`ದೋನಿ ಬದಲಿಸಲು ಚರ್ಚೆ ನಡೆದಿತ್ತು'

7
ಮೊಹಿಂದರ್ ಅಮರ್‌ನಾಥ್ ಬಹಿರಂಗಪಡಿಸಿದ ಸತ್ಯ

`ದೋನಿ ಬದಲಿಸಲು ಚರ್ಚೆ ನಡೆದಿತ್ತು'

Published:
Updated:
`ದೋನಿ ಬದಲಿಸಲು ಚರ್ಚೆ ನಡೆದಿತ್ತು'

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ದೋನಿ ಅವರನ್ನು ಕೆಳಗಿಳಿಸಬೇಕೇ ಎಂಬ ಚರ್ಚೆಯ ಕಾವು ಹೆಚ್ಚಿಸುವ ಕೆಲಸವನ್ನು ಮಾಜಿ ಆಟಗಾರ ಮೊಹಿಂದರ್ ಅಮರ್‌ನಾಥ್ ಮಾಡಿದ್ದಾರೆ.ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸತತ ಎಂಟು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿದ್ದ ಸಂದರ್ಭ ದೋನಿ ಅವರನ್ನು ಬದಲಿಸುವ ಬಗ್ಗೆ ಚರ್ಚೆ ನಡೆದಿತ್ತು ಎಂಬುದನ್ನು ಬಿಸಿಸಿಐ ಮಾಜಿ ಆಯ್ಕೆಗಾರ ಅಮರ್‌ನಾಥ್ ಬಹಿರಂಗಪಡಿಸಿದ್ದಾರೆ. ಆದರೆ `ಕೆಲವೊಂದು ಆಂತರಿಕ ಕಾರಣ'ಗಳಿಂದಾಗಿ ಆಯ್ಕೆ ಸಮಿತಿಯು ಅವರನ್ನು ಬದಲಿಸುವ ನಿರ್ಧಾರ ಕೈಬಿಟ್ಟಿತು ಎಂದಿದ್ದಾರೆ.`ದೋನಿ ಅವರನ್ನು ಬದಲಿಸಬೇಕೆಂಬ ಚರ್ಚೆ ಖಂಡಿತವಾಗಿಯೂ ನಡೆದಿತ್ತು. ಮಾತ್ರವಲ್ಲ ಅದಕ್ಕೆ ಕೆಲವರ ಒಪ್ಪಿಗೆಯೂ ಇತ್ತು. ಅದರೆ ಆಂತರಿಕ ಕಾರಣಗಳಿಂದಾಗಿ ಅದು ನಡೆಯಲಿಲ್ಲ. ಆ ಕಾರಣಗಳು ಯಾವುವು ಎಂಬುದನ್ನು ಈಗ ಬಹಿರಂಗಪಡಿಸುವುದಿಲ್ಲ. ಆದರೆ ಸೂಕ್ತ ಸಂದರ್ಭದಲ್ಲಿ ಅದನ್ನು ಬಹಿರಂಗಪಡಿಸುವೆ. ದೇಶದ ಜನರು ಎಲ್ಲವನ್ನೂ ತಿಳಿಯಲಿ' ಎಂದು ಅಮರ್‌ನಾಥ್ ಖಾಸಗಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.ಅದೇ ರೀತಿ ದೋನಿ ಅವರನ್ನು ಬದಲಿಸದಂತೆ ಕೆಲವು ಬಾಹ್ಯ ಒತ್ತಡಗಳೂ ಆಯ್ಕೆ ಸಮಿತಿ ಮೇಲಿದ್ದವು ಎಂದಿದ್ದಾರೆ. `ಭಾರತದಲ್ಲಿ ರಾಜಕೀಯ ಮತ್ತು ಕ್ರಿಕೆಟ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿ ಕೆಲವರು ಈ ಕ್ರೀಡೆಯನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ಇತರರು ಒಂದು ನಿರ್ಧಾರ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ' ಎಂದು 1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಅಮರ್‌ನಾಥ್ ನುಡಿದಿದ್ದಾರೆ.`ದೋನಿ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಸಬೇಕೆಂಬುದು ನನ್ನ ಅನಿಸಿಕೆ. ಏಕೆಂದರೆ ಟೆಸ್ಟ್‌ನಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿಲ್ಲ. ನಾಯಕನಾದವನು ಶ್ರೇಷ್ಠ ಆಟದ ಮೂಲಕ ತಂಡದಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಬೇಕು. ಆದರೆ ದೋನಿ ಅದರಲ್ಲಿ ವಿಫಲರಾಗಿದ್ದಾರೆ. ಮಾತ್ರವಲ್ಲ ಟೆಸ್ಟ್ ಕ್ರಿಕೆಟ್‌ಗೆ ಬೇಕಿರುವ ಕೌಶಲವೂ ಅವರಿಗಿಲ್ಲ' ಎಂದಿದ್ದಾರೆ.ಅಮರ್‌ನಾಥ್ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗುವರು ಎಂದೇ ಭಾವಿಸಲಾಗಿತ್ತು. ಆದರೆ ಮಂಡಳಿಯು ಅವರನ್ನು ಸಮಿತಿಯಿಂದಲೇ ಕೈಬಿಟ್ಟಿತ್ತು. ದೋನಿ ಜೊತೆಗೆ ಭಿನ್ನಾಭಿಪ್ರಾಯ ಹೊಂದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.`ನಾಯಕತ್ವದಿಂದ ಕೆಳಗಿಳಿದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಯಸುವುದಿಲ್ಲ. ನಾಯಕಸ್ಥಾನದಲ್ಲಿ ಮುಂದುವರಿಯುತ್ತೇನೆ' ಎಂದು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಬಳಿಕ ದೋನಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ  ಅಮರ್‌ನಾಥ್, `ನಾನು ತಂಡದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಲು ದೋನಿ ಯಾರು, ಅವರು ತಂಡಕ್ಕಾಗಿ ಏನು ಮಾಡಿದ್ದಾರೆ' ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, `ದೋನಿ ಇನ್ನೂ ತಂಡದಲ್ಲಿರುವ ಕಾರಣ ಇತರ ಅರ್ಹ ವಿಕೆಟ್‌ಕೀಪರ್‌ಗಳು ಅವಕಾಶ ವಂಚಿತರಾಗುತ್ತಿದ್ದಾರೆ' ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry