ದೌರ್ಜನ್ಯ ಪ್ರಕರಣಗಳ ಪರಿಶೀಲನೆ

7

ದೌರ್ಜನ್ಯ ಪ್ರಕರಣಗಳ ಪರಿಶೀಲನೆ

Published:
Updated:

ಗುಲ್ಬರ್ಗ: ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ನಿರ್ವಹಣೆ, ಪರಿಹಾರ ಕ್ರಮ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳ ನೇಮಕ ಪ್ರಕ್ರಿಯೆಗಳ ಲೋಪದೋಷ ಮತ್ತು ಪರಿಹಾರ ಕ್ರಮದ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ಪರಿಶೀಲಿಸಲಿದೆ ಎಂದು ಆಯೋಗದ ಸದಸ್ಯ ಎಂ. ಶಿವಣ್ಣ ಹೇಳಿದರು.ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಡಾ. ಪುಣ್ಯ ಅಧ್ಯಕ್ಷತೆಯಲ್ಲಿರುವ ಈ ಆಯೋಗದ ಐವರು ಸದಸ್ಯರು ತಲಾ 10 ರಾಜ್ಯಗಳ ಪರಿಶೀಲನೆಯ ಜವಾಬ್ದಾರಿ ವಹಿಸಿದ್ದಾರೆ ಎಂದರು.ಕರ್ನಾಟಕ, ಕೇರಳ. ಮಧ್ಯಪ್ರದೇಶ, ಛತ್ತೀಸಗಡ, ಒಡಿಶಾ, ಅಂಡಮಾನ್-ನಿಕೋಬಾರ್, ಗೋವಾ ದಮನ್ ದೀವ್ ಸೇರಿದಂತೆ 10 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ದೌರ್ಜನ್ಯ ಪ್ರಕರಣ, ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಪರಿಶೀಲನಾ ಜವಾಬ್ದಾರಿಯನ್ನು ಆಯೋಗವು ತಮಗೆ ವಹಿಸಿದೆ.

 

ರಾಜ್ಯ ಮಟ್ಟದಲ್ಲಿ ಆಯಾ ರಾಜ್ಯಗಳ ಸಮಾಜಕಲ್ಯಾಣ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಮತ್ತು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಇತರ ಅನುಷ್ಠಾನಾಧಿಕಾರಿಗಳ ಜತೆ ಚರ್ಚೆ ನಡೆಸಿ ಆಯೋಗಕ್ಕೆ ವರದಿ ನೀಡಲಾಗುವುದು.

 

ಜಿಲ್ಲೆಗಳಲ್ಲಿ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡಿದ ಪ್ರಕರಣಗಳ ಸತ್ಯಾಸತ್ಯತೆ ಕುರಿತು ಸಹ ಚರ್ಚಿಸಲಾಗುವುದು ಮತ್ತು ಆಯಾ ಜಿಲ್ಲಾಧಿಕಾರಿಗಳು ಈ ಪ್ರಕರಣಗಳಲ್ಲಿ ಮೂರು ತಿಂಗಳೊಳಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಇತ್ಯರ್ಥಪಡಿಸಿದ ವರದಿ ಸಲ್ಲಿಸಬೇಕು.

 

ಇದಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಒದಗಿಸಲಾದ ಅನುದಾನದ ಸಂಪೂರ್ಣ ಸಮರ್ಪಕ ಬಳಕೆಯ ಬಗ್ಗೆಯೂ ಪರಿಶೀಲಿಸಲಾಗುವುದು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಅವರು ವಿವರಿಸಿದರು.ಜಿಲ್ಲೆಯ ವಾಡಿ, ಚಿತ್ತಾಪುರ, ಶಹಾಬಾದಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ಮನೆಗಳನ್ನು ಕೆಡವಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ತಾವು ಈ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ಹೇಳಿದರು.ನಿರ್ದೇಶಕ ಡಾ. ಎಂ.ಆರ್. ಬಾಳಿ, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್., ಪ್ರಭಾರಿ ನಿರ್ದೇಶಕಿ ಶೀಲಾ ನಾರಾಯಣಸ್ವಾಮಿ, ಉಪ ನಿರ್ದೇಶಕ ಡಾ. ಅಜಯಕುಮಾರ ಹಾಜರಿದ್ದರು. ನಂತರ ಶಿವಣ್ಣ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಳೀಯ ಮುಖಂಡರೊಂದಿಗೆ ಹಾಗೂ ಜಿಲ್ಲಾ ಅನುಷ್ಠಾನಾಧಿಕಾರಿಗಳ ಜತೆ ಚರ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry