ದೋನಿ ಭಯದಲ್ಲಿ ಇಂಗ್ಲೆಂಡ್ ತಂಡ

7
ಕ್ರಿಕೆಟ್: ಭಾರತಕ್ಕೆ ಸರಣಿ ಮುನ್ನಡೆ ಸಾಧಿಸುವ ತವಕ

ದೋನಿ ಭಯದಲ್ಲಿ ಇಂಗ್ಲೆಂಡ್ ತಂಡ

Published:
Updated:
ದೋನಿ ಭಯದಲ್ಲಿ ಇಂಗ್ಲೆಂಡ್ ತಂಡ

ರಾಂಚಿ:`ಭಾರತ ತಂಡದ ನಾಯಕನ ಹುಟ್ಟೂರಿಗೆ ಆಗಮಿಸಿರುವ ಟೀಮ್ ಇಂಡಿಯಾಕ್ಕೆ ಸ್ವಾಗತ' ಎಂದು ಬರೆದಿರುವ ಬೃಹತ್ ಗಾತ್ರದ ಬ್ಯಾನರ್‌ಗಳು ರಾಂಚಿಯ ಪ್ರಮುಖ ಬೀದಿಗಳಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಆತಿಥೇಯ ತಂಡದ ಆಟಗಾರರಿಗೆ ಹೊಸ ಹುಮ್ಮಸ್ಸು ಹಾಗೂ ಚೈತನ್ಯ ತುಂಬುವ ಕೆಲಸವನ್ನು ರಾಂಚಿಯ ಜನತೆ ಮಾಡಿದ್ದಾರೆ.ತಾವು ನೀಡಿದ ಬೆಂಬಲದ ಬಲದಿಂದ ಭಾರತ ಜಯ ಪಡೆಯಲಿ ಎಂಬುದು ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಹಾರೈಕೆ. ತಮ್ಮ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ಹಾಗೂ ಹುಟ್ಟೂರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ ನಾಯಕನಿಗೆ ಗೆಲುವಿನ `ಉಡುಗೊರೆ' ನೀಡುವುದು ಭಾರತ ತಂಡದ ಗುರಿ.ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಲ್ಲಿನ ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‌ಸಿಎ) ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.ಎರಡು ತಂಡಗಳ ನಡುವಿನ ಹೋರಾಟ ಇದಾಗಿದ್ದರೂ, ಎಲ್ಲರ ಗಮನ ನೆಟ್ಟಿರುವುದು ಒಬ್ಬರ ಮೇಲೆ ಮಾತ್ರ. ಅದು ಬೇರಾರೂ ಅಲ್ಲ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ. ಹುಟ್ಟೂರಿನಲ್ಲಿ ಮೊದಲ ಪಂದ್ಯ ಆಡುತ್ತಿರುವ `ಮಹಿ' ಎಲ್ಲ ಒತ್ತಡ ಮೆಟ್ಟಿನಿಂತು ತಂಡವನ್ನು ಜಯದತ್ತ ಮುನ್ನಡೆಸುವರೇ ಎಂಬುದನ್ನು ನೋಡಬೇಕು.ಐದು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲದಲ್ಲಿದೆ. ಈ ಕಾರಣ ಇಂದಿನ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದು. ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆದರೆ, ಇನ್ನುಳಿದ ಪಂದ್ಯಗಳಲ್ಲಿ ಒತ್ತಡವಿಲ್ಲದೆ ಆಡಬಹುದು. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 9 ರನ್‌ಗಳಿಂದ ಸೋಲು ಅನುಭವಿಸಿದ್ದ ಭಾರತ ಕೊಚ್ಚಿಯಲ್ಲಿ 127 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.ದೋನಿ ಅದ್ಭುತ ಫಾರ್ಮ್‌ನಲ್ಲಿರುವ ಸಂದರ್ಭದಲ್ಲೇ ಹುಟ್ಟೂರಿನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿರುವುದು ಇಲ್ಲಿನ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕೊಚ್ಚಿಯಲ್ಲಿ 66 ಎಸೆತಗಳಲ್ಲಿ 72 ರನ್ ಗಳಿಸಿದ್ದ ಅವರು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.`ಮಹಿ' ಇತ್ತೀಚಿನ ಐದು ಇನಿಂಗ್ಸ್‌ಗಳಲ್ಲಿ 102.33ರ ಸರಾಸರಿಯಲ್ಲಿ 307 ರನ್ ಕಲೆಹಾಕಿದ್ದಾರೆ. ಇದರಿಂದ ಅವರ ಭಯದಲ್ಲೇ ಇಂಗ್ಲೆಂಡ್ ತಂಡ ಕಣಕ್ಕಿಳಿಯಲಿದೆ. `ಬ್ಯಾಟಿಂಗ್‌ಗೆ ನೆರವು ನೀಡುವಂತಹ ಪಿಚ್‌ಗಳಲ್ಲಿ ದೋನಿಗೆ ಕಡಿವಾಣ ತೊಡಿಸುವುದು ಕಠಿಣ' ಎಂದು ಕುಕ್ ಎರಡನೇ ಏಕದಿನ ಪಂದ್ಯದ ಬಳಿಕ ಹೇಳಿದ್ದರು.ಕೊಚ್ಚಿಯಲ್ಲಿ ಗೆಲುವು ಪಡೆದಿದ್ದರೂ, ಭಾರತದ ಅಗ್ರ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದ್ದರು. ತಂಡ ಒಂದು ಹಂತದಲ್ಲಿ 119 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಸುರೇಶ್ ರೈನಾ, ದೋನಿ ಮತ್ತು ರವೀಂದ್ರ ಜಡೇಜ ನಡೆಸಿದ ಮರುಹೋರಾಟದಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.ಭಾರತ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯೇ ಅಧಿಕ. ಅಜಿಂಕ್ಯ ರಹಾನೆ ಬದಲು ಚೇತೇಶ್ವರ ಪೂಜಾರಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.ಇಂಗ್ಲೆಂಡ್ ಮೇಲೆ ಒತ್ತಡ: ಪ್ರವಾಸಿ ತಂಡ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಒತ್ತಡಕ್ಕೆ ಒಳಗಾಗಿದೆ.  ಏಕೆಂದರೆ ಕುಕ್ ನೇತೃತ್ವದ ತಂಡ ಟೆಸ್ಟ್ ಸರಣಿ ಗೆದ್ದ ಸಂಭ್ರಮದಲ್ಲಿ ಪ್ರಥಮ ಏಕದಿನ ಪಂದ್ಯ ಆಡಿತ್ತು. ಅದೇ ರೀತಿ ಮೊದಲ ಪಂದ್ಯದಲ್ಲಿ ದೊರೆತ ಜಯದ ಆತ್ಮವಿಶ್ವಾಸದೊಂದಿಗೆ ಕೊಚ್ಚಿಯಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಕಣಕ್ಕಿಳಿದಿತ್ತು.ಆದರೆ ಕೊಚ್ಚಿಯಲ್ಲಿ ಸೋಲು ಎದುರಾಗಿರುವ ಕಾರಣ ಕುಕ್ ಬಳಗಕ್ಕೆ ಒತ್ತಡದ ಬಿಸಿ ತಟ್ಟಿದೆ. ಅಂತಿಮ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟದ್ದು ಸೋಲಿಗೆ ಕಾರಣವಾಗಿತ್ತು. ಈ ತಪ್ಪು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಇಂಗ್ಲೆಂಡ್ ಹೆಚ್ಚಿನ ಗಮನ ನೀಡಲಿದೆ.ಕುಕ್ ಮತ್ತು ಇಯಾನ್ ಬೆಲ್ ಅವರಿಂದ ಇಂಗ್ಲೆಂಡ್ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ 158 ರನ್‌ಗಳ ಜೊತೆಯಾಟ ನೀಡಿದ್ದ ಇವರು, ಕೊಚ್ಚಿಯಲ್ಲಿ ವಿಫಲರಾಗಿದ್ದರು. ಕೆವಿನ್ ಪೀಟರ್ಸನ್ ಅವರಿಂದಲೂ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದೆ. ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದಿದ್ದ ಪೀಟರ್ಸನ್ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾಗಿದ್ದರು.ಪಿಚ್ ರಿಪೋರ್ಟ್: ಹೊಸ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಲಿದೆ. `ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್‌ಗಳು ಹರಿದುಬರಬೇಕೆಂಬುದು ಪ್ರೇಕ್ಷಕರ ನಿರೀಕ್ಷೆ. ಇಲ್ಲಿ ನಡೆಯುವ ಪಂದ್ಯದಲ್ಲಿ ಓವರ್‌ಗೆ ಸರಾಸರಿ ಆರು ಅಥವಾ ಏಳರಂತೆ ರನ್‌ಗಳು ಬರುವ ಸಾಧ್ಯತೆಯಿದೆ' ಎಂದು ಸ್ಥಳೀಯ ಕ್ಯುರೇಟರ್ ಬಸುದೇವ್ ಹೇಳಿದರು.ಈ ಕ್ರೀಡಾಂಗಣದಲ್ಲಿ 2012ರ ನವೆಂಬರ್‌ನಲ್ಲಿ ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ನಡುವೆ ರಣಜಿ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಒಟ್ಟು ನಾಲ್ಕು ಆಟಗಾರರು ಶತಕ ಗಳಿಸಿದ್ದರು.`ಇದು ಹೊಸ ಕ್ರೀಡಾಂಗಣ. ಈ ಪಿಚ್‌ನಲ್ಲಿ ಮೊದಲ ಪಂದ್ಯ. ಆದ್ದರಿಂದ ಟಾಸ್ ಕೂಡಾ ಪ್ರಮುಖ ಪಾತ್ರ ವಹಿಸಲಿದೆ. ಮೊದಲು ಫೀಲ್ಡಿಂಗ್ ಮಾಡುವುದು ಒಳ್ಳೆಯದು' ಎಂಬ ಅಭಿಪ್ರಾಯವನ್ನು ರವೀಂದ್ರ ಜಡೇಜ ವ್ಯಕ್ತಪಡಿಸಿದರು. ಆದರೆ ಟಾಸ್ ಗೆದ್ದರೆ ನಾಯಕ ದೋನಿ ಯಾವ ನಿರ್ಧಾರ ಕೈಗೊಳ್ಳುವರು ಎಂಬುದನ್ನು ನೋಡಬೇಕು.ತಂಡಗಳು ಇಂತಿವೆ...

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ, ರವೀಂದ್ರ ಜಡೇಜ, ಆರ್. ಅಶ್ವಿನ್, ಇಶಾಂತ್ ಶರ್ಮ, ಅಜಿಂಕ್ಯ ರಹಾನೆ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಶಮಿ ಅಹ್ಮದ್, ಅಮಿತ್ ಮಿಶ್ರಾ

ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ಜೋ ರೂಟ್, ಇಯಾನ್ ಬೆಲ್, ಟಿಮ್  ಬ್ರೆಸ್ನನ್, ಡ್ಯಾನಿ ಬ್ರಿಗ್ಸ್, ಜಾಸ್ ಬಟ್ಲರ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೆಗ್  ಕೀಸ್‌ವೆಟರ್, ಸ್ಟುವರ್ಟ್ ಮೀಕರ್, ಎಯೊನ್ ಮಾರ್ಗನ್, ಸಮಿತ್ ಪಟೇಲ್, ಕೆವಿನ್ ಪೀಟರ್ಸನ್, ಜೇಮ್ಸ ಟ್ರೆಡ್‌ವೆಲ್, ಕ್ರಿಸ್ ವೋಕ್ಸ್ಅಂಪೈರ್: ಎಸ್. ರವಿ ಮತ್ತು ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ವಿನೀತ್ ಕುಲಕರ್ಣಿ. ಮ್ಯಾಚ್ ರೆಫರಿ: ಆ್ಯಂಡಿ ಪೈಕ್ರಾಫ್ಟ್ (ಜಿಂಬಾಬ್ವೆ)

ಪಂದ್ಯದ ಆರಂಭ: ಮಧ್ಯಾಹ್ನ 12.00ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry