ಬುಧವಾರ, ಅಕ್ಟೋಬರ್ 23, 2019
27 °C

ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸಿ

Published:
Updated:
ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸಿ

ರಾಯಚೂರು: ಸರ್ಕಾರಿ ನೌಕರರ ಮೇಲೆ ಚುನಾಯಿತ ಪ್ರತಿನಿಧಿಗಳ ಹಲ್ಲೆ, ದೌರ್ಜನ್ಯ ಮೀತಿ ಮೀರಿದೆ. ರೈತರು, ಸಾಮಾಜಿಕ ಸಂಘಟನೆ ಹೆಸರಿನಲ್ಲಿ ಹಫ್ತಾ ವಸೂಲಿ, ಬೆದರಿಕೆ ನೌಕರರಿಗೆ ಕಿರಿ ಕಿರಿಯಾಗಿದೆ. ದೇವರ ಸ್ವರೂಪವಾದ ಸರ್ಕಾರವೇ ನೌಕರರ ಹಿತ ರಕ್ಷಣೆಗೆ ಈ ಬಗ್ಗೆ ಕಾಯ್ದೆ ರೂಪಿಸಬೇಕು. ಸರ್ಕಾರ ವಿಳಂಬ ಧೋರಣೆ ಅನುಸರಿಸಿದರೆ ಕಾನೂನು ಚೌಕಟ್ಟು ಮೀರಿ ಸರ್ಕಾರಿ ನೌಕರರು ತಮ್ಮ ರಕ್ಷಣೆ ಮಾಡಿಕೊಳ್ಳಲು ಬದ್ಧರಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗ ಉಪಾಧ್ಯಕ್ಷ  ಬಾಲಸ್ವಾಮಿ ಕೊಡ್ಲಿ ಹೇಳಿದರು.ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗ ಮಟ್ಟದ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಿ ನೌಕರರ ಮೇಲಾಗುತ್ತಿರುವ ಹಲ್ಲೆ, ದೌರ್ಜನ್ಯ-ಕೊಲೆ ಮತ್ತು ಹಫ್ತಾ ವಸೂಲಿ ಎಂಬ ವಿಷಯ ಕುರಿತು ಗೊತ್ತುವಳಿ ಮಂಡಿಸುವ ಮೂಲಕ ಖಂಡಿಸಿದರು.ನೆಲದ ಕಾನೂನು ಒಪ್ಪದ ಸಮಾಜ ಘಾತುಕ ದುಷ್ಕರ್ಮಿಗಳು, ದಲ್ಲಾಳಿಗಳು ಪುಡಾರಿಗಳು, ರೈತ ಹೆಸರಿ ಪಟ್ಟಭದ್ರ ಹಿತಾಸಕ್ತಿಗಳು, ನಕಲಿ ಸಂಘ ಸಂಸ್ಥೆಗಳು ವ್ಯವಸ್ಥಿತ ಜಾಲ ನೌಕರರಿಗೆ ಕಿರಿ ಕಿರಿ ನೀಡುತ್ತಿದೆ. ಇದರಿಂದ ಸಾರ್ವಜನಿಕ ಕಲ್ಯಾಣ ಯೋಜನೆ, ಕಾರ್ಯಕ್ರಮ, ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿಂದ ಹಿಡಿದು ಲೋಕಸಭೆವರೆಗಿನ ಎಲ್ಲ ಚುನಾಯಿತಿ ಪ್ರತಿನಿಧಿಗಳು ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆ ಅನುಷ್ಠಾನ, ನಿರ್ವಹಣೆಗಾಗಿ ಹಪಹಪಿಸುತ್ತ ತಮ್ಮ ಹಿಂಬಾಲಕರಿಗೆ ಅಥವಾ ಸ್ವಯಂ ಸೇವಕರಿಗೆ ಬೇನಾಮಿ ಹೆಸರಿನಲ್ಲಿ ತೊಡಗಿಸುತ್ತಿದ್ದಾರೆ. ಇದು ಯೋಜನೆ ಅಸಮರ್ಪಕ ಜಾರಿಗೆ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ  ಎಂದು ಹೇಳಿದರು.ಜನಪ್ರತಿನಿಧಿಗಳಾದವರು ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿ ಕಿರಿ ಕಿರಿ ಮಾಡಬಾರದು. ಕಾನೂನು ಪ್ರಕಾರ ಅಧಿಕಾರದ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಇದೆಲ್ಲವನ್ನೂ ಮೀರಿ ರಾತ್ರೋ ರಾತ್ರಿ ಸರ್ಕಾರಿ ನೌಕರನ ಮನೆ ಬಾಗಿಲಿಗೆ ತೆರಳಿ ಚೆಕ್‌ಗೆ ಸಹಿ ಮಾಡಲು ಹೇಳುವುದು. ಮಾಡದೇ ಇದ್ದರೆ ಹಲ್ಲೆ ನಡೆಸುವ ಹುನ್ನಾರವನ್ನು ನೌಕರರ ಸಂಘ ಇನ್ನೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಎಸ್‌ಡಿಎಂಸಿಗಳು ಶಿಕ್ಷಕರಿಗೆ ನರಕಯಾತನೆ ನೀಡುತ್ತಿವೆ. ಇವುಗಳನ್ನು ರದ್ದುಪಡಿಸಬೇಕು. ಎಸ್‌ಡಿಎಂಸಿಯಲ್ಲಿ ಇರುವವರು ಆಡಳಿತ ಪಕ್ಷದಲ್ಲಿರುವವರೇ ಆಗಿದ್ದಾರೆ. ಅದು ಮತ್ತೊಂದು ರೂಪದ ರಾಜಕೀಯ. ರಜೆಗಾಗಿ ಎಸ್‌ಡಿಎಂಸಿ ಸದಸ್ಯರ ಮನೆ ಬಾಗಿಲಿಗೆ ಅಲೆಯುವ ಸ್ಥಿತಿ ಶಿಕ್ಷಕರಿಗೆ ಬಂದಿದೆ.ಸಂಘಟನೆ ಇದನ್ನು ಬಲವಾಗಿ ಖಂಡಿಸುತ್ತದೆ. ಅದೇ ರೀತಿ ಮಾಹಿತಿ ಹಕ್ಕು ಕಾಯ್ದೆ ಎಂಬುದು ಜನಸಾಮಾನ್ಯರಿಗೆ ಮಾಹಿತಿ ಕಲ್ಪಿಸಲು ಉತ್ತಮ ಉದ್ದೇಶದೊಂದಿಗೆ ಜಾರಿಗೆ ಬಂದರೂ ಅದರ ಉಪಟಳ, ಕಿರಿಕಿರಿ ಸರ್ಕಾರಿ ನೌಕರರನ್ನು ಕೆಲಸ ಮಾಡದಂತೆ ಮಾಡಿದೆ. ಮಾಹಿತಿ ಕಾಯ್ದೆ ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇಂಥ ಎಲ್ಲ ಸಮಸ್ಯೆಗಳಿಂದ ನೌಕರರನ್ನು ಪಾರು ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಇಲ್ಲದೇ ಇದ್ದರೆ ಕಾನೂನು ಚೌಕಟ್ಟು ಮೀರಿಯಾದರೂ ನೌಕರರು ತಮ್ಮ ರಕ್ಷಣೆ ಮಾಡಿಕೊಳ್ಳಲು ಬದ್ಧವಾಗಿದ್ದಾರೆ ಎಂದು ಹೇಳಿದರು.ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಬಾಲಸ್ವಾಮಿ ಕೊಡ್ಲಿ ಅವರ ಗೊತ್ತುವಳಿ ಮಂಡನೆಯನ್ನು ಅನುಮೋದಿಸಿದರು. ಸರ್ಕಾರಿ ನೌಕರರ ಕಾರ್ಯಕ್ಷಮತೆ ಬಗ್ಗೆ ಸಂಘದ ರಾಜ್ಯ ಖಜಾಂಚಿ ಡಾ.ಚೌಡಯ್ಯ ಅವರು ಮಂಡಿಸಿದರು. ಬೀದರ್ ಜಿಲ್ಲೆ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅನುಮೋದನೆ ಮಾಡಿದರು.

 

ಅದೆ ರೀತಿ ಜಿಲ್ಲಾ ಆಸ್ಪತ್ರೆಗಳನ್ನು ಸ್ವಾಯತ್ತ ಸಂಸ್ಥೆಗಳಿಂದ ಬೇರ್ಪಡಿಸಿ ಹಿಂದಿನಂತೆ ಆರೋಗ್ಯ ಇಲಾಖೆಯಲ್ಲಿ ಮುಂದುವರಿಸುವ ಗೊತ್ತುವಳಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಮಂಡನೆ ಮಾಡಿದರು. ಸಂಘದ ಗುಲ್ಬರ್ಗ ಜಿಲ್ಲೆ ಅಧ್ಯಕ್ಷ ಬಿ.ಎಸ್ ದೇಸಾಯಿ ಅನುಮೋದನೆ ಮಾಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)