ಶನಿವಾರ, ಆಗಸ್ಟ್ 17, 2019
27 °C

`ದೋ ಅಬ್' ನಗರಿಗೆ ಕಲುಷಿತ ನೀರು ಪೂರೈಕೆ

Published:
Updated:

ರಾಯಚೂರು:  ನಗರದ ಶೇ 70 ಭಾಗಕ್ಕೆ ಕೃಷ್ಣಾ ನದಿ ನೀರು ಪೂರೈಕೆ ಆಗುತ್ತದೆ. ಆದರೆ, ನದಿಯಿಂದ ನಗರದ ಜನತೆ ಮನೆ ಸೇರುವಷ್ಟರಲ್ಲಿ ಕೃಷ್ಣಾ ನೀರು ಮತ್ತಷ್ಟು ಕಲುಷಿತಗೊಂಡು ಮನೆಗೆ ಪೂರೈಕೆ ಆಗುತ್ತದೆ.ಶೇ30 ಭಾಗಕ್ಕೆ ತುಂಗಭದ್ರಾ ಕಾಲುವೆಯಿಂದ ರಾಂಪುರ ಜಲಾಶಯದಲ್ಲಿ ಸಂಗ್ರಹಿಸಿದ ತುಂಗಭದ್ರಾ ನದಿ ನೀರು ಪೂರೈಕೆ ಆಗುತ್ತಿದ್ದರೂ, ಆ ಭಾಗದ ಜನರೂ ಕಲುಷಿತ ನೀರೇ ಕುಡಿಯುವ ಸ್ಥತಿ ನಿರ್ಮಾಣವಾಗಿದೆ. ಇದು ಅಕ್ಕಪಕ್ಕ ಎರಡು ನದಿಗಳನ್ನು ಹೊಂದಿರುವ ರಾಯಚೂರು ನಗರದ ಜನ ಎದುರಿಸುತ್ತಿರುವ ಪ್ರಮುಖ ಸಮಸ್ಯೆ. ಎರಡು ನದಿಗಳ ನಡುವೆ ರಾಯಚೂರು ನಗರ ಇರುವುದರಿಂದ `ದೋ ಅಬ್' ನಗರಿ ಎಂಬ ಖ್ಯಾತಿಯೂ ಇದೆ. ಆದರೆ, ನಗರಸಭೆ, ಜಿಲ್ಲಾಡಳಿತ ಪೂರೈಕೆ ಮಾಡುತ್ತಿರುವ ಕಲುಷಿತ ನೀರು ಈ ಖ್ಯಾತಿಗೆ ಕಪ್ಪು ಚುಕ್ಕೆಯನ್ನಿಡುವಂತಿದೆ.ಮೂರುವರೆ ಲಕ್ಷ ಜನ ವಾಸಿಸುವ ಈ ನಗರದಲ್ಲಿ ಶುದ್ಧ ಕುಡಿವ ನೀರಿಗೂ ಪರದಾಡಬೇಕಾದ ಸ್ಥಿತಿ ಇದೆ. ಕೃಷ್ಣಾ ನದಿಯಿಂದ ನಗರದ ಶೇ 70 ರಷ್ಟು ಭಾಗಕ್ಕೆ ಪೂರೈಕೆಯಾಗುವ ನೀರು ಶುದ್ದೀಕರಣವಾಗುವುದೇ ಇಲ್ಲ. ನದಿಯಿಂದ ನೇರ ಪೂರೈಕೆಯಾಗುತ್ತದೆ. ನಗರವಾಸಿಗಳ ಮನೆ ಸೇರುವಷ್ಟರಲ್ಲಿ ವಿತರಣಾ ವ್ಯವಸ್ಥೆ ಲೋಪವೋ? ನೀರು ಇರುವುದೇ ಹಾಗೆಯೋ? ಕಲುಷಿತ ಮತ್ತು ದುರ್ನಾತ ಬೀರುವ ನೀರು ಪೂರೈಕೆ ಆಗುತ್ತದೆ.ಕಪ್ಪು, ಕೆಂಪು ಮಣ್ಣು ಮಿಶ್ರಿತ ಈ ನೀರು ಕಂಡು ಜನ ದಂಗಾಗುತ್ತಿದ್ದಾರೆ. ಸಂಗ್ರಹಿಸಿಟ್ಟು ಬಳಕೆ ಮಾಡಲು ಹಿಂದೇಟು ಹಾಕುವಂತ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಶೇ 30ರಷ್ಟು ಭಾಗಕ್ಕೆ ರಾಂಪುರ ಜಲಾಶಯದಲ್ಲಿ ಸಂಗ್ರಹಿಸಿದ ತುಂಗಭದ್ರಾ ನದಿ ನೀರು ಪೂರೈಕೆ ಆಗುತ್ತಿದೆ. ಇಲ್ಲಿಯೂ ಇದೇ ಸ್ಥಿತಿ. ಜಲಾಶಯ ಪಕ್ಕ ಮೂರು ಫಿಲ್ಟರ್ ಕೆಲಸ ಮಾಡುತ್ತವೆ. ಒಂದು ರಿಪೇರಿ ಇದೆ ಎಂದು ನಗರಸಭೆ ಮೂಲಗಳು ತಿಳಿಸುತ್ತವೆ. ರಾಂಪುರ ಜಲಾಶಯದಲ್ಲಿ ಕನಿಷ್ಠ ಪ್ರಮಾಣದ ನೀರು ಇರುವುದರಿಂದ ಮಣ್ಣು ಮಿಶ್ರಿತ ನೀರು ಪೂರೈಕೆ ಆಗುತ್ತಿದೆ.ಇಂಥ ಮಳೆಗಾಲದಲ್ಲೂ ರಾಂಪುರ ಜಲಾಶಯಕ್ಕೆ ನೀರಿನ ಕೊರತೆಯೇ? ಎಂದು ಅಚ್ಚರಿ ಆಗಬಹುದು. ಇದು ಅಚ್ಚರಿಯೇ! ನಾಲ್ಕೂವರೆ ಮೀಟರ ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಶನಿವಾರ ಇದ್ದುದು ಕೇವಲ 1 ಮೀಟರ್ ಮಾತ್ರ. ತುಂಗಭದ್ರಾ ಎಡದಂಡೆ ಕಾಲುವೆ ಭರ್ತಿಯಾಗಿ ಹರಿಯುತ್ತಿದೆ.

ಆ ಕಾಲುವೆಯಿಂದ ಗಣೇಕಲ್ ಜಲಾಶಯ ಭರ್ತಿ. ಈ ಜಲಾಶಯದಿಂದ ಮತ್ತೆ ಕಾಲುವೆ ಮೂಲಕ ನಗರದ ಹೊರ ವಲಯದಲ್ಲಿರುವ ರಾಂಪುರ ಜಲಾಶಯಕ್ಕೆ ನೀರು ಪೂರೈಕೆ ವ್ಯವಸ್ಥೆ ಮಾತ್ರ ವಿಳಂಬ ಆಗಿದೆ. ಶನಿವಾರ ಜಲಾಶಯ ಪಕ್ಕದ ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೂ ಪಂಪ್ ಮಾಡಿ ರಾಂಪುರ ಕೆರೆ ಭರ್ತಿ ಮಾಡಲು ಕರೆಂಟ್ ಕೈಕೊಟ್ಟಿತ್ತು. ಹೀಗೆ ನೀರಿದ್ದರೆ ಕರೆಂಟ್ ಇಲ್ಲ. ಕರೆಂಟ್ ಇದ್ದರೆ ಪಂಪ್ ಕೈ ಕೊಡುವುದು ಸಾಮಾನ್ಯ ಎಂಬಂತಾಗಿದೆ.ಶುದ್ದೀಕರಣ ಮಾಡಿಯೇ ಪೂರೈಸುತ್ತೇವೆ: ಕೃಷ್ಣಾ ನದಿಯಿಂದ ನೀರು ಶುದ್ದೀಕರಣ ಮಾಡಿಯೇ ಪೂರೈಸುತ್ತೇವೆ. ಮಳೆ ಬಂದು ನದಿಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತದೆ. ಹೀಗಾಗಿ ನೀರು ಫಿಲ್ಟರ್ ಮಾಡಿದ್ರೂ ಹಾಗೇ ಪೂರೈಕೆ ಆಗುತ್ತಿದೆ. ಆಲಂ, ಬ್ಲಿಚಿಂಗ್ ಪೌಡರ್ ಹಾಕಲಾಗುತ್ತಿದೆ. ದೇವದುರ್ಗದಲ್ಲೂ ಇಂಥದ್ದೇ ನೀರು ಪೂರೈಕೆ ಆಗುತ್ತಿದೆ. ನದಿಯಲ್ಲಿ ಹೊಸ ನೀರು ಮಣ್ಣು ಮಿಶ್ರಿತವಾಗಿ ಬರುತ್ತಿರುವುದು ಹೀಗಾಗಿದೆ ಎಂದು ನಗರಸಭೆ ಎಂಜಿನಿಯರ್ ಕೃಷ್ಣಾ ಹೇಳುತ್ತಾರೆ.ನಗರಸಭೆಗೆ ಆಯ್ಕೆಗೊಂಡ ನೂತನ ಸದಸ್ಯರಿಗೆ ಬಡಾವಣೆ ಜನ ಗೋಳು ತೋಡಿಕೊಂಡರೂ ತಾವು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಏನ್ ಮಾಡೋದಕ್ಕೆ ಆಗುತ್ತದೆ ಎಂಬ ಉತ್ತರ ಜನರಿಗೆ ದೊರಕುತ್ತದೆ. ನಗರಸಭೆ ಆಡಳಿತ ಯಂತ್ರ ಶುದ್ಧ ಕುಡಿವ ನೀರು ಪೂರೈಕೆ ಮಾಡುವುದು ತಮ್ಮ ಜವಾಬ್ದಾರಿ ಎಂಬುದನ್ನೇ ಮರೆತಿದ್ದಾರೆ. ಕಲುಷಿತ ನೀರು ಕುಡಿದೇ ಬದುಕುವ ಈ ನಗರದ ಜನತೆಯ ತಾಳ್ಮೆಯನ್ನು ಆಡಳಿತ ವರ್ಗ ಪರೀಕ್ಷೆ ಮಾಡುತ್ತಿದೆ ಎಂದು ನಾಗರಿಕ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಆಕ್ರೋಷ ವ್ಯಕ್ತಪಡಿಸುತ್ತಾರೆ.

Post Comments (+)