ದೊಡ್ಡ ಹಬ್ಬಕ್ಕೆ ಮಾತೃಛಾಯಾ ಸಿದ್ಧ

7

ದೊಡ್ಡ ಹಬ್ಬಕ್ಕೆ ಮಾತೃಛಾಯಾ ಸಿದ್ಧ

Published:
Updated:

ಹುಬ್ಬಳ್ಳಿ: ಇಲ್ಲಿಯ ಅಮ್ಮನಿಗೆ ಬರೊಬ್ಬರಿ 32 ಮಕ್ಕಳು. ಎಲ್ಲ ಮಕ್ಕಳೊಂದಿಗೂ ಈ ಅಮ್ಮ ನಿತ್ಯವೂ ಆಟ ಆಡುತ್ತಾರೆ. ಅವರನ್ನೆಲ್ಲ ನಕ್ಕು ನಗಿಸುತ್ತಾರೆ. ಆ ಮಹಾತಾಯಿ ತಮ್ಮ ಎಲ್ಲ ಮಕ್ಕಳನ್ನು ಎಷ್ಟೊಂದು ಏಕೀಭಾವದಿಂದ ನೋಡುತ್ತಾರೆಂದರೆ ಇದೇ 5ರಂದು (ಭಾನುವಾರ) ಎಲ್ಲರ ಜನ್ಮ ದಿನವನ್ನೂ ಏಕಕಾಲಕ್ಕೆ ಆಚರಿಸಲಿದ್ದಾರೆ!ಎಲ್ಲ ಮಕ್ಕಳ ಜನ್ಮ ದಿನಾಚರಣೆಗೆ ಸಾಕ್ಷಿಯಾಗಲು ಹಿರಿಯ ಕಲಾವಿದ ಪ್ರಹ್ಲಾದ ಆಚಾರ್ಯ ಆಗಮಿಸಲಿದ್ದು, ಜಾದೂ ಮತ್ತು ಮಾತನಾಡುವ ಬೊಂಬೆಗಳ ಪ್ರದರ್ಶನ ನೀಡಲಿದ್ದಾರೆ.ನಗರದ ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಅಮ್ಮ-ಮಕ್ಕಳ ಕಥೆ ಇದು. ಅಪ್ಪ-ಅಮ್ಮನ ಸುಳಿವಿಲ್ಲದೆ ಎಲ್ಲೆಲ್ಲೊ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತ ಮಕ್ಕಳನ್ನು ಇಲ್ಲಿಯ ಬಾಲ ಕಲ್ಯಾಣ ಕೇಂದ್ರಕ್ಕೆ ಕರೆತರಲಾಗುತ್ತದೆ. ಅಂತಹ ಮಕ್ಕಳನ್ನು ಬಾಲಕೇಂದ್ರದ ಯಾರೂ `ಅನಾಥರು~ ಎನ್ನುವುದಿಲ್ಲ. ಏಕೆಂದರೆ, ಎಲ್ಲರಿಗೂ ಅಮ್ಮನಾಗುವ ಮಹಾತಾಯಿಯೊಬ್ಬರು ಇಲ್ಲಿದ್ದಾರೆ.ಒಳ್ಳೆಯ ಸಂಸ್ಕಾರ ಕೊಟ್ಟು, ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡಿ `ಯಾರೂ ಇಲ್ಲದ~ ಮಕ್ಕಳಿಗೆ `ಎಲ್ಲವೂ~ ಆಗಿ ಪೊರೆಯುತ್ತಿದೆ ಮಾತೃಛಾಯಾ ಕೇಂದ್ರ. ಸದ್ಯ ಇಲ್ಲಿ 20 ಹುಡುಗಿಯರು ಸೇರಿದಂತೆ 32 ಜನ ಮಕ್ಕಳಿದ್ದಾರೆ. ನಾಲ್ಕು ವರ್ಷದ ಪುಟಾಣಿಯಿಂದ ಪ್ರೌಢಶಾಲೆ ಮೆಟ್ಟಿಲೇರಿದ ವಿದ್ಯಾರ್ಥಿಗಳವರೆಗೆ ಎಲ್ಲ ವಯೋಮಾನದ ಮಕ್ಕಳು ಇಲ್ಲಿದ್ದಾರೆ.ಮಕ್ಕಳ ಜನ್ಮದಿನ ಯಾವಾಗ ಎಂಬುದು ಗೊತ್ತಿಲ್ಲದ ಕಾರಣ ಎಲ್ಲರ ಜನ್ಮದಿನವನ್ನು ಸರಸ್ವತಿ ಜಯಂತಿ ದಿನವೇ ಆಚರಿಸಲಾಗುತ್ತದೆ. ಅಂದು 32 ಜನ ತಾಯಂದಿರು ಕೇಂದ್ರಕ್ಕೆ ಬಂದಿರುತ್ತಾರೆ. ಬೆಳಿಗ್ಗೆ ಎಲ್ಲ ಮಕ್ಕಳಿಗೂ ಎಣ್ಣೆ ಶಾಸ್ತ್ರ ಮಾಡಲಾಗುತ್ತದೆ. ಆಮೇಲೆ ಅಭ್ಯಂಗ ಸ್ನಾನ. ಬಳಿಕ ಹೊಸ ಉಡುಪುಗಳು ಇಲ್ಲಿಯ ಮಕ್ಕಳಿಗಾಗಿ ಕಾದಿರುತ್ತವೆ. ಮಧ್ಯಾಹ್ನ ಸಿಹಿ ಊಟ. ಸಂಜೆ ಆರತಿ ಶಾಸ್ತ್ರ. ಆಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇಂದ್ರದಲ್ಲಿ ನಡೆಯುತ್ತವೆ.ಬಾಲಕೇಂದ್ರದಲ್ಲಿ ನಡೆಯುವ ಅತ್ಯಂತ ದೊಡ್ಡದಾದ ಹಬ್ಬ ಇದು. ಇಲ್ಲಿಯ ಮಕ್ಕಳಲ್ಲಿ ಚಿಕ್ಕವರು ದೊಡ್ಡವರಿಗೆ ಅಕ್ಕ-ಅಣ್ಣ ಎಂದೇ ಕರೆಯುತ್ತಾರೆ. ದೊಡ್ಡವರು ಚಿಕ್ಕವರ ಬೇಕು-ಬೇಡುಗಳನ್ನು ನೋಡಿಕೊಳ್ಳುವ ಜತೆಗೆ ಅಗತ್ಯ ಕಾಳಜಿ ಮಾಡುತ್ತಾರೆ. ಅಮ್ಮ ಅಕ್ಕನಿಗೆ ತಲೆ ಬಾಚಿದರೆ, ಅಕ್ಕ, ತಂಗಿಗೆ ತಲೆ ಬಾಚುತ್ತಾಳೆ. ಹಾಡು-ಹಸೆ, ಚಿತ್ರಕಲೆ, ರಂಗೋಲಿ ಕಲೆ ಎಲ್ಲವನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.ಸರ್ಕಾರಿ ಶಾಲೆಗಳಲ್ಲೇ ಓದುವ ಈ ಮಕ್ಕಳು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆ ಎರಡರಲ್ಲೂ ಮುಂದಿರುವುದು ವಿಶೇಷವಾಗಿದೆ. ಟ್ರಸ್ಟ್‌ನ ಮಹಿಳಾ ಸದಸ್ಯರು ಇವರನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದು, ಅವರ ಪ್ರಗತಿ ಕುರಿತಂತೆ ಶಾಲೆಗೆ ಹೋಗಿ ವಿಚಾರಿಸಿಕೊಂಡೂ ಬರುತ್ತಾರೆ. ಈ ಮಕ್ಕಳು ತಂದ ಪ್ರಶಸ್ತಿ-ಫಲಕಗಳು ಕೇಂದ್ರದ ಕಪಾಟಿನ ತುಂಬಾ ತುಂಬಿಹೋಗಿವೆ.`ನನ್ನ ಮಕ್ಕಳ ಪ್ರಗತಿಯಲ್ಲೇ ನಾನು ಆನಂದ ಕಾಣುತ್ತಿದ್ದೇನೆ. ಅವರೇ ನನ್ನ ಆಸ್ತಿ~ ಎಂದು ಹೇಳುತ್ತಾರೆ ಮಾತಾಜಿ ರತ್ನಾ. `ಈ ಮಾತಾಜಿ ಎಲ್ಲ ಮಕ್ಕಳ ಪಾಲಿಗೂ ಅಮ್ಮನಾಗಿದ್ದು, ತೋರುವ ಕಾಳಜಿ ಅನನ್ಯ~ ಎಂದು ಟ್ರಸ್ಟ್‌ನ ಶಂಕರ ಗುಮಾಸ್ತೆ, ಭಾರತಿ ನಂದಕುಮಾರ್, ಶಿಲ್ಪಾ ಶೆಟ್ಟರ ಮತ್ತಿತರರು ಹೇಳುತ್ತಾರೆ. ಕೇಂದ್ರದೊಳಗೆ ರತ್ನಾ ಓಡಾಡುವಾಗಲೆಲ್ಲ ಪುಟ್ಟ ಮಕ್ಕಳು ಅವರ ಸೆರಗು ಹಿಡಿದು, `ಅಮ್ಮ, ಅಮ್ಮ~ ಎಂದು ಹೇಳುತ್ತಾ ಹೋಗುವ ದೃಶ್ಯ ಕಂಡಾಗ ಎಂಥವರ ಕಣ್ಣಾಲಿಗಳೂ ತುಂಬಿಕೊಳ್ಳುತ್ತವೆ.

ಮಮತೆ ಮೆರೆದ ಹಿರಿಯರು

ಹುಬ್ಬಳ್ಳಿ: `ಮಾತೃಛಾಯಾ~ ಬಾಲಕಲ್ಯಾಣ ಕೇಂದ್ರದ ಕುರಿತಂತೆ `ಪ್ರಜಾವಾಣಿ ಮೆಟ್ರೊ~ದಲ್ಲಿ ಕೆಲ ವಾರಗಳ ಹಿಂದೆ ಪ್ರಕಟಿಸಲಾದ ಲೇಖನ ಓದಿ, ಧಾರವಾಡದ ನೀರಾವರಿ ಇಲಾಖೆ ನಿವೃತ್ತ ನೌಕರ ಗಣಪತರಾವ್ ಗೋಪಿನಾಥ ಬಾಡಕರ್ ಕೇಂದ್ರಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತಮ್ಮ ಸಣ್ಣ ಉಳಿತಾಯದಲ್ಲೂ ದೊಡ್ಡ ಮೊತ್ತವನ್ನೇ ದೇಣಿಗೆ ನೀಡುವ ಮೂಲಕ ಬಾಡಕರ್ ಈ ದೇವರ ಮಕ್ಕಳ ಮೇಲೆ ಮಮತೆ ತೋರಿದ್ದಾರೆ.ಹಾಗೆಯೇ ರೈಲ್ವೆ ಇಲಾಖೆ ನಿವೃತ್ತ ನೌಕರ ಶೇಷಗಿರಿರಾವ್ ಬೆಟಗೇರಿ ಸಹ ಕೇಂದ್ರಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇಬ್ಬರೂ ಮಹನೀಯರಿಗೆ ಇಲ್ಲಿಯ ಮಕ್ಕಳು ತುಂಬು ಹೃದಯದ ಕೃತಜ್ಞತೆ ಅರ್ಪಿಸಿವೆ. ಸೇವಾ ಭಾರತಿ ಟ್ರಸ್ಟ್ ಸದಸ್ಯರು ಮಕ್ಕಳ ಜನ್ಮ ದಿನಾಚರಣೆ ಸಂದರ್ಭದಲ್ಲಿ ಇದೇ 5ರ ಸಂಜೆ ಈ ಇಬ್ಬರು ಹಿರಿಯರಿಗೆ  ಸನ್ಮಾನವನ್ನೂ ಇಟ್ಟುಕೊಂಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry