ಭಾನುವಾರ, ಜೂನ್ 13, 2021
25 °C

ದೊಮ್ಮಸಂದ್ರ: ಕುಡಿಯುವ ನೀರಿಗೆ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌:ಇಲ್ಲಿಗೆ ಸಮೀಪದ ಸರ್ಜಾಪುರ ರಸ್ತೆಯ ದೊಮ್ಮಸಂದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ.

ಗ್ರಾಮದ 6 ವಾರ್ಡ್‌ಗಳಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಸಮರ್ಪಕ ನೀರು ಪೂರೈಕೆ ಮಾಡಲು ಸ್ಥಳೀಯ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿಗಳು ವಿಫಲ ಆಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.‘ಗ್ರಾಮದಲ್ಲಿ 14 ಕೊಳವೆ ಬಾವಿಗಳು ಇವೆ.  ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಇದ್ದು, ಬೃಹತ್‌ ನೀರಿನ ತೊಟ್ಟಿಗಳಲ್ಲಿ ಶೇಖರಿಸಿ  ಆ ಮೂಲಕ ಟ್ಯಾಂಕ್‌ಗಳಿಗೆ ಪಂಪ್‌ ಮಾಡಲಾಗುತ್ತಿದೆ.ಆದರೆ ವಾಟರ್‌ಮೆನ್‌ಗಳು ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ’ ಎಂದು ಮಹಿಳೆಯರು ದೂರಿದರು.ಶಿಥಿಲ ಟ್ಯಾಂಕ್‌ಗಳು: ಗ್ರಾಮದಲ್ಲಿ ನಾಲ್ಕು ನೀರಿನ ಟ್ಯಾಂಕ್‌ಗಳಿದ್ದು ಆಸ್ಪತ್ರೆ, ಹೌಸಿಂಗ್‌ ಬೋರ್ಡ್‌ ಮತ್ತು ಮಸೀದಿ ಬಳಿ ಇರುವ ಟ್ಯಾಂಕ್‌ಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯ್ತಿಯಿಂದ ₨10 ಲಕ್ಷ ವೆಚ್ಚದಲ್ಲಿ ದೊಮ್ಮಸಂದ್ರ–ಕೊಮ್ಮಸಂದ್ರ ರಸ್ತೆಯಲ್ಲಿ ನಿರ್ಮಿಸಿರುವ ಟ್ಯಾಂಕ್‌ಗೆ  ನೀರು ಸರಬರಾಜು ಆಗದೆ ವ್ಯರ್ಥವಾಗಿದೆ. ಮಸೀದಿ ಬಳಿ ಇರುವ ಹಳೆಯ ಟ್ಯಾಂಕ್‌ ಸಂಪೂರ್ಣ ಶಿಥಿಲ ಆಗಿದ್ದು ಬೀಳುವ ಹಂತದಲ್ಲಿದೆ. ಸುತ್ತಮುತ್ತ ನಿವಾಸಿಗಳು ಭಯ ಭೀತರಾಗಿದ್ದು, ಇದನ್ನು ಕೆಡವಲು ಆದೇಶ ಆಗಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.‘ಕೆರೆಯ ಪಕ್ಕದಲ್ಲಿ ನಿರ್ಮಿಸಿರುವ ನೂತನ ಟ್ಯಾಂಕ್ ಕೂಡ ಸೋರುತ್ತಿದೆ. ಸಮರ್ಪಕ ನೀರು ಪೂರೈಸಲು ಸಾಧ್ಯ ಆಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ಇಂತಹ ಟ್ಯಾಂಕ್‌ಗಳ ನಿರ್ಮಿಸುವ ಬದಲು ಅಲ್ಲಲ್ಲಿ ಕಿರು ಟ್ಯಾಂಕ್‌ಗಳ ನಿರ್ಮಿಸಿದರೆ ಉತ್ತಮ’ ಎಂದು ಸ್ಥಳೀಯ ನಿವಾಸಿ ರಾಧಮ್ಮ ಸಲಹೆ ನೀಡಿದರು.ವಾರಕ್ಕೊಮ್ಮೆ ನೀರು:‘ಗ್ರಾಮದಲ್ಲಿ ಬಹುತೇಕ ಕಡೆ ಅನಧಿಕೃತ ನಲ್ಲಿ ಸಂಪರ್ಕಗಳು ಇರುವ ಕಾರಣ ನೀರು ಸೋರಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಂಡಿಲ್ಲ. ವಾರಕ್ಕೊಮ್ಮೆ ನೀರು ಬಿಡುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ನೀರಿನ ದರ ದುಪ್ಪಟ್ಟು ಏರಿಸಲಾಗಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.