ದೋನಿ ಹುಟ್ಟೂರಲ್ಲಿ ಗೆಲುವಿನ ಸಿಹಿ

7
ಕ್ರಿಕೆಟ್: ಬೌಲರ್‌ಗಳ ಮಿಂಚು, ಕೊಹ್ಲಿ ಭರ್ಜರಿ ಆಟ; ಸರಣಿ ಮುನ್ನಡೆ ಸಾಧಿಸಿದ ಭಾರತ

ದೋನಿ ಹುಟ್ಟೂರಲ್ಲಿ ಗೆಲುವಿನ ಸಿಹಿ

Published:
Updated:
ದೋನಿ ಹುಟ್ಟೂರಲ್ಲಿ ಗೆಲುವಿನ ಸಿಹಿ

ರಾಂಚಿ: ಯುವರಾಜ್ ಸಿಂಗ್ ಔಟಾದಾಗ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರೆಲ್ಲವೂ ಕುಳಿತಲ್ಲಿಂದ ಎದ್ದು ನಿಂತರು. ಪೆವಿಲಿಯನ್‌ನತ್ತ ದೃಷ್ಟಿ ಹೊರಳಿಸಿದರು. ಮಹೇಂದ್ರ ಸಿಂಗ್ ದೋನಿ ಕ್ರೀಸ್‌ಗೆ ಆಗಮಿಸುವರೇ ಎಂಬ ಕುತೂಹಲ ಎಲ್ಲರದ್ದು.ಅಲ್ಲಿ ನೆರೆದ 40 ಸಾವಿರದಷ್ಟು ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಲಿಲ್ಲ. ದೋನಿ  ಕ್ರೀಸ್‌ನತ್ತ ಹೆಜ್ಜೆಯಿಟ್ಟರು. ಗ್ಯಾಲರಿಗಳಲ್ಲಿ ವಿದ್ಯುತ್ ಸಂಚರಿಸಿದ ಅನುಭವ. ನೆಚ್ಚಿನ `ಮಹಿ' ಬ್ಯಾಟಿಂಗ್‌ಗೆ ಆಗಮಿಸುವ ಸಂದರ್ಭ ಭಾರತದ ಗೆಲುವಿಗೆ ಬೇಕಿದ್ದದ್ದು 12 ರನ್‌ಗಳು ಮಾತ್ರ.ಸ್ಟೀವನ್ ಫಿನ್ ಎಸೆದ 29ನೇ ಓವರ್‌ನ ಮೊದಲ ಎಸೆತದಲ್ಲಿ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್ ಕಡೆ ಬೌಂಡರಿಗೆ ಅಟ್ಟಿದ ದೋನಿ ಭಾರತದ ಗೆಲುವನ್ನು ಪೂರ್ಣಗೊಳಿಸಿದರು. ಹುಟ್ಟೂರಿನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ತಂಡವನ್ನು ಜಯದತ್ತ ಮುನ್ನಡೆಸುವ ಹಾಗೂ ಗೆಲುವಿನ ರನ್ ಗಳಿಸುವ ಅದೃಷ್ಟ ದೋನಿಗೆ ಒಲಿಯಿತು.ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದೋನಿ ಬಳಗ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು 42.2 ಓವರ್‌ಗಳಲ್ಲಿ 155 ರನ್‌ಗಳಿಗೆ ನಿಯಂತ್ರಿಸಿದ ಭಾರತ, 28.1 ಓವರ್‌ಗಳಲ್ಲಿ 3 ವಿಕೆಟ್‌ಗೆ 157 ರನ್ ಗಳಿಸಿತು. ಈ ಜಯದ ಕಾರಣ ಭಾರತಕ್ಕೆ ಐದು ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಲಭಿಸಿದೆ. ಮಾತ್ರವಲ್ಲ ಟೆಸ್ಟ್ ಸರಣಿಯಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸುವ ನಿಟ್ಟಿನಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಿಟ್ಟಿದೆ.ದೋನಿ ಆಗಮಿಸುವ ಮುನ್ನವೇ ವಿರಾಟ್ ಕೊಹ್ಲಿ (ಅಜೇಯ 77, 79 ಎಸೆತ, 9 ಬೌಂ, 2 ಸಿಕ್ಸರ್), ಗೌತಮ್ ಗಂಭೀರ್ (33) ಮತ್ತು ಯುವರಾಜ್ ಸಿಂಗ್ (30, 21 ಎಸೆತ, 6 ಬೌಂ) ಸೇರಿಕೊಂಡು ಭಾರತದ ಗೆಲುವಿಗೆ ವೇದಿಕೆ ನಿರ್ಮಿಸಿದ್ದರು. ಬ್ಯಾಟಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಅಲಸ್ಟೇರ್ ಕುಕ್ ಬಳಗವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಬೌಲರ್‌ಗಳಿಗೂ ಅಭಿನಂದನೆ ಸಲ್ಲಿಸಬೇಕು.ಲಯ ಕಂಡುಕೊಂಡ ಕೊಹ್ಲಿ: ಸಾಧಾರಣ ಗುರಿ ಬೆನ್ನಟ್ಟಿದ ಭಾರತ ಅಜಿಂಕ್ಯ ರಹಾನೆ (0) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಕೊಹ್ಲಿ ಎರಡನೇ ವಿಕೆಟ್‌ಗೆ ಗಂಭೀರ್ ಜೊತೆ 67 ರನ್ ಹಾಗೂ ಮೂರನೇ ವಿಕೆಟ್‌ಗೆ ಯುವರಾಜ್ ಜೊತೆ 66 ರನ್ ಕಲೆಹಾಕಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.ಇತ್ತೀಚಿನ ದಿನಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಶುಭ ಸೂಚನೆಯಾಗಿದೆ. ಡೆರ್ನ್‌ಬ್ಯಾಕ್ ಓವರ್‌ನಲ್ಲಿ ಸತತ ಮೂರು ಬೌಂಡರಿ ಸಿಡಿಸಿದ ದೆಹಲಿಯ ಬ್ಯಾಟ್ಸ್‌ಮನ್ ಆರಂಭದಲ್ಲೇ ಆತ್ಮವಿಶ್ವಾಸ ಗಳಿಸಿಕೊಂಡರು. ಆ ಬಳಿಕ ಅವರು ತೋರಿದ್ದು ಅದ್ಭುತ ಬ್ಯಾಟಿಂಗ್. ಪಂದ್ಯದಲ್ಲಿ ದಾಖಲಾದ ಎರಡೂ ಸಿಕ್ಸರ್‌ಗಳು ಕೊಹ್ಲಿ ಬ್ಯಾಟ್‌ನಿಂದಲೇ ಬಂದವು.ದೋನಿಗೆ ಬ್ಯಾಟಿಂಗ್ ಅವಕಾಶ ದೊರೆಯುವುದಿಲ್ಲವೇ ಎಂಬ ಆತಂಕ ಅಭಿಮಾನಿಗಳಿಗೆ ಕಾಡಿತ್ತು. ಆದರೆ ಗೆಲುವಿಗೆ ಕೆಲವೇ ರನ್‌ಗಳು ಬೇಕಿದ್ದಾಗ `ಯುವಿ' ಔಟಾದರು. ರಾಂಚಿಯ ನೆಲದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯದ ಪ್ರತಿಯೊಂದು ಕ್ಷಣಗಳನ್ನು ಪ್ರೇಕ್ಷಕರು ಚೆನ್ನಾಗಿ ಆನಂದಿಸಿದರು. ಮಹಿ.... ಮಹಿ.. ಎಂಬ ಕೂಗು ಎಲ್ಲ ಗ್ಯಾಲರಿಗಳಿಂದಲೂ ಮೊಳಗಿದವು.ಬೌಲರ್‌ಗಳ ಪಾರಮ್ಯ:  ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಕ್ಯುರೇಟರ್ ಹೇಳಿದಂತೆ ಈ ಪಂದ್ಯದಲ್ಲಿ ರನ್ ಮಳೆ ಕಂಡುಬರಲಿಲ್ಲ. ವಿಕೆಟ್‌ಗಳು ಪಟಪಟನೆ ಉರುಳಿದವು. ದೋನಿ ಚೆಂಡು ನೀಡಿದ ಎಲ್ಲ ಬೌಲರ್‌ಗಳೂ ವಿಕೆಟ್ ಪಡೆದರು. ಅವರಲ್ಲಿ ರವೀಂದ್ರ ಜಡೇಜ (19ಕ್ಕೆ 3) ಯಶಸ್ವಿ ಎನಿಸಿಕೊಂಡರು.ಪಿಚ್ ಆರಂಭದಲ್ಲಿ ಸ್ವಿಂಗ್ ಮತ್ತು ಬೌನ್ಸ್‌ಗೆ ನೆರವು ನೀಡಿತು. ಶಮಿ ಅಹ್ಮದ್ ಹಾಗೂ ಭುವನೇಶ್ವರ್ ಕುಮಾರ್ ಇದರ ಲಾಭ ಎತ್ತಿಕೊಂಡರು. ಇಂಗ್ಲೆಂಡ್‌ನ ಪತನಕ್ಕೆ ಚಾಲನೆ ನೀಡಿದ್ದು ಶಮಿ. ಎಂಟನೇ ಓವರ್‌ನಲ್ಲಿ ಅಲಸ್ಟೇರ್ ಕುಕ್ ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದರು. ಇಂಗ್ಲೆಂಡ್ ನಾಯಕನ ಗಳಿಕೆ 17. ಇಯಾನ್ ಬೆಲ್ ಮತ್ತು ಕೆವಿನ್ ಪೀಟರ್ಸನ್ ಎರಡನೇ ವಿಕೆಟ್‌ಗೆ 44 ರನ್‌ಗಳನ್ನು ಸೇರಿಸಿದರು.ಇಶಾಂತ್ ಶರ್ಮ ಎಸೆತದಲ್ಲಿ ದೋನಿಗೆ ಕ್ಯಾಚಿತ್ತು ಪೀಟರ್ಸನ್ (17, 20 ಎಸೆತ, 2 ಬೌಂ) ನಿರ್ಗಮಿಸಿದರು. ಆದರೆ ಚೆಂಡು ಅವರ ಬ್ಯಾಟ್‌ಗೆ ತಾಗಿರಲಿಲ್ಲ. ಅಂಪೈರ್ ಎಸ್. ರವಿ ನೀಡಿದ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸುತ್ತಲೇ ಕೆವಿನ್ ಪೆವಿಲಿಯನ್‌ನತ್ತ ಹೆಜ್ಜೆಯಿಟ್ಟರು.ಆರಂಭದಿಂದಲೇ ಪರದಾಡುತ್ತಿದ್ದ ಬೆಲ್ (25, 43 ಎಸೆತ, 3 ಬೌಂ) ಯುವ ಬೌಲರ್ ಭುವನೇಶ್ವರ್ ಎಸೆತದಲ್ಲಿ ವಿಕೆಟ್ ಹಿಂದುಗಡೆ ಕ್ಯಾಚಿತ್ತರು.

ದೋನಿ ಆಕ್ರಮಣಕಾರಿ ಫೀಲ್ಡಿಂಗ್ ವ್ಯೆಹ ನಿರ್ಮಿಸಿ ಇಂಗ್ಲೆಂಡ್ ಮೇಲಿನ ಹಿಡಿತ ಬಿಗಿಗೊಳಿಸುತ್ತಲೇ ಇದ್ದರು. 10 ರಿಂದ 20 ಓವರ್‌ಗಳ ನಡುವಿನ ಅಧಿಕ ಸಮಯವೂ ಏಳು ಫೀಲ್ಡರ್‌ಗಳನ್ನು 30 ಯಾರ್ಡ್ ಸರ್ಕಲ್‌ನ ಒಳಗೆ ನಿಲ್ಲಿಸಿದರು. ಈ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಒಂದು ಹಾಗೂ ಎರಡು ರನ್‌ಗಳನ್ನು ಗಳಿಸಿ ಇನಿಂಗ್ಸ್ ಬೆಳೆಸುವುದನ್ನು ತಡೆದರು.3 ವಿಕೆಟ್‌ಗೆ 97 ರನ್ ಗಳಿಸಿದ್ದ ಪ್ರವಾಸಿ ತಂಡ ಮುಂದಿನ ಒಂಬತ್ತು ಎಸೆತಗಳ ಅಂತರದಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋ ರೂಟ್ (39, 57 ಎಸೆತ, 4 ಬೌಂ) ಮತ್ತು ಟಿಮ್ ಬ್ರೆಸ್ನನ್ (25) ಏಳನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ನೀಡಿದ ಕಾರಣ ಮೊತ್ತ 150ರ ಗಡಿ ದಾಟಿತು.

ಸ್ಕೋರ್ ವಿವರಇಂಗ್ಲೆಂಡ್: 42.2 ಓವರ್‌ಗಳಲ್ಲಿ 155

ಅಲಸ್ಟೇರ್ ಕುಕ್ ಎಲ್‌ಬಿಡಬ್ಲ್ಯು ಬಿ ಶಮಿ ಅಹ್ಮದ್  17

ಇಯಾನ್ ಬೆಲ್ ಸಿ ದೋನಿ ಬಿ ಭುವನೇಶ್ವರ್ ಕುಮಾರ್  25

ಕೆವಿನ್ ಪೀಟರ್ಸನ್ ಸಿ ದೋನಿ ಬಿ ಇಶಾಂತ್ ಶರ್ಮ  17

ಜೋ ರೂಟ್ ಸಿ ದೋನಿ ಬಿ ಇಶಾಂತ್ ಶರ್ಮ  39

ಎಯೊನ್ ಮಾರ್ಗನ್ ಸಿ ಯುವರಾಜ್ ಬಿ ಆರ್. ಅಶ್ವಿನ್  10

ಕ್ರೆಗ್ ಕೀಸ್‌ವೆಟರ್ ಬಿ ರವೀಂದ್ರ ಜಡೇಜ  00

ಸಮಿತ್ ಪಟೇಲ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  00

ಟಿಮ್ ಬ್ರೆಸ್ನನ್ ಬಿ ಆರ್. ಅಶ್ವಿನ್  25

ಜೇಮ್ಸ ಟ್ರೆಡ್‌ವೆಲ್ ಔಟಾಗದೆ  04

ಸ್ಟೀವನ್ ಫಿನ್ ಸಿ ಯುವರಾಜ್ ಬಿ ಸುರೇಶ್ ರೈನಾ  03

ಜೇಡ್ ಡೆರ್ನ್‌ಬಾಕ್ ಬಿ ರವೀಂದ್ರ ಜಡೇಜ  00

ಇತರೆ: (ಲೆಗ್‌ಬೈ-6, ವೈಡ್-9)  15ವಿಕೆಟ್ ಪತನ: 1-24 (ಕುಕ್; 7.6), 2-68 (ಪೀಟರ್ಸನ್; 14.5), 3-68 (ಬೆಲ್; 15.2), 4-97 (ಮಾರ್ಗನ್; 2.4), 5-98 (ಕೀಸ್‌ವೆಟರ್; 24.2), 6-98 (ಸಮಿತ್; 24.6), 7-145 (ರೂಟ್; 36.4), 8-145 (ಬ್ರೆಸ್ನನ್; 37.2), 9-155 (ಫಿನ್; 41.5), 10-155 (ಡೆರ್ನ್‌ಬಾಕ್; 42.2)

ಬೌಲಿಂಗ್: ಭುವನೇಶ್ವರ್ ಕುಮಾರ್ 10-2-40-1, ಶಮಿ ಅಹ್ಮದ್ 8-0-23-1, ಇಶಾಂತ್ ಶರ್ಮ 7-0-29-2, ರವೀಂದ್ರ ಜಡೇಜ 6.2-0-19-3, ಆರ್. ಅಶ್ವಿನ್ 10-0-37-2, ಸುರೇಶ್ ರೈನಾ 1-0-1-1ಭಾರತ: 28.1 ಓವರ್‌ಗಳಲ್ಲಿ 3 ವಿಕೆಟ್‌ಗೆ 157

ಗೌತಮ್ ಗಂಭೀರ್ ಸಿ ರೂಟ್ ಬಿ ಜೇಮ್ಸ ಟ್ರೆಡ್‌ವೆಲ್  33

ಅಜಿಂಕ್ಯ ರಹಾನೆ ಬಿ ಸ್ಟೀವನ್ ಫಿನ್  00

ವಿರಾಟ್ ಕೊಹ್ಲಿ ಔಟಾಗದೆ  77

ಯುವರಾಜ್ ಸಿಂಗ್ ಬಿ ಜೇಮ್ಸ ಟ್ರೆಡ್‌ವೆಲ್  30

ಮಹೇಂದ್ರ ಸಿಂಗ್ ದೋನಿ ಔಟಾಗದೆ  10

ಇತರೆ: (ಬೈ-1, ಲೆಗ್‌ಬೈ-1, ವೈಡ್-5)  07ವಿಕೆಟ್ ಪತನ: 1-11 (ರಹಾನೆ; 2.5), 2-78 (ಗಂಭೀರ್; 17.3), 3-144 (ಯುವರಾಜ್; 25.3)

ಬೌಲಿಂಗ್: ಸ್ಟೀವನ್ ಫಿನ್ 9.1-0-50-1, ಜೇಡ್ ಡೆರ್ನ್‌ಬಾಕ್ 5-0-45-0, ಟಿಮ್ ಬ್ರೆಸ್ನನ್ 7-2-31-0, ಜೇಮ್ಸ ಟ್ರೆಡ್‌ವೆಲ್ 7-1-29-2

ಫಲಿತಾಂಶ: ಭಾರತಕ್ಕೆ 7 ವಿಕೆಟ್ ಜಯ ಹಾಗೂ ಸರಣಿಯಲ್ಲಿ 2-1ರ ಮುನ್ನಡೆ.ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ

ನಾಲ್ಕನೇ ಪಂದ್ಯ: ಜ. 23 (ಮೊಹಾಲಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry