸ್ಪತ್ರೆಯು ಇಲ್ಲಿಂದ 60 ಕಿ.ಮೀ ದೂರವಿದೆ.  ತಾಲ್ಲೂಕು ಆಸ್ಪತ್ರೆಗೆ ಹೋಗಬೇಕಾದರೆ 30 ಕಿ.ಮೀ ದೂರ. ಆದ್ದರಿಂದ ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡುವ ದೃಷ್ಟಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ರಕ್ತ ಸಂಗ್ರಹ ಘಟಕ ಇರುವುದು ಅವಶ್ಯ ಎಂದು ಸಾಮಾಜಿಕ ಹೋರಾಟಗಾರ ದಿಲೀಪ್‌ ಮುಧಾಳೆ ಹೇಳಿದರು.ಇಲ್ಲಿ ದಿನಾಲೂ ಸರಾಸರಿ 300 ಹೊರರೋಗಿಗಳು, 20 ಒಳರೋಗಿಗಳು ತಪಾಸಣೆಗೆ ಬರುತ್ತಾರೆ. ಕೇವಲ ಇಬ್ಬರು ವೈದ್ಯರಿರುವ ಕಾರಣ ಗಂಟೆಗಟ್ಟಲೇ ಕಾಯ್ದು ಕುಳಿತುಕೊಳ್ಳುವ ಸ್ಥಿತಿ ರೋಗಿಗಳದು. ಈಚೆಗೆ ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣೆ ಯೋಜನೆ ಅಡಿಯಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ₨ 3.65 ಕೋಟಿ ಮಂಜೂರಿಯಾಗಿದೆ. ಈ ಕಾರಣಕ್ಕಾಗಿ ಹಳೆ ಆಸ್ಪತ್ರೆ ಕಟ್ಟಡ  ನೆಲಸಮ ಮಾಡಿ, ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಭೂ ಸೇನಾ ನಿಗಮದಿಂದ ನಿರ್ಮಿಸಲಾದ ಕಟ್ಟಡದೊಳಗೆ ಒಳ ಹಾಗೂ ಹೊರರೋಗಿಗಳನ್ನು ತಪಾಸಣೆ ಮಾಡಲಾಗುತ್ತದೆ.ಕಟ್ಟಡ ನೆಲ ಸಮ ಹಾಗೂ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ತಿಂಗಳಿನಲ್ಲಿ ಎರಡು ಬಾರಿ ನಡೆಯುತ್ತಿದ್ದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ ಕುಮಾರ ಮಳಗೆ ತಿಳಿಸಿದರು.ಕಮಲನಗರ ಅಲ್ಲದೇ ಸುತ್ತಲಿನ ಹಳ್ಳಿಗಾಡಿನಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಸರ್ಕಾರದಿಂದ ದೊರಕುವ ಉಚಿತ ಸೇವೆ ಪಡೆದುಕೊಳ್ಳಲು ಧಾವಿಸುವ ಬಡ ರೋಗಿಗಳು ಅಗತ್ಯ ವೈದ್ಯರಿಲ್ಲದೇ ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕಿ ಹಿಂದಿರುಗುವಂಥ ವಾತಾವರಣವಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಆಸ್ಪತ್ರೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದರು.ಸಂಬಂಧಪಟ್ಟವರು ಶೀಘ್ರದಲ್ಲಿ ಗಡಿಭಾಗದ ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಸಿಬ್ಬಂದಿ ಹುದ್ದೆ  ಭರ್ತಿ ಮಾಡಿ, ಅಗತ್ಯ ಸೌಲಭ್ಯ  ಪೂರೈಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.