ದೌರ್ಜನ್ಯ: ಗೊಲ್ಲರ ಪ್ರತಿಭಟನೆ

7

ದೌರ್ಜನ್ಯ: ಗೊಲ್ಲರ ಪ್ರತಿಭಟನೆ

Published:
Updated:
ದೌರ್ಜನ್ಯ: ಗೊಲ್ಲರ ಪ್ರತಿಭಟನೆ

ಮುದ್ದೇಬಿಹಾಳ: ಪಟ್ಟಣದಲ್ಲಿರುವ ಗೊಲ್ಲರ (ಯಾದವ) ಸಮುದಾಯದ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದು, ತಮಗೂ ಸಮಾಜದಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಸಮುದಾಯದ ನೂರಾರು ಜನರು ಮಕ್ಕಳೊಂದಿಗೆ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.ಪೊಲೀಸರು ಅಪರಾತ್ರಿಯಲ್ಲಿ ನಮ್ಮ ಮನೆಗೆ ನುಗ್ಗಿ ಮಾಡದ ಕಳ್ಳತನದ ಮಾಡಿದ್ದೇವೆಂದು ಆಪಾದನೆ ಹೊರಿಸುವ, ಅವಾಚ್ಯ, ಅಶ್ಲೀಲ ಭಾಷೆಯಿಂದ ಬೈಯ್ದು, ನಮ್ಮ ಬಳಿ ಇರುವ ಹಣ ಕಸಿದುಕೊಳ್ಳುವುದರಿಂದ ಹಿಡಿದು ಇಲ್ಲದ ಅಪವಾದಗಳನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ದೂರಿದರು.ಪೊಲೀಸರ ನಿರಂತರ ದೌರ್ಜನ್ಯದಿಂದಾಗಿ ನಮ್ಮ ಜನತೆ  ಶಾಂತವಾಗಿ ಬದುಕುವುದೂ ಕಷ್ಟವಾಗಿದೆ, ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಮಾನವೀಯತೆ ಮರೆತು ತಮ್ಮೊಂದಿಗೆ ಅಮಾನುಷವಾಗಿ ವರ್ತಿಸುತ್ತಿದ್ದು, ಇದನ್ನು ತಪ್ಪಿಸಬೇಕು. ನಾಗರಿಕ ಸಮುದಾಯ, ಬುದ್ಧಿಜೀವಿಗಳು, ಪ್ರಗತಿಪರ ವಿಚಾರವಂತರು ನಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಸಮುದಾಯದ ಜನರು ಅಳಲು ತೋಡಿಕೊಂಡರು.ಪಟ್ಟಣದ ಡಾ.ಅಂಬೇಡ್ಕರ ವೃತ್ತದಿಂದ ಹೊರಟ ಪ್ರತಿಭಟನಾ ರ್ಯಾಲಿಯಲ್ಲಿ ರಾಮಣ್ಣ ಚಲವಾದಿ, ಪುರಸಭೆ ಸದಸ್ಯರಾದ ಸಾಹೇಬಲಾಲ ರಿಸಾಲ್ದಾರ, ಅಲ್ಲಾಬಕ್ಷ ಢವಳಗಿ, ಎಚ್.ಆರ್. ಬಾಗವಾನ, ಯಂಕಪ್ಪ ಗೊಲ್ಲರ, ಶಿವಪುತ್ರಯ್ಯ ಹಿರೇಮಠ, ಮಹಿಬೂಬ ಕುಂಟೋಜಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ಸದಸ್ಯರು, ಗಣ್ಯರು, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಗೊಲ್ಲರ ಸಮಾಜದ ಜನತೆ ಪಾಲ್ಗೊಂಡಿದ್ದರು. ಪ್ರತಿಭಟನಾ ರ್ಯಾಲಿ ನಂತರ  ತಹಸೀಲ್ದಾರ ಗಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry