ಬುಧವಾರ, ಜನವರಿ 22, 2020
20 °C

ದೌರ್ಜನ್ಯ: ಅಬಲೆಯರಿಗೆ ‘ಸೌಖ್ಯ’ದ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಪ್ರಕರಣ­ದಲ್ಲಿ ನೊಂದ ಮಹಿಳೆಯರಿಗೆ ಸಹಾಯಹಸ್ತ ಚಾಚಲು ಸೌಖ್ಯ ಸ್ವಯಂಸೇವಾ ಸಂಸ್ಥೆಯು ಬಿಬಿಎಂಪಿ ಸಹಯೋಗದಲ್ಲಿ ರೂಪಿಸಿದ ನೂತನ ಯೋಜನೆಗೆ ಅಮೆರಿಕ ರಾಯಭಾರ ಕಚೇರಿ ಚೆನ್ನೈ ಕೇಂದ್ರದ ಕಾನ್ಸುಲ್ ಜನರಲ್ ಜೆನ್ನಿಫರ್ ಮೆಕಿಂಟೈರ್ ಸೋಮವಾರ ಚಾಲನೆ ನೀಡಿದರು.ಕೌಟುಂಬಿಕ ದೌರ್ಜನ್ಯದಿಂದ ನಲುಗಿದ ಮಹಿಳೆಯರನ್ನು ಪತ್ತೆ ಹಚ್ಚಿ, ಆರೋಗ್ಯ ಸೇವೆ­ಯನ್ನು ಒದಗಿಸುವುದು ಯೋಜನೆ ಹಿಂದಿರುವ ಮುಖ್ಯ ಗುರಿಯಾಗಿದೆ. ಆಪ್ತ ಸಮಾಲೋಚನೆ, ಕಾನೂನು ನೆರವು,ಪುನರ್‌ವಸತಿ ಕಲ್ಪಿಸುವ ಉದ್ದೇಶವನ್ನೂ ಇಟ್ಟುಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸಂತ್ರ­ಸ್ತ­ರನ್ನು ಪತ್ತೆ ಮಾಡುವ ಯೋಜನೆ ಹಾಕಿ­ಕೊಳ್ಳ­ಲಾಗಿದೆ.

ಅದಕ್ಕಾಗಿ ‘ಕಾಮ್‌ಕೇರ್‌’ ಸಾಫ್ಟ್‌­ವೇರ್‌ ರೂಪಿಸಲಾಗಿದೆ. ಅಮೆ­ರಿಕದ ಅಂತ­ರ­ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಈ ಯೋಜನೆಗಾಗಿ 5 ಲಕ್ಷ ಡಾಲರ್‌ ಧನಸಹಾಯ ನೀಡುತ್ತಿದೆ. ಸೌಖ್ಯ ಸಂಸ್ಥೆ ಮುಖ್ಯಸ್ಥೆ ಡಾ. ಸುನೀತಾ ಕೃಷ್ಣನ್‌ ಯೋಜನೆ ಬಗ್ಗೆ ಮಾಹಿತಿ ನೀಡಿದರು. ‘ಕಡಿಮೆ ಆದಾಯದ ಕುಟುಂಬಗಳು ವಾಸಿಸುವ ನಗರದ ಪ್ರದೇಶಗಳಲ್ಲಿ ಪ್ರತಿಶತ 80ರಷ್ಟು ವಿವಾಹಿತ ಮಹಿಳೆಯರು ದೌರ್ಜನ್ಯಕ್ಕೆ ಒಳ­ಗಾಗಿ­ರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಆದ್ದರಿಂದಲೇ ಗೃಹಿಣಿಯರ ಆತ್ಮಹತ್ಯೆ ಪ್ರಕರಣ­ಗಳು ಹೆಚ್ಚುತ್ತಿವೆ. ಈ ಆತಂಕಕಾರಿ ಸಂಗತಿಗಳೇ ನಮ್ಮನ್ನು ಈ ಯೋಜನೆಯಲ್ಲಿ ತೊಡಗುವಂತೆ ಪ್ರೇರೇಪಿಸಿವೆ’ ಎಂದು ವಿವರಿಸಿದರು.‘ದೌರ್ಜನ್ಯ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಅನುಕೂಲವಾಗಲು ‘ಕಾಮ್‌­ಕೇರ್‌’ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾ­ಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್‌ಗಳು ಮೊಬೈಲ್‌ನಿಂದ ನೊಂದ ಮಹಿಳೆ­ಯರ ಮಾಹಿತಿ ಸೌಖ್ಯ ಸಂಸ್ಥೆಗೆ ರವಾನಿಸು­ತ್ತಾರೆ. ಸೌಖ್ಯ ಸಂಸ್ಥೆ ಸ್ವಯಂಸೇವಕರು ನೊಂದ­ವರ ಸಹಾ­ಯಕ್ಕೆ ಧಾವಿಸುತ್ತಾರೆ’ ಎಂದರು.‘ಕಳೆದ 6 ತಿಂಗಳಲ್ಲಿ ಪ್ರಾಯೋಗಿಕವಾಗಿ ನಗ­ರದ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 9 ಘಟಕಗಳನ್ನು ತೆರೆಯಲಾಗಿದೆ. ಈಗಾಗಲೇ 60 ಜನ ಮಹಿಳೆಯರು ಸೌಖ್ಯದ ಸೇವೆ ಪಡೆದಿ­ದ್ದಾರೆ. ಅದರಲ್ಲಿ ಇಬ್ಬರು ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ಆದರೆ, ದೌರ್ಜನ್ಯ ಕೊನೆ­ಗೊಳ್ಳ­ಬೇಕು. ತಾವು ಕುಟುಂಬದ ಜತೆಯಲ್ಲೇ ವಾಸವಾಗಿರಬೇಕು ಎನ್ನುವ ಅಪೇಕ್ಷೆ ಹೊಂದಿ­ದ್ದಾರೆ’ ಎಂದರು. ‘3 ವರ್ಷಗಳಲ್ಲಿ 113 ಘಟಕ­ ತೆರೆಯುವ ಉದ್ದೇಶವಿದೆ’ ಎಂದರು.ಯೋಜನೆಗೆ ಚಾಲನೆ ನೀಡಿದ ಜೆನ್ನಿಫರ್, ‘ಕೌಟುಂಬಿಕ ದೌರ್ಜನ್ಯ ಭಾರತದ ಸಮಸ್ಯೆ ಅಲ್ಲ. ಜಗತ್ತಿನ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಇಂತಹ ದೌರ್ಜನ್ಯಕ್ಕೆ ಒಳಗಾಗುತ್ತಿ­ದ್ದಾರೆ. ಅಮೆರಿಕದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ’ ಎಂದರು. ‘ಕೌಟುಂಬಿಕ ದೌರ್ಜ­ನ್ಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಾನವ ಹಕ್ಕುಗಳ ಉಲ್ಲಂಘ­ನೆಯೂ ಆಗು­ತ್ತದೆ. ಇಂತಹ ಪ್ರಕರಣ ತಡೆಗಟ್ಟುವುದು ಪ್ರಪಂಚದ ಆದ್ಯತೆ ಆಗಬೇಕಿದೆ’ ಎಂದರು.

ಕಾನ್ಸುಲ್‌ ವಾಹನಕ್ಕೆ ಅಡ್ಡಿ

ಸಮಾರಂಭ ನಡೆದ ವಿಲ್ಸನ್‌ ಗಾರ್ಡನ್‌ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಕಾನ್ಸುಲ್‌ ಜನರಲ್‌ ಜೆನ್ನಿಫರ್ ಮೆಕಿಂಟೈರ್ ಅವರ ಇನ್ನೋವಾ ವಾಹನವನ್ನು ನಿಲ್ಲಿಸಲಾಗಿತ್ತು. ತಡವಾಗಿ ಬಂದ ಬಿಬಿಎಂಪಿ ಸದಸ್ಯರು ಆ ವಾಹನದ ಸುತ್ತ ತಮ್ಮ ಕಾರುಗಳನ್ನು ನಿಲುಗಡೆ ಮಾಡಿದ್ದರು. ಯಾವ ಕಡೆಗೂ ಚಲಿಸಲು ಆಗದಂತೆ ನಿಂತಿದ್ದ ತಮ್ಮ ವಾಹನ, ಸುತ್ತಲೂ ಮುತ್ತಿದ ಕಾರುಗಳಿಂದ ಹೊರಬರುವವರೆಗೆ ಜೆನ್ನಿಫರ್‌ ಕಾಯುತ್ತಾ ನಿಲ್ಲಬೇಕಾಯಿತು.

ಪ್ರತಿಕ್ರಿಯಿಸಿ (+)