ಬುಧವಾರ, ನವೆಂಬರ್ 20, 2019
20 °C

`ದೋನಿ ಇದ್ದರೆ ಒತ್ತಡವಿಲ್ಲ'

Published:
Updated:

ನವದೆಹಲಿ (ಪಿಟಿಐ): ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ದೋನಿ ಅವರಂತಹ ಆಟಗಾರನೊಬ್ಬ ಇರುವ ಕಾರಣ ನನಗೆ ಯಾವುದೇ ಒತ್ತಡವಿಲ್ಲದೆ ಆಡಲು ಸಾಧ್ಯವಾಗುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ನುಡಿದಿದ್ದಾರೆ.`ದೋನಿ ಇರುವ ಕಾರಣ ನನಗೆ ಸ್ವತಂತ್ರವಾಗಿ ಬ್ಯಾಟಿಂಗ್ ಮಾಡಲು ಆಗುತ್ತದೆ. ಒಂದು ಅಥವಾ ಎರಡು ರನ್ ಗಳಿಸಿ ಸ್ಟೈಕ್ ರೊಟೇಟ್ ಮಾಡುತ್ತಾ ಇದ್ದರೆ ಸಾಕು. ಚೆಂಡನ್ನು ಲೀಲಾಜಾಲವಾಗಿ ಬೌಂಡರಿಗೆ ಅಟ್ಟುವ ತಾಕತ್ತು ಹೊಂದಿರುವ ದೋನಿ ಮತ್ತು ಸುರೇಶ್ ರೈನಾ ಅವರ ಜೊತೆ ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತೇನೆ' ಎಂದು ಗುರುವಾರ ನಡೆದ ಪಂದ್ಯದ ಬಳಿಕ ಹಸ್ಸಿ ಪ್ರತಿಕ್ರಿಯಿಸಿದ್ದಾರೆ. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ 86 ರನ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಜಯ ಸಾಧಿಸಿತ್ತು. ಗೆಲುವಿಗೆ 170 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆವಿಲ್ಸ್ ಕೇವಲ 83 ರನ್‌ಗಳಿಗೆ ಆಲೌಟಾಗಿತ್ತು. ಯುವ ಬೌಲರ್ ಮೋಹಿತ್ ಶರ್ಮ (10ಕ್ಕೆ 3) ಪ್ರಭಾವಿ ಬೌಲಿಂಗ್ ಮೂಲಕ ಎದುರಾಳಿಯ ಪತನಕ್ಕೆ ಕಾರಣರಾಗಿದ್ದರು.`ಇಲ್ಲಿನ ಪಿಚ್‌ನಲ್ಲಿ 150 ರನ್ ಗಳಿಸಿದರೆ ಗೆಲುವು ಸಾಧ್ಯ ಎಂದು ನಾನು ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರಲ್ಲಿ ಹೇಳಿದೆ. ಆದರೆ ದೋನಿ ಅವರಂತಹ ಆಟಗಾರರು ಇದ್ದಾಗ ಹೆಚ್ಚುವರಿಯಾಗಿ 20 ರನ್‌ಗಳನ್ನು ನಿರೀಕ್ಷಿಸಬಹುದು' ಎಂದಿದ್ದಾರೆ. ಪಂದ್ಯದಲ್ಲಿ ಹಸ್ಸಿ ಅಜೇಯ 65 ರನ್ ಗಳಿಸಿದ್ದರು.ಸಮಸ್ಯೆ ನೀಗದು: ವೀರೇಂದ್ರ ಸೆಹ್ವಾಗ್ ಅವರ ಆಗಮನದಿಂದ ತಂಡದ ಎಲ್ಲ ಸಮಸ್ಯೆ ನೀಗದು ಎಂದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಮಾಹೇಲ ಜಯವರ್ಧನೆ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)