ದೋಷಾರೋಪಣೆ ಪಟ್ಟಿ ಸಲ್ಲಿಕೆಗೆ ಆದೇಶ

7

ದೋಷಾರೋಪಣೆ ಪಟ್ಟಿ ಸಲ್ಲಿಕೆಗೆ ಆದೇಶ

Published:
Updated:

ರಾಯಚೂರು: ರಾಯಚೂರು ನಗರಸಭೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹಿಂದಿನ ಪೌರಾಯುಕ್ತ ತಿಪ್ಪೇಶ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ ಸೇರಿದಂತೆ 6 ಜನರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ ಅವರು ಪೌರಾಡಳಿತ ನಿರ್ದೇಶನಾಲಯ ಆಯುಕ್ತರಿಗೆ ಆದೇಶಿಸಿದ್ದಾರೆ ಎಂದು ರಾಯಚೂರು ವಿಕಾಸ ಪರಿಷತ್‌ನ ಅಧ್ಯಕ್ಷ ರವೀಂದ್ರ ಜಾಲ್ದಾರ್ ಹೇಳಿದರು.



ಬುಧವಾರ ವಿವಿಧ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ನಾಗರೀಕ ಸೇವಾ(ಸಿ.ಸಿ.ಎ) ನಿಯಮ-1957ರ ನಿಯಮ 11 ಮತ್ತು 13ರಡಿಯಲ್ಲಿ ಶಿಸ್ತು ಜರುಗಿಸಲು ಅನುಬಂಧ-1ರಿಂದ 4ರಲ್ಲಿ ಹಿಂದಿನ ಪೌರಾಯುಕ್ತ ತಿಪ್ಪೇಶ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ, ಕಿರಿಯ ಎಂಜಿನಿಯರ್‌ರಾದ ಶ್ರೀನಿವಾಸ, ಕೃಷ್ಣಾ,  ಸಂಗಮೇಶ ಮತ್ತು ಶರಣಬಸವ ಎಂಬುವವರ ವಿರುದ್ಧ ದೋಷಾರೋಪಣೆ ಪಟ್ಟಿ ತಯಾರಿಸಿ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಅವರ ಆದೇಶದ ಮೇರೆಗೆ ಇಲಾಖೆ ಆಧೀನ ಕಾರ್ಯದರ್ಶಿ ಕೆ.ವಿ.ರಾಮಪ್ಪ ಅವರು ದೋಷಾರೋಪಣ ಪಟ್ಟಿ ಸಲ್ಲಿಕೆಗೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.



ನಗರಸಭೆ ಅವ್ಯವಹಾರ ಕುರಿತು ತನಿಖೆ ನಡೆಸಿ ಪೌರಾಡಳಿತ ಇಲಾಖೆ ಜಂಟಿ ನಿರ್ದೇಶಕ ಅಕ್ರಂ ಪಾಷಾ ಅವರು ನೀಡಿದ ವರದಿಯನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ ತಳ್ಳಿ ಹಾಕಿ ಈ ಆರು ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.



ನಗರಸಭೆ ಅವ್ಯವಹಾರ ಕುರಿತು ಸಂಘಟನೆಯು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಆದರೆ, ಈಚೆಗೆ ತನಿಖೆ ನಡೆಸಲು ಆಗಮಿಸಿದ್ದ ಪೌರಾಡಳಿತ ಇಲಾಖೆ ಜಂಟಿ ನಿರ್ದೇಶಕ ಅಕ್ರಂ ಪಾಷಾ ನೇತೃತ್ವದ ತಂಡವು ಇಲ್ಲಿನ ಜಿಲ್ಲಾಧಿಕಾರಿಗಳು ತನಿಖೆ ನಡೆಸಿದ ವರದಿಯಲ್ಲಿ ಪ್ರಸ್ತಾಪಿತ ನೂನ್ಯತೆ ಅಂಶಗಳನ್ನು ಮರೆಮಾಚಿತ್ತು ಎಂದು ಆರೋಪಿಸಿದರು.



ಈ ರೀತಿ ವರದಿ ಕೊಟ್ಟ ತನಿಖಾ ತಂಡದ ಪೌರಾಡಳಿತ ನಿರ್ದೇಶನಾಲಯದ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಅಕ್ರಂ ಪಾಷಾ,  ಕಾಮಗಾರಿ ವಿಭಾಗದ ಸಹ ನಿರ್ದೇಶಕ ರಾಜೇಶ ಕಲ್ಲಪ್ಪ, ವ್ಯವಸ್ಥಾಪಕ ಚನ್ನರಾಯಪ್ಪ ಹಾಗೂ ಹಿಂದಿನ ಪೌರಾಯುಕ್ತ ತಿಪ್ಪೇಶ ವಿರುದ್ಧ ಲೋಕಾಯುಕ್ತಕ್ಕೆ ಫೆಬ್ರುವರಿ 3ರಂದು ದೂರು ಸಲ್ಲಿಸಲಾಗಿದೆ ಎಂದು ವಿವರಿಸಿದರು.



ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಗರಸಭೆಯಲ್ಲಿ 3 ವರ್ಷದ ಅವಧಿಯಲ್ಲಿ ನಡೆದ ಅವ್ಯವಹಾರ ಕುರಿತು ತನಿಖೆ ನಡೆಸಲು ಆದೇಶಿಸಿದ್ದರು. ಆದರೆ ಈ ತನಿಖಾ ತಂಡವು ಕೇವಲ 103 ಕಡತ ಕುರಿತು ಪರಶೀಲನೆ ಮಾಡಿ ನಗರಸಭೆ ಆಡಳಿತ ಮಂಡಳಿಯನ್ನು ಮುಕ್ತಗೊಳಿಸಲು ಯತ್ನಿಸಿರುವುದು ಈ ತಂಡ ನೀಡಿದ ವರದಿಯಿಂದ ಗೊತ್ತಾಗಿದೆ. ಹೀಗಾಗಿ ಈ ತಂಡದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.



ನಗರಸಭೆಯ 34 ದಿನಗೂಲಿ ನೌಕರರಿಗೆ ನೀಡಬೇಕಾದ ಬಾಕಿ ವೇತನ ಮೂರು ತಿಂಗಳ ಅವಧಿಯಲ್ಲಿ ನೀಡಲು ಹೈಕೋಟ್ ಗುಲ್ಬರ್ಗ ಸಂಚಾರಿ ಪೀಠ ಆದೇಶಿಸಿದ್ದರೂ ನಗರಸಭೆ ಬಾಕಿ ವೇತನ ದೊರಕಿಸಿಲ್ಲ. ಬಾಕಿ ವೇತನ ಪಾವತಿಗೆ ಫೆಬ್ರುವರಿ 5 ಕೊನೆಯ ದಿನವಾಗಿತ್ತು. ಈಗ ಆ ಅವಧಿ ಮುಗಿದಿದೆ. ಹೈಕೋರ್ಟ್ ಆದೇಶದ ಬಳಿಕವೂ ಬಾಕಿ ವೇತನ ಪಾವತಿ ಮಾಡದೇ ಇರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಹೀಗಾಗಿ ನಗರಸಭೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದು ನಗರಸಭೆ ದಿನಗೂಲಿ ನೌಕರರ ಸಂಘದ ಪ್ರತಿನಿಧಿಗಳಾದ ಅಂಬಣ್ಣ ಅರೋಲಿ ಹಾಗೂ ಜೆ.ಬಿ ರಾಜು ಹೇಳಿದರು.

ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್,  ಜಯ ಕರ್ನಾಟಕ ಸಂಘಟನೆಯ ಶಿವಕುಮಾರ ಯಾದವ್, ರಾಜೇಶ, ಅಮರೇಶ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry