ಮಂಗಳವಾರ, ಮೇ 11, 2021
24 °C

ದೊಡ್ಡಿಯಿಂದ ಚಂದನವನಕ್ಕೆ...

ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ನೀನಾಸಂ ಸತೀಶ್- ಇಷ್ಟು ಹೇಳಿದರೆ ಯಾರಿಗೂ ಗುರುತು ಸಿಗುವುದಿಲ್ಲ. `ಮನಸಾರೆ~ಯ ಕೇಬಲ್ ಆಪರೇಟರ್, `ಪಂಚರಂಗಿ~ಯ ಬಸ್ ಡ್ರೈವರ್, `ಲೈಫು ಇಷ್ಟೇನೆ~ಯ ಶಿವು, `ಪುಟ್ಟಕ್ಕನ ಹೈವೇ~ಯ ಯುವ ರೈತ ಎಂದರೆ ಬಹುತೇಕ ಸಿನಿಮಾ ಪ್ರಿಯರು, `ಹೌದಲ್ವಾ? ಆ ಪಾತ್ರಗಳನ್ನು ಮಾಡಿದ ನಟ ಈತನೇ ಅಲ್ಲವಾ?~ ಎಂದು ಕಣ್ಣರಳಿಸುವುದು ಖರೆ.ಯಾವುದೇ ಪಾತ್ರವಾದರೂ ಸರಿ ಅತ್ಯಂತ ಶ್ರದ್ಧೆಯಿಂದ ಮಾಡುವ ಸತೀಶ್ ತಮ್ಮ ವಿಶಿಷ್ಟವಾದ ಮ್ಯಾನರಿಸಂನಿಂದಾಗಿ ಗಾಂಧಿನಗರ ಮತ್ತು ಚಿತ್ರರಸಿಕರ ಮನ ಗ್ದ್ದೆದವರು. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಸಮೀಪದ ಯಲಾದಹಳ್ಳಿಯವರಾದ ಇವರು ಮಂಡ್ಯ ಸೊಗಡಿನಲ್ಲಿ ಸಂಭಾಷಣೆ ಹೇಳುವುದನ್ನು ಕೇಳುವುದೇ ಒಂದು ಸೊಗಸು. ಸತೀಶ್ ತನ್ನ ನೆಲೆದ ಬನಿಯನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.`ಮಾದೇಶ~ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸತೀಶ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ `ಯೋಗಿ~ ಚಿತ್ರಕ್ಕೆ ಕರೆಬಂದಿತು. ಯೋಗರಾಜ ಭಟ್ಟರ `ಪರಮಪದ~ ಮೆಗಾ ಧಾರಾವಾಹಿಯಲ್ಲೂ ಅವರಿಗೊಂದು ಒಳ್ಳೆಯ ಪಾತ್ರವಿತ್ತು. ಧಾರಾವಾಹಿ ಐವತ್ತು ಎಪಿಸೋಡ್ ಆಗುವಷ್ಟರಲ್ಲಿ ಭಟ್ಟರು `ಮುಂಗಾರು ಮಳೆ~ಯಲ್ಲಿ ಒದ್ದೆಯಾಗಲು ಹೋದರು.ಅಲ್ಲಿಗೆ `ಪರಮಪದ~ದ ಕಥೆಯೂ ಮುಗಿಯಿತು. ಸತೀಶ್ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದ ಭಟ್ಟರು `ಮನಸಾರೆ~ಯಲ್ಲಿ ಕೇಬಲ್ ಸತೀಶ್ ಪಾತ್ರ ಕೊಟ್ಟರು. ಅದು ತುಂಬಾನೇ ಚೆನ್ನಾಗಿ ಮೂಡಿಬಂದಿತು. ಮುಂದೆ `ಪಂಚರಂಗಿ~ಯಲ್ಲಿ ಹೆಸರೇ ಇಲ್ಲದ ಬಸ್ ಡ್ರೈವರ್ ಪಾತ್ರ ಮಾಡಿದರು.ಈ ಮೂಲಕ ಕನ್ನಡ ಚಿತ್ರರಂಗ ಸತೀಶ್ ಎನ್ನುವ ಅಪ್ಪಟ ಕಲಾವಿದನ ಬಗ್ಗೆ ಮಾತನಾಡಲು ಶುರು ಮಾಡಿತು.ಭಟ್ಟರ ಶಿಷ್ಯ ಪವನ್‌ಕುಮಾರ್ `ಲೈಫು ಇಷ್ಟೇನೆ~ ಚಿತ್ರದಲ್ಲಿ ಕೊಟ್ಟ ಪಾತ್ರ ಸತೀಶ್‌ಗೆ ಅವಕಾಶದ ದಿಡ್ಡಿ ಬಾಗಿಲನ್ನೇ ತೆರೆಯಿತು. ಬಿ.ಸುರೇಶ್ ನಿರ್ದೇಶನದ `ಪುಟ್ಟಕ್ಕನ ಹೈ~ಯಲ್ಲಿ ಕೊತಕೊತನೆ ಕುದಿಯುವ ಆಕ್ರೋಶದ ಯುವ ರೈತನಾಗಿ ಅದ್ಭುತ ಎನ್ನುವಂತೆ ಅಭಿನಯಿಸಿದ್ದಾರೆ.ಈ ಚಿತ್ರವನ್ನು ನೋಡಿದ ಗಿರೀಶ್ ಕಾಸರವಳ್ಳಿ, ಹಂಸಲೇಖ ಮೆಚ್ಚಿ ಮಾತನಾಡಿರುವುದು ಸತೀಶ್ ಅವರ ಪ್ರತಿಭೆಗೆ ಸಿಕ್ಕ ಮನ್ನಣೆಯಾಗಿದೆ.ಸದ್ಯದಲ್ಲಿ ತೆರೆ ಕಾಣಲಿರುವ ಸೂರಿ ನಿರ್ದೇಶನದ ಬಹು ನಿರೀಕ್ಷೆಯ `ಅಣ್ಣಾ ಬಾಂಡ್~ನಲ್ಲಿ ಪುನೀತ್‌ರಾಜ್‌ಕುಮಾರ್, ರಂಗಾಯಣ ರಘು ಜೊತೆ ಸತೀಶ್ ಚಿತ್ರ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸತೀಶ್ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಡುವ ಮಾತು ಕೇಳಿ ಬರುತ್ತಿದೆ.`ಏನೋ ಒಂಥರಾ~, `ಶಿಕಾರಿ~, `ಪರಮಾತ್ಮ~, `ಅದ್ದೂರಿ~ ಸೇರಿದಂತೆ ನಾಲ್ಕು ವರ್ಷಗಳಲ್ಲಿ 16 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಭಟ್ಟರ `ಡ್ರಾಮಾ~ದಲ್ಲಿ ಹೀರೋಗೆ ಸರಿಸಮನಾದ ಪಾತ್ರದಲ್ಲಿದ್ದಾರೆ. `ನನಗೆ ಹಣ ಮುಖ್ಯ ಅಲ್ಲ. ಬರುವ ಎಲ್ಲ ಆಫರ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಬೇಸರವಿಲ್ಲ. ಪಾತ್ರಕ್ಕೆ ಜೀವ ತುಂಬುವುದು ಮುಖ್ಯ~ ಎನ್ನುತ್ತಾರೆ ಸತೀಶ್.ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಸತೀಶ್ ಎಸ್‌ಎಸ್‌ಎಲ್‌ಸಿಯಲ್ಲಿ ಡುಂಕಿ ಹೊಡೆದರು. ನಂತರ ಯಾರಿಗೂ ತಿಳಿಯದಂತೆ ಊರು ಬಿಟ್ಟು ಬೆಂಗಳೂರಿಗೆ ಓಡಿ ಹೋದರು. ಅಲ್ಲಿ ಗೋಪಾಲ್ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಆಗಿ ಆರು ತಿಂಗಳು ಕೆಲಸ ಮಾಡಿದರು. ಆಮೇಲೆ ಆಫೀಸ್ ಬಾಯ್ ಆಗಿದ್ದರು.ಇಷ್ಟೆಲ್ಲ ಆದ ಮೇಲೆ ಮತ್ತೆ ಊರಿಗೆ ಬಂದು ನೇತಾಜಿ ಯುವಕ ಸಂಘ ಕಟ್ಟಿ ಬೀದಿ ನಾಟಕ ಆಡಿಸುತ್ತಿದ್ದರು. ಮಂಡ್ಯದ ಗೆಳೆಯರ ಬಳಗದ ಸಂಪರ್ಕ ಸಿಕ್ಕ ಮೇಲೆ ಅಭಿನಯದ ಹುಚ್ಚು ಹಿಡಿಯಿತು. ಗೆಳೆಯ ಕುಮಾರ್ `ನೀನಾಸಂ~ ಸೇರುವಂತೆ ಹಟ ಹಿಡಿದ. ಅಲ್ಲಿಯವರೆಗೆ ಸತೀಶ್ `ನೀನಾಸಂ~ ಹೆಸರನ್ನೂ ಕೇಳಿರಲಿಲ್ಲವಂತೆ.`ಅಣ್ಣಾವ್ರ ನನ್ನ ರೋಲ್ ಮಾಡೆಲ್. ಅಂಬರೀಶಣ್ಣ ನಟ ಆಗಬೇಕು ಎನ್ನುವ ಕನಸಿನ ಬೀಜ ಬಿತ್ತಿದವರು. ಅವರನ್ನು ಮರೆಯಲು ಆಗುವುದಿಲ್ಲ. ಈಗ ನಾನು ಏನಾಗಿದ್ದೀನೋ ಅದೆಲ್ಲವೂ ಅನಿರೀಕ್ಷಿತ. ನನಗೆ ಒಂದೇ ಆಸೆ. ನಾನು ಉದ್ಧಾರವಾದರೆ ಇಡೀ ಕುಟುಂಬ ಚೆನ್ನಾಗಿರುತ್ತದೆ. ಅದಕ್ಕಾಗಿ ಚಟಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿದ್ದೇನೆ~ ಎನ್ನುವುದು ಸತೀಶ್ ಮನದಾಳದ ಮಾತು.ಸತೀಶ್ ಸರಿಯಾದ ಸಮಯಕ್ಕೆ ಸರಿಯಾದ ಜಾಗದ (ಯೋಗರಾಜ್ ಭಟ್) ಬಳಿ ಹೋದರಂತೆ. ಹೀಗಾಗಿ ಅವರ ವೃತ್ತಿ ಜೀವನದಲ್ಲಿ ನೋವು ಇಲ್ಲವಂತೆ. `ಭಟ್ಟರು ನನ್ನ ಗಾಡ್‌ಫಾದರ್ ಹಾಗೂ ಅಣ್ಣ ಇದ್ದಂತೆ. ಅವರು ಭೂಮಿತಾಯಿ ರೀತಿ ಎಲ್ಲರನ್ನು ಹೊತ್ತು ಸಾಕುತ್ತಿದ್ದಾರೆ~ ಎನ್ನುವುದು ಅವರ ಭಾವುಕ ಮಾತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.