ಭಾನುವಾರ, ಆಗಸ್ಟ್ 25, 2019
28 °C
ರಸಾಸ್ವಾದ

ದೋಸೆ ಮನೆ ಕಾವಲಿಯ ಹದಿನೈದು ತಾಸು ಕಾವು!

Published:
Updated:

ಹೆಸರೇ ಸೂಚಿಸುವಂತೆ ಬೆಣ್ಣೆದೋಸೆ ದಾವಣಗೆರೆಯ ವಿಶೇಷ ರುಚಿ. ಆದರೆ ಅದು ಸಿಗದ ಊರಿಲ್ಲ. ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯಷ್ಟೇ ಬೆಣ್ಣೆದೋಸೆ ಕೂಡಾ ಪ್ರಸಿದ್ಧ. ಬೆಣ್ಣೆ ದೋಸೆ ಮಾರುವ ಹೋಟೆಲುಗಳಿಗೆ `ದಾವಣಗೆರೆ ಬೆಣ್ಣೆದೋಸೆ ಹೋಟೆಲ್' ಎಂದು ಹೆಸರಿಡುವುದೂ ರೂಢಿ. ನಗರದಲ್ಲಿ ಇಂತಹ ಅನೇಕ ಹೋಟೆಲುಗಳಿವೆ.ಚಾಮರಾಜಪೇಟೆಯ ನಾಲ್ಕನೇ ಕ್ರಾಸಿನಲ್ಲಿರುವ `ದೋಸೆ ಮನೆ' ತನ್ನ ರುಚಿಯಿಂದ ಮನೆ ಮಾತಾಗಿದೆ. ಪುಟ್ಟ ರಸ್ತೆಯ ಮೂಲೆಯಲ್ಲಿರುವ ಒಂದೇ ರೂಮಿನ ದೋಸೆ ಮನೆಯ ಬಳಿ ಸಂಜೆ ಹೋದರೆ ನಿಮ್ಮ ದೋಸೆ ತಿನ್ನುವ ಆಸೆ ಅರ್ಧ ಗಂಟೆಯಾದರೂ ತಣಿಯದು. ಆದರೆ, ಆರ್ಡರ್ ಮಾಡಿ ಸಾಲಾಗಿ ನಿಂತವರು ದೋಸೆ ಸಿದ್ಧಗೊಳ್ಳುವ ಪರಿಯನ್ನು ಕಣ್ತುಂಬಿಕೊಳ್ಳಬಹುದು. ಬೆಣ್ಣೆದೋಸೆ ನಿಪುಣರೊಬ್ಬರು ತವಾಕ್ಕೆ ದೋಸೆಹಿಟ್ಟು ಸುರಿದು, ತೆಳ್ಳಗೆ ಮಾಡಿ ಅದರ ಮೇಲೆ ಕೆಂಪು ಚಟ್ನಿ ಸವರಿ, ಒಂದು ಚಮಚ ಬೆಣ್ಣೆ ಇಟ್ಟು, ಹಿಡಿಯಷ್ಟು ಆಲೂಗೆಡ್ಡೆಯ ಬಿಳಿಪಲ್ಯ ಇಡುವವರೆಗೂ ತಡೆದುಕೊಂಡಿದ್ದ ದೋಸೆ ತಿನ್ನುವ ಆಸೆ ಮತ್ತಷ್ಟು ಹೊತ್ತು ಕಾಯಲು ಬಿಡುವುದಿಲ್ಲ. ಬಿಸಿ ಬಿಸಿ ದೋಸೆ ಎರಡೇ ನಿಮಿಷಕ್ಕೆ ಖಾಲಿಯಾಗುತ್ತದೆ.ದೋಸೆ ಒಲೆಯ ಪಕ್ಕದಲ್ಲೇ ಸಾಲಾಗಿ ಇಟ್ಟಿರುವ ತುಂಡು ಬಾಳೆಎಲೆಯನ್ನು ಅಣಿಮಾಡಿ ಇಟ್ಟ ತಟ್ಟೆಯ ಮುಂದೆ ಜನ ಸಾಲಾಗಿ ನಿಂತಿರುತ್ತಾರೆ.ಎಂಟು ಜನರಿರುವ ಹೋಟೆಲ್‌ನಲ್ಲಿ ಇಬ್ಬರು ದೋಸೆ ತಯಾರಿಸುವ ನಿಪುಣರಿದ್ದಾರೆ. ಮಾಲೀಕ ಶಿವಕುಮಾರ್ ಅಲ್ಲೇ ಇದ್ದು ಗ್ರಾಹಕರನ್ನು ಸ್ವಾಗತಿಸುತ್ತಾ ಉಸ್ತುವಾರಿ ನೋಡಿಕೊಳ್ಳುತ್ತಾರೆ.ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೂ ಇಲ್ಲಿ ತವಾ ಆರುವುದಿಲ್ಲ. ಬೆಣ್ಣೆ ದೋಸೆ, ಖಾಲಿ ದೋಸೆ, ಬೆಣ್ಣೆ ಮಸಾಲಾ, ಓಪನ್ ದೋಸೆ ಹಾಗೂ ಪಡ್ಡು ಇಲ್ಲಿನ ವಿಶೇಷ. ಬೆಳಗಿನ ತಿಂಡಿಗೆ ಮಾತ್ರ ಇಡ್ಲಿ ಸಿಗುತ್ತದೆ. ದೋಸೆ ಜೊತೆಗೆ ನೆಚ್ಚಿಕೊಳ್ಳಲು ಆಲುಗೆಡ್ಡೆಯ ಬಿಳಿ ಪಲ್ಯ ಮತ್ತು ಕಾಯಿಚಟ್ನಿ ಕೊಡುತ್ತಾರೆ. ಬಿಳಿಪಲ್ಯ ಕೂಡಾ ಇಲ್ಲಿಯ ವಿಶೇಷ. ಬೇರೆ ಕಡೆ ಮಸಾಲೆ ದೋಸೆಗೆ 25ರಿಂದ 45 ರೂಪಾಯಿವರೆಗೂ ಬೆಲೆ ಇದೆ. ಆದರೆ ದೋಸೆ ಮನೆಯಲ್ಲಿ 25 ರೂ.ಗೆ ರುಚಿಯಾದ ದೋಸೆ ಸಿಗುತ್ತದೆ. ಇಲ್ಲಿ ಶುದ್ಧ ತುಪ್ಪ ಮತ್ತು ಬೆಣ್ಣೆ ಬಳಸುತ್ತಾರೆ.ಎಂಬಿಎ ಓದಿನ ಹಿನ್ನೆಲೆ

ವಿಜಯನಗರದ ಶಿವಕುಮಾರ್ ಹತ್ತು ವರ್ಷದ ಹಿಂದೆ ಎಂಬಿಎ ಮುಗಿಸಿ ಬೆಣ್ಣೆದೋಸೆ ಹೋಟೆಲ್ ಶುರುಮಾಡಿದರು. ಇವತ್ತು ಎಂಟು ಜನರನ್ನು ಇಟ್ಟುಕೊಂಡು ಬಿಡುವಿಲ್ಲದೆ ದೋಸೆ ಹಂಚುತ್ತಿದ್ದಾರೆ. ಈ ಬಗ್ಗೆ ಅವರಿಗೆ ಹೆಮ್ಮೆ ಇದೆ.

`ಕಳೆದ ಹತ್ತು ವರ್ಷಗಳಿಂದ ಇಲ್ಲಿನ ರುಚಿ ಉಂಡಿರುವ ದೋಸೆ ಪ್ರೇಮಿಗಳು ಇಂದಿಗೂ ಬರುತ್ತಿದ್ದಾರೆ. ಹೋಟೆಲ್ ಉದ್ಯಮದಷ್ಟು ವೇಗವಾಗಿ ಬೆಳೆಯುವ ಉದ್ಯಮ ಇಲ್ಲಿ ಬೇರೊಂದಿಲ್ಲ. ನಗರದಲ್ಲಿ ಅದರ ಅಗತ್ಯ ತುಂಬಾ ಇದೆ. ಹಾಗಾಗಿ ಓದುತ್ತಿರುವಾಗಲೇ ಹೋಟೆಲ್ ಉದ್ಯಮದ ಕಡೆ ಗಮನಹರಿಸಿದ್ದೆ. ಅದರಲ್ಲೂ ಸಾಂಪ್ರದಾಯಿಕ ಪದ್ಧತಿಯಲ್ಲಿ ಅಡುಗೆ ತಯಾರಿಸುವುದೆಂದರೆ ನನಗೆ ತುಂಬ ಇಷ್ಟ. ಆ ರುಚಿ ಆಧುನಿಕ ಪದ್ಧತಿಯಿಂದ ಬರುವುದಿಲ್ಲ. ಅದು ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಮುಂದೊಂದು ದಿನ ಕಟ್ಟಿಗೆ ಒಲೆಯಲ್ಲೇ ಅಡುಗೆ ತಯಾರಿಸುವ ಗುರಿ ಇದೆ' ಎನ್ನುತ್ತಾರೆ ಶಿವಕುಮಾರ್.

Post Comments (+)