ಮಂಗಳವಾರ, ಮೇ 11, 2021
27 °C

ದೋನಶೇ ರೂಪಾಯಿ ಕೊಡ್ತಾರ, ಕುಡ್ಯಾಕ್ ನೀರು ಸಿಗಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿದರಕುಂದಿ (ತಾ.ಮುದ್ದೇಬಿಹಾಳ): `ಸಾಯಬ್ರ ನೀರಿನ ಸುದ್ದೀನ ಕೇಳಬ್ಯಾಡ್ರಿ. ದೊಡ್ಡವ್ರಿಗೆ ಕೇಳಿದ್ರ ನೂರ್-ದೋನಶೇ ರೂಪಾಯಿ ಕೊಡ್ತಾರ, ಆದ್ರ ಕುಡ್ಯಾಕ್ ಒಂದು ಗ್ಲಾಸ್ ನೀರು ಕೊಡಂಗಿಲ್ಲ ನೋಡ್ರಿ~ ಎಂದರು ಗ್ರಾಮದ ಶ್ರೀಶೈಲ ಬಡಿಗೇರ.ಮುದ್ದೇಬಿಹಾಳ ಸಮೀಪದಲ್ಲಿಯೇ ಇರುವ ಬಿದರಕುಂದಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಅವರು ವಿವರಿಸುತ್ತಲೇ ಹೋದರು.`ಗ್ರಾಮದಲ್ಲಿ ಕುಡಿಯುವ ನೀರಿನ ದೊಡ್ಡ ಊರ ಬಾವಿ ಬತ್ತಿ ಹೋಗಿದೆ. ಅದರಲ್ಲಿಯ ಹೂಳು ತೆಗೆಸಬೇಕು. ನೀರಿನ ಸೆಲೆ ಹತ್ತುತ್ತವೆ~ ಎನ್ನುವ ಹಿರಿಯರ ಮಾತು ಯಾರೂ ಕೇಳುತ್ತಿಲ್ಲ. ಹೀಗಾಗಿ ಒಂದೇ ಒಂದು ವರ್ಷವೂ ಬತ್ತದೇ ನೀರು ಕರುಣಿಸುತ್ತಿದ್ದ ಈ ಬಾವಿ ಈಗ ಬತ್ತಿ ಬರಿದಾಗಿದೆ.`ಇದೇ ಬಾವಿಯ ಹೂಳೆತ್ತಲು ಪಂಚಾಯಿತಿಯಲ್ಲಿ ಖರ್ಚು ಹಾಕಲಾಗಿದೆ ಎಂದು ಪಂಚಾಯಿತಿಯವರು ಹೇಳುತ್ತಾರೆ. ಕೆಲಸ ಮಾತ್ರ ಏನೂ ಆಗಿಲ್ಲ. ಇನ್ನು ಗ್ರಾಮದಲ್ಲಿ ಏಳು ಕೊಳವೆ ಬಾವಿಗಳಲ್ಲಿ ಎಲ್ಲವೂ ನೀರು ಬಾರದೇ ಬಂದ್ ಆಗಿವೆ. ಇರುವ ಒಂದೇ ಕೊಳವೆ ಬಾವಿಯ ಮುಂದೆ ಜನ ಸಾಲು ಸಾಲಾಗಿ ನಿಂತು ನೀರು ತರುವ ಸ್ಥಿತಿ. ಆ ಕೊಳವೆ ಬಾವಿಯೂ ಸರಿ ಇಲ್ಲ. ಅರ್ಧ ಕೊಡ ನೀರು ಬರುವಷ್ಟರಲ್ಲಿ ಹವಾ ಹಿಡಿದು ಬಿಡುತ್ತದೆ.ಮತ್ತೆ ಹತ್ತು ನಿಮಿಷದ ನಂತರ ಪಂಪ್ ಮಾಡಿದರೆ ಮತ್ತೆರಡು ಕೊಡ ನೀರು ಬರುತ್ತವೆ. ನಮಗಂತೂ ಸಾಕಾಗಿದೆ~ ಎಂದು ಬಸಮ್ಮ ಕನ್ನೂರ ಇಡೀ ಗ್ರಾಮದ ನೀರಿನ ಸಮಸ್ಯೆಯನ್ನು ವಿವರಿಸಿದರು.`ಗ್ರಾಮದ ಅಗಸಿ ಹತ್ತಿರ ಇದ್ದ ಕೊಳವೆ ಬಾವಿಗೆ ಎಂಜಿನ್ ಕೂಡಿಸಿ ನೀರೆತ್ತಲಾಗುತ್ತಿತ್ತು. ಈಗ ಅದೂ ಬಂದ್ ಆಗಿದೆ. ಮುಂಜಾನೆ ಒಂದಿಷ್ಟು ಹೊತ್ತು ಕರೆಂಟ್ ಇದ್ದಾಗ ಚಾಲು ಮಾಡಿದರೂ ಅದರಿಂದ ನೀರು ಟ್ಯಾಂಕ್‌ಗೆ ಸರಿಯಾಗಿ ತುಂಬುವುದೇ ಇಲ್ಲ. ಬಹಳಷ್ಟು ಜನರು ಅದೇ ಟ್ಯಾಂಕಿನ ಕೆಳಗೆ ವಾಲ್ವ್‌ನಿಂದ ಸೋರುವ ನೀರನ್ನೇ ಬೆಳ್ಳಂಬೆಳಿಗ್ಗೆ ಎದ್ದು ಸಂಗ್ರಹಿಸಿ ಬಿಡುತ್ತಾರೆ. ಹೀಗಾಗಿ ದಿನನಿತ್ಯ ಬರುತ್ತಿದ್ದ ನಲ್ಲಿಯ ನೀರು ಈಗ ಮುರ‌್ನಾಲ್ಕು ದಿನಕ್ಕೊಮ್ಮೆ ಎರಡು ಕೊಡ ಮಾತ್ರ ಬಂದು ಹೋಗುತ್ತವೆ. ವಾಟರ್‌ಮನ್ ಸರಿ ಇಲ್ಲ. ಇಲ್ಲಿಯೂ ಕಾಸಿನ ಕರಾಮತ್ತು ನಡೆಯುತ್ತಿದೆ~ ಎಂದು ರಫೀಕ ಮೆಹಬೂಬಸಾಬ ಮಳ್ಳಿ ಆರೋಪಿಸಿದರು.`ನೀರು ಶುದ್ಧೀಕರಣ ಘಟಕ ಹೆಸರಿಗಷ್ಟೇ ಇದೆ. ಅದರ ಬಾಗಿಲು ಒಂದು ದಿನವೂ ತೆಗೆದಿಲ್ಲ~ ಎನ್ನುತ್ತಾರೆ ಅವರು. ಇದು ನಳಗಳ ಸಂಪರ್ಕ ಇರುವ ಕೆಲವೇ ಶ್ರೀಮಂತರ ಸ್ಥಿತಿಯಾದರೆ ಉಳಿದವರದು ಶೋಚನೀಯ ಸ್ಥಿತಿ. ಖಾಲಿ ಕೊಡ ಹಿಡಿದುಕೊಂಡು ತೋಟದ ಬಾವಿಗಳಿಗೆ ಹೋಗಬೇಕಾದ ಅನಿವಾರ್ಯತೆ.`ಇತ್ತೀಚೆಗೆ ನಡೆದ ಸಂಗಮೇಶ್ವರ ಜಾತ್ರೆಯ ಸಮಯದಲ್ಲಿ ಜನರು ಸಮೀಪದ ಕಡೂರ ಅವರ ಬಾವಿಯಿಂದ ನೀರು ಹೊತ್ತು ತಂದಿದ್ದಾರೆ. ಜನರ ತೊಂದರೆ ಅರಿತು ಗ್ರಾಮ ಪಂಚಾಯಿತಿ, ಹುಲ್ಲಪ್ಪ ಚಂದಪ್ಪನ ಓಣಿಯೊಳಗೆ ಇದ್ದ ಕೊಳವೆ ಬಾವಿಗೆ ಇಂಜಿನ್ ಅಲವಡಿಸಿದೆ. ಆದರೆ, ಕಣ್ಣಾ ಮುಚ್ಚಾಲೆ ಆಟವಾಡುವ ವಿದ್ಯುತ್‌ನಿಂದ ನೀರು ಬರುವುದೇ ಇಲ್ಲ~ ಎಂದು ಮಹಾಂತೇಶ ಕೋರವಾರ ಮತ್ತು ಪವಾಡೆಪ್ಪ ತೋಟದ ದೂರಿದರು.`ಕುಡಿಯುವ ನೀರು ಸರಿಯಾಗಿ ಬರದಿದ್ದರೆ ನೀರಿನ ಟ್ಯಾಂಕ್ ಮೂಲಕ ನೀರು ಪೂರೈಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ~ ಎಂದು ಗ್ರಾಮದ ಮಕ್ಬುಲ ಅಮೀನಸಾ ಬನ್ನೆಟ್ಟಿ ದೂರಿದರೆ,  `ಗ್ರಾಮ ಪಂಚಾಯಿತಿ ಅಧ್ಯಕ್ಷರು ವಿಜಾಪುರದಲ್ಲಿ ಮನಿ ಮಾಡ್ಯಾರ, ಅವರಿಗೆ ಇಲ್ಲಿ ಜನರ ತ್ರಾಸ್ ಹ್ಯಾಂಗ್ ತಿಳಿತೈತಿ? ಪಿ.ಡಿ.ಒ. ಅವರೂ ಯಾವಾಗರ ಬರ‌್ತಾರ ಗೊತ್ತಾಗುವುದಿಲ್ಲ. ನಾವು ಯಾರಿಗೆ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು~ ಎಂದೂ ಅವರು ಪ್ರಶ್ನಿಸಿದರು.ರೂ. 9 ಕೋಟಿ ಯೋಜನೆ: ಮೂರು ವರ್ಷಗಳ ಹಿಂದೆಯೇ ಆರಂಭಿಸಿರುವ ರೂ.9 ಕೋಟಿ ವೆಚ್ಚದ ಕೃಷ್ಣಾ ನದಿಯಿಂದ ನೀರೆತ್ತಿ 22 ಹಳ್ಳಿಗಳಿಗೆ ನೀರು ಪೂರೈಸುವ ಮುದುರ ಬಹು ಹಳ್ಳಿಗಳ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.`ಗುತ್ತಿಗೆದಾರರನ್ನು ಕೇಳಿದರೆ ಪೈಪ್ ಹಾಕಿದ್ದೇವೆ. ಕುರಿಕಾಯುವವರು ಪೈಪ್ ಒಡೆದಿದ್ದಾರೆ. ಪಿ.ಎಂ.ಜಿ.ಎಸ್.ವೈ. ಯೋಜನೆಯ ರಸ್ತೆ ನಿರ್ಮಾಣದ ಸಂದರ್ಭದಲ್ಲಿಯೂ ಹತ್ತಿಪ್ಪತ್ತು ಕಡೆಗಳಲ್ಲಿ ಪೈಪ್‌ಗಳನ್ನು ಒಡೆಯಲಾಗಿದೆ.ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಇನ್ನು 2-3ದಿನಗಳಲ್ಲಿ ನೀರು ಬಿಡುತ್ತೇವೆ ಎನ್ನುತ್ತಿದ್ದಾರೆ~ ಎಂದುಬಸರಕೋಡದ ಪ್ರದೀಪ ಸೊಲ್ಲಾಪೂರ ಮತ್ತು ಮುದೂರದ ಸುಭಾಸ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.