ದ್ಯಾಮವ್ವನ ಅಂತರಂಗ

7
ಕೇಳಿ ನನ್ನ ಕಥೆ

ದ್ಯಾಮವ್ವನ ಅಂತರಂಗ

Published:
Updated:
ದ್ಯಾಮವ್ವನ ಅಂತರಂಗ

`ನನ್ ಹೆಸರು ದ್ಯಾಮವ್ವ (ಹೆಸರು ಬದಲಿಸಲಾಗಿದೆ) ನನ್ನೂರು  ರಾಯಚೂರು ಜಿಲ್ಲೆದಾಗ ಐತ್ರಿ. ನಮ್ ಜನರ ಮೂಢನಂಬಿಕೆ, ಸಮಾಜದಲ್ಲಿ `ದೊಡ್ಡವರು' ಅನಿಸಿಕೊಂಡವರ ಶೋಷಣೆಗೆ ಒಳಗಾಗಿ ನಾನು ದೇವದಾಸಿಯಾದೆನ್ರಿ. ನಂಗೆ ಆಗ ಏನೂ ತಿಳೀದ ವಯಸ್ಸು. ಸುಮಾರು 4 ರಿಂದ 5 ವರ್ಷ ಇತ್ರಿ. ನಾನೂ ಎಲ್ಲರಂಗೆ ಕಲ್ತು ದೊಡ್ಡ ಆಫೀಸರ್ ಆಗಬೇಕ ಅಂತ ಬಾಳಾ ಆಸೆ ಹೊತ್ಕೊಂಡಿದ್ದೆ. ಆದ್ರ, ದೈವ ನನ್ನ ಹಣೇಲಿ ಬೇರೇನೋ ಬರೆದಿತ್ತು.ನಾನು ಎಲ್ಲರಂಗೆ ಅವ್ವ, ಅಜ್ಜಿಯ ಮುದ್ದಿನ್ಯಾಗ ಬೆಳೀಕತ್ತಿದ್ದೆ. ಆದ್ರ, ಅವತ್ತೊಂದಿನ ಅವ್ವ ಬಾಳಾ ಅಳಾಕತ್ತಿದ್ಲು. ನಾನು ಹೋಗಿ ಕೇಳ್ದೆ `ಯಾಕ ಅವ್ವಾ ಅಳಾಕತ್ತಿ? ನೀನು ಅತ್ರ ನಂಗುನೂ ಅಳು ಬರ್ತೈತಿ ನೋಡು' ಅಂದೆ. ಅದಕ್ಕ ಅವಳು ನನ್ನ ಬಾಚಿ ತಬ್‌ಕೊಂಡ್ಲು `ನೀನು ನನ್ನ ಹೊಟ್ಯಾಗೆ ಯಾಕಾದ್ರೂ ಹೆಣ್ಣ ಮಗಳಾಗಿ ಹುಟ್ದೆ, ಆ ಶಿವ ನಮಗ ಯಾಕಿಂತ ಕಷ್ಟ ಕೊಡ್ತಾನೆ' ಅಂತ ಕಣ್ಣೀರಿಟ್ಟಳು.ಅವ್ವ ಅತ್ತ ಮೂರು ದಿನದ ನಂತ್ರ ನನ್ನ ದೇವಿಯ ದೇವಸ್ಥಾನಕ್ಕೆ ಕರಕೊಂಡು ಹೋದ್ರು. ಅವ್ವ ಲಬೋ ಲಬೋ ಅಂತ ಹೊಯ್ಕೋತಿದ್ಲು. ಅವ್ಳನ್ನ ನೋಡಿ ನಾನೂ ಅಳಾಕತ್ತೆ. ಆಗ ನನ್ನ ಎಳ್‌ಕೊಂಡು ಹೋಗಿ ದೇವಿಯ ಮುಂದೆ ಕೂರ‌್ಸಿ ಏನೇನೋ ಪೂಜೆ ಮಾಡಿದ್ರು. ಆಮ್ಯಾಕೆ ಅಲ್ಲಿಯ ಪೂಜಾರಿ, `ನೀನು ಇಂದಿನಿಂದ ದೇವದಾಸಿ. ನೀನು ಈ ಊರಿಗೆ ಸೇರಿದವಳು' ಎಂದು ಎಲ್ರಿಗೂ ಕೇಳೋ ಹಂಗೆ ಕೂಗಿ ಹೇಳ್ದ.ವಾಪಸ್ ಬಂದಾಗ ಮನೆಯಲ್ಲಿ ಕತ್ಲು, ನನ್ನ ಮನಸ್ನಲ್ಲೂ ಕತ್ಲು. ಆಗ ಅವ್ವ ಅತ್ತು ಅತ್ತು ಸುಮ್ಮನಾಗಿ, ನನ್ನ ತಲೆ ನೇವರಿಸಿ `ಏನೋ ಆ ದೇವಿ ಇಟ್ಟಂಗೆ ಆಗ್ಲಿ. ಇದು ನಮ್ಮಂತಾ ಬಡವ್ರಿಗೆ, ಕೀಳು ಜಾತಿಯಲ್ಲಿ ಹುಟ್ಟೋರಿಗೆ ಶಾಪ' ಎಂದು ಸುಮ್ಮನಾದಳು.ನಂತರ ಮನೆಯಿಂದ ಹೊರಗೆ ನಿಂತ್ರ ಅನೇಕ ಕಣ್ಣುಗಳು ನನ್ನನ್ನೇ ನೋಡಕ್ಕೆ ಶುರು ಮಾಡ್ದೊ. ನಾನು 13 ವರ್ಷದವಳಿದ್ದಾಗ ದೊಡ್ಡಾಕಿ ಆದೆ. ಆಗ, ಊರಲ್ಲಿ ಏನೋ ಜಾತ್ರೆ ಇದ್ದಂಗೆ ಸಂಭ್ರಮ. ಊರ ಗಂಡಸರೆಲ್ಲ ಆಸೆಗಣ್ಣಿಂದ ನನ್ನ ನೋಡಾಕತ್ತಿದ್ರು. ಆಗ, ನಂಗ ಮುಂದೆ ಏನಾಗ್ತೈತಿ ಅಂತ ತಿಳಿವಲ್ದಂಗ ಆಗಿತ್ತು. ಆಗ ಮತ್ತ ನನ್ನ ದೇವಿಯ ಮುಂದೆ ಕೂರ‌್ಸಿ ಏನೇನೋ ಪೂಜೆ ಮಾಡಿ, ಪೂಜಾರಿ ಕೆಂಪು, ಬಿಳಿ ಮುತ್ತುಗಳಿಂದ ಮಾಡಿದ ಮಾಲೆಯನ್ನ ಕೊರಳಿಗೆ ಕಟ್ಟಿದ. ಆಗ ನನ್ನ ಲಗ್ಣಾ ಆದಂಗೆ. ಪೂಜಾರಿ ಕಟ್ಟಿದ್ದೇ ನಂಗೆ ತಾಳಿ ಆಯ್ತು. ಆಗ್ಲಿಂದ ನಾನು ದೇವದಾಸಿಯಾದೆ. ಪೂಜಾರಪ್ಪ ನನ್ನ ಕಿವೀಲಿ ಏನೇನೋ ಹೇಳ್ದ.ಆಗ ನಂಗ ದೇವಿಯ ಹೆಸರಿನಲ್ಲಿ ಮುತ್ತು ಕಟ್ಟಿದ್ರು. ಅಲ್ಲಿಂದ ನನ್ ಜೀವನದ್ ಹಾದೀನೇ ಬದಲಾಯ್ತು. ಯಾರ‌್ಯಾರೋ ಕೇಳ್‌ಕೊಂಡು ಮನೀಗ ಬರಾಕತ್ತಿದ್ರು. ಯಾರ ಬಂದ್ರೂ ಅವರಿಗೆ ಒಲ್ಲೆ ಅನ್ನೋ ಹಂಗಿಲ್ಲ. ಎಲ್ರಿಗೂ ಸೆರಗ ಹಾಸಬೇಕು. ನಂಗ ನನ್ನದೇ ಆದ ಕುಟುಂಬಿಲ್ಲ, ಹೇಳಿಕೊಳ್ಳಾಕ ಗಂಡನಿಲ್ಲ. ಊರಿನ ಎಲ್ಲ ಹೆಣ್ಣು ಮಕ್ಕಳ ಶಾಪಾನೂ ನನ್ನ ಮ್ಯಾಲ್ಯಾನ. `ಅವಳೇನು ಮಾಟ ಮಾಡ್ಯಾಳೋ, ನನ್ನ ಗಂಡ ಅವಳ ಮನೆ ಕಡೆ ಕಾಲ್ ಹಾಕ್ದ. ಇವ್ಳ ಸಾಯೋವರ‌್ಗೂ ನಮ್‌ಗೆ ನೆಮ್ಮದಿ ಬರಂಗಿಲ್ಲ ನೋಡವ್ವಾ' ಎಂಬ ಮಾತುಗಳು ಬರೆ ಹಾಕ್ದಂಗ ನನ್ನ ಮನಸ್ಸಿನ್ಯಾಗ ನಾಟ್ತಿದ್ದವು.ಬಂದವನಿಗೆ ನನ್ನ ಜತೆ ಇರಾಕ ಎಷ್ಟು ದಿನಾ ಮನಸ್ಸಿರುತ್ತೋ ಅಲ್ಲಿವರೆಗೂ ಜತೆಗಿರತಾನ. ನಂತ್ರ ಅವನಿಗೆ ಬೇಡ ಅಂತ ಅನಿಸಿದ್ರ, ಬಾಳೆ ಹಣ್ಣಿನ ಸಿಪ್ಪೇ ಒಗ್ದಂಗ ಒಗ್ದು ಮುಂದೆ ಸಾಗ್ತಾನ. ಜೊತೆಗಿದ್ದೋನು ಬಿಟ್ಟು ಹೋದ ಅಂದ್ರ ಮತ್ತ ಹೊಟ್ಟೆ ಹೊರೆಯೋ ಚಿಂತೆ ನಂಗ. ಯಾಕಂದ್ರ, ದೇವದಾಸಿಯಾದವ್ಳಿಗೆ ಎಲ್ಲೂ ಕೂಲಿ ಸಿಗಂಗಿಲ್ಲ. ಇನ್ನು ಬೇರೇವ್ನ ಸಿಗೋವರ‌್ಗೂ ಅರೆ ಹೊಟ್ಟೆ ಪಾಡು ನಂದು.ಹಿಂಗ ಬಂದ ಒಬ್ಬ ನನ್ನ ಪಾಡ ನೋಡ್ಕೋತೀನಿ ಅಂತ ಹೇಳಿ ನಂಬಿಸ್ದ. ಮುಂಬೈಗೆ ಹೋಗಾಣ ಅಲ್ಲಿ ಸುಖವಾಗಿ ಬದುಕ್‌ಬೋದು ಅಂತ ಆಸೆ ಹುಟ್ಟಿಸ್ದ. ನನ್ನ ಅಲ್ಲಿ ಕರಕೊಂಡು ಹೋಗಿ ಮಾರಾಟ ಮಾಡ್ದ. ಅಲ್ಲಿ ನನ್ನ ಜೀವನದ ನರಕಾನೇ ಕಂಡೆ. ಅಲ್ಲಿ ಇರಕ್ಕಾಗದೆ, ಹೇಗೋ ತಪ್ಪಿಸ್‌ಕೊಂಡು ಬಂದೆ.ನಂಗ ಮೂವರು ಮಕ್ಕಳು. ಒಬ್ಬ ಗಂಡು ಮಗ, ಇಬ್ರು ಹೆಣ್ಣು ಮಕ್ಕಳು. ಅವ್ರನ್ನ ಓದಿಸ್‌ಲಿಕ್ಕೆ ಆಗ್ದೆ ಅರ್ಧಕ್ಕೇ ಶಾಲೆ ಬಿಡಿಸೋ ಯೋಚನೆ ಇತ್ತು. ಆದ್ರ, ನಮ್ಮ ಜಿಲ್ಲೆನ್ಯಾಗ ಶುರುವಾದ `ನವ ಜೀವನ ಮಹಿಳಾ ಒಕ್ಕೂಟ' ನಮಗೆ ಮಾರ್ಗದರ್ಶನ ನೀಡ್ತು. ದೇವದಾಸಿ ಎಂಬುದು ಎಂತಹ ಕೆಟ್ಟ ಪದ್ಧತಿ ಎಂಬುದನ್ನ ಅದ್ರ ಸದಸ್ಯರು ನಮ್ಮೆಲ್ರಿಗೂ ಮನವರಿಕೆ ಮಾಡ್‌ಕೊಟ್ರು.ಆಗ ನಾನು ಊರವ್ರ ವಿರೋಧದ ಮಧ್ಯೆಯೂ ದೇವದಾಸಿ ಪದ್ಧತಿಯಿಂದ ಹೊರ ಬಂದೆ. ನನ್ನ ಮಕ್ಕಳ್ನ ಕಷ್ಟಪಟ್ಟು ಓದಿಸ್ದೆ. ಈಗ ಅವ್ರ ಒಳ್ಳೆ ಕೆಲಸದಲ್ಲಿದಾರೆ. ನನ್ ಮಕ್ಕಳು ನನ್ನಂಗ ಆಗಬಾರದು ಅಂತ ದೃಢ ನಿಶ್ಚಯ ಮಾಡ್ದೆ. ಮಕ್ಳಿಗೆಲ್ಲ ಲಗ್ಣಾ ಮಾಡಿ ಅವರ ಕುಟುಂಬಾನ ಕಣ್ತುಂಬ ನೋಡ್ಬೇಕು ಅಂತ ಆಸೆ ಐತ್ರಿ. ಆದ್ರೆ ಶಿವ ಏನು ಮಾಡ್ತಾನೋ ನೋಡ್‌ಬೇಕು.ನನ್ನಂತವ್ರ ಪುನರ್ವಸತಿಗಾಗಿ ಇರೋ `ನವ ಜೀವನ ಮಹಿಳಾ ಒಕ್ಕೂಟ' ನನ್ನ ಬಾಳಿನ್ಯಾಗ ದೀಪ ಹಚ್ಚಿದೆ. ಅದ್ರಿಂದ ಬೆಳಕ ಪಡೆದ ನಾನು ನನ್ನಂತೆ ಇರೋ  ಬೇರೆಯವ್ರಿಗೂ ಕೈಲಾದಷ್ಟು ಸಹಾಯ ಮಾಡ್ತೀನ್ರಿ. ಈಗ ಒಕ್ಕೂಟದ ಕಾರ್ಯಕರ್ತೆಯಾಗಿ ನಮ್ಮ ಜಿಲ್ಲೆನ್ಯಾಗ ಯಾರ‌್ನಾದ್ರೂ ದೇವದಾಸಿ ಮಾಡಕತ್ಯಾರ ಅಂತ ಗೊತ್ತಾದ್ರೆ ಕೂಡ್ಲೇ ಅಲ್ಲಿಗೆ ಹೋಗಿ ಅದನ್ನ ನಿಲ್ಲಿಸ್ತೀನಿ. ಒಕ್ಕೂಟದಲ್ಲಿ ಇದ್‌ಕೊಂಡು ನಾಕು ಜನಕ್ಕೆ ಒಳ್ಳೆಯದಾಗೋಂತ ಕೆಲಸ ಮಾಡಾಕತ್ತೀನಿ'.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry