ಗುರುವಾರ , ಅಕ್ಟೋಬರ್ 17, 2019
21 °C

ದೋಸೆ ಧಗೆ: 99 ಬಗೆ

Published:
Updated:

ಈ ಚುಮುಚುಮು ಚಳಿಯಲ್ಲಿ ಸಂಜೆ ಹೊತ್ತು ಬಿಸಿ ಬಿಸಿ ದೋಸೆ ಮೆಲ್ಲುತ್ತಿದ್ದರೆ ಅದರ ಗಮ್ಮತ್ತೇ ಬೇರೆ. ಆದರೆ ಸಾದಾ ದೋಸೆ ತಿಂದು ಬೇಜಾರಾಗಿದ್ದರೆ ಇಲ್ಲಿಗೆ ಬನ್ನಿ. 99 ವಿವಿಧ ಬಗೆಯ ದೋಸೆಗಳ ರುಚಿ ನೋಡಬಹುದು.ಅಂದಹಾಗೆ ಈ 99 ವಿಧದ ಗರಿ ಗರಿ ದೋಸೆಗಳು ಎಲ್ಲಿ ಸಿಗುತ್ತವೆ ಎಂದು ಯೋಚಿಸುತ್ತಿದ್ದೀರಾ? ಸಂಜೆ 5 ಗಂಟೆ ಆಗುತಿದ್ದಂತೇ ಕೋರಮಂಗಲದ 6ನೇ ಬ್ಲಾಕ್ ನಲ್ಲಿ ಗಾಡಿಯೊಂದರಲ್ಲಿ ಈ ಬಿಸಿ ಬಿಸಿ ದೋಸೆಗಳ ಭರಾಟೆ ಆರಂಭವಾಗುತ್ತದೆ. ಸಂಜೆ ಆರಂಭಗೊಂಡರೆ ರಾತ್ರಿಯಾಗುವವರೆಗೂ ಇಲ್ಲಿ ಜನವೋ ಜನ.ಪನೀರ್ ದೋಸೆ, ಮೈಸೂರ್ ದೋಸೆ, ಎಲೆಕೋಸಿನ ದೋಸೆ, ಆಲೂ ದೋಸೆ, ಮಿಕ್ಸ್ ದೋಸೆ, ಬೀಟ್‌ರೂಟ್ ದೋಸೆ, ಮೈಸೂರ್ ಸೆಟ್ ದೋಸೆ, ಮಶ್ರೂಮ್ ದೋಸೆ, ಚಾಕೊಲೇಟ್ ದೋಸೆ, ಚನ್ನಾ ದೋಸೆ ಹೀಗೆ ಬಗೆ ಬಗೆಯ ದೋಸೆಗಳ ಸ್ವಾದವನ್ನು ಇಲ್ಲಿ ಸವಿಯಬಹುದು.ಸುಮಾರು ಎರಡು ವರ್ಷಗಳಿಂದ ಈ ದೋಸೆ ವ್ಯಾಪಾರವನ್ನು ಪ್ರಕಾಶ್ ಮತ್ತು ಅವರ ಪತ್ನಿ ಪದ್ಮಾ ನಡೆಸಿಕೊಂಡು ಬರುತ್ತಿದ್ದಾರೆ. ಮೊದಲು ಕೆಲವೇ ರೀತಿಯ ದೋಸೆ ತಯಾರಿಸಿ ವ್ಯಾಪಾರ ಆರಂಭಿಸಿದ್ದು, ಇದೀಗ 99 ವಿಧಗಳಿಗೆ ಏರಿಕೆ ಕಂಡಿರುವುದು ರುಚಿಗೆ ಸಿಕ್ಕ ಪ್ರತಿಫಲ ಎನ್ನುತ್ತಾರೆ ಪ್ರಕಾಶ್.ಅಂದಹಾಗೆ, ಈ 99 ವಿಧದ ದೋಸೆಗಳಿಗೆಂದು `ಮೆನು~ ನೋಡಬೇಕಿಲ್ಲ. ದೋಸೆಗಳ ಹೆಸರುಗಳನ್ನು ಪಟಪಟ ಎಂದು ಖುದ್ದು ಪ್ರಕಾಶ್ ತಿಳಿಸುತ್ತಾರೆ. ಅಷ್ಟೇ ಅಲ್ಲ, ಮೊದಲ ಸಲ ದೋಸೆ ತಿನ್ನಲು ಬಂದವರಿಗೆ ಯಾವ ದೋಸೆ ಸೂಕ್ತ ಎಂಬ ಟಿಪ್ಸ್ ಕೂಡ ನೀಡುತ್ತಾರೆ.ಹೋಟೆಲ್‌ನಲ್ಲಿ ದೋಸೆ ವ್ಯಾಪಾರ ಆರಂಭಿಸಿದ್ದರೆ ಈ ರೀತಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿತ್ತೋ ಇಲ್ಲವೋ ಎಂಬ ಅನುಮಾನ ಪ್ರಕಾಶ್ ಅವರದ್ದು. ವ್ಯಾಪಾರ ವಿಸ್ತರಿಸಲು ಸ್ಥಳ ಮುಖ್ಯವಲ್ಲ, ರುಚಿಯಷ್ಟೇ ಮುಖ್ಯ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದಾರೆ.ದೋಸೆ ಮತ್ತು ಸ್ಥಳದ ಶುದ್ಧತೆ ಬಗ್ಗೆ ಎರಡು ಮಾತಿಲ್ಲ. ಆರ್ಡರ್ ಮಾಡಿದ ನಂತರ ಎದುರಲ್ಲೇ ಹಂಚಿನ ಮೇಲೆ ದೋಸೆ ಬೇಯತೊಡಗುತ್ತದೆ.  ಕೇವಲ ತಾಜಾ ತರಕಾರಿಗಳನ್ನಷ್ಟೇ ಬಳಸುತ್ತೇವೆನ್ನುವ ಪ್ರಕಾಶ್, ಕೈತೊಳೆಯಲು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕುಡಿಯಲು ಕೊಡುವ ನೀರು ಅದಲ್ಲ ಎಂಬ ಸ್ಪಷ್ಟನೆಯೂ ಅವರಿಂದ ಸಿಗುತ್ತದೆ.ಗರಿಗರಿ ದೋಸೆಗಳನ್ನು ತಯಾರಿಸಲು ತುಪ್ಪದ ಬದಲು ಅಮೂಲ್ ಬೆಣ್ಣೆ ಮತ್ತು `ಚೀಸ್~ ಉಪಯೋಗಿಸಲಾಗುತ್ತದೆ. ಇದು ಸ್ವಲ್ಪ ದುಬಾರಿ ಎನಿಸಿದರೂ ರುಚಿಗೆ ಮಾತ್ರ ಸಾಟಿಯೇ ಇಲ್ಲ.  25ರೂ.ನಿಂದ 125 ರೂ. ಬೆಲೆಯವರೆಗೆ ದೋಸೆಗಳು ಇಲ್ಲಿ ಲಭ್ಯ.ಇಲ್ಲಿಗೆ ಬಂದವರಲ್ಲಿ ದೋಸೆ ರುಚಿ ನೋಡಿ ಪಾರ್ಸೆಲ್ ತೆಗೆದುಕೊಂಡು ಹೋಗುವುದು ಕೂಡ ಸಾಮಾನ್ಯ ಎಂಬಂತೆ ಕಾಣುತ್ತದೆ. ರುಚಿಕಟ್ಟಾದ ಈ ದೋಸೆಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ಇಲ್ಲಿಗೆ ಬರುವ ಮನಸ್ಸಾಗುತ್ತದೆ ಎನ್ನುವ ಕಲಾವಿದೆ ನಂದಿನಿ ಈ ದೋಸೆಗಳ ಅಭಿಮಾನಿ.ಗೃಹಿಣಿ ವತ್ಸಾ ಕಾಮತ್ ಅವರದೂ ಇದೇ ಮಾತು. ಇಲ್ಲಿಗೆ ಆಗಾಗ್ಗೆ ಬರುತ್ತಿರುತ್ತೇನೆ. ಮನೆಗೂ  ದೋಸೆಗಳನ್ನು ಪಾರ್ಸೆಲ್ ತೆಗೆದುಕೊಂಡು ಹೋಗುತ್ತೇನೆ. ಹಣಕ್ಕೆ ಮೀರಿದ ರುಚಿ ಈ ದೋಸೆಯದು ಎನ್ನುತ್ತಾರೆ ಅವರು.ಕೋರಮಂಗಲದ 6ನೇ ಬ್ಲಾಕ್ ಗಣೇಶ ದೇವಸ್ಥಾನದ ಹತ್ತಿರ, ಬಜಾಜ್ ಶೋರೂಂ ಎದುರಲ್ಲಿ ಈ ದೋಸೆ ಗಾಡಿ ಸಂಜೆ 5 ಗಂಟೆಗೆ ರೆಡಿಯಾಗಿರುತ್ತೆ. ಇನ್ನೇಕೆ ತಡ, ಒಮ್ಮೆ ನೀವೂ ರುಚಿ ಸವಿದು ಬನ್ನಿ. ಇನ್ನೂ ಮಾಹಿತಿ ಬೇಕೆಂದರೆ ಈ ಸಂಖ್ಯೆಗೆ ಕರೆ ಮಾಡಬಹುದು. ಫೋ.ನಂ: 81470 48251.

Post Comments (+)