ಭಾನುವಾರ, ಜೂನ್ 13, 2021
25 °C

ದೊರೆಯದ ಅನುದಾನ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತರಕಾರಿ ಬೆಳೆಯಲು ಅಗತ್ಯವಿರುವ ಹಸಿರುಮನೆಗಳನ್ನು ನಿರ್ಮಿಸಲು ನೀಡಬೇಕಿದ್ದ ಸಹಾಯಧನವನ್ನು ನೀಡದೇ ತೋಟಗಾರಿಕೆ ಇಲಾಖೆಯು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ರೈತರು ಸೋಮವಾರ ನಗರದ ಕಬ್ಬನ್ ಪಾರ್ಕ್‌ನಲ್ಲಿನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರದ ನಗರಗಳಿಗೆ ತಾಜಾ ತರಕಾರಿ ಪೂರೈಕೆ ಯೋಜನೆಯ ಅಡಿಯಲ್ಲಿ ಹಸಿರುಮನೆ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಿಂದ ತರಬೇತಿ ನೀಡಲಾಗಿತ್ತು. ಇದರಂತೆ ಹಸಿರುಮನೆ ನಿರ್ಮಾಣದ ವೆಚ್ಚದಲ್ಲಿ ಶೇಕಡಾ 50 ರಷ್ಟು ಸಹಾಯಧನ ನೀಡುವುದಾಗಿ ತೋಟಗಾರಿಕೆ ಇಲಾಖೆಯು ತಿಳಿಸಿತ್ತು. ಆದರೆ ಈಗ ಸಹಾಯಧನ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ದೂರಿದರು.

ಸಹಾಯಧನ ನೀಡಲು ಅಧಿಕಾರಿಗಳು ನಿರಾಕರಿಸುತ್ತಿರುವುದರಿಂದ ಹಸಿರುಮನೆ ನಿರ್ಮಾಣಕ್ಕೆ ಹಣ ಖರ್ಚು ಮಾಡಿದ್ದ ತರಕಾರಿ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಹಲವು ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿದೆ. ಇದನ್ನು ತಪ್ಪಿಸಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜು, ಹರೀಶ್, ವಸಂತ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.