ಮಂಗಳವಾರ, ಮಾರ್ಚ್ 9, 2021
18 °C

ದೋಆ

ಮೂಲ: ಮೆಲಿಸ್ಸ ಫ್ಲೆಮಿಂಗ್‍,ಕನ್ನಡಕ್ಕೆ: ಹೇಮಾ ಎಸ್‌. Updated:

ಅಕ್ಷರ ಗಾತ್ರ : | |

ದೋಆ

ವಿಶ್ವಸಂಸ್ಥೆಯ ‘ಹೈ ಕಮಿಷನ್‍ ಫಾರ್‍ ರೆಫ್ಯುಜೀಸ್‌’ನ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಮೆಲಿಸ್ಸ ಫ್ಲೆಮಿಂಗ್‍, ನಿರಾಶ್ರಿತರ ಬದುಕಿನ ವಿವಿಧ ಮುಖಗಳ ಪರಿಚಯವನ್ನು ಜಗತ್ತಿಗೆ ತೆರೆದಿಡುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಸಿರಿಯಾ ದೇಶದ ನಿರಾಶ್ರಿತರು ಅಪಾಯಕಾರಿ ಮೆಡಿಟರೇನಿಯನ್‍ ಸಮುದ್ರವನ್ನು ದಾಟಿ ಯುರೋಪಿಗೆ ವಲಸೆ ಹೋಗಲು ಯತ್ನಿಸಿ ದುರ್ಮರಣಕ್ಕೆ ಒಳಗಾಗುತ್ತಿರುವುದನ್ನು, ದೋಹಾ ಎನ್ನುವ ತರುಣಿಯ ಹಿನ್ನೆಲೆಯಲ್ಲಿ ನಿರೂಪಿಸುವ ಈ ಬರಹ, ಕಾನೂನು ಹಾಗೂ ಮಾನವೀಯತೆಗೆ ಸಂಬಂಧಿಸಿದಂತೆ ಹಲವು ಮಾರ್ಮಿಕ ಪ್ರಶ್ನೆಗಳನ್ನು ಎತ್ತುತ್ತದೆ.ತಮ್ಮ ಜೀವ ಉಳಿಸಿಕೊಳ್ಳಲು ಪ್ರತಿದಿನ ಅಸುರಕ್ಷಿತ ಗಡಿಗಳನ್ನು ಹಾಗೂ ಸಮುದ್ರವನ್ನು ದಾಟಿ ಇತರ ದೇಶಗಳಿಗೆ ಪಲಾಯನಕ್ಕೆ ಯತ್ನಿಸುವ ಜನರ ನಡುಕ ಹುಟ್ಟಿಸುವಂತಹ ಕತೆಗಳನ್ನ ನಾನು ಪ್ರತಿನಿತ್ಯ ಕೇಳುತ್ತಿರುತ್ತೇನೆ. ಅಂತಹ ಕತೆಗಳಲ್ಲಿ ಒಂದು ರಾತ್ರಿ ನಿದ್ದೆಯಲ್ಲಿ ನೆನಪಾದರೂ ನನ್ನನ್ನು ಬೆಚ್ಚಿಬೀಳಿಸುತ್ತದೆ. ಅದು ದೋಆಳ ಕತೆ.

ಹತ್ತೊಂಬತ್ತು ವರ್ಷದ ದೋಆ ಸಿರಿಯನ್‍ ನಿರಾಶ್ರಿತೆ. ಈಜಿಪ್ಟ್‌ನ ಉಸಿರುಗಟ್ಟಿಸುವ ವಾತಾವರಣದಲ್ಲಿ ದಿನಗೂಲಿಗಳಾಗಿ ಬದುಕು ಸಾಗಿಸುತ್ತಿದ್ದವರಲ್ಲಿ ಆಕೆಯೂ ಒಬ್ಬಳು. ಆಕೆಯ ತಂದೆ ಹೇಗಾದರೂ ಸಿರಿಯಾಗೆ ಮರಳಿ ಮತ್ತೆ ತಮ್ಮ ವ್ಯಾಪಾರ ಶುರುಮಾಡುವುದರ ಬಗ್ಗೆ ಯೋಚಿಸುತ್ತಿದ್ದ. ಬಾಂಬಿನ ದಾಳಿಗೆ ತುತ್ತಾಗಿ ಅವರ ವ್ಯಾಪಾರ ಧೂಳೀಪಟವಾಗಿತ್ತು. ಅವರನ್ನು ಈಜಿಪ್ಟಿನ ನಿರಾಶ್ರಿತ ಶಿಬಿರಗಳಿಗೆ ತಳ್ಳಿದ ಯುದ್ಧ ನಾಲ್ಕು ವರ್ಷವಾದರೂ ನಿಂತಿರಲಿಲ್ಲ. ನಿರಾಶ್ರಿತರಾಗಿ ಬಂದಾಗ ಸ್ವಾಗತಿಸಿದ್ದ ಈಜಿಪ್ಟ್‍ ಸಮುದಾಯ ಈಗ ಇವರ ಬಗ್ಗೆ ಅಸಹನೆ ತೋರಲಾರಂಭಿಸಿತು. ಒಮ್ಮೆ ದೋಆಳನ್ನು ಮೋಟಾರು ಸೈಕಲ್‌ನಲ್ಲಿ ಬಂದ ಕೆಲವರು ಅಪಹರಿಸಲು ಯತ್ನಿಸಿದ್ದರು. ಒಂದು ಕಾಲದಲ್ಲಿ ಓದುವ ಅದಮ್ಯ ಆಸೆ ಕನಸುಗಳನ್ನು ಹೊತ್ತಿದ್ದ ಹುಡುಗಿ ಈಗ ಪ್ರತಿಕ್ಷಣ ಭಯದ ನೆರಳಲ್ಲಿ ಬದುಕು ಸಾಗಿಸುವಂತಾಗಿತ್ತು.ಆದರೂ ಅವಳಲ್ಲಿ ಬದುಕುವ ಭರವಸೆಯಿತ್ತು. ಆಕೆ ತಮ್ಮೊಂದಿಗಿದ್ದ ಸಿರಿಯನ್‍ ನಿರಾಶ್ರಿತ ಬಾಸೆಮ್‍ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಕೂಡ ಈಜಿಪ್ಟಿನಲ್ಲಿ ಇವರ ಹಾಗೆ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದ. ಆತ ದೋಆಳಿಗೆ– “ನಾವು ಹೇಗಾದರೂ ಮಾಡಿ ಯುರೋಪಿಗೆ ತಪ್ಪಿಸಿಕೊಂಡು ಹೋಗಿ ಅಲ್ಲಿ ಆಶ್ರಯ ಪಡೆಯೋಣ. ನಾನು ಕೆಲಸ ಮಾಡ್ತೀನಿ. ನೀನು ಓದಬಹುದು. ನಮ್ಮ ಹೊಸ ಜೀವನವನ್ನು ಅಲ್ಲಿ ಕಟ್ಟಿಕೊಳ್ಳೋಣ” ಎಂದು ಹೇಳಿದ. ದೋಆಳ ತಂದೆಯ ಹತ್ತಿರ ಮದುವೆಯ ಪ್ರಸ್ತಾಪವನ್ನೂ ಮಾಡಿದ.ಅವರಿಗೆ ಗೊತ್ತಿತ್ತು– ಯುರೋಪ್‌ಗೆ ಹೋಗುವುದೆಂದರೆ ತಮ್ಮ ಪ್ರಾಣಗಳನ್ನು ಮೆಡಿಟರೇನಿಯನ್‍ ಸಮುದ್ರದಲ್ಲಿ ಕಡಲುಗಳ್ಳರು, ಕಳ್ಳಸಾಗಾಣಿಕೆದಾರರ ಕೈಯಲ್ಲಿ ಒತ್ತೆಯಿಟ್ಟಂತೆ. ಈ ಕಡಲುಗಳ್ಳರ ಕ್ರೌರ್ಯ ಊಹೆಗೂ ನಿಲುಕದಂತಹದ್ದು. ದೋಆಗೆ ನೀರೆಂದರೆ ಭಯ. ಈಜಲು ಕೂಡ ಅವಳಿಗೆ ಬರುತ್ತಿರಲಿಲ್ಲ.ಆ ವರ್ಷದ ಆಗಸ್ಟಿನಲ್ಲಿ ಅಷ್ಟೊತ್ತಿಗಾಗಲೇ 2000 ಮಂದಿ ಕಡಲನ್ನು ದಾಟಿ ಹೋಗುವ ಪ್ರಯತ್ನದಲ್ಲಿ ಸಾವನ್ನಪ್ಪಿದ್ದರು. ದೋಆಳ ಸ್ನೇಹಿತೆಯೊಬ್ಬಳು ಹೇಗೋ ಇಲ್ಲಿಂದ ತಪ್ಪಿಸಿಕೊಂಡು ಉತ್ತರ ಯುರೋಪನ್ನು ಸೇರಿಕೊಂಡಿದ್ದಳು. ಹಾಗಾಗಿ ದೋಆ “ಬಹುಶಃ ನಾವು ಕೂಡ ಬಚಾವಾಗಬಹುದು” ಎಂದುಕೊಂಡಳು. ಆಕೆ ತನ್ನ ಅಪ್ಪಅಮ್ಮನೊಂದಿಗೆ ಚರ್ಚಿಸಿದಳು. ಅಳೆದೂ ಸುರಿದು ಮನಸ್ಸಿಲ್ಲದ ಮನಸ್ಸಿನಿಂದಲೇ ಅವರು ಒಪ್ಪಿಗೆ ನೀಡಿದರು. ಬಾಸೆಮ್‍ ತನ್ನ ಜೀವಮಾನದ ಉಳಿಕೆಯಿಂದ ಪ್ರತಿಯೊಬ್ಬರಿಗೂ ತಲಾ 2,500 ಡಾಲರ್‌ಗಳನ್ನು ಖರ್ಚಿನ ವೆಚ್ಚವಾಗಿ ಕಳ್ಳಸಾಗಾಣಿಕೆದಾರರ ಕೈಯಿಗಿತ್ತ.ಶನಿವಾರ ಬೆಳಗ್ಗೆ ಅವರಿಗೆ ಫೋನ್‍ ಬಂತು. ಅವರನ್ನು ಬೀಚಿಗೆ ಬಸ್ಸಿನಲ್ಲಿ ಕರೆತರಲಾಯಿತು. ಅಷ್ಟೊತ್ತಿಗಾಗಲೇ ಬೀಚಿನಲ್ಲಿ ನೂರಾರು ಜನ ಸೇರಿದ್ದರು. ಅವರೆಲ್ಲರನ್ನೂ ಸಣ್ಣಸಣ್ಣ ದೋಣಿಗಳಲ್ಲಿ ತುಂಬಿಕೊಂಡು ಹಡಗಿನ ಹತ್ತಿರ ಕರೆದೊಯ್ಯಲಾಯಿತು. ಸುಮಾರು 500 ಜನರನ್ನು ಅದರಲ್ಲಿ ತುಂಬಿದರು. 300 ಮಂದಿ ಹಡಗಿನ ಕೆಳಭಾಗದಲ್ಲಿ ಹಾಗೂ 200 ಮಂದಿ ಮೇಲ್ಭಾಗದಲ್ಲಿದ್ದರು. ಅವರಲ್ಲಿ ಸಿರಿಯನ್ನರು, ಪ್ಯಾಲೆಸ್ತೇನಿಯನ್ನರು, ಆಫ್ರಿಕನ್ನರು, ಮುಸ್ಲಿಮರು, ಕ್ರಿಶ್ಚಿಯನ್ನರು ಇದ್ದರು. ಸುಮಾರು 100 ಮಕ್ಕಳಿದ್ದರು. 6 ವರ್ಷದ ಸಾಂದ್ರ ಮತ್ತು 18 ತಿಂಗಳ ಮಾಸ ತಂತಮ್ಮ ಕುಟುಂಬದವರೊಂದಿಗೆ ಅಲ್ಲಿದ್ದರು. ದೋಆ ಕಾಲುಗಳನ್ನು ಮಡಚಿ ಎದೆಗೊತ್ತಿಕೊಂಡು ಮೈಮುದುರಿ ಕೂತಿದ್ದಳು. ಬಾಸೆಮ್‍ ಅವಳ ಕೈಹಿಡಿದಿದ್ದ.ನೀರಿನಲ್ಲಿ ಎರಡನೇ ದಿನ... ಹೊಟ್ಟೆ ತೊಳಸಲಾರಂಭಿಸಿ ವಾಂತಿಯಾಗತೊಡಗಿತು. ಅಲೆಗಳ ಏರಿಳಿತ, ಹಡಗಿನ ಕುಲುಕಾಟದಿಂದಾಗಿ ಆರೋಗ್ಯ ಹದಗೆಡತೊಡಗಿತು. ಎಲ್ಲರೂ ಚಿಂತಾಕ್ರಾಂತರಾದರು.ಮೂರನೇ ದಿನ... ದೋಆಳಿಗೆ ಯಾಕೋ ತೀವ್ರವಾಗಿ ‘ಏನೋ ಕೆಟ್ಟದಾಗುತ್ತೆ’ ಅನ್ನಿಸತೊಡಗಿತು. “ಬಾಸೆಮ್‍ ನಾವು ಗುರಿಮುಟ್ಟೋದಿಲ್ಲ ಅಂತ ಭಯವಾಗ್ತಿದೆ. ಹಡಗು ಮುಳುಗಿಹೋಗುತ್ತೆ ಅನ್ನಿಸ್ತಿದೆ” ಅಂದಳು. “ಪ್ಲೀಸ್, ಹೆದರ್ಕೋಬೇಡ. ತಾಳ್ಮೆಯಿಂದಿರು. ನಾವು ಸ್ವೀಡನ್‌ಗೆ ಹೋಗೇ ಹೋಗ್ತೀವಿ. ಅಲ್ಲಿ ನಾವು ಮದ್ವೆ ಮಾಡ್ಕೊಳ್ಳೋಣ. ಅಲ್ಲೇ ನಮ್ಮ ಭವಿಷ್ಯ ರೂಪಿಸಿಕೊಳ್ಳೋಣ” ಅಂತ ಬಾಸೆಮ್‍ ಅವಳಿಗೆ ಸಮಾಧಾನ ಮಾಡಿದ.ನಾಲ್ಕನೇ ದಿನದ ವೇಳೆಗೆ ಪ್ರಯಾಣಿಕರ ಆತಂಕ ಹೆಚ್ಚಾಗುತ್ತಲೇ ಇತ್ತು. “ನಾವು ಅಲ್ಲಿಗೆ ತಲುಪೋದು ಯಾವಾಗ?” ಅಂತ ಹಡಗಿನ ಕ್ಯಾಪ್ಟನ್‌ ಬಳಿ ಎಲ್ಲರೂ ಕೇಳತೊಡಗಿದರು. “ಬಾಯ್ಮುಚ್ಚಿಕೊಂಡಿರಿ” ಎಂದು ಗದರಿಸಿದ ಕ್ಯಾಪ್ಟನ್‍, ನಂತರ “ಇನ್ನು 16 ಗಂಟೆಗಳಲ್ಲಿ ಇಟಲಿಯ ಸಮುದ್ರ ದಂಡೆಯನ್ನು ತಲುಪ್ತೀವಿ” ಎಂದು ಹೇಳಿದ. ಅವರೆಲ್ಲ ಹಸಿವು, ನಿಶ್ಶಕ್ತಿ, ಅಸಹನೆಯಿಂದ ತಲ್ಲಣಕ್ಕೊಳಗಾಗಿದ್ದರು. ಆಗ ಸಣ್ಣ ಹಡಗೊಂದು ಇವರ ಹಡಗಿನ ಸಮೀಪಕ್ಕೆ ಬಂತು.ಅದರಲ್ಲಿದ್ದ ಸುಮಾರು 10 ಮಂದಿ, ಈ ಹಡಗಿನಲ್ಲಿ ಇದ್ದವರನ್ನ ಬೈಯಲಾರಂಭಿಸಿದರು. ಅವರನ್ನೆಲ್ಲ ದೊಡ್ಡ ಹಡಗಿನಿಂದ ಇಳಿದು ಚಿಕ್ಕಹಡಗಿಗೆ ಬರುವಂತೆ ಒತ್ತಾಯ ಮಾಡಲಾರಂಭಿಸಿದರು. ಅವರತ್ತ ಕೈಗೆ ಸಿಕ್ಕ ಕಟ್ಟಿಗೆಗಳನ್ನು ಎಸೆಯಲಾರಂಭಿಸಿದರು. ಆದರೆ ಅವರು ಹತ್ತಲು ಹೇಳುತ್ತಿದ್ದ ಹಡಗು ಅಲ್ಲಿದ್ದ ಅಷ್ಟು ಮಂದಿಗೆ ಸಾಕಾಗುತ್ತಿರಲಿಲ್ಲ. ತಮ್ಮ ಮಕ್ಕಳ ಪ್ರಾಣಕ್ಕೆ ಅಪಾಯ ಎಂದು ಅರ್ಥಮಾಡಿಕೊಂಡ ಅಪ್ಪ–ಅಮ್ಮಂದಿರು ಆ ಕಡಲ್ಗಳ್ಳರ ಮಾತನ್ನು ಒಪ್ಪದೆ ವಿರೋಧಿಸಿದರು. ಆ ಕಳ್ಳರು ಸಿಟ್ಟಿನಿಂದ ಹೊರಟುಹೋದರು. ಅರ್ಧಗಂಟೆಯ ನಂತರ ಪುನಃ ವಾಪಸ್ಸು ಬಂದವರೇ ದೋಆ ಮತ್ತು ಬಾಸೆಮ್‍ ಕುಳಿತಿದ್ದ ಕಡೆಯೇ ಹಡಗಿನ ಕೆಳಭಾಗದಲ್ಲಿ ರಂಧ್ರ ಕೊರೆಯಲಾರಂಭಿಸಿದರು. “ಮೀನುಗಳು ನಿಮ್ಮನ್ನು ತಿನ್ನಲಿ!” ಎಂದವರು ಕಿರುಚುತ್ತಿದ್ದರು. ನೋಡನೋಡುತ್ತಿದ್ದಂತೆಯೇ ಹಡಗು ಮುಳುಗತೊಡಗಿತು. ಆ ಕಳ್ಳರು ನಗಲಾರಂಭಿಸಿದರು...ಹಡಗಿನ ತಳಭಾಗದಲ್ಲಿದ್ದ 300 ಜನ ಮುಳುಗಿಹೋದರು. ದೋಆ ಮುಳುಗುತ್ತಿರುವ ಹಡಗಿನ ಒಂದು ತುದಿ ಹಿಡಿದುಕೊಂಡಿದ್ದಳು. ಹಡಗು ಮುಳುಗುತ್ತಿರುವಂತೆ ಅದರಿಂದ ಜಾರಿದ ಮಗುವೊಂದು ಹಡಗಿನ ಚಕ್ರಕ್ಕೆ ಸಿಕ್ಕು ತುಂಡುತುಂಡಾದುದನ್ನು ನೋಡಿದಳು. ಅದನ್ನು ನೋಡಿದ ಬಾಸೆಮ್‍– “ಕೈಬಿಡು, ಇಲ್ಲಾಂದ್ರೆ ನೀನೂ ಅದೇ ಚಕ್ರಕ್ಕೆ ಸಿಕ್ಕಿ ಸತ್ತುಹೋಗ್ತೀಯಾ” ಅಂದ. ದೋಆಗೆ ಈಜಲು ಬರುತ್ತಿರಲಿಲ್ಲ. ಅವಳು ಹಡಗನ್ನು ಬಿಟ್ಟ ತಕ್ಷಣ ನೀರಿಗೆ ಬಿದ್ದವಳೇ “ಈಜುವುದು ಹೀಗೆ ಇರಬಹುದು” ಎಂದುಕೊಂಡು ಕೈಕಾಲು ಬಡಿಯಲು ಶುರುಮಾಡಿದಳು.ಅಷ್ಟೊತ್ತಿಗೆ ಅದ್ಹೇಗೋ ಬಾಸೆಮ್‌ಗೆ ಮಕ್ಕಳನ್ನು ನೀರಿನಲ್ಲಿ ಆಟವಾಡಿಸಲು ಬಳಸುವ ರಿಂಗ್‍ ಒಂದು ಸಿಕ್ಕಿತು. ದೋಆ ಕೈಕಾಲುಗಳನ್ನು ಇಳಿಬಿಟ್ಟು ರಿಂಗ್‍ ಹತ್ತಿ ಕೂತಳು. ಬಾಸೆಮ್‍ ಒಳ್ಳೆಯ ಈಜುಗಾರ. ಅವಳ ಕೈಹಿಡಿದು ಈಜತೊಡಗಿದ. ಅವರ ಸುತ್ತ ಆಗಲೇ ಶವಗಳು ತೇಲುತ್ತಿದ್ದವು. ಮೊದಲಿಗೆ 100 ಮಂದಿ ಬದುಕಿಳಿದರು. ಅವರೆಲ್ಲ ಗುಂಪಾಗಿ ಈಜತೊಡಗಿ ‘ನಮ್ಮನ್ನು ಯಾರಾದರೂ ರಕ್ಷಿಸಲಿ’ ಎಂದು ಪ್ರಾರ್ಥಿಸತೊಡಗಿದರು. ದಿನ ಕಳೆದರೂ ಯಾರೂ ಬರಲಿಲ್ಲ. ನಿಧಾನವಾಗಿ ಕೆಲವರು ಭರವಸೆಯನ್ನು ಕಳೆದುಕೊಳ್ಳಲಾರಂಭಿಸಿದರು. ದೋಆ ಮತ್ತು ಬಾಸೆಮ್‍ ನೋಡನೋಡುತ್ತಿದ್ದಂತೆ ಜನ ತಾವು ಹಾಕಿಕೊಂಡಿದ್ದ ಲೈಫ್‌ಜಾಕೆಟ್‌ಗಳನ್ನು ಕಳಚಿ ನೀರಿನಲ್ಲಿ ಮುಳುಗಲಾರಂಭಿಸಿದರು.ಒಬ್ಬಾತ 9 ತಿಂಗಳ ಪುಟ್ಟ ಮಗು ಮಲೆಕ್‌ನನ್ನು ಹೆಗಲ ಮೇಲೆ ಹೊತ್ತು ಇವರ ಬಳಿ ಬಂದ. ಆತ ತೇಲುವುದಕ್ಕಾಗಿ ಗ್ಯಾಸ್‍ ಸಿಲಿಂಡರ್‍ ಒಂದನ್ನು ಆಧಾರವಾಗಿ ಹಿಡಿದಿದ್ದ. “ನಾನು ಬದುಕಲ್ಲ ಅನ್ನಿಸ್ತಿದೆ. ತುಂಬಾ ಸುಸ್ತಾಗ್ತಿದೆ. ಇನ್ನು ಸಹಿಸಲು ಧೈರ್ಯವಿಲ್ಲ” ಎಂದು ಹೇಳಿ ಮಗುವನ್ನು ದೋಆ ಮತ್ತು ಬಾಸೆಮ್‌ಗೆ ಒಪ್ಪಿಸಿದ. ಅವರು ಮಗುವನ್ನು ರಿಂಗ್‌ನಲ್ಲಿ ಕೂಡಿಸಿಕೊಂಡರು. ದೋಆ, ಬಾಸೆಮ್‍ ಮತ್ತು ಮಲೆಕ್‍ ಮತ್ತೆ ಮುಂದೆ ಸಾಗತೊಡಗಿದರು.ಕತೆ ಮುಂದೇನಾಯ್ತು ಅಂತ ಹೇಳೋಕೆ ಮುಂಚೆ ಒಂದು ಚಿಕ್ಕ ಬ್ರೇಕ್‍ ತೊಗೋತೇನೆ. ಒಂದು ಪ್ರಶ್ನೆ ಕೇಳ್ಬೇಕು ಅನ್ನಿಸ್ತಿದೆ: ದೋಆಳಂತಹ ನಿರಾಶ್ರಿತರು ಇಂತಹ ಆಪತ್ಕಾರಿ ನಿಲುವುಗಳನ್ನು ಯಾಕೆ ತೆಗೆದುಕೊಳ್ಳುತ್ತಾರೆ? ಲಕ್ಷಾಂತರ ನಿರಾಶ್ರಿತರು ಗಡೀಪಾರಾಗಿದ್ದಾರೆ, ಸೆರೆಯಾಳಾಗಿ ಬಂಧನದಲ್ಲಿದ್ದಾರೆ. ನಾಲ್ಕು ವರ್ಷಗಳಿಂದ ಸತತವಾಗಿ ಯುದ್ಧ ನಡೆಯುತ್ತಿರುವ ದೇಶಗಳಿಂದ ಗಡೀಪಾರಾಗಿ ಜನ ವಾಸಿಸುತ್ತಿದ್ದಾರೆ. ಅವರು ವಾಪಸ್ಸು ತಮ್ಮ ದೇಶಕ್ಕೆ ಹೋಗಬೇಕು ಅಂದುಕೊಂಡರೂ ಅದು ಸಾಧ್ಯವಿಲ್ಲ. ಅವರ ಮನೆಗಳು, ಅವರ ವ್ಯಾಪಾರಗಳು, ಅವರ ನಗರ, ಅವರ ಊರು ಎಲ್ಲವೂ ಸಂಪೂರ್ಣವಾಗಿ ನಾಶವಾಗಿವೆ.ವಿಶ್ವಪರಂಪರೆಯ ಸ್ಮಾರಕ ಎಂದು ‘ಯುನೆಸ್ಕೋ’ ಗುರುತಿಸಿರುವ ಸಿರಿಯಾದ ಹೊಮ್ಸ್‍ ನಗರದ ಕತೆ ಕೂಡ ಇದೇ. ಜನ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ನಾವು ಅವರಿಗೆ ನಿರಾಶ್ರಿತ ಶಿಬಿರಗಳನ್ನ ಮರುಭೂಮಿಯಲ್ಲಿ ಕಟ್ಟುತ್ತಿದ್ದೇವೆ. ಸಾವಿರಾರು ಜನ ಈ ಕ್ಯಾಂಪುಗಳಲ್ಲಿ ವಾಸಮಾಡ್ತಿದಾರೆ. ಒಂದು ಕಾಲಕ್ಕೆ ನಿರಾಶ್ರಿತರನ್ನು ಪ್ರೀತಿಯಿಂದ ಬರಮಾಡಿಕೊಂಡ ಸಮುದಾಯಗಳ ಮತ್ತು ನೆರೆಹೊರೆ ರಾಷ್ಟ್ರಗಳ ಸ್ಥೈರ್ಯವನ್ನು ಮೆಚ್ಚಬೇಕು. ಆದರೆ ಅಲ್ಲಿ ಇಷ್ಟು ಮಂದಿಗೆ ಸಾಕಾಗುವಷ್ಟು ಶಾಲೆಗಳಾಗಲಿ, ನೀರು ಮತ್ತು ಒಳಚರಂಡಿ ವ್ಯವಸ್ಥೆಯಾಗಲಿ ಇಲ್ಲ.ಯುರೋಪಿನಂತಹ ಶ್ರೀಮಂತ ದೇಶಗಳು ಕೂಡ ಮಿಲಿಯನ್‌ಗಟ್ಟಲೆ ಜನರನ್ನು ಭಾರಿ ಮೊತ್ತದ ಹೂಡಿಕೆಯನ್ನು ಹೂಡದೆ ನಿರ್ವಹಿಸುವುದು ಸಾಧ್ಯವಿಲ್ಲ. ಸಿರಿಯಾ ಯುದ್ಧವು ಸುಮಾರು ೪0 ಲಕ್ಷ ಜನರನ್ನು ಗಡೀಪಾರು ಮಾಡಿದೆ. ಈ ನಿರಾಶ್ರಿತರಿಗೆ ಆಶ್ರಯ ನೀಡಿರುವ ದೇಶಗಳು ಶ್ರೀಮಂತ ರಾಷ್ಟ್ರಗಳು ತಮಗೆ ನೀಡುತ್ತಿರುವ ನೆರವು ಅತ್ಯಲ್ಪ ಎಂದುಕೊಂಡಿವೆ. ನಿರಾಶ್ರಿತರ ತಂಗುದಾಣಗಳು ತಾತ್ಕಾಲಿಕವಾಗಬೇಕಿತ್ತು. ಆದರೆ ಅದು ದಿನದಿಂದ ವಾರಕ್ಕೆ, ವಾರದಿಂದ ತಿಂಗಳಿಗೆ, ತಿಂಗಳಿಂದ ವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ...ಹಾಂ, ನೀರಿನಲ್ಲಿದ್ದ ದೋಆ ಮತ್ತು ಬಾಸೆಮ್‍ ಕತೆಗೆ ಬರೋಣ. ಅದು ನೀರಿನಲ್ಲಿ ಅವರ ಎರಡನೇ ದಿನ... ಬಾಸೆಮ್‍ ನಿಶ್ಯಕ್ತನಾಗುತ್ತಿದ್ದ. “ನಾವು ಹೇಗಾದರೂ ಗುರಿಮುಟ್ತೀವಿ. ಧೈರ್ಯಕಳ್ಕೋಬೇಡ” ಎಂದು ಬಾಸೆಮ್‌ನಲ್ಲಿ ಭರವಸೆ ಮತ್ತು ಧೈರ್ಯ ತುಂಬಲು ದೋಆ ಪ್ರಯತ್ನಿಸ್ತಿದ್ದಳು. “I am sorry. ನಾನು ನಿನ್ನ ಈ ಪರಿಸ್ಥಿತಿಗೆ ತಂದುಬಿಟ್ಟೆ. ನನ್ನ ಇಡೀ ಜೀವನದಲ್ಲಿ ನಿನ್ನ ಪ್ರೀತಿಸಿದಷ್ಟು ಬೇರೆ ಯಾರನ್ನೂ ಪ್ರೀತಿಸಿಲ್ಲ” ಅಂತ ಹೇಳುತ್ತಾ ಬಾಸೆಮ್‍ ದೋಆಳ ಕೈಬಿಟ್ಟು ನೀರಿನಲ್ಲಿ ಮುಳುಗಿಬಿಟ್ಟ. ತಾನು ಪ್ರೀತಿಸಿದವನು ತನ್ನ ಕಣ್ಮುಂದೆಯೇ ನೀರಿನಲ್ಲಿ ಮುಳುಗುತ್ತಿರುವುದಕ್ಕೆ ದೋಆ ಸಾಕ್ಷಿಯಾದಳು...ಆಗಲೇ ಲೈಫ್‍ ಜಾಕೆಟ್‍ ಹಾಕಿಕೊಂಡಿದ್ದ ಒಂದೂವರೆ ವರ್ಷದ ಮಾಸಳನ್ನು ಹಿಡಿದುಕೊಂಡ ಅವಳ ತಾಯಿ ದೊಆಳ ಹತ್ತಿರ ಬಂದಳು. ಆಗಷ್ಟೇ ಮಾಸಳ ಅಕ್ಕ ನೀರಿನಲ್ಲಿ ಮುಳುಗಿಹೋಗಿದ್ದಳು. ಉಳಿದಿದ್ದ ಒಬ್ಬ ಮಗಳನ್ನಾದರೂ ಉಳಿಸಲೇಬೇಕು ಎಂದುಕೊಂಡು ಅವಳಮ್ಮ ನಿರ್ಧರಿಸಿದ್ದಳು. “ನಾನಿನ್ನು ಬದುಕುವುದಿಲ್ಲ. ದಯವಿಟ್ಟು ಈ ಮಗುವನ್ನು ಇಟ್ಟುಕೋ” ಎಂದು ದೋಆಳ ಕೈಗೆ ಮಗುವನ್ನು ಕೊಟ್ಟ ಆಕೆ ಒಂದಷ್ಟು ದೂರಹೋಗಿ ನೀರಿನಲ್ಲಿ ಮುಳುಗಿಬಿಟ್ಟಳು.ಹತ್ತೊಂಬತ್ತು ವರ್ಷದ ದೋಹಾ, ಈಜಲು ಕೂಡ ಗೊತ್ತಿಲ್ಲದ ಹುಡುಗಿ, ಇಬ್ಬರು ಮಕ್ಕಳ ಹೊಣೆಯನ್ನು ಹೊತ್ತಳು. ಬಾಯಾರಿಕೆ, ಹಸಿವು, ಬಳಲಿಕೆ ಮತ್ತು ಭಯದಿಂದ ಮೂವರೂ ಒದ್ದಾಡುತ್ತಿದ್ದರು. ದೋಆ ಆ ಪರಿಸ್ಥಿತಿಯಲ್ಲೂ ಮಕ್ಕಳನ್ನು ಖುಷಿಪಡಿಸಲು ಅವರೊಂದಿಗೆ ಆಟವಾಡುತ್ತಾ, ಹಾಡು ಹಾಡುತ್ತಾ, ಕುರಾನ್‌ನ ಸಾಲುಗಳನ್ನು ಹೇಳುತ್ತಾ ಸಮಯ ದೂಡಿದಳು. ಅವರ ಸುತ್ತ ತೇಲುತ್ತಿದ್ದ ಶವಗಳೆಲ್ಲ ಕಪ್ಪಗಾಗಲು ತೊಡಗಿದ್ದವು. ದಿನವಿಡೀ ಸೂರ್ಯ ಸುಡುತ್ತಿದ್ದ. ರಾತ್ರಿ ತಣ್ಣನೆಯ ಚಂದ್ರ ಮತ್ತು ಮಂಜು. ಸುತ್ತಲ ವಾತಾವರಣ ಭಯಪಡಿಸುತ್ತಿತ್ತು.ಅದು ದೋಆ ನೀರಿನಲ್ಲಿದ್ದ ನಾಲ್ಕನೇ ದಿನ. ಹೆಂಗಸೊಬ್ಬಳು ದೋಆಳ ಹತ್ತಿರ ಬಂದು ನಾಲ್ಕು ವರ್ಷದ ತನ್ನ ಮಗನನ್ನು ಎತ್ತಿಕೊಳ್ಳುವಂತೆ ಕೇಳಿಕೊಂಡಳು. ದೋಆ ಅವನನ್ನು ಎತ್ತಿಕೊಳ್ಳುತ್ತಿದ್ದಂತೆ ಅವನ ತಾಯಿ ನೀರಿನಲ್ಲಿ ಮುಳುಗಿದಳು. ಬಿಕ್ಕುತ್ತಿದ್ದ ಮಗುವಿಗೆ ಸಮಾಧಾನ ಪಡಿಸುತ್ತ “ಅಮ್ಮ ನಿಂಗೆ ತಿಂಡಿ, ನೀರು ತರಲು ಹೋಗಿದಾಳೆ” ಎಂದು ಹೇಳಿದಳು. ತಕ್ಷಣ ಅವನ ಎದೆಬಡಿತ ನಿಂತುಹೋಯಿತು. ದೋಆ ಆ ಮಗುವನ್ನು ನೀರಿನೊಳಗೆ ಬಿಟ್ಟಳು.ಸ್ವಲ್ಪ ಹೊತ್ತಿನ ತರುವಾಯ ಆಕಾಶದಲ್ಲಿ ಎರಡು ವಿಮಾನಗಳು ಹಾರುತ್ತಿರುವುದು ಕಾಣಿಸಿತು. ದೋಆ ಆಸೆಯಿಂದ, ಅವರಿಗೆ ತಾವಿರುವುದು ಕಾಣಲಿ ಎಂದು ಕೈಬೀಸತೊಡಗಿದಳು. ಆದರೆ ವಿಮಾನಗಳು ಬಂದಷ್ಟೇ ವೇಗವಾಗಿ ಹಾರಿಹೋದವು.ಮಧ್ಯಾಹ್ನದ ಇಳಿಹೊತ್ತು... ಸೂರ್ಯ ನಿಧಾನವಾಗಿ ಪಡುವಣದತ್ತ ಹೆಜ್ಜೆ ಹಾಕಲಾರಂಭಿಸಿದ್ದ. ದೋಆ ಕಣ್ಣಿಗೆ ವ್ಯಾಪಾರಿಗಳ ಹಡಗೊಂದು ಕಾಣಿಸಿತು. “ದೇವರೇ ಅವರು ನಮ್ಮನ್ನು ಕಾಪಾಡುವಂತೆ ಮಾಡು” ಎಂದು ಪ್ರಾರ್ಥಿಸಲು ಶುರುಮಾಡಿದಳು. ಕೈಬೀಸುತ್ತಾ ಸುಮಾರು ಎರಡುಗಂಟೆ ಸಹಾಯಕ್ಕಾಗಿ ಕೂಗಿಕೊಂಡಳು. ಅಷ್ಟರಲ್ಲಿ ಕತ್ತಲಾಯಿತು. ಸರ್ಚ್‌ಲೈಟುಗಳ ಕಣ್ಣಿಗೆ ತೇಲುತ್ತಿದ್ದ ದೋಆ ಕಾಣಿಸಿದಳು. ಅವಳ ಮಡಿಲಲ್ಲಿ ಇಬ್ಬರು ಮಕ್ಕಳು ಇದ್ದುದನ್ನು ನೋಡಿ ಚಕಿತರಾಗಿ ಇವಳತ್ತ ಹಗ್ಗವೊಂದನ್ನು ಇಳಿಬಿಟ್ಟರು. ಅವರೆಲ್ಲರನ್ನೂ ಹಡಗಿಗೆ ಎಳೆದುಕೊಂಡರು. ಅವರಿಗೆ ಆಮ್ಲಜನಕ ನೀಡಿ ಬೆಚ್ಚನೆ ಹೊದಿಕೆಗಳನ್ನು ಹೊದಿಸಿದರು. ಅಷ್ಟುಹೊತ್ತಿಗೆ ಬಂದ ಗ್ರೀಕ್‍ ಹೆಲಿಕ್ಯಾಪ್ಟರ್‍ ಅವರನ್ನು ಕ್ರೀಟ್‍ ದ್ವೀಪಕ್ಕೆ ಕರೆದೊಯ್ಯಿತು.ದೋಆ ಸುತ್ತನೋಡಿ “ಮಲೆಕ್‍ ಎಲ್ಲಿ?” ಎಂದು ಕೇಳಿದಳು. ಆಕೆ ಹಡಗಿನ ಕ್ಲಿನಿಕ್‌ನಲ್ಲಿ ಸತ್ತುಹೋದಳು ಎಂದು ಹೇಳಿದರು. ಇವರನ್ನು ಹಡಗಿಗೆ ಹಗ್ಗದ ನೆರವಿನಿಂದ ಎಳೆದುಕೊಳ್ಳುತ್ತಿರುವಾಗ ನಗುತ್ತಿದ್ದ ಆ ಪುಟ್ಟ ಹುಡುಗಿಯ ಮುಖ ಆ ಪುಟ್ಟಹುಡುಗಿ ದೋಆ ಳ ಕಣ್ಮುಂದೆ ತೇಲಿ ಬಂತು.500 ಮಂದಿ ಇದ್ದ ಹಡಗಿನಲ್ಲಿ, ಅಪಘಾತದ ನಂತರ ಬದುಕುಳಿದವರು 11 ಮಂದಿ ಮಾತ್ರ. ಈ ಘಟನೆಯ ಬಗ್ಗೆ ಯಾವುದೇ ಅಂತರರಾಷ್ಟ್ರೀಯ ತನಿಖೆಗಳು ನಡೆಯಲಿಲ್ಲ. ಕಡಲಿನಲ್ಲಿ ನಡೆದುಹೋದ ಸಾಮೂಹಿಕ ಕೊಲೆಯ ಬಗ್ಗೆ, ಭಯಾನಕ ದುರಂತದ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಒಂದು ದಿನದ ಮಟ್ಟಿಗೆ ವರದಿಗಳು ಪ್ರಸಾರವಾದವು, ಅಷ್ಟೇ. ಆಮೇಲೆ ಮತ್ತದೇ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸಲಾರಂಭಿಸಿದವು.ಇತ್ತ ಕ್ರಿಟ್‌ನ ಮಕ್ಕಳ ಆಸ್ಪತ್ರೆಯಲ್ಲಿ ಮಾಸ ಸಾವಿನೊಂದಿಗೆ ಹೋರಾಡುತ್ತಿದ್ದಳು. ಅವಳ ದೇಹದಲ್ಲಿ ನೀರಿನಂಶ ಸಂಪೂರ್ಣವಾಗಿ ಕಡಿಮೆಯಾಗಿಬಿಟ್ಟಿತ್ತು. ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ದೇಹದಲ್ಲಿನ ಗ್ಲುಕೋಸಿನ ಮಟ್ಟ ಕುಸಿದಿತ್ತು. ವೈದ್ಯರು ಅವಳನ್ನು ಉಳಿಸಲು ತಮ್ಮಿಂದಾದಷ್ಟು ಪ್ರಯತ್ನಿಸಿದ್ದರು. ಗ್ರೀಕಿನ ನರ್ಸುಗಳು ಒಂದುಕ್ಷಣ ಕೂಡ ಅವಳನ್ನು ಬಿಟ್ಟು ಕದಲದೆ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಇನ್ನು ಬದುಕುವುದಿಲ್ಲ ಎಂದುಕೊಂಡಿದ್ದ ಮಾಸ ಪವಾಡಸದೃಶವಾಗಿ ಚೇತರಿಸಿಕೊಂಡಳು. ಗ್ರೀಕ್‍ ಪತ್ರಿಕೆಗಳು ಈ ಚಮತ್ಕಾರಿ ಮಗುವಿನ ಬಗ್ಗೆ ಬರೆಯಲಾರಂಭಿಸಿದವು.ಮಾಸ ನಾಲ್ಕುದಿನ ಸಮುದ್ರದಲ್ಲಿ ತಿಂಡಿ-ನೀರಿಲ್ಲದೆ ಬದುಕುಳಿದು ಬಂದಿದ್ದಳು. ಅವಳನ್ನು ದತ್ತು ತೆಗೆದುಕೊಳ್ಳಲು ದೇಶದೆಲ್ಲೆಡೆಯಿಂದ ಜನ ಮುಂದೆ ಬರಲಾರಂಭಿಸಿದರು.ಕ್ರಿಟ್‌ನಲ್ಲೇ ಮತ್ತೊಂದು ಆಸ್ಪತ್ರೆಯಲ್ಲಿದ್ದ ದೋಆಳ ದೇಹದಲ್ಲಿ ಕೂಡ ನೀರಿನಂಶ ಕಡಿಮೆಯಾಗಿ ನಿಶ್ಯಕ್ತಳಾಗಿದ್ದಳು. ಅವಳು ಚೇತರಿಸಿಕೊಂಡ ತಕ್ಷಣ ಈಜಿಪ್ತಿನ ಕುಟುಂಬವೊಂದು ಅವಳನ್ನು ತಮ್ಮ ಮನೆಗೆ ಕರೆದೊಯ್ಯಿತು. ‘ಫೇಸ್‌ಬುಕ್‌’ನಲ್ಲಿ, ಮಾಧ್ಯಮಗಳಲ್ಲಿ ಆಕೆ ಬದುಕಿರುವ ಸಂಗತಿ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಯಿತು.“ದೋಆ ನನ್ನ ಅಣ್ಣತಮ್ಮಂದಿರ ಕತೆ ಏನಾಯ್ತು ಅಂತ ನಿಂಗೆ ಗೊತ್ತಾ? ನನ್ನ ಅಕ್ಕತಂಗಿಯರು? ನನ್ನ ಅಪ್ಪ-ಅಮ್ಮ? ನನ್ನ ಸ್ನೇಹಿತರು? ಅವರಲ್ಲಿ ಯಾರು ಬದುಕಿದ್ದಾರೆ ನಿಂಗೇನಾದ್ರೂ ಗೊತ್ತಾ?”– ಹೀಗೆ ಹರಿದು ಬಂದ ಸಂದೇಶಗಳಲ್ಲಿ ಒಂದು ಸಂದೇಶ ಹೀಗಿತ್ತು: “ನೀನು ನನ್ನ ಸೋದರಸೊಸೆ ಮಾಸಳನ್ನು ಬದುಕಿಸಿದ್ದೀಯಾ ಅಲ್ವಾ? ನಂಗೆ ಈ ಬಗ್ಗೆ ನಂಬಿಕೆ ಇದೆ”. ಈ ಸಂದೇಶ ಕಳುಹಿಸಿದ ವ್ಯಕ್ತಿ ಕೂಡ ಸಿರಿಯನ್‍ ನಿರಾಶ್ರಿತ. ಈತ ಕೂಡ ಇತರರಂತೆ ಪಲಾಯನ ಮಾಡಿ ತನ್ನ ಕುಟುಂಬದೊಂದಿಗೆ ಸ್ವೀಡನ್ನಿಗೆ ಬಂದು ನೆಲೆಸಿದ್ದ. ಸದ್ಯಕ್ಕೆ ಮಾಸ ಅಥೆನ್ಸಿನ ಅನಾಥಶ್ರಮವೊಂದರಲ್ಲಿದ್ದಾಳೆ.ದೋಆ  ಸಮುದ್ರದಲ್ಲಿ ನಾಲ್ಕು ದಿನ ಹೋರಾಡಿ, ತನ್ನೊಂದಿಗೆ ಇಬ್ಬರು ಮಕ್ಕಳನ್ನು ಕಾಪಾಡಿದ್ದರ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಅಥೆನ್ಸಿನ ಅಕಾಡೆಮಿ ಆಕೆಯ ಧೈರ್ಯ ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿತು. ಈಜಿಪ್ಟಿನಿಂದ ತನ್ನ ತಂದೆ-ತಾಯಿ ಮತ್ತು ತನ್ನ ಒಡಹುಟ್ಟಿದವರನ್ನು ಕರೆಸಿಕೊಂಡು ಸ್ವೀಡನ್ನಿನಲ್ಲೇ ನೆಲೆಸುವ ಆಸೆ ದೋಆಳದು. ಕಾನೂನು, ರಾಜಕಾರಣ, ಇಲ್ಲವೇ ಅನ್ಯಾಯದ ವಿರುದ್ಧ ಹೋರಾಡಬಹುದಾದ ಯಾವುದಾದರೂ ವೃತ್ತಿ ಸೇರುವ ಕನಸು ಆಕೆಯದು.ದೋಆಳ ಕಥೆ ಕೇಳಿದಿರಲ್ಲವೇ? ಈಗ ನನ್ನ ಪ್ರಶ್ನೆ ಇದು: “ಅವಳು ಇಷ್ಟೆಲ್ಲ ಕಷ್ಟ ಯಾಕಾಗಿ ಪಡಬೇಕು? ಅವಳು ಯಾಕೆ ಇಷ್ಟೆಲ್ಲವನ್ನು ಎದುರಿಸಬೇಕು? ಯುರೋಪಿನಲ್ಲಿ ಓದಬೇಕು ಎಂದು ಅವಳು ಬಯಸಿದರೆ ಅದನ್ನು ಕಾನೂನುಬದ್ಧವಾಗಿ ಮಾಡಲು ಯಾಕೆ ಸಾಧ್ಯವಿಲ್ಲ? ಮಾಸ ಯಾಕೆ ಸ್ವೀಡನ್ನಿಗೆ ವಿಮಾನದಲ್ಲಿ ಹಾರಿಬರುವಂತಿಲ್ಲ? ಬಾಸೆಮ್‌ಗೆ ತಕ್ಕ ಕೆಲಸ ಯಾಕೆ ಸಿಗಲಿಲ್ಲ? ನಮ್ಮ ಕಾಲದ ಅತ್ಯಂತ ಕೆಟ್ಟಯುದ್ಧಗಳಲ್ಲೊಂದಾದ ಸಿರಿಯನ್‍ ಯುದ್ಧಪೀಡಿತರಿಗೆ ಪುನರ್ವಸತಿ ಒದಗಿಸುವ ಕಾರ್ಯಕ್ರಮಗಳು ಯಾಕೆ ಶೀಘ್ರವಾಗಿ ನಡೆಯುತ್ತಿಲ್ಲ?1970ರಲ್ಲಿ ವಿಯೆಟ್ನಾಂನ ಯುದ್ಧಪೀಡಿತರಿಗೆ ನೀಡಿದ ನೆರವನ್ನು ಈಗ ಯಾಕೆ  ನೀಡಲಾಗುತ್ತಿಲ್ಲ? ಇಷ್ಟೊಂದು ಮಂದಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ದೇಶಗಳಿಗೆ ಉಳಿದ ದೇಶಗಳವರು ಯಾಕೆ ಉದಾರವಾಗಿ ನೆರವು ನೀಡುತ್ತಿಲ್ಲ? ಎಲ್ಲಕ್ಕಿಂತ ಮೂಲಭೂತ ಪ್ರಶ್ನೆಯೆಂದರೆ– ಯುದ್ಧವನ್ನು ನಿಲ್ಲಿಸಲು ನಮ್ಮ ಪ್ರಯತ್ನಗಳೇಕೆ ಇಷ್ಟು ಕಡಿಮೆ ಪ್ರಮಾಣದಲ್ಲಿವೆ?ಮುಂದೇನು? ಅದು ಯುರೋಪಿನ ಆಯ್ಕೆ ಬಿಟ್ಟಿದ್ದು. ಜನರಿಗೆ ತಮ್ಮ ಸುರಕ್ಷತೆ, ತಮ್ಮ ಆರ್ಥಿಕತೆ ಮತ್ತು ಬದಲಾಗುತ್ತಿರುವ ಸಂಸ್ಕೃತಿಯ ಬಗ್ಗೆ ಆತಂಕವಿದೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮನುಷ್ಯರ ಪ್ರಾಣ ಉಳಿಸುವುದು ಅಲ್ಲವೇ? ಮಾನವೀಯತೆ ಎಲ್ಲಕ್ಕಿಂತ ಮೂಲಭೂತವಾದದ್ದು ಅಲ್ಲವೇ.ಯಾವುದೇ ವ್ಯಕ್ತಿ ಯುದ್ಧ ಅಥವಾ ಶೋಷಣೆಯಿಂದ ತಪ್ಪಿಸಿಕೊಳ್ಳಲು ಸುರಕ್ಷತೆಗಾಗಿ ಪಲಾಯನ ಮಾಡುವ ಹಾದಿಯಲ್ಲಿ ಸಮುದ್ರ ದಾಟುತ್ತ ಸಾಯಬಾರದು– ಅಲ್ಲವೇ. ಒಂದಂತೂ ನಿಜ. ಒಂದು ವೇಳೆ ತಾವು ಹೋಗಬೇಕೆಂದಿದ್ದ ಜಾಗಕ್ಕೆ ಅವರು ಸುಲಭವಾಗಿ ಹೋಗುವಂತಿದ್ದಿದ್ದರೆ ಯಾರೂ ಅಪಾಯಕಾರಿ ಹಡಗನ್ನು ಹತ್ತುತ್ತಿರಲಿಲ್ಲ. ಹೊಟ್ಟೆತುಂಬುವಷ್ಟು ಊಟ ಸಿಗುವಂತಿದ್ದರೆ ಯಾರೂ ತಮ್ಮ ಹಾಗೂ ಮಕ್ಕಳ ಪ್ರಾಣವನ್ನು ಒತ್ತೆಯಿಟ್ಟು ಈ ಪ್ರಯಾಣಕ್ಕೆ ಮುಂದಾಗುತ್ತಿರಲಿಲ್ಲ. ಕಾನೂನುಬದ್ಧವಾಗಿ ವಲಸೆ ಹೋಗುವಂತಿದ್ದರೆ ಯಾರೂ ಕಳ್ಳಸಾಗಾಣಿಕೆದಾರರ ಕೈಯಲ್ಲಿ ತಮ್ಮ ಜೀವ ಇಡುತ್ತಿರಲಿಲ್ಲ.ಮಾಸ, ದೋಆ, ಬಾಸೆಮ್‍ ಹಾಗೂ ಮುಳುಗಿ ಸತ್ತ 500 ಮಂದಿಯ ಪರವಾಗಿ ನಾವು ಇನ್ನು ಮುಂದಾದರೂ ಹೀಗಾಗದಂತೆ ಪ್ರಯತ್ನ ನಡೆಸುತ್ತೇವೆ ಎಂದುಕೊಳ್ಳಬಹುದೇ? ಪ್ರತಿ ಜೀವಕ್ಕೂ ಬೆಲೆಯಿದೆ ಎನ್ನುವುದನ್ನು ಇನ್ನಾದರೂ ಅರಿತು ಹೊಣೆಗಾರಿಕೆಯಿಂದ ವರ್ತಿಸಬಹುದೇ?  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.