ದೊಡ್ಡ ಗಣೇಶನ ಅಡ್ಡ!

7

ದೊಡ್ಡ ಗಣೇಶನ ಅಡ್ಡ!

Published:
Updated:

ಇನ್ನೇನು ಗಣೇಶನ ಹಬ್ಬ ಬಂದೇಬಿಟ್ಟಿತು. ನಗರದೆಲ್ಲೆಡೆ ಗಣೇಶನ ಮೂರ್ತಿಗಳ ಪ್ರದರ್ಶನ ಶುರುವಾಗಿದೆ. ಕೆಲವರು ಈಗಾಗಲೇ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದಾರೆ. ಇದರ ಜೊತೆಗೆ ಪರಿಸರ ಸ್ನೇಹಿ ಗಣಪನ ಅಭಿಯಾನವೂ ಶುರುವಾಗಿದೆ. ಆದರೆ ಅನೇಕ ವರ್ಷಗಳಿಂದ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವುದನ್ನೇ ಕಸುಬಾಗಿ ಮಾಡಿಕೊಂಡವರು ಈ ಬಾರಿಯೂ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.ನಗರದಲ್ಲಿ ಬೃಹತ್‌ ಗಾತ್ರದ, ನೂರಾರು ವಿನ್ಯಾಸಗಳ ಗಣಪನ ಮೂರ್ತಿಗಳನ್ನು ತಯಾರಿಸುವ ದೊಡ್ಡ ಕೇಂದ್ರ ಮಾವಳ್ಳಿಯಲ್ಲಿದೆ. ಮಾವಳ್ಳಿಯ ತೀರ್ಥಗಿರಿ ಅವರು ಅನೇಕ ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡವರು. ಈಗ ಅವರ ಮಗ ನವೀನ್‌, ಸಹೋದರರು ಎಲ್ಲರೂ ಇದೇ ವ್ಯಾಪಾರದಲ್ಲಿ ತೊಡಗಿದ್ದಾರೆ. ವರ್ಷದ ಸುಮಾರು ಆರು ತಿಂಗಳು ಇದಕ್ಕಾಗಿ ಮೀಸಲು. ಇಲ್ಲಿಂದ ಬೇರೆ ಕಡೆಯ ವ್ಯಾಪಾರಿಗಳು ಹೋಲ್‌ಸೇಲ್‌ ದರದಲ್ಲಿ ಕೊಂಡು ವ್ಯಾಪಾರ ಮಾಡುತ್ತಾರೆ. ಇಲ್ಲಿ ತಯಾರಾಗುವ ಮೂರ್ತಿಗಳು ನಗರದಲ್ಲಿ ಮಾತ್ರವಲ್ಲದೆ ಹೊರವಲಯದ ರಾಮನಗರ, ಚನ್ನಪಟ್ಟಣ, ಮಂಡ್ಯ, ಚಿಕ್ಕಮಗಳೂರು, ಕೋಲಾರ, ಕೆ.ಜಿ.ಎಫ್, ಆಂಧ್ರಪ್ರದೇಶದ ಮದನಪಲ್ಲಿ ಮುಂತಾದ ಕಡೆಯಿಂದ ಬೇಡಿಕೆ ಪಡೆದಿವೆ.ಮೈಸೂರು ರಸ್ತೆಯ ಆರ್.ವಿ.ಕಾಲೇಜು ಬಳಿ ಮೂರ್ತಿಗಳನ್ನು ತಯಾರಿಸುವ ಎರಡು ಬೃಹತ್  ಶೆಡ್‌ಗಳಿವೆ. ಅಲ್ಲಿ ಸುಮಾರು 600ಕ್ಕೂ ಹೆಚ್ಚು ಮೂರ್ತಿಗಳು ಸಿದ್ಧವಾಗಿವೆ. ಮಹಾರಾಷ್ಟ್ರದ ಕಲಾವಿದರ ತಂಡ ಮೂರ್ತಿಗಳ ರಚನೆಯಲ್ಲಿ ತೊಡಗಿದೆ. ಆರು ಇಂಚು ಎತ್ತರದಿಂದ ಶುರುವಾಗಿ 11 ಅಡಿಯವರೆಗೆ ಮೂರ್ತಿಗಳು ಇವೆ.  ಆರು ಅಡಿಯ ಮೂರ್ತಿಗಳಿಗೆ ಬಹಳ ಬೇಡಿಕೆ ಇದೆಯಂತೆ. ಅರ್ಧ ಅಡಿಯಿಂದ ಎರಡು ಅಡಿವರೆಗಿನ ಗೌರಿಯ ಮೂರ್ತಿಗಳೂ ಮಾರಾಟಕ್ಕೆ ಸಿದ್ಧವಾಗಿವೆ.ಪ್ರತಿವರ್ಷವೂ ತಯಾರಿಸಿದ ಮೂರ್ತಿಗಳು ಮಾರಾಟವಾಗದೇ ಉಳಿಯುತ್ತವೆ. ಕೆಲವು ಮರುಬಳಕೆ ಮಾಡಲಾಗದಷ್ಟು ಹಾಳಾಗುತ್ತವೆ. ಬಣ್ಣ ಬಳಿದ ಮೂರ್ತಿಗಳನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿದರೆ ಮಾತ್ರ ಬಣ್ಣ ಉಳಿಯುತ್ತದೆ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಮಾಸಿ ಹೋಗುತ್ತದೆ. ಮಾಸಿದ ಮೂರ್ತಿಗಳನ್ನು ಯಾರೂ ಕೊಳ್ಳುವುದಿಲ್ಲ. ಶೆಡ್‌ಗಳಲ್ಲಿ ತಯಾರಿಸುವ ಕಾರಣ ಒಣಗಲು ಹದಿನೈದು ದಿನ ಬೇಕಾಗುತ್ತದೆ. ಅದಕ್ಕಾಗಿ ಮೂರ್ತಿಗಳನ್ನು ಬೆಂಕಿ ಹಾಕಿ ಒಣಗಿಸಬೇಕಾಗುತ್ತದೆ. ಹಬ್ಬ ಬರುವವರೆಗೂ ವ್ಯಾಪಾರ ಎಷ್ಟಾದೀತು ಎಂಬ ಅಂದಾಜು ಸಿಗುವುದಿಲ್ಲ. ಈ ವರ್ಷ ಹತ್ತು ದಿನಗಳೊಳಗೆ ಗಣೇಶನ ಪ್ರತಿಷ್ಠಾಪನೆ ಮಾಡಬೇಕು ಎಂದು ಬಿಬಿಎಂಪಿ ನಿರ್ದೇಶನ ನೀಡಿದೆ. ಇದರಿಂದ ಗೊಂದಲವುಂಟಾಗಿದೆ ಎಂಬುದು ವ್ಯಾಪಾರಿಗಳ ಅಳಲು.ಬದಲಾವಣೆಗಳು ಇದ್ದಿದ್ದೇ. ದೊಡ್ಡ ಗಣೇಶನ ಮೂರ್ತಿಗಳು ಅಲ್ಲಿ ನಗುತ್ತಿವೆ. ಅವುಗಳನ್ನ ವಿಸರ್ಜಿಸುವುದು ಹೇಗೆ ಎಂಬುದು ಮಾತ್ರ ಪ್ರಶ್ನೆ. ಯಾಕೆಂದರೆ, ಈ ಮೂರ್ತಿಗಳು ಪರಿಸರ ಪ್ರೇಮಿಗಳಲ್ಲ!

ಚಿತ್ರಗಳು:ಎಂ.ಎಸ್.ಮಂಜುನಾಥ್‌

ಪರಿಸರ ಸ್ನೇಹಿ ಗಣಪನಿಗೆ ಆದ್ಯತೆ ನೀಡಿ

ನನ್ನ ಕಾರ್ಯಕ್ಷೇತ್ರವಾದ ಬೆಂಗಳೂರು ನಗರ ಪಶ್ಚಿಮ ವಲಯದ ಎಲ್ಲ ಪೊಲೀಸ್‌ ಇಲಾಖೆಗಳ ಮೂಲಕ ಸಾರ್ವಜನಿಕ ಗಣೇಶೋತ್ಸವ ನಡೆಸುವ ಸಂಘಟನೆಗಳ ಮಾಹಿತಿ ಸಂಗ್ರಹಿಸಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನೇ ಬಳಸುವಂತೆ ಪತ್ರ ಬರೆಯಲಾಗಿದೆ. ಪ್ರತಿಷ್ಠೆ ಅಥವಾ ಇಮೇಜ್‌ಗಾಗಿ ಪರಿಸರ ನಾಶಕ್ಕೆ ಪ್ರೇರಣೆ ನೀಡಬೇಡಿ. ದೊಡ್ಡ ಮೂರ್ತಿಗಳನ್ನೇ ಬಳಸಬೇಕೆಂದಿದ್ದರೆ  ಜೇಡಿ ಮಣ್ಣಿನ ಮೂರ್ತಿಗಳನ್ನು ಕಲಾವಿದರಿಂದ ಮಾಡಿಸಿ ಬಳಸಿ ಎಂದು ಪತ್ರ ಬರೆಯಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಿಂತ ಹೆಚ್ಚಿನ ಅಧಿಕಾರ ಮಂಡಳಿಗಿಲ್ಲ. ಆದರೆ, ಪರಿಸರಕ್ಕೆ ಮಾರಕವಾಗುವ ಮೂರ್ತಿಗಳ ಮಾರಾಟವನ್ನು ನಿಷೇಧಿಸುವ ಅಧಿಕಾರ ಬಿಬಿಎಂಪಿಗೆ ಇದೆ. ಆದರೆ ಅವರಿಗೆ ಇಚ್ಛಾಶಕ್ತಿಯ ಕೊರತೆಯೂ ಇದೆ. ಸಾರ್ವಜನಿಕರು ಒಂದು ಅಂಗಡಿ ತೆರೆಯಬೇಕಾದರೆ, ಫ್ಲೆಕ್ಸ್ ಹಾಕಬೇಕಾದರೆ ಬಿಬಿಎಂಪಿಯ ಅನುಮತಿ ಪಡೆಯಬೇಕು. ಹಾಗಿರುವಾಗ ನಗರದಲ್ಲಿ ಎಲ್ಲೆಂದರಲ್ಲಿ  ಹಾಕಿದ ಶೆಡ್‌ಗಳಲ್ಲಿ ಪರಿಸರಕ್ಕೆ ಮಾರಕವಾಗುವ ಮೂರ್ತಿಗಳು ತಯಾರಾಗುತ್ತಿವೆ. ಅದಕ್ಕೆ ಕಡಿವಾಣ ಹಾಕದೆ ನಗರದ ಕೆರೆಗಳನ್ನು ಉಳಿಸಲು ಸಾಧ್ಯವಿಲ್ಲ’.

–ರಾಜು.ಕೆ., ಪರಿಸರ ಅಧಿಕಾರಿ,

ಮಾಲಿನ್ಯ ನಿಯಂತ್ರಣ ಮಂಡಳಿ

ಮಾರಕ ಬಣ್ಣ

ನೈಸರ್ಗಿಕವಲ್ಲದ ಬಣ್ಣಗಳಲ್ಲಿ ಸೀಸ, ಕ್ರೋಮಿಯಂ, ಕ್ಯಾಡ್ಮಿಯಂ, ನಿಕೋಲ್‌, ಮ್ಯಾಂಗನೀಸ್‌ ಅಂಶಗಳಿರುತ್ತವೆ. ಮಾನವನ ದೇಹಕ್ಕೆ ಸೀಸ ಸೇರಿದಾಗ ನರ, ಮೂತ್ರಪಿಂಡ, ಹೃದಯ ಹಾಗೂ ಜನನಾಂಗಗಳಿಗೆ ಶಾಶ್ವತ ಹಾನಿಯಾಗುತ್ತದೆ. ಕ್ರೋಮಿಯಂ ರಕ್ತಕಣ, ಯಕೃತ್ತು, ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಚರ್ಮದ ಅಲರ್ಜಿ ಹಾಗೂ ಚರ್ಮ ರೋಗಗಳಿಗೆ ಕಾರಣವಾಗುತ್ತದೆ.

ಮ್ಯಾಂಗನೀಸ್ ಅಲ್ಪಪ್ರಮಾಣದಲ್ಲಿ ಮಾನವನ ದೇಹದಲ್ಲಿದ್ದರುತ್ತದೆ. ಆದರೆ ಮಿತಿ ಮೀರಿದರೆ ನರಕೋಶಗಳು ನಶಿಸಲು ಕಾರಣವಾಗುತ್ತದೆ. ಇದರಿಂದ ಪಾರ್ಕಿನ್‌ಸನ್‌ ರೋಗವನ್ನು ಹೋಲುವ ‘ಮ್ಯಾಂಗನಿಸಂ’ ರೋಗ ಬರುತ್ತದೆ. ನಿಕೋಲ್ ಸಲ್ಫೈಡ್ ಕ್ಯಾನ್ಸರ್‌ ಕಾರಕ. ಕ್ಯಾಡ್ಮಿಯಂ ಮತ್ತು ಅದರ ಸಂಯುಕ್ತ ಕಡಿಮೆ ಪ್ರಮಾಣದಲ್ಲಿದ್ದರೂ ವಿಷಕಾರಿ. ಜಪಾನಿನಲ್ಲಿ ಗಾಳಿ, ನೀರು ಮತ್ತು ಮಣ್ಣಿನಲ್ಲಿ ಕ್ಯಾಡ್ಮಿಯಂ ಅಂಶ ಹೆಚ್ಚಾಗಿ ‘ಇಟಾಯಿ’ ಎಂಬ ರೋಗ (ಮೆದು ಮೂಳೆ ರೋಗ)ಕಾಣಿಸಿಕೊಂಡಿತ್ತು.ಸೀಸರಹಿತ ಬಣ್ಣ ಬಿಡುಗಡೆ

ಕರ್ನಾಟಕ ಸರ್ಕಾರದ ಅಧೀನ ಉದ್ಯಮವಾದ ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್‌ ಲಿಮಿಟೆಡ್ ಸೀಸ ರಹಿತ ಪರಿಸರ ಸ್ನೇಹಿ ಎನಾಮಲ್‌ ಬಣ್ಣಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಪರಿಸರ ಮತ್ತು ಮನುಷ್ಯರಿಗೆ ಯಾವುದೇ ಹಾನಿಯಿಲ್ಲ ಎಂದು ಕಂಪೆನಿ ತಿಳಿಸಿದೆ.

ಬಿಬಿಎಂಪಿ ಅಧಿಕಾರಿಗಳ ಉತ್ತರ

ಒಂದೆಡೆ ಪರಿಸರಸ್ನೇಹಿ ಗಣೇಶನ ಮೂರ್ತಿಗಳನ್ನೇ ಬಳಸಿ, ಕೆರೆಗಳನ್ನು ರಕ್ಷಿಸಿ ಎಂದು ಕರೆ ನೀಡುವ ಬಿಬಿಎಂಪಿ ಇದಕ್ಕಾಗಿ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅವರಿಗೆ ಏನೂ ಗೊತ್ತಿಲ್ಲ. ನನ್ನ ವಾರ್ಡ್‌ಗೆ ಸಂಬಂಧಿಸಿದ್ದಲ್ಲ ಎಂದು ನುಣುಚಿಕೊಳ್ಳುತ್ತಾರೆ. ಪರಿಸರಕ್ಕೆ ಮಾರಕವಾಗುವ ಗಣಪನ ಮೂರ್ತಿಗಳನ್ನು ತಯಾರಿಸುವವರಿಗೆ ಏನಾದರೂ ನಿಬಂಧನೆಗಳನ್ನು ಹಾಕಿದ್ದೀರಾ ಎಂದರೆ ಅದಕ್ಕೂ ಉತ್ತರವಿಲ್ಲ.ರಾಜರಾಜೇಶ್ವರಿನಗರ ವಾರ್ಡ್‌ನ ಪರಿಸರ ಅಭಿಯಂತರ ನಟರಾಜ್‌ ಅವರಿಗೆ ರಸ್ತೆ ಬದಿಯಲ್ಲಿ ಹಾಕಿರುವ ಬೃಹತ್‌ ಶೆಡ್‌ಗಳು ಗಮನಕ್ಕೆ ಬಂದಿಲ್ಲವಂತೆ. ಹಾಗಂತ ಅವರೇ ಹೇಳುತ್ತಾರೆ. ಅವರು ಇನ್ನಷ್ಟೇ ಪರಿಶೀಲನೆ ಮಾಡಬೇಕು ಎನ್ನುತ್ತಾರೆ. ಆದರೆ ನಗರದಲ್ಲಿ ಪುಟ್ಟದೊಂದು ಪೆಟ್ಟಿಗೆಯಂಗಡಿ ತೆರೆಯಬೇಕಾದರೂ ಪಾಲಿಕೆಯ ಪರವಾನಗಿ ಬೇಕು. ಕೆಂಗೇರಿ ವಾರ್ಡ್‌ನ ಮುಖ್ಯ ಅಭಿಯಂತರ ಶ್ರೀನಿವಾಸ್‌ ಅವರನ್ನು ಕೇಳಿದರೆ, ಎಲ್ಲ ಕಡೆಯೂ ಬಣ್ಣದ ಮೂರ್ತಿಗಳನ್ನೇ ಮಾರಾಟ ಮಾಡುತ್ತಾರೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ನಿರ್ಬಂಧ ಮಾಡಬೇಕಷ್ಟೇ ಅಂತ ಕೈಚೆಲ್ಲುತ್ತಾರೆ.

ಬಿಬಿಎಂಪಿ ಕೂಡಾ ಸರ್ಕಾರದ ಒಂದು ಭಾಗ ಎಂಬುದನ್ನು ಅಧಿಕಾರಿಗಳೇ ಮರೆತಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry