ದೋಷಾರೋಪ ಪಟ್ಟಿಯಲ್ಲಿ ಬನ್ಸಲ್ ಹೆಸರಿಲ್ಲ

ಶನಿವಾರ, ಜೂಲೈ 20, 2019
23 °C
ರೈಲ್ವೆಯಲ್ಲಿ `ಕಾಸಿಗಾಗಿ ಹುದ್ದೆ' ಹಗರಣ

ದೋಷಾರೋಪ ಪಟ್ಟಿಯಲ್ಲಿ ಬನ್ಸಲ್ ಹೆಸರಿಲ್ಲ

Published:
Updated:

ನವದೆಹಲಿ: ರೈಲ್ವೆ ಸಚಿವಾಲಯದ `ಕಾಸಿಗಾಗಿ ಹುದ್ದೆ' ಭ್ರಷ್ಟಾಚಾರ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಮಾಜಿ ಸಚಿವ ಪಿ.ಕೆ.ಬನ್ಸಲ್ ಅವರ ಸೋದರಳಿಯ ವಿಜಯ್ ಸಿಂಗ್ಲ ಹಾಗೂ ಅಮಾನತುಗೊಂಡಿರುವ ರೈಲ್ವೆ ಮಂಡಳಿ ಸದಸ್ಯ ಮಹೇಶ್ ಕುಮಾರ್ ಒಳಗೊಂಡಂತೆ ಹತ್ತು ಜನರ ವಿರುದ್ಧ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿತು.ದೋಷಾರೋಪ ಪಟ್ಟಿ ಬನ್ಸಲ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಮಾಜಿ ಸಚಿವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರೂ, ಅವರ ಪಾತ್ರವನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಲಭ್ಯವಾಗದ ಹಿನ್ನೆಲೆಯಲ್ಲಿ ದೋಷಾರೋಪ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಬನ್ಸಲ್ ವಿರುದ್ಧ ದಾಖಲೆಗಳು ಲಭ್ಯವಾದರೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸ್ವರ್ಣಕಾಂತ ಶರ್ಮ ಅವರ ಮುಂದೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಸಿಂಗ್ಲ ಹಾಗೂ  ಮಹೇಶ್ ಕುಮಾರ್ ಜತೆ ಮಧ್ಯವರ್ತಿಗಳಾದ ಸಂದೀಪ್ ಗೋಯಲ್, ಸಮೀರ್ ಸಂಧೀರ್, ಸುಶೀಲ್ ದಾಗಾ, ಅಜಯ್ ಗಾರ್ಗ್, ರಾಹುಲ್ ಯಾದವ್, ಉದ್ಯಮಿ ಮಂಜುನಾಥ್ ಮತ್ತು ಅವರ ಇಬ್ಬರು ಸಹಚರರಾದ ಪಿ.ವಿ. ಮುರಳಿ ಹಾಗೂ ವೇಣುಗೋಪಾಲ್ ಅವರನ್ನು ಹೆಸರಿಸಿದೆ. ಆದರೆ, ಲಂಚದ ಹಣ `ಡಿಲಿವರಿ' ಮಾಡಿದ ಇಬ್ಬರು ಕೋರಿಯರ್ ಸಂಸ್ಥೆ ಉದ್ಯೋಗಿಗಳ ಹೆಸರನ್ನು ದೋಷಾರೋಪ ಪಟ್ಟಿಯಿಂದ ಕೈಬಿಡಲಾಗಿದೆ.ಮುರುಳಿ ಹಾಗೂ ವೇಣುಗೋಪಾಲ್ ಅವರನ್ನು ಹೊರತುಪಡಿಸಿ ಉಳಿದ ಎಂಟು ಆರೋಪಿಗಳನ್ನು ಸಿಬಿಐ ಈಗಾಗಲೇ ಬಂಧಿಸಿದೆ. ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿರುವುದರಿಂದ ಬಂಧಿತರು ಜಾಮೀನಿನ ಮೇಲೆ ಬಿಡುಗಡೆ ಆಗುವ ಸಾಧ್ಯತೆಗಳು ಕಡಿಮೆ.ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖಾ ದಳ ಆರೋಪಿಗಳನ್ನು ಬಂಧಿಸಿದ 60 ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಜಾಮೀನು ದೊರೆಯಲಿದೆ. ಈ 60 ದಿನಗಳ ಗಡುವು ಮಂಗಳವಾರ ಮುಗಿಯುವುದರಲ್ಲಿತ್ತು. ಸಿಬಿಐ ಮೇ 3ರಂದು ಮೊಕದ್ದಮೆ ದಾಖಲಿಸಿತ್ತು. ಮರುದಿನ ನಡೆದ ಹಠಾತ್ ಕಾರ್ಯಾಚರಣೆ ವೇಳೆ ಸಿಂಗ್ಲ, ಮಹೇಶ್ ಕುಮಾರ್ ಮತ್ತು ಮತ್ತೊಬ್ಬ ಮಧ್ಯವರ್ತಿಯನ್ನು ಬಂಧಿಸಲಾಗಿತ್ತು.ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ದೋಷಾರೋಪ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ. ಈ ಪ್ರಕರಣದಲ್ಲಿ ಸಿಂಗ್ಲ, ಕುಮಾರ್ ಮತ್ತಿತರ ಆರೋಪಿಗಳ ಪಾತ್ರವನ್ನು ಸಾಬೀತುಪಡಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಸಿಬಿಐ ವಿವರಿಸಿದೆ.ಕುಮಾರ್‌ಗೆ ಗೋಯಲ್ ಭರವಸೆ:

ಮಹೇಶ್ ಕುಮಾರ್ ಅವರಿಗೆ ಸಂದೀಪ್ ಗೋಯಲ್ ರೈಲ್ವೆ ಮಂಡಳಿ ಸದಸ್ಯ (ಇಲೆಕ್ಟ್ರಿಕಲ್) ಹುದ್ದೆ ಕೊಡಿಸುವ ಭರವಸೆ ನೀಡಿದ್ದರು. ಪ್ರತಿಯಾಗಿ 10ಕೋಟಿ ರೂಪಾಯಿಗೆ `ಡೀಲ್' ಆಗಿತ್ತು. ಸಿಂಗ್ಲ ಮತ್ತು ಮತ್ತೊಬ್ಬ ಮಧ್ಯವರ್ತಿ ಅಜಯ್ ಗಾರ್ಗ್ ಜತೆ ಸಂಪರ್ಕದಲ್ಲಿದ್ದ ಗೋಯಲ್ ಭರವಸೆ ನೀಡಿದಂತೆ ಕುಮಾರ್ ಅವರಿಗೆ ಎಲೆಕ್ಟ್ರಿಕಲ್ ಸದಸ್ಯನ ಹುದ್ದೆ ಕೊಡಿಸಲು ಶತಾಯಗತಾಯ ಪ್ರಯತ್ನ ನಡೆಸಿದ್ದರು. ಆದರೆ, ಅವರಿಗೆ ಸಿಕ್ಕಿದ್ದು ರೈಲ್ವೆ ಮಂಡಳಿ ಸದಸ್ಯ (ಸಿಬ್ಬಂದಿ) ಹುದ್ದೆ.ಅನಂತರ ಗೋಯಲ್ ಅವರನ್ನು ಸಂಪರ್ಕಿಸಿದ ಮಹೇಶ್ ಕುಮಾರ್, ಪಶ್ಚಿಮ ರೈಲ್ವೆ ಪ್ರಧಾನ ವ್ಯವಸ್ಥಾಪಕ   (ಸಿಗ್ನಲ್- ಟೆಲಿಕಮ್ಯುನಿಕೇಷನ್) ಹುದ್ದೆಯನ್ನು ಹೆಚ್ಚುವರಿಯಾಗಿ ಕೊಡಿಸುವಂತೆ ದುಂಬಾಲು ಬಿದ್ದರು. ಗೋಯಲ್ ಅದಕ್ಕೆ ಎರಡು ಕೋಟಿ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟರು.ಬೆಂಗಳೂರು ಮೂಲದ `ಜಿ.ಜಿ. ಟ್ರಾನಿಕ್ಸ್ ಇಂಡಿಯಾ ಲಿ' ಮಂಜುನಾಥ್ ಮತ್ತಿತರ ಉದ್ಯಮಿಗಳನ್ನು ಕುಮಾರ್ ಹಣಕ್ಕಾಗಿ ಸಂಪರ್ಕಿಸಿದರು. ಮಂಜುನಾಥ್ ಅವರಿಗೆ 90 ಲಕ್ಷ ರೂಪಾಯಿ ಮಾತ್ರ ಹೊಂದಿಸಲು ಸಾಧ್ಯವಾಯಿತು. ಈ ಹಣವನ್ನು ಸಿಂಗ್ಲ ಹಾಗೂ ಗೋಯಲ್ ಅವರಿಗೆ ಹಸ್ತಾಂತರಿಸುವಾಗ ಸಿಬಿಐ ಬಲೆಗೆ ಬಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry