ದೊಡ್ಡಿಬೀದಿಯಲ್ಲಿ ಅಧಿಕಾರಿಗಳಿಗೆ ಮುಖಭಂಗ

7

ದೊಡ್ಡಿಬೀದಿಯಲ್ಲಿ ಅಧಿಕಾರಿಗಳಿಗೆ ಮುಖಭಂಗ

Published:
Updated:

ಹರಿಹರ: ನಗರದ ದೊಡ್ಡಿಬೀದಿಯಲ್ಲಿ ಬುಧವಾರ ರಸ್ತೆ ಬದಿಯ ತರಕಾರಿ ವ್ಯಾಪಾರಸ್ಥರ ತರಕಾರಿ ಪುಟ್ಟಿಗಳನ್ನು ನಗರಸಭೆ ಸಿಬ್ಬಂದಿ ವಶಪಡಿಸಿಕೊಳ್ಳಲು ಬಂದಾಗ ನಗರಸಭೆ ಸಿಬ್ಬಂದಿಹಾಗೂ ವ್ಯಾಪಾರಸ್ಥರ ಮಧ್ಯೆ ವಾಗ್ವಾದ ನಡೆದು, ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಪುನಃ ನೀಡಿದ ಘಟನೆ ನಡೆಯಿತು.

ನಗರದ ದೊಡ್ಡಿಬೀದಿಗೆ ಬುಧವಾರ ಮಧ್ಯಾಹ್ನ ಆಗಮಿಸಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುತ್ತಿದ್ದವರ ತರಕಾರಿ ಬುಟ್ಟಿ ವಶಪಡಿಸಿಕೊಳ್ಳಲು ಯತ್ನಿಸಿದಾಗ ಗಲಿಬಿಲಿಗೊಂಡ ವ್ಯಾಪಾರಸ್ಥರು ಹಾಗೂ ನಗರಸಭೆಯ ಸಿಬ್ಬಂದಿ ನಡುವೆ ವಾಗ್ವಾದ ಆರಂಭಗೊಂಡು ಗೊಂದಲ ಸೃಷ್ಟಿಯಾಯಿತು.ಸ್ಥಳಕ್ಕೆ ಆಗಮಿಸಿದ ಆಂಜನೇಯ ಸಣ್ಣ ವರ್ತಕರ ಸಂಘದ ಅಧ್ಯಕ್ಷ ಬಸಣ್ಣ ಶ್ಯಾವಗಿ ಮಾತನಾಡಿ, ‘ಲೋಕಸಭೆಯಲ್ಲಿ ರಸ್ತೆಬದಿ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ರಕ್ಷಣಾ ಮಸೂದೆ 2012' ಅವಿರೋಧವಾಗಿ ಅಂಗೀಕಾರ ಆಗಿದ್ದರೂ, ನಗರಸಭೆ ಅಧಿಕಾರಿಗಳು ಕೆಲವು ಪಟ್ಟಭದ್ರ ಹಿತಾಸಕ್ತಿ ಹಾಗೂ ಶ್ರೀಮಂತರ ಒತ್ತಡಕ್ಕೆ ಮಣಿದು ನಗರಸಭೆ ಅಧಿಕಾರಿಗಳು ರಸ್ತೆಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸೆ.7 ಹಾಗೂ 8ರ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಬೀದಿಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆ ಮಾಹಿತಿಯ ನಕಲು ಪ್ರತಿಗಳನ್ನು ನೀಡಿ, ನಗರಸಭೆಯ ಅಧಿಕಾರಿಗಳಿಗೆ ಲೋಕಸಭೆಯಲ್ಲಿ ರಸ್ತೆಬದಿ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ಮಸೂದೆ ಮಂಡನೆ ಆಗಿರುವ ಬಗ್ಗೆ ಮಾಹಿತಿ ಇದ್ದಂತೆ ತೋರುತ್ತಿಲ್ಲ  ಎಂದು ತರಾಟೆಗೆ ತೆಗೆದುಕೊಂಡರು.ಈ ಮಸೂದೆಯಂತೆ ಅಧಿಕಾರಿಗಳು, ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿಬೇಕು. ಮಸೂದೆಯ ಸೆಕ್ಷನ್ 29ರ ಅನ್ವಯ ಅಧಿಕಾರಿಗಳು ಮತ್ತು ಪೊಲೀಸ್ ಕಿರುಕುಳದಿಂದ ಬೀದಿ ವ್ಯಾಪಾರಿಗಳಿಗೆ ರಕ್ಷಣೆ ಒದಗಿಸಿ, ಯಾವುದೇ ಭಯವಿಲ್ಲದೇ ವ್ಯಾಪಾರ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕು. ಇನ್ನು ಹಲವು ಅಂಶಗಳನ್ನು ಒಳಗೊಂಡ ಮಸೂದೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಿ. ಅದನ್ನು ಬಿಟ್ಟು ಅಧಿಕಾರಿಗಳು ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವರ್ತಕರ ವಾದಕ್ಕೆ ಏನು ಮಾಡಬೇಕು ಎಂದು ತೋಚದ ಅಧಿಕಾರಿಗಳು ವ್ಯಾಪಾರಿಗಳಿಂದ ವಶಪಡಿಸಿಕೊಂಡ ತರಕಾರಿ ಪುಟ್ಟಿಗಳನ್ನು ವ್ಯಾಪಾರಿಗಳಿಗೆ ವಾಪಸು ನೀಡಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry