ಶುಕ್ರವಾರ, ಜೂನ್ 18, 2021
28 °C

ದೋನಿ ಜೊತೆ ಭಿನ್ನಾಭಿಪ್ರಾಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭ ನಾಯಕ ಮಹೇಂದ್ರ ಸಿಂಗ್ ದೋನಿ ಜೊತೆಗೆ ಭಿನ್ನಾಭಿಪ್ರಾಯ ತಲೆದೋರಿತ್ತು ಎಂಬ ವರದಿಯನ್ನು ವೀರೇಂದ್ರ ಸೆಹ್ವಾಗ್ ಅಲ್ಲಗಳೆದಿದ್ದಾರೆ.`ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಒಡಕು ಮೂಡಿರಲಿಲ್ಲ. ಅವೆಲ್ಲವೂ ಮಾಧ್ಯಮಗಳು ಸೃಷ್ಟಿಸಿದ ಸುಳ್ಳು ಸುದ್ದಿ. ಈ ಹಿಂದೆ ಮಾಡಿದಂತೆ ಮುಂದೆಯೂ ನಾವು ಜೊತೆಯಾಗಿ ಆಡುವೆವು. ಆಸ್ಟ್ರೇಲಿಯಾದಲ್ಲಿ ಹಾಗೂ ಭಾರತಕ್ಕೆ ಮರಳಿದ ಬಳಿಕ ಈ ಕುರಿತು ನಾವಿಬ್ಬರು ಮಾತನಾಡಿದ್ದೇವೆ. ತಂಡದ ಯಾವುದೇ ಆಟಗಾರರ ನಡುವೆ ಒಡಕು ಮೂಡಿಲ್ಲ~ ಎಂದು ಶನಿವಾರ ಇಲ್ಲಿ ನಡೆದ ಖಾಸಗಿ ಸಮಾರಂಭದ ವೇಳೆ ಸೆಹ್ವಾಗ್ ನುಡಿದರು.ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ತ್ರಿಕೋನ ಏಕದಿನ ಸರಣಿಯ ವೇಳೆ ಭಾರತ ತಂಡದಲ್ಲಿ ಒಡಕು ಮೂಡಿದೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ತಂಡದ ಆಡಳಿತ ತೆಗೆದುಕೊಂಡ `ರೊಟೇಷನ್ ಪದ್ಧತಿ~ ಇದಕ್ಕೆ ಕಾರಣವಾಗಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್‌ಗೆ ಮಾತ್ರ ಈ ಪದ್ಧತಿ ಅನ್ವಯವಾಗಿತ್ತು.ಹಿರಿಯ ಆಟಗಾರರು ಕ್ಷೇತ್ರರಕ್ಷಣೆಯಲ್ಲಿ `ತುಂಬಾ ನಿಧಾನ~ ಎಂದು ದೋನಿ ಹೇಳಿದ್ದು ಕೂಡಾ ವಿವಾದಕ್ಕೆ ಕಾರಣವಾಗಿತ್ತು. ನಾಯಕನ ಈ ಅಭಿಪ್ರಾಯವನ್ನು ಸೆಹ್ವಾಗ್ ಅಲ್ಲಗಳೆದಿದ್ದರು. ಈ ಎಲ್ಲ ಬೆಳವಣಿಗೆಗಳು ತಂಡದಲ್ಲಿ ಒಡಕು ಮೂಡಿದೆ ಎಂಬ ವಾದಕ್ಕೆ ಹೆಚ್ಚಿನ ಬಲ ನೀಡಿತ್ತು. ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವರ ಹೇಳಿಕೆಯನ್ನೂ ಸೆಹ್ವಾಗ್ ಅಲ್ಲಗಳೆದರು. ಅನಿಲ್ ಕುಂಬ್ಳೆ ನಾಯಕಸ್ಥಾನದಿಂದ ಕೆಳಗಿಳಿದ ವೇಳೆ ಆ ಜವಾಬ್ದಾರಿಯನ್ನು ವಹಿಸಲು ಸೆಹ್ವಾಗ್ ಉತ್ಸುಕರಾಗಿದ್ದರು ಎಂದು ಚಾಪೆಲ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿಯ ಬ್ಯಾಟ್ಸ್‌ಮನ್, `ನಾಯಕತ್ವ ನನಗೆ ಬೇಡ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಾನೊಬ್ಬ ತಂಡದ ಹಿರಿಯ ಆಟಗಾರ. ರನ್ ಗಳಿಸುವುದು ಮಾತ್ರ ನನ್ನ ಕೆಲಸ~ ಎಂದರು.ದ್ರಾವಿಡ್‌ಗೆ ಸರಿಸಾಟಿ ಯಾರೂ ಇಲ್ಲ: ಶುಕ್ರವಾರ ನಿವೃತ್ತಿ ಪ್ರಕಟಿಸಿದ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸೆಹ್ವಾಗ್, `ಅವರಂತಹ ಇನ್ನೊಬ್ಬ ಆಟಗಾರ ಭಾರತ ತಂಡಕ್ಕೆ ಲಭಿಸುವುದು ಕಷ್ಟ. ವಿದೇಶಿ ನೆಲದಲ್ಲಿ ದ್ರಾವಿಡ್ ನೀಡಿದ ಪ್ರದರ್ಶನ ಅದ್ಭುತ. ಅದಕ್ಕೆ ಸರಿಸಾಟಿಯಾಗಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ~ ಎಂದರು.`ದ್ರಾವಿಡ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅವರೊಂದಿಗೆ 10 ವರ್ಷಗಳ ಕಾಲ ಜೊತೆಯಾಗಿ ಆಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ. ಅವರೊಬ್ಬ ಸಭ್ಯ ಆಟಗಾರ. ಅವರೊಂದಿಗೆ ಹಲವು ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದೇನೆ~ ಎಂದರು.ದ್ರಾವಿಡ್ ಮತ್ತು ಸೆಹ್ವಾಗ್ 2006ರ ಜನವರಿಯಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ವಿಕೆಟ್‌ಗೆ 410 ರನ್‌ಗಳ ಜೊತೆಯಾಟ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.