ದೋನಿ ಪಡೆಗೆ ಗೆಲುವಿನ ಸಿಂಚನ

7

ದೋನಿ ಪಡೆಗೆ ಗೆಲುವಿನ ಸಿಂಚನ

Published:
Updated:

ಪುಣೆ: ಟೆಸ್ಟ್ ಸರಣಿಯಲ್ಲಿ ಅನುಭವಿಸಿದ್ದ ಸೋಲು, ನಿರಾಸೆ, ಅವಮಾನದ ಪ್ರತಿಕಾರದಂತಿತ್ತು ಭಾರತದ ಬ್ಯಾಟ್ಸ್‌ಮನ್‌ಗಳ ಅಬ್ಬರ. `ಚೆಂಡು ಇರುವುದೇ ದಂಡಿಸಲು' ಎನ್ನುವಂತೆ ಆತಿಥೇಯ ತಂಡದವರು ಬ್ಯಾಟ್ ಬೀಸಿದರು. ಈ ಪರಿಣಾಮ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ತಂಡಕ್ಕೆ ಆಂಗ್ಲರ ಬಳಗದ ಎದುರು ಐದು ವಿಕೆಟ್‌ಗಳ ಭರ್ಜರಿ ಗೆಲುವು.


ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ `ಮಹಿ' ಪಡೆ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆಂಗ್ಲರ ಪಡೆ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 157 ರನ್‌ಗಳನ್ನು ಕಲೆ ಹಾಕಿತು.

 

ನಾಲ್ಕನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡರೂ ಪ್ರವಾಸಿ ಬಳಗದ ರನ್ ಓಟ ಮಾತ್ರ ನಿಲ್ಲಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಕೇವಲ 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 56 ರನ್‌ಗಳನ್ನು ಕಲೆ ಹಾಕಿದರು. ಈ ಗುರಿಯನ್ನು ದೋನಿ ಬಳಗ ಸುಲಭವಾಗಿ ಮುಟ್ಟಿತು. ಇದಕ್ಕೆ ಕಾರಣವಾಗಿದ್ದು `ಯುವಿ' ಆಲ್‌ರೌಂಡ್ ಆಟ. ಭಾರತ 17.5 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

 

ಮಿಂಚಿದ ಯುವಿ: ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಯುವರಾಜ್ ಸಿಂಗ್ ತಮ್ಮ ಎಲ್ಲಾ ಸಾಮರ್ಥ್ಯವನ್ನು ಇಲ್ಲಿ ಪಣಕ್ಕೊಡ್ಡಿದರು. ಅವರು ಬಾರಿಸಿದ ಪ್ರತಿ ಬೌಂಡರಿ, ಸಿಕ್ಸರ್‌ಗಳು ಸಹ `ಸೇಡಿನ ಸರಣಿಯ' ಸೋಲಿಗೆ ಪ್ರತಿಕಾರದಂತಿದ್ದವು. 

 

ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಕೆಡವಿದ್ದ `ಪಂಜಾಬಿ ಪುತ್ಥರ್' ಬ್ಯಾಟಿಂಗ್‌ನಲ್ಲೂ ಆರ್ಭಟಿಸಿದರು. ಕೇವಲ 21 ಎಸೆತಗಳಲ್ಲಿ 38 ರನ್ ಗಳಿಸಿದ್ದೇ ಇದಕ್ಕೆ ಸಾಕ್ಷಿ. 

 

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗೌತಮ್ ಗಂಭೀರ್ (16) ಹಾಗೂ ಅಜಿಂಕ್ಯ ರಹಾನೆ (19) ಉತ್ತಮ ಆರಂಭ ನೀಡಿದರು. ನಂತರ  ವಿರಾಟ್ ಕೊಹ್ಲಿ ಹಾಗೂ ಯುವಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 30 ಎಸೆತಗಳಲ್ಲಿ 49 ರನ್ ಕಲೆ ಹಾಕಿತು. ಇದು ಪಂದ್ಯದ ಸುಲಭ ಗೆಲುವಿಗೂ ಕಾರಣವಾಯಿತು. ಇಬ್ಬರೂ ಆಟಗಾರರು ಸೇರಿ ಒಂಬತ್ತನೇ ಓವರ್‌ನಲ್ಲಿ 18 ರನ್ ಕಲೆ ಹಾಕಿ ಇಂಗ್ಲೆಂಡ್‌ನ ಟ್ರೇಡ್‌ವೆಲ್ ಬೆವರಿಳಿಸಿದರು. 

 

ಒತ್ತಡ ಮೆಟ್ಟಿನಿಂದ ದೋನಿ: ಈ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಅಂತರರಾಷ್ಟ್ರೀಯ ಟಿ-20 ಪಂದ್ಯವಿದು. ಈ ಪಂದ್ಯದಲ್ಲಿಯೇ ಗೆಲುವು ಸಾಧಿಸುವ ಮೂಲಕ ಆತಿಥೇಯರು ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಟೆಸ್ಟ್ ಸರಣಿಯ ಸೋಲಿನಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನಾಯಕ ದೋನಿ ಈ ಗೆಲುವಿನ ಮೂಲಕ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಾಯಕ ಸ್ಥಾನ ತ್ಯಜಿಸುವಂತೆ ಬಂದಿದ್ದ ಒತ್ತಡವನ್ನೂ ಮೆಟ್ಟಿ ನಿಂತು ದೋನಿ 21 ಎಸೆತಗಳಲ್ಲಿ 24 ರನ್ ಗಳಿಸಿದರು. ಇದರಲ್ಲಿ ಎರಡು ಬೌಂಡರಿಗಳು ಸೇರಿವೆ. 

 

ಮೂವರು ಆಟಗಾರರು ಪದಾರ್ಪಣೆ: ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಇಬ್ಬರು ಹಾಗೂ ಭಾರತದ ಒಬ್ಬ ಆಟಗಾರ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಪದಾರ್ಪಣೆ ಮಾಡಿದರು.

 

ಆಂಗ್ಲರ ಬಳಗದ ಸ್ಟುವರ್ಟ್ ಮೀಕರ್ ಮತ್ತು ಜೇಮ್ಸ ಟ್ರೆಡ್‌ವೆಲ್ ಪದಾರ್ಪಣೆ ಮಾಡಿದರೆ, ಆತಿಥೇಯ ತಂಡದಲ್ಲಿ ದೆಹಲಿಯ ಪರ್ವಿಂದರ್ ಅವಾನ ಚೊಚ್ಚಲ ಟಿ-20 ಅಂತರರಾಷ್ಟ್ರೀಯ ಪಂದ್ಯವನ್ನಾಡಿದರು. 

 

ತಾರಾ ರಂಗು: ಸತತ ಸೋಲಿನ ಸಂಕಷ್ಟದಿಂದ ತೊಳಲಾಡಿದ್ದ ಮಹಿ ಬಳಗದ ಈ ಗೆಲುವಿಗೆ ಬಾಲಿವುಡ್ ನಟ ನಟಿಯರೂ ಸಾಕ್ಷಿಯಾದರು. ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು. ಆಗ ಅಭಿಮಾನಿಗಳ ಚಿತ್ತ ಈ ಜೋಡಿಯ ಸುತ್ತವೇ ಹರಿದಾಡಿತು.ಸ್ಕೋರ್ ವಿವರ

ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157

 


ಮೈಕಲ್ ಲಂಬ್ ಎಲ್‌ಬಿಬ್ಲ್ಯು ಬಿ ಆರ್. ಅಶ್ವಿನ್ 01


ಅಲೆಕ್ಸ್ ಹೇಲ್ಸ್ ಬಿ ಯುವರಾಜ್ ಸಿಂಗ್ 56


ಲೂಕ್ ರೈಟ್ ಸಿ ರಹಾನೆ ಬಿ ಯುವರಾಜ್ ಸಿಂಗ್ 34


ಎಯೋನ್ ಮಾರ್ಗನ್ ಸಿ ರಹಾನೆ ಬಿ ಯುವರಾಜ್ ಸಿಂಗ್ 


05


ಸಮಿತ್ ಪಟೇಲ್ ಸಿ ರಹಾನೆ ಬಿ ಅಶೋಕ್ ದಿಂಡಾ 24


ಜಾಸ್ ಬಟ್ಲರ್ ಔಟಾಗದೆ 33


ಟಿಮ್ ಬ್ರೆಸ್ನನ್ ಸಿ ವಿರಾಟ್ ಬಿ ಅಶೋಕ ದಿಂಡಾ 00


ಜೇಮ್ಸ ಟ್ರೆಡ್‌ವೆಲ್ ಔಟಾಗದೆ 01


ಇತರೆ: (ಲೆಗ್ ಬೈ-2, ವೈಡ್-1) 03

 


ವಿಕೆಟ್ ಪತನ: 1-21 (ಲಂಬ್; 3.1), 2-89 (ರೈಟ್; 10.1), 3-99 (ಹೇಲ್ಸ್; 12.2), 4-100 (ಮಾರ್ಗನ್; 12.4), 5-138 (ಸಮಿತ್; 18.1), 6-139 (ಬ್ರೆಸ್ನನ್; 18.4).


ಬೌಲಿಂಗ್: ಅಶೋಕ್ ದಿಂಡಾ 3-0-18-2, ಆರ್. ಅಶ್ವಿನ್ 4-1-33-1, ಪರ್ವಿಂದರ್ ಅವಾನ 2-0-29-0, ರವೀಂದ್ರ ಜಡೇಜಾ 3-0-22-0, ಪಿಯೂಷ್ ಚಾವ್ಲಾ 3-0-24-0, ವಿರಾಟ್ ಕೊಹ್ಲಿ 1-0-10-0, ಯುವರಾಜ್ ಸಿಂಗ್ 1-0-19-3.

 


ಭಾರತ 17.5  ಓವರ್‌ಗಳಲ್ಲಿ 5 ವಿಕೆಟ್‌ಗೆ 158


ಗೌತಮ್ ಗಂಭೀರ್ ಸಿ ಹೇಲ್ಸ್ ಬಿ ಟಿಮ್ ಬ್ರೆಸ್ನನ್ 16


ಅಜಿಂಕ್ಯ ರಹಾನೆ ಸಿ ಸಮಿತ್ ಬಿ ಟಿಮ್ ಬ್ರೆಸ್ನನ್ 19


ವಿರಾಟ್ ಕೊಹ್ಲಿ ಬಿ ಸ್ಟುವರ್ಟ್ ಮೀಕರ್ 21


ಯುವರಾಜ್ ಸಿಂಗ್ ಸಿ ಮೀಕರ್ ಬಿ ಲೂಕ್ ರೈಟ್ 38


ಸುರೇಶ್ ರೈನಾ ರನ್ ಔಟ್ (ಮಾರ್ಗನ್) 26


ಮಹೇಂದ್ರ ಸಿಂಗ್ ದೋನಿ ಔಟಾಗದೆ 24


ರವೀಂದ್ರ ಜಡೇಜಾ ಔಟಾಗದೆ 00

 


ಇತರೆ: (ಲೆಗ್ ಬೈ-4, ವೈಡ್-10) 14ವಿಕೆಟ್ ಪತನ: 1-42 (ಗಂಭೀರ್; 4.3), 2-44 (ರಹಾನೆ; 4.6), 3-93 (ಯುವರಾಜ್; 9.6), 4-110 (ಕೊಹ್ಲಿ; 12.1), 5-148 (ರೈನಾ; 17.1). 


ಬೌಲಿಂಗ್: ಜೇಡ್ ಡೆರ್ನ್‌ಬಾಚ್ 3-0-27-0, ಟಿಮ್ ಬ್ರೆಸ್ನನ್ 2-0-26-2, ಸ್ಟುವರ್ಟ್ ಮೀಕರ್ 3.5-0-28-1, ಜೇಮ್ಸ ಟ್ರೆಡ್‌ವೆಲ್ 4-0-31-0, ಡ್ಯಾನಿ ಬ್ರಿಗ್ಸ್ 1-0-18-0, ಲೂಕ್ ರೈಟ್ 3-0-24-1


 


ಫಲಿತಾಂಶ: ಭಾರತಕ್ಕೆ ಐದು ವಿಕೆಟ್ ಜಯ  ಹಾಗೂ ಎರಡು ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ


ಪಂದ್ಯ ಶ್ರೇಷ್ಠ: ಯುವರಾಜ್ ಸಿಂಗ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry