ದೊರೆ ಮಗಳ ದಸರೆ

7

ದೊರೆ ಮಗಳ ದಸರೆ

Published:
Updated:
ದೊರೆ ಮಗಳ ದಸರೆ

ಅದು 1955ನೇ ಇಸವಿ. ನಾನಾಗ ಐದು ವರ್ಷದವಳಿರಬೇಕು. ದಸರೆ ಕುರಿತ ನನ್ನ ಬಹು ಹಿಂದಿನ ನೆನಪು ಶುರುವಾಗುವುದು ಅಲ್ಲಿಂದ. ಅರಮನೆಯೊಳಗೆ ಸುಮಾರು ಒಂದು ತಿಂಗಳ ಮೊದಲೇ ದಸರಾ ತಯಾರಿ.ನಮಗೆ ಆಗೆಲ್ಲಾ ಆ ತಯಾರಿ ನೋಡುವುದೇ ಒಂದು ಕೆಲಸ. ಇಡೀ ಅರಮನೆಯ ಮೂಲೆ ಮೂಲೆ ಶುದ್ಧವಾಗುತ್ತಿತ್ತು. ಜಮಖಾನೆ, ರತ್ನಗಂಬಳಿಗಳಿಗೆ ಮೀಯುವ ಸಂಭ್ರಮ. ಒಂದಿಷ್ಟು ಸುಣ್ಣ ಬಣ್ಣ ಬಳಿಯುವ ಕೆಲಸವೂ ನಡೆಯುತ್ತಿತ್ತು. ಜತೆಗೆ ಸರಬರ ಸಡಗರ. ಎಲ್ಲರೂ ಪಾದರಸದಂತೆ ಓಡಾಡುವವರೇ.ಕೆಲವರಿಗೆ ಗೋಡೆಗಳನ್ನು ಶುಭ್ರಗೊಳಿಸುವ ಕಾರ್ಯವಾದರೆ ಇನ್ನೂ ಕೆಲವರಿಗೆ ದೀಪಗಳನ್ನು ಒರೆಸುವ ಕೆಲಸ. ಯಾರೋ ಏನನ್ನೋ ಸಾಗಿಸುವರು. ಮತ್ತೊಂದಷ್ಟು ಜನ ಏನನ್ನೋ ಹೊತ್ತು ತರುವರು.ಪ್ರತಿ ಪೂರ್ವ ಸಿದ್ಧತೆಗೆ ನಮ್ಮ ತಂದೆ ಮಹಾರಾಜ ಜಯಚಾಮರಾಜೇಂದ್ರ ಒಡೆಯರದೇ ಮುಂದಾಳತ್ವ. ಆಸ್ಥಾನದ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲ ಅರಮನೆಯ ಆಚೆಗಿನ ಕೆಲಸ ಕಾರ್ಯಗಳ ಬಗೆಗೂ ಮುತುವರ್ಜಿ ವಹಿಸುತ್ತಿದ್ದರು.

 

ದಸರೆಯ ಆನೆ, ಕುದುರೆ, ಹಸು, ಒಂಟೆಗಳ ಕುರಿತೂ ಅವರ ನಿಗಾ. ದರ್ಬಾರ್‌ಗೆ ಹೇಗೆ ಬರುತ್ತಿದ್ದರೋ ಹಾಗೆಯೇ ಅದರ ರಿಹರ್ಸಲ್‌ಗೂ ಅಪ್ಪ ಆಸ್ಥೆ ವಹಿಸುತ್ತಿದ್ದರು. ಅವರಿಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು. ಏನೂ ಅವಘಡಗಳಾಗಬಾರದು ಎಂಬ ಕಾಳಜಿ. ಮೆರವಣಿಗೆಗಳ ತಾಲೀಮನ್ನೂ ಖುದ್ದಾಗಿ ವೀಕ್ಷಿಸುತ್ತಿದ್ದರು.ನಾವು ಒಟ್ಟು ಆರು ಮಂದಿ ಮಕ್ಕಳು. ನನ್ನಕ್ಕ ಗಾಯತ್ರಿ ದೇವಿ. ಎರಡನೆಯ ಮಗಳೇ ನಾನು. ತಮ್ಮ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್. ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ ಹಾಗೂ ವಿಶಾಲಾಕ್ಷಿ ದೇವಿ ತಂಗಿಯರು. ರಾಯಲ್ ಶಾಲೆಯಲ್ಲಿ ನಮ್ಮ ವಿದ್ಯಾಭ್ಯಾಸ. ದಸರೆ ಬಂತೆಂದರೆ ಹತ್ತು- ಹದಿನೈದು ದಿನಗಳ ಕಾಲ ರಜೆ.

 

ಗಣಿತ, ಇಂಗ್ಲಿಷ್ ಹೇಳಿಕೊಡುತ್ತಿದ್ದ ವಾಟ್ಜಾ, ಡೆಫ್ರೀಜ್ ಟೀಚರ್, ಕನ್ನಡ ಕಲಿಸುತ್ತಿದ್ದ ಚನ್ನಕೇಶವಯ್ಯ ಮೇಷ್ಟ್ರು ಕೂಡ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಮಗೆ ಒಟ್ಟಿಗೇ ಎರಡೆರಡು ಖುಷಿ. ಒಂದು ದಸರೆ ಮತ್ತೊಂದು ರಜೆ.ಹಬ್ಬಕ್ಕೆ ಆಹ್ವಾನ ನೀಡಿ ಅಪ್ಪ ಎಲ್ಲರಿಗೂ ಕಾಗದ ಬರೆಯುತ್ತಿದ್ದರು. ಅದಕ್ಕೆ `ಚಿಕ್ಕಪಟ್ಟಿ~ ಹಾಗೂ `ದೊಡ್ಡಪಟ್ಟಿ~ ಎಂದು ಹೆಸರು. `ದೊಡ್ಡಪಟ್ಟಿ~ಯಲ್ಲಿ ದೇಶ ವಿದೇಶಗಳ ಅತಿಥಿಗಳು, ಮುಖ್ಯಮಂತ್ರಿಗಳು, ಸಚಿವರು ಹೀಗೆ ದೊಡ್ಡವರ ದಂಡು. `ಚಿಕ್ಕಪಟ್ಟಿ~ಯಲ್ಲಿ ರಾಜ್ಯಾಡಳಿತದ ನಿಕಟವರ್ತಿಗಳು, ಸಂಬಂಧಿಕರು ಇರುತ್ತಿದ್ದರು.ತಂದೆಯವರು ತಮ್ಮ ಹಸ್ತಾಕ್ಷರಗಳಿಂದ ಸಂಬಂಧಪಟ್ಟವರ ಹೆಸರು ಬರೆಯುತ್ತಿದ್ದರು. ಅಲ್ಲದೇ ಪ್ರತಿ ಕಾಗದದಲ್ಲಿಯೂ ಅವರ ಸಹಿ ಇರುತ್ತಿತ್ತು. ಒಮ್ಮೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತರಾಯರು ಬಂದಿದ್ದರು. ಪೇಟ ತೊಟ್ಟಿದ್ದರಿಂದ ಅವರನ್ನು ಸುಲಭವಾಗಿ ಗುರುತಿಸುತ್ತಿದ್ದೆ. ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಮುಂತಾದ ಕಡೆಯಿಂದ ಅಪ್ಪನ ಸ್ನೇಹಿತರು ಬರುವುದು ಸಾಮಾನ್ಯವಾಗಿತ್ತು.ದಸರೆಯ ಆಚಾರ- ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರೂ ಹೆಚ್ಚು ಆಶ್ರಯಿಸಿದ್ದು ಮೈಸೂರು ಅರಮನೆ ಪಂಚಾಂಗವನ್ನು. ಒಂಟಿಕೊಪ್ಪಲ್ ಪಂಚಾಂಗದಂತೆಯೇ ಇದು ಕೂಡ ಪ್ರತ್ಯೇಕ ಪಂಚಾಂಗ. ಅರಮನೆಯ ಆಚರಣೆಗಳ ಜತೆಗೆ ಹಬ್ಬ ಹರಿದಿನಗಳ ವಿವರಗಳೂ ಅದರಲ್ಲಿರುತ್ತಿದ್ದವು. ಇದನ್ನು ಯುಗಾದಿಯ ಸಂದರ್ಭದಲ್ಲಿಯೇ ಸಂಬಂಧಿಕರಿಗೆ, ಆಸ್ಥಾನದ ಪ್ರಮುಖರಿಗೆ ರವಾನಿಸಲಾಗುತ್ತಿತ್ತು. ಈಗಲೂ ಆ ಪದ್ದತಿ ಮುಂದುವರಿದಿದೆ.

ಆ ಇಬ್ಬರು

ನವರಾತ್ರಿಯ ಮೊದಲನೇ ದಿನ ನಮ್ಮ ತಂದೆ ಹಾಗೂ ತಾಯಿ ತ್ರಿಪುರಸುಂದರಮ್ಮಣ್ಣಿ ಅವರು ಕಂಕಣ ಕಟ್ಟಿಕೊಳ್ಳುತ್ತಿದ್ದರು. ನವರಾತ್ರಿ ಪೂರ್ಣಗೊಳ್ಳುವವರೆಗೆ ಅವರು ಅರಮನೆ ಬಿಟ್ಟು ತೆರಳುವಂತಿರಲಿಲ್ಲ. ಅವರ ಆಹಾರ ಕೂಡ ಅರಮನೆಯಲ್ಲಿಯೇ ತಯಾರಾಗುತ್ತಿತ್ತು. ಚಾಮುಂಡಿ ತೊಟ್ಟಿಯಲ್ಲಿ ಚಾಮುಂಡಿ ಪ್ರತಿಮೆಗೆ ಪೂಜೆ ನಡೆಯುತ್ತಿತ್ತು.

 

ಅದೇ ರೀತಿ ಚಾಮುಂಡಿ ಬೆಟ್ಟದಲ್ಲಿ ಕೂಡ ಪೂಜೆ. ಸಂಜೆ ದರ್ಬಾರ್ ಆರಂಭ. ನಾವು ಅರಮನೆಯ ಜನಾನಾದಲ್ಲಿ ಕುಳಿತು ದರ್ಬಾರ್ ವೀಕ್ಷಿಸುತ್ತಿದ್ದೆವು. ಅದೇ ಜನಾನಾದಿಂದ ಕುಸ್ತಿ ಕಾಳಗ ಮತ್ತಿತರ ಕ್ರೀಡೆಗಳನ್ನು ನೋಡುವ ಅವಕಾಶವಿತ್ತು. ಆಗಿನದು ಖಾಸಗಿ ದರ್ಬಾರ್ ಅಲ್ಲ.ದರ್ಬಾರ್ ಹಾಲ್‌ನಿಂದ ಅರಮನೆ ಮುಂದಿನ ರಸ್ತೆಯವರೆಗೆ ಜನಸಾಗರ. ಪ್ರತಿ ದಸರೆಯಲ್ಲಿಯೂ ಅದೇ ವಾತಾವರಣ. ನಮ್ಮ ತಂದೆಯವರಿಗೆ ನಜರ್ ಒಪ್ಪಿಸಲಾಗುತ್ತಿತ್ತು. ದೇವಸ್ಥಾನದಿಂದ ತಂದ ಪ್ರಸಾದ, ಗಂಧ ಎಲ್ಲವೂ ದರ್ಬಾರ್ ಹಾಲ್‌ನಲ್ಲಿ ಕಂಗೊಳಿಸುತ್ತಿದ್ದವು.ಭದ್ರತಾ ಕೋಣೆಯಿಂದ ಚಿನ್ನದ ಸಿಂಹಾಸನಕ್ಕೆ ವಿಶೇಷ ಅಲಂಕಾರ ನಡೆಯುತ್ತಿತ್ತು. ಛತ್ರಿ ಚಾಮರಗಳನ್ನು ಜೋಡಿಸುತ್ತಿದ್ದರು. ಆಸನಕ್ಕೆ ಸಿಂಹವನ್ನು ಆವಾಹಿಸುವ ಪ್ರಕ್ರಿಯೆ ಕೂಡ ಪ್ರಮುಖವಾದದ್ದು. ಆಸನಕ್ಕೆ ಹೊಂದಿಕೊಂಡಂತಿದ್ದ ಸಿಂಹದ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಸಿಂಹಾಸನಕ್ಕೆ ಪೌರುಷ ಬರುತ್ತದೆ ಎನ್ನುವುದು ಒಂದು ನಂಬಿಕೆ. ತಂದೆಯವರು ಸಿಂಹಾಸನ ಏರುವ ಮುನ್ನ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೆಲ್ಲಾ ಬೆಳಿಗ್ಗೆ ಆರು ಗಂಟೆಗೆಲ್ಲಾ ನಡೆದು ಹೋಗಿರುತ್ತಿತ್ತು.ತಂದೆಯವರು ಚಿನ್ನದ ಸಿಂಹಾಸನದ ಮೇಲೇರಿದರೆ ಕಿರಿಯ ಸಹೋದರ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಬೆಳ್ಳಿ ಆಸನದಲ್ಲಿ ಕೂರುತ್ತಿದ್ದರು. ಇಬ್ಬರನ್ನೂ ಒಟ್ಟಿಗೆ ನೋಡುವುದೇ ಒಂದು ಖುಷಿಯ ಸಂಗತಿಯಾಗಿತ್ತು. ಇಬ್ಬರಿಗೂ ರಾಜ ಮರ್ಯಾದೆ ಸಲ್ಲುತ್ತಿತ್ತು. ತಂದೆಯವರ ದರ್ಬಾರ್ ಅನ್ನು ಒಂದು ದಶಕಕ್ಕೂ ಹೆಚ್ಚು ಕಾಲ ನೋಡಿದ್ದೇನೆ.ದರ್ಬಾರ್ ಹಾಲಿನ ಸುತ್ತಮುತ್ತ ಪ್ರತ್ಯೇಕ ಗ್ಯಾಲರಿಗಳಿರುತ್ತಿದ್ದವು. ಮಹಿಳೆಯರು, ಮಕ್ಕಳು, ಅರಸು ಸಮುದಾಯ, ಅರಸೇತರ ಸಮುದಾಯ ಹೀಗೆ ಪ್ರತ್ಯೇಕ ಕೊಠಡಿಗಳಿದ್ದವು. ನಾವು ಕೂರುತ್ತಿದ್ದ `ಎ~ ಗ್ಯಾಲರಿ ಸಿಂಹಾಸನಕ್ಕೆ ತೀರಾ ಸಮೀಪದಲ್ಲಿತ್ತು. ಅಲ್ಲಿ ಹೆಣ್ಣು ಗಂಡು ಇಬ್ಬರೂ ಒಟ್ಟಿಗೆ ಕುಳಿತು ದರ್ಬಾರ್ ವೀಕ್ಷಿಸಬಹುದಿತ್ತು.ನಮ್ಮನ್ನೆಲ್ಲ ಬಹಳಷ್ಟು ಜನ ಕಾಡುತ್ತಿದ್ದುದು ಪಾಸ್‌ಗಾಗಿ. `ದರ್ಬಾರ್ ನೊಡಲು ಪಾಸು ಕೊಡಿಸಿ~ ಎಂಬುದು ಅವರ ಮನವಿ. ಪಾಸುಗಳೇನೋ ಸಿಗುತ್ತಿದ್ದವು. ಆದರೆ ಒಂದೇ ಒಂದು ನಿಯಮ. ಗಂಡಸರು ಉದ್ದನೆ ಕೋಟು ತೊಟ್ಟು ದರ್ಬಾರ್ ಹಾಲ್ ಪ್ರವೇಶಿಸಬೇಕು. ದಸರೆ ನಡೆಯುವಾಗ ಅರಮನೆಯ ನನ್ನ ಇಷ್ಟದ ತಾಣವೆಂದರೆ ಕಲ್ಯಾಣ ಮಂಟಪ. ಅದರಷ್ಟು ಸಿಂಗಾರಗೊಂಡ ತಾಣ ಇನ್ನೊಂದಿರಲಿಲ್ಲ. ನಾವು ಅಲ್ಲೆಲ್ಲಾ ಆಟವಾಡಿದ ನೆನಪು.

ನೆಲದ ಮೇಲೆ ಊಟ...

ದಸರೆಗೆಂದೇ ಬಹಳ ವಿಶೇಷವಾದ ಊಟ ತಯಾರಾಗುತ್ತಿತ್ತು. ಆಮಂತ್ರಿತರಾದ ಎಲ್ಲರೂ ಊಟ ಸವಿಯಲೇ ಬೇಕಿತ್ತು. ಮೈಸೂರು ಶೈಲಿಯ ಭಕ್ಷ್ಯ ಭೋಜನಗಳಿಗೆ ಹೆಚ್ಚಿನ ಆದ್ಯತೆ.  ಅರಮನೆಯ ಸಿಬ್ಬಂದಿ ಜತೆಗೆ ಹೊರಗಿನ ಅಡುಗೆಯವರು ಕೂಡ ಭೋಜನ ತಯಾರಿಸುತ್ತಿದ್ದರು.ಇಲ್ಲಿಯೂ ಅಷ್ಟೇ, ದೊಡ್ಡ ಊಟದ ಮನೆ ಹಾಗೂ ಚಿಕ್ಕ ಊಟದ ಮನೆ ಎಂಬ ಎರಡು ವಿಭಾಗಗಳಿದ್ದವು. ಒಂದು ರಾಜಪರಿವಾರಕ್ಕೆ ಮತ್ತೊಂದು ಅತಿಥಿಗಳಿಗೆ. ತರಹೇವಾರಿ ಸಿಹಿ ಪದಾರ್ಥಗಳು ಹಾಗೂ ವಿವಿಧ ಬಗೆಯ ಅನ್ನ ಬಡಿಸಲಾಗುತ್ತಿತ್ತು.ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಅಪ್ಪ ಅಮ್ಮ ಇಬ್ಬರಿಗೂ ಚಿನ್ನದ ತಟ್ಟೆಯಲ್ಲಿ ಊಟ. ಆದರೆ ಕುಟುಂಬದ ಎಲ್ಲರೂ ನೆಲದ ಮೇಲೆ ಕುಳಿತು ಭೋಜನ ಸ್ವೀಕರಿಸುತ್ತಿದ್ದೆವು. ಇವೆರಡೂ ಭೋಜನಾಲಯಗಳು ತುಂಬಿದರೆ ಗಗನ ಮಾಳಿಗೆಯಲ್ಲಿ ಊಟಕ್ಕೆ ಏರ್ಪಾಟು ಮಾಡಲಾಗುತ್ತಿತ್ತು.ಅಜ್ಜನ ದಸರೆಯನ್ನು ನಾನು ನೋಡಲಿಲ್ಲ. ನಾನು ಹುಟ್ಟುವ ವೇಳೆಗೆ ಅವರು ಇಲ್ಲವಾಗಿದ್ದರು. ಆದರೆ ಅಪ್ಪನ ದಸರೆಯನ್ನು ಕಣ್ತುಂಬಿಕೊಂಡಿದ್ದೇನೆ. ಅವರು ಆರು ಅಡಿ ಎತ್ತರ ಇದ್ದರು. ಆಜಾನುಬಾಹು. ಪಟ್ಟದಾನೆಯೇರಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗೆಲ್ಲಾ ನನಗೂ ಅವರ ಬಳಿಗೆ ತೆರಳುವ ಆಸೆ. ಆದರೆ ಅಪ್ಪ ದೂರದಲ್ಲಿ ಇರುತ್ತಿದ್ದುದರಿಂದ ನನ್ನ ಆಸೆಗಳಿಗೆ ಕಡಿವಾಣ ಬೀಳುತ್ತಿತ್ತು.

ಮೂರು ಕಾಲಿನ ರಂಗ

ಪೂಜೆಯಾದ ಬಳಿಕ ತಂದೆಯವರ ತಲೆಮೇಲೆ ಪಟ್ಟದಾನೆ ಹೂಗಳನ್ನು ಹಾಕುತ್ತಿತ್ತು. ಇದಕ್ಕಾಗಿ ದಸರೆಗೂ ಮುನ್ನ ಮಾವುತರಿಂದ ವಿಶೇಷ ತಯಾರಿ. ಒಂದು ಮರದ ಪೆಟ್ಟಿಗೆಯ ಮೇಲೆ ಕಾಲೂರಿ ಪಟ್ಟದಾನೆ ಸೊಂಡಿಲಿನಿಂದ ಹೂಗಳನ್ನು ಎತ್ತಿ ಎದುರಿದ್ದವರಿಗೆ ಹಾಕುತ್ತಿತ್ತು. ಅದನ್ನು ನೋಡಲು ನಾವು ದಿನವೂ ಹಪಹಪಿಸುತ್ತಿದ್ದೆವು. ತಂದೆಯವರಿದ್ದಾಗ ಘನ ಗಂಭೀರವಾಗಿರುತ್ತಿದ್ದ ಆ ದೃಶ್ಯ ಅಂಥ ಹೊತ್ತಿನಲ್ಲಿ ಮಾತ್ರ ತಮಾಷೆಯಾಗಿ ತೋರುತ್ತಿತ್ತು.   ಇನ್ನು ಅರಮನೆಯ ನರ್ತಿಸುವ ಕುದುರೆಗಳ ಬಗ್ಗೆ ಹೇಳಲೇ ಬೇಕು. ಅಪ್ಪ ಬಿಳಿ ಇಂಗ್ಲಿಷ್ ಕುದುರೆಗಳನ್ನು ತರಿಸಿದ್ದರು. ಅವುಗಳಲ್ಲಿ ಕೆಲವಕ್ಕೆ ನೃತ್ಯದ ತರಬೇತಿ ನೀಡಲಾಗಿತ್ತು. ಕಾಲೆತ್ತಿ ಲಯಬದ್ಧವಾಗಿ ಅವು ಕುಣಿಯುತ್ತಿದ್ದ ರೀತಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪ ಸದಾ `ಡ್ರಮ್ಮರ್~ ಹಾಗೂ `ಗೋಲ್ಡನ್ ಕ್ರೆಸ್ಟ್~ ಹೆಸರಿನ ಕುದುರೆಗಳ ಏರುತ್ತಿದ್ದರು. ಎರಡರ ಮೇಲೂ ಅವರಿಗೆ ಅತೀವ ಮಮತೆ. ಡ್ರಮ್ಮರ್ ಎಂದರೆ ವಿಶೇಷ ಪ್ರೀತಿ. ಅಪ್ಪಟ ಬಿಳಿ ಕುದುರೆ ಅದು.ಎರಡಕ್ಕೂ ವಯಸ್ಸಾಗುತ್ತಾ ಬಂತು. ಕಡೆಗೆ ಅವುಗಳನ್ನು ಏರುವುದು ಬಿಟ್ಟರು. ದಸರೆಯ ಧಾರ್ಮಿಕ ಕೆಲಸಗಳಿಗೆ ಪಲ್ಲಕ್ಕಿ ಬಳಸುತ್ತಿದ್ದರು. ಮುಂದೆಂದೂ ಅವರು ಬಿಳಿ ಕುದುರೆ ಏರಿದ್ದನ್ನು ನಾನು ನೋಡಲಿಲ್ಲ. ದೊಡ್ಡವಳಾದ ಮೇಲೆ ನಾನು ಕುದುರೆ ಸವಾರಿ ಕಲಿತೆ. ಅಪ್ಪನಂತೆಯೇ ಕುದುರೆ ಓಡಿಸಿದೆ ಎನ್ನುವುದು ಹೆಮ್ಮೆಯ ಸಂಗತಿ.`ಕಾಯೌ ಶ್ರೀಗೌರಿ....~ ಮೈಸೂರು ಸಂಸ್ಥಾನದ ನಾಡಗೀತೆಯಾಗಿತ್ತು. ಅರಮನೆಯ ಎದುರು ನಾಡಗೀತೆ ಹಾಡಿದ ನಂತರ ಮಹಾರಾಜರು ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆಗ ಪಟ್ಟದಾನೆಯಾಗಿ ಮೆರೆಯುತ್ತಿದ್ದುದು `ಬಿಳಿಗಿರಿ ರಂಗ~ ಎಂಬ ಆನೆ. ಗಜಗಾತ್ರ ಎಂದರೆ ಇದೇ ಎಂಬಂತಿತ್ತು ಅದರ ದೊಡ್ಡ ಆಕಾರ.ಸೆಪ್ಟೆಂಬರ್- ಅಕ್ಟೋಬರ್ ಮಾಸ ಆನೆಗಳಿಗೆ ಮಸ್ತಿ ಬರುವ ಸಮಯವಂತೆ. ಆದರೆ ಬಿಳಿಗಿರಿ ರಂಗ ಮಾತ್ರ ಎಷ್ಟೇ ಮಸ್ತಿ ಬಂದರೂ ದಸರೆ ಮುಗಿಯುವವರೆಗೆ ಒಂಚೂರೂ ಗದ್ದಲ ಮಾಡುತ್ತಿರಲಿಲ್ಲ. ಆಗ ಆನೆಗಳನ್ನು ಆನೆ ಶಿಬಿರಗಳಿಂದ ಕರೆತರುತ್ತಿರಲಿಲ್ಲ. ಮೃಗಾಲಯದ ಅಕ್ಕಪಕ್ಕದಲ್ಲಿಯೇ ಅವುಗಳ ಕರೋಟಿ ಇರುತ್ತಿತ್ತು.

 

ಪಟ್ಟದಾನೆಗೆ ಮಾತ್ರ ಪ್ರತ್ಯೇಕ ಕರೋಟಿ. ಒಮ್ಮೆ ರಂಗನಿಗೆ ಕಾಲು ನೋವಾಗಿದೆ. ಯಾಕೆಂದು ಗೊತ್ತಿಲ್ಲ. ಗಂಟೆಗಟ್ಟಲೆಯವರೆಗೆ ಅಂಬಾರಿ ಹೊತ್ತು ಮೂರು ಕಾಲಿನಲ್ಲೇ ನಿಂತಿತ್ತು. ಆ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೆ. ಎಷ್ಟೇ ದಣಿವಾದರೂ ಅದು ತೋರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೂ ಹಿಂದೆ `ಐರಾವತ~ ಎಂಬ ಆನೆಯಿತ್ತು. ಆದರೆ ಅದು ರಂಗನಷ್ಟು ಸಾಧುವಲ್ಲವಂತೆ.ಆನೆಗಳಿಗೆ ಬಣ್ಣ ಹಾಕುವುದನ್ನು ನೋಡುವುದೆಂದರೆ ನನಗೆ ಬಲುಪ್ರೀತಿ. ಅದನ್ನು ಬಹಳ ಹೊತ್ತು ನೋಡುತ್ತಿದ್ದುದುಂಟು. ಆನೆಗಳ ಘೀಳು, ಮಾವುತರ ಮಾಂತ್ರಿಕ ಭಾಷೆ ಅಬ್ಬಬ್ಬಾ ಅದೊಂದು ನಿಜವಾದ ಬಣ್ಣದ ಲೋಕವೇ ಸರಿ.

ದಸರೆಯಲ್ಲ, ದೀಪಾವಳಿ!

ಎಲ್ಲರಿಗೂ ದೀಪಾವಳಿ ಬೆಳಕಿನ ಹಬ್ಬ. ಆದರೆ ನಮಗೆ ಅದರ ಝಲಕ್ ದಸರೆಯಲ್ಲಿಯೇ ದೊರೆಯುತ್ತಿತ್ತು. ಹಣತೆಗಳ ಉಟ್ಟಂತೆ ಇಡೀ ಅರಮನೆಗೆ ದೀಪಾಲಂಕಾರ. ಅರಮನೆಯ ಹೊರಾಂಗಣಕ್ಕೆ ಕೆಂಪು, ಹಳದಿ, ನೀಲಿ ಹಸಿರು ಹೀಗೆ ತರಹೇವಾರಿ ಬಣ್ಣಗಳು. ಇನ್ನು ಬನ್ನಿ ಪೂಜೆ ನಡೆದ ನಂತರದ ಪಂಜಿನ ಕವಾಯಿತಿನಲ್ಲಿ ಬೆಳಕಿನ ಓಕುಳಿಯೇ ನಡೆಯುತ್ತಿತ್ತು.

 

ನಾವು ಬನ್ನಿಮಂಟಪಕ್ಕೆ ಕಾರಿನಲ್ಲಿ ತೆರಳುತ್ತಿದ್ದೆವು. ಸುತ್ತಲೂ ಜನವೋ ಜನ. ಮನೆಗಳ ಮೇಲೆ, ಮರಗಳ ಮೇಲೆ ಎಲ್ಲೆಲ್ಲೂ ಜನ. ನಮ್ಮ ತಂದೆಯವರು ಬಂದ ನಂತರವಷ್ಟೇ ಎಲ್ಲಾ ಪಂಜುಗಳು ಹೊತ್ತಿಕೊಳ್ಳುತ್ತಿದ್ದವು. ಕವಾಯಿತಿನಲ್ಲಿ ತೆರಳಿ ಅವರು ಗೌರವ ರಕ್ಷೆ ಸ್ವೀಕರಿಸುತ್ತಿದ್ದರು. ಹೀಗೆ ಮಹಾರಾಜರು ಒಂದು ಸುತ್ತು ಬರಲು ಕನಿಷ್ಠ 30 ನಿಮಿಷ ಹಿಡಿಯುತ್ತಿತ್ತು. ಅಶ್ವದಳ, ಅಂಗರಕ್ಷಕರು, ಜಿಲ್ಲೋಗಳು, ಸ್ಕೌಟ್ ಹಾಗೂ ಗೈಡ್ಸ್, ಎನ್‌ಸಿಸಿ ತುಕಡಿಗಳು ಕವಾಯಿತಿನಲ್ಲಿ ಇರುತ್ತಿದ್ದವು.ತಂದೆಯವರಿಗೆ ಬ್ಯಾಡ್ಮಿಂಟನ್ ಎಂದರೆ ಬಹಳ ಇಷ್ಟ. ತಮ್ಮ ಶ್ರೀಕಂಠ ಅವರಿಗೆ ಕ್ರಿಕೆಟ್ ಇಷ್ಟ. ಆದರೆ ದಸರೆ ಸಮಯದಲ್ಲಿ ಅವೆಲ್ಲಕ್ಕೂ ತಿಲಾಂಜಲಿ. ಇಬ್ಬರನ್ನೂ ಕಾಣಲು ಬಹಳಷ್ಟು ಜನ ಬರುತ್ತಿದ್ದರು. ಅವರಿಗೆ ತುಸು ಸುಧಾರಿಸಿಕೊಳ್ಳಲೂ ಸಮಯ ಇರುತ್ತಿರಲಿಲ್ಲ. ಹಬ್ಬಕ್ಕೆಂದು ಬನಾರಸ್, ಮೈಸೂರು, ಬೆಂಗಳೂರಿನಲ್ಲಿ ಬಟ್ಟೆಗಳನ್ನು ಖರೀದಿಸಲಾಗುತ್ತಿತ್ತು.ಎಲ್ಲರಿಗೂ ಹೊಸ ಬಟ್ಟೆ. ಅಷ್ಟೇ ಅಲ್ಲ, ಅನೇಕ ಕುಶಲಕರ್ಮಿಗಳಿಗೂ ಆಗ ಹಬ್ಬ. ನಮ್ಮ ಒಡವೆಗಳು ಸವೆದಿದ್ದರೆ, ಹೊಸ ಚಪ್ಪಲಿ ಬೇಕಿದ್ದರೆ ಅವುಗಳನ್ನು ಪೂರೈಸುತ್ತಿದ್ದುದು ಇಂಥ ಕುಶಲ ಕೆಲಸಗಾರರೇ.ಅಪ್ಪನ ಹಬ್ಬ...

ನವರಾತ್ರಿಯ ಏಳನೇ ದಿನ ಕಾಳರಾತ್ರಿ ಆಚರಿಸಲಾಗುತ್ತಿತ್ತು. ಅರಮನೆಯ ಕನ್ನಡಿ ತೊಟ್ಟಿ ಅದಕ್ಕೆ ಮೀಸಲಿಟ್ಟ ಜಾಗ. ಚಾಮುಂಡೇಶ್ವರಿ ಮಹಿಷನನ್ನು ಕೊಂದಳು ಎಂಬುದನ್ನು ಬಿಂಬಿಸಲು ಈ ಆಚರಣೆ ನಡೆಯುತ್ತಿತ್ತು. ತ್ರಿಶೂಲದಲ್ಲಿ ಚಾಮುಂಡಿ ಕೋಣದ ಕತ್ತನ್ನು ಕತ್ತರಿಸುತ್ತಿದ್ದಳು.ಅರ್ಥಾತ್ ಚಾಮುಂಡಿ ಪ್ರತಿಮೆ ಕಡೆಯಿಂದ ಭೂಕುಂಡದಂಥ ಪಟಾಕಿಯೊಂದು ಸಿಡಿಯುತ್ತಿತ್ತು. ಅದು ಅನತಿ ದೂರದಲ್ಲಿದ್ದ ಕೋಣನ ಪ್ರತಿಮೆಗೆ ತಾಗಿದೊಡನೆ ಅದರ ಕತ್ತು ಕತ್ತರಿಸಿ ಹೋಗುತ್ತಿತ್ತು. ಪ್ರತಿಮೆಯೊಳಗೆ ಮೊದಲೇ ಇಡಲಾಗಿದ್ದ ಮಹಿಷನ ಗೊಂಬೆಗೆ ನೀರು ಸಿಂಪಡಿಸುವುದರೊಂದಿಗೆ ಮರ್ದನ ಕಾರ್ಯ ಪೂರ್ಣಗೊಳ್ಳುತ್ತಿತ್ತು.ಚಿಕ್ಕಂದಿನಲ್ಲಿ ನಮಗೆ ಇದೊಂದು ಅದ್ಭುತ ಆಟವಾಗಿ ತೋರಿದ್ದುಂಟು. ಜತೆಗೆ ರಾಮಾಯಣ ಪಠಣ, ನವಗ್ರಹ ಜಪ, ಮೃತ್ಯುಂಜಯ ಜಪ, ಚಂಡಿ ಹೋಮ- ಹೀಗೆ ವೈವಿಧ್ಯಮಯ ಆಚರಣೆಗಳು ನಡೆಯುತ್ತಿದ್ದವು. ಎಲ್ಲರೂ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ನಾವೂ ಅದಕ್ಕೆ ಹೊರತಾಗಿರಲಿಲ್ಲ.ಈಗಲೂ ನನಗೆ ದಸರೆಯೆಂದರೆ ಅಪ್ಪನ ನೆನಪು. ಅವರು ನನ್ನನ್ನು `ಮಿನೀ ಪುಟ್~ (minee putt) ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆ ಹೆಸರು ಏಕೆ ಬಂತು, ಹೇಗೆ ಬಂತು ಎನ್ನುವುದು ಗೊತ್ತಿಲ್ಲ. ಅವರನ್ನು ನಾನು `ಡ್ಯಾಡಿ~ ಎನ್ನುತ್ತಿದ್ದೆ. ಕನ್ನಡ, ಇಂಗ್ಲಿಷ್ ಎರಡರಲ್ಲೂ ನಾವು ಮಾತನಾಡುತ್ತಿದ್ದೆವು. ಒಮ್ಮಮ್ಮೆ ದಸರೆ ವೇಳೆ ತಂದೆಯವರು ಉಡುಗೊರೆಗಳನ್ನು ನಮಗೆ ಕೊಡುತ್ತಿದ್ದುದುಂಟು.ಬೆಂಗಳೂರಿನಲ್ಲಿರುವ ನನ್ನ ಒಬ್ಬ ಮೊಮ್ಮಗಳಿಗೆ ಐದರ ಪ್ರಾಯ. ಮತ್ತೊಬ್ಬಳಿಗೆ ಒಂದೂವರೆ ವರ್ಷ. ಒಬ್ಬಾಕೆಗೆ ನಾಡಹಬ್ಬದ ಬಗ್ಗೆ ಸ್ವಲ್ಪ ಸ್ವಲ್ಪ ಗೊತ್ತು. ಮತ್ತೊಬ್ಬಳಿಗೆ ಇದೇ ಮೊದಲ ದಸರೆ. ಅವರಿಗೆ ಚಾಮುಂಡಿ, ಮಹಿಷನ ಕತೆ ಹೇಳುತ್ತೇನೆ. ಈಗಲೂ ಒಂದೇ ಒಂದು ಸಲ `ಅಪ್ಪನ ದಸರೆ~ ಬರಬೇಕು, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಆ ವೈಭವದ ದಿನಗಳನ್ನು ತೋರಿಸಬೇಕು ಅನ್ನಿಸುವುದುಂಟು.ಚಹಾದ ಜೋಡಿ...

ನನಗಂತೂ ದಸರೆಯೆಂದರೆ ಉದ್ವೇಗ, ಖುಷಿ ಹಾಗೂ ಮೋಜಿನ ಹಬ್ಬ. ಅರಮನೆ ಜೀವಗೊಳ್ಳುತ್ತಿದ್ದುದೇ ಸಂಜೆಯ ಹೊತ್ತು. ದರ್ಬಾರಿನ ಪ್ರತಿ ಕಾರ್ಯಕ್ರಮವನ್ನು ಬಿಡದಂತೆ ನೋಡುತ್ತಿದ್ದೆ. ಪಟ್ಟದಾನೆ `ಹಂಸರಾಜ~ ಗಾಂಭೀರ್ಯ ಬೆರೆತ ಸೌಂದರ್ಯದಿಂದ ಕಂಗೊಳಿಸುತ್ತಿತ್ತು.ಪಟ್ಟದ ಕುದುರೆ, ಹಸುವಿನೊಂದಿಗೆ ಸೋಮೇಶ್ವರ ದೇಗುಲಕ್ಕೆ ತೆರಳುತ್ತಿದ್ದ ಅಂಥ ಗಂಭೀರವಾದ ಆನೆಯನ್ನು ನಾನು ಮತ್ತೆ ನೋಡಲಿಲ್ಲ. ಹಂಸರಾಜನಿಗೆ ರೇಷ್ಮೆಯ ಚಾಮರ ಇರುತ್ತಿತ್ತು. ದರ್ಬಾರ್ ಅಂಗಳದ ಕಮಾನಿನ ಬಳಿ ಬರುತ್ತಿದ್ದಂತೆ ಆನೆಯಿಂದ ಮಹಾರಾಜರಿಗೆ ಪುಷ್ಪಾರ್ಚನೆ. ಪಟ್ಟದ ಕುದುರೆ ಮುಂಗಾಲುಗಳನ್ನು ಬಾಗಿಸಿ ನಮನ ಸಲ್ಲಿಸುತ್ತಿತ್ತು.ಕಣ್ಮುಚ್ಚಿ ಧ್ಯಾನಿಸಿದಂತೆಲ್ಲಾ ಅಂದಿನ ದಸರೆ ಇನ್ನಷ್ಟು ನಿಚ್ಚಳವಾಗಿ ತೋರುತ್ತಿದೆ. ಸರ್ವಾಲಂಕಾರ ಭೂಷಿತವಾದ ಆನೆ, ಕುದುರೆ, ಹಸು. ಒಂಟೆಗಳು ಆಸ್ಥಾನ ಮುಂಭಾಗದ ಇಕ್ಕೆಲಗಳಲ್ಲಿ ನಿಂತಿರುತ್ತಿದ್ದವು. ಒಳಗೆ ಶಾಸ್ತ್ರೀಯ ಸಂಗೀತ ಕೇಳುತ್ತಿತ್ತು. ಎಲ್ಲವೂ ಸುಸಂಬದ್ಧ.ದಸರೆಯ ಅಚ್ಚಳಿಯದ ನೆನಪೆಂದರೆ ತಂದೆಯವರೊಂದಿಗಿನ ಚಹಾ ಸಮಯ. ಮೇಲಂತಸ್ತಿನ ಕೋಣೆಯಲ್ಲಿ ಚಹಾ ಸ್ವೀಕರಿಸುವ ಸಮಯಕ್ಕೆ ಆನೆಗಳು ಕಿಟಕಿ ಬಳಿಗೆ ಬರುತ್ತಿದ್ದವು. ನಾವು ಅವಕ್ಕೆ ತಿನ್ನಲು ಉಂಡೆ, ಕಬ್ಬು ಇತ್ಯಾದಿಗಳನ್ನೆಲ್ಲಾ ಕೊಡುತ್ತಿದ್ದೆವು. ಇದಕ್ಕಿಂತ ಒಳ್ಳೆಯ ಟೀ ಪಾರ್ಟಿ ನನ್ನ ಜೀವನದಲ್ಲಿ ಮತ್ತೆ ಸಿಗಲೇ ಇಲ್ಲ.ನನ್ನ ಅಣ್ಣ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಡೆಸುವ ಖಾಸಗಿ ದರ್ಬಾರ್ ಕೂಡ ಆಚರಣೆಯಲ್ಲಿ ಮೊದಲಿನ ದರ್ಬಾರ್‌ನಷ್ಟೇ ಶೋಭಾಯಮಾನ. ನಮಗೆಲ್ಲಾ ವಯಸ್ಸಾಗಿದ್ದರೂ ದಸರೆಯ ನೆಪ ಮಾಡಿಕೊಂಡು ಮೈಸೂರಿಗೆ ತೆರಳುವುದುಂಟು. ಸಂಭ್ರಮದಲ್ಲಿ ಪಾಲ್ಗೊಳ್ಳುವುದುಂಟು.

ಮಹಾರಾಜಕುಮಾರಿ ವಿಶಾಲಾಕ್ಷಿ ದೇವಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿಪರದೆಯಲ್ಲಿ ಕಂಡ ದರ್ಬಾರ್


`ಮೈಸೂರು ರಾಜಮನೆತನಕ್ಕೆ ದಸರೆ ಮಹತ್ವದ ಹಬ್ಬ. ಅದು ಚಾಮುಂಡೇಶ್ವರಿ ದೇವಿಯ ಆರಾಧನೆಯ ಹಬ್ಬ. ನನ್ನ ತಂದೆ ಹಾಗೂ ತಾಯಿ ಕೈಗೆ ಕಂಕಣ ತೊಟ್ಟು ವಿವಿಧ ಪೂಜೆಗಳಲ್ಲಿ ಭಾಗವಹಿಸುತ್ತಿದ್ದರು. ವಿಧಿ ವಿಧಾನದಂತೆ ಅವರು ಬೆಳಿಗ್ಗೆಯೇ ಎದ್ದು ಪೂಜಾಕಾರ್ಯದಲ್ಲಿ ತೊಡಗುತ್ತಿದ್ದರು. ನವರಾತ್ರಿಯ ಬೆಳಿಗ್ಗೆ ಹಾಗೂ ಸಂಜೆ ಅಮ್ಮ ಪೂಜೆ ಸಲ್ಲಿಸುತ್ತಿದ್ದರು.ದರ್ಬಾರ್ ನಡೆಯುವಾಗ ದರ್ಬಾರ್ ಅಂಗಳದೊಳಗೆ ಹೆಣ್ಣುಮಕ್ಕಳು ಪ್ರವೇಶಿಸಬಾರದು ಎಂಬುದು ಬಹಳ ಕಾಲದಿಂದ ನಡೆದುಕೊಂಡು ಬಂದ ನಿಯಮ. ನಾವು ಗ್ಯಾಲರಿಯಲ್ಲೇ ಕುಳಿತು ಕಿಟಕಿಗೆ ಹೊದಿಸಲಾಗಿದ್ದ ತೆಳು ಪರದೆಯ ಮೂಲಕ ದರ್ಬಾರ್ ಕ್ಷಣಗಳನ್ನು ಸವಿಯುತ್ತಿದ್ದೆವು.

 

ಅಮ್ಮ, ಅಜ್ಜಿ, ರಾಜಮನೆತನ ಹಾಗೂ ಅರಸು ಕುಟುಂಬಗಳ ಸದಸ್ಯರು ಅಲ್ಲಿರುತ್ತಿದ್ದರು. ಆಗ ಅಶ್ವದಳದವರು ನೀಡುತ್ತಿದ್ದ ವೈಭವೋಪೇತ ಪ್ರದರ್ಶನ ಈಗಲೂ ಕಣ್ಣಿಗೆ ಕಟ್ಟಿದಂತಿವೆ. ನವರಾತ್ರಿಯ ಎಲ್ಲಾ ದಿನಗಳಂದು ಅಶ್ವದಳದ ವಿವಿಧ ಕಾರ್ಯಕ್ರಮ ಇರುತ್ತಿದ್ದವು. ದರ್ಬಾರ್ ಮುಗಿದ ನಂತರ ನಮ್ಮ ತಂದೆಯವರಿಗೆ ಪಾದಪೂಜೆ ನಡೆಯುತ್ತಿತ್ತು.ತಾಯಿ, ರಾಜಮನೆತನ ಹಾಗೂ ಅರಸು ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳು ನಮ್ಮ ತಂದೆಯವರಿಗೆ ಹೂಗಳನ್ನು ಅರ್ಪಿಸುತ್ತಿದ್ದೆವು.

ಮಹಾರಾಜಕುಮಾರಿ ಕಾಮಾಕ್ಷಿ ದೇವಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ನಾಲ್ಕನೇ ಪುತ್ರಿಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry