ದೊಡ್ಡ ಆಲದ ಜಟಾ ಜಾಲ

7

ದೊಡ್ಡ ಆಲದ ಜಟಾ ಜಾಲ

Published:
Updated:
ದೊಡ್ಡ ಆಲದ ಜಟಾ ಜಾಲ

‘ನಾನು ಕ್ಯಾಲಿಫೋರ್ನಿಯಾಗೆ ಬರಲೇಬೇಕು. ನೀನು ಭಾಗ್ಯವಂತ. ಅಲ್ಲಿ ಆಕಾಶಕ್ಕೆ ನೆಗೆದು ನಿಂತ ಮಾಹಾಮರಗಳನ್ನು ನೋಡುತ್ತಿರುತ್ತಿ’ ಅಂತ ಅಮೇರಿಕಾದಲ್ಲಿರುವ ನನ್ನ ಅಣ್ಣನ ಮಗ ನಿಧಿಗೆ ಫೋನಾಯಿಸುತ್ತಿದ್ದೆ. ಕಳೆದ ವಾರ ಮಾತ್ರ ಅವನು ವಿಪರೀತ ಸಿಟ್ಟಾಗಿದ್ದ.‘ನಿನ್ನ ಬುದ್ಧಿಗೆ ಏನು ಹೇಳಲಿ ಅಂತೀನಿ. ಪದೇ ಪದೇ ಇಲ್ಲಿಗೆ ಹಾರಿ ಬರ್‍ತೀನಿ ಅಂತಿರ್‍ತೀಯಲ್ಲ ವಟವೃಕ್ಷ ನೋಡೋಕೆ! ಬೆಂಗಳೂರಿನ ಹತ್ತಿರವೇ ಇಲ್ವೆ ಅಂಥದ್ದೊಂದು ತಾಣ...’ ಅಂತ ಅವನು ಹೇಳಿದಾಗ ನಾನು ದಂಗಾದೆ. ಅವನಿಗೇ ವಿವರ ಇ-–ಮೇಲ್ ಮಾಡು ಅನ್ನುವಂತಾಯ್ತು; ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಆ ಪ್ರವಾಸಿ ತಾಣ ಕುರಿತು!ಹೌದು. ‘ಎಲ್ಲೋ ಹುಡುಕುತ....’ ರಾಷ್ಟ್ರಕವಿ ಜಿ. ಎಸ್. ಎಸ್ ಅವರ ಕವನ ನೆನಪಾಯಿತು. ಅವನು ನೋಡು ಅಂತ ಹೇಳಿದ್ದು ‘ದೊಡ್ಡ ಆಲದ ಮರ’. ಬೆಂಗಳೂರಿನಿಂದ ಕೇವಲ ೨೮ ಕಿ.ಮೀ. ದೂರ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ ಈ ಭವ್ಯ ವೃಕ್ಷವನ್ನು ಹೊಂದಿರುವ ಗರಿಮೆಯ ಗ್ರಾಮ.ಓ... ಕೇತೋಹಳ್ಳಿ ತಾನೆ? ಅದೇ ದೊಡ್ಡ ಆಲದ ಮರ ಎನ್ನುವಂತೆ ಅದರ ಖ್ಯಾತಿ. ೪೦೦ ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ. ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ.ನಮ್ಮ ಆಲದ ಮರದ ಎತ್ತರ ೯೫ ಅಡಿ. ನಮ್ಮನ್ನು ಎಣಿಕೆಯ ತಲೆಬಿಸಿಗೊಪ್ಪಿಸುವ ಕೊಂಬೆಗಳು. ದೈತ್ಯ ಮರ ನಾಲ್ಕು ಎಕರೆ ಅಂದರೆ ೧೫,೦೦೦ ಚದರ ಮೀಟರ್ ವಿಸ್ತೀರ್ಣದಷ್ಟು ಆವರಿಸಿದೆ. ಮುಡಿಭಾಗದಲ್ಲಿ ಸುಮಾರು ೩೦೦ ಮೀಟರುಗಳ ಸುತ್ತಳತೆ ಇದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳುಂಟು.೨೦೦೦ರಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಡುತ್ತಿವೆ. ಎಷ್ಟಾದರೂ ಬೆಳವಣಿಗೆಯ ದಾಹ! ಹಾಗಾಗಿ ಆ ತಾಣದಲ್ಲಿ ಹಲವು ಮರಗಳಿರುವಂತೆ ತೋರುತ್ತದೆ. ತುಸು ದೂರದಿಂದ ದಿಟ್ಟಿಸಿದರೆ ಮರ ತೆರೆದಿಟ್ಟ ಹಸಿರು ಕೊಡೆಯಂತೆ ಗೋಚರಿಸುತ್ತದೆ.ಬೆಂಗಳೂರು-–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಗೇರಿ ದಾಟಿ ಮುಂದೆ ರಾಜರಾಜೇಶ್ವರಿ ದಂತವೈದ್ಯಕೀಯ ಶಿಕ್ಷಣಾಲಯದ ಬಳಿ ಬಲಕ್ಕೆ ಹರಿಯುವ ರಸ್ತೆಯಲ್ಲಿ ಮುಂದೆ ಸಾಗಿದರೆ ನಾಯಂಡಹಳ್ಳಿ, ಕೆಂಚೇನಹಳ್ಳಿ, ಮೈಲಸಂದ್ರ, ಅಂಚೆಪಾಳ್ಯ,  ಚಿಕ್ಕೆಲ್ಲೂರು ಮೂಲಕ ರಾಮೋಹಳ್ಳಿ ತಲುಪಿದರೆ ಆಯಿತು. ಮುಂದೆ ನಾಲ್ಕು ಕಿ.ಮೀ. ಅಂತರದಲ್ಲಿ ದೊಡ್ಡ ಆಲದ ಮರ ತಲುಪಬಹುದು.ಕೆಂಪೇಗೌಡ ಬಸ್ ನಿಲ್ದಾಣ, ಕೃಷ್ಣರಾಜ ಮಾರ್ಕೆಟ್ನಿಂದ ನೇರವಾಗಿ ಈ ಪ್ರೇಕ್ಷಣೀಯ ಸ್ಥಳಕ್ಕೊಯ್ಯುವ ಬಿಎಂಟಿಸಿ ಬಸ್ಸುಗಳಿವೆ. ಸ್ವಂತ ವಾಹನವಾದರೆ ಆಲದ ಮರವಲ್ಲದೆ ಆಸುಪಾಸಿನ ದೇವಾಲಯಗಳಿಗೂ ಹೋಗಿ ಬರಬಹುದು. ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯು ಆಲದ ಮರದ ಸಂರಕ್ಷಣೆಯ ಹೊಣೆ ವಹಿಸಿಕೊಂಡಿದೆ. ನಾಲ್ಕು ಎಕರೆ ಪ್ರದೇಶಕ್ಕೆ ಸುತ್ತ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಬೇರುಗಳು ಸಮರ್ಥವಾಗಿಯೆ ಬೆಳೆಯುತ್ತಿರುವುದರಿಂದ ಸಂರಕ್ಷಣಾ ವ್ಯಾಪ್ತಿಯನ್ನು ಕನಿಷ್ಠ ಎರಡು ಪಟ್ಟು ವಿಸ್ತರಿಸುವುದು ಯುಕ್ತ. ಪ್ರವಾಸೋದ್ಯಮ ಇಲಾಖೆ ದೊಡ್ಡ ಆಲದ ಮರವನ್ನು ಪಾರಂಪರಿಕ ವೃಕ್ಷವೆಂದು ಘೋಷಿಸಿ ತಾಣವನ್ನು ಪ್ರವಾಸಿ ಕೇಂದ್ರವೆಂದು ಸಾರಿದೆ. ಕೇಂದ್ರ ಸರ್ಕಾರಕ್ಕೂ ಪ್ರದೇಶವನ್ನು ಸರ್ವತೋಮುಖ ಅಭಿವೃದ್ಧಿಗೆ ಪರಿಗಣಿಸಬೇಕೆಂದು ಶಿಫಾರಸು ಮಾಡಿದೆ.ಕುಡಿಯುವ ನೀರಿನ ವ್ಯವಸ್ಥೆಯಿದೆ. ಕೋತಿಗಳ ಕಾಟ ಜೋರಾಗಿ ಇದೆ.  ಸಂಬಂಧಿಸಿದವರು ಇದನ್ನು ನಿಯಂತ್ರಿಸುವುದರ ಜೊತೆಗೆ ಆವರಣದಲ್ಲಿ ಎಲ್ಲೂ ಜಾಹೀರಾತು, ಪ್ರಚಾರ ಫಲಕಗಳನ್ನು ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ಕುಡಿಯುವ ನೀರು ಸಮೇತ ಬುತ್ತಿಯೊಂದಿಗೆ ಪ್ರವಾಸ ಹೊರಡಿ. ಬಿಳಲುಗಳ ನಡುವಿನ ಹಾದಿಯಲ್ಲಿ ಸುತ್ತಾಡಿ. ಸಾವಧಾನವಾಗಿ ಮೇರು ಮರದ ದಿವ್ಯತೆ ಕಣ್ತುಂಬಿಕೊಳ್ಳಿ. ಪರಿಸರ ಸ್ವಚ್ಛತೆ ಬಗ್ಗೆ ನಿಗಾಯಿರಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry