ಶನಿವಾರ, ಜನವರಿ 25, 2020
18 °C

ದ್ಯಾವ್ರೇ ಹೂವಿನ ಹಾರ ಅದರ ದಾರ

–ಅಮಿತ್‌ ಎಂ.ಎಸ್‌. Updated:

ಅಕ್ಷರ ಗಾತ್ರ : | |

‘ಹಲವು ಹೂಗಳನ್ನು ಒಂದು ದಾರದಲ್ಲಿ ಪೋಣಿಸಿ ಹಾರ ಮಾಡಿದ್ದೇನೆ. ಈ ಹಾರದ ದಾರವೇ ಯೋಗರಾಜ್‌ ಭಟ್ಟರ ಪಾತ್ರ’– ನಿರ್ದೇಶಕ ಗಡ್ಡ ವಿಜಿ ತಮ್ಮ ಚಿತ್ರವನ್ನು ಹೂವಿನ ಹಾರಕ್ಕೆ ಹೋಲಿಸಿದರು. ವರ್ಷಗಟ್ಟಲೆ ಕುಳಿತು ಶ್ರದ್ಧೆಯಿಂದ ತಯಾರಿಸಿರುವ ಈ ಹೂವಿನ ಹಾರ ಸಿನಿರಂಗದಲ್ಲಿ ಹೊಸ ಕಂಪು ಬೀರಲಿದೆ ಎಂಬ ವಿಶ್ವಾಸ ಅವರದು. ಗಟ್ಟಿಯಾದ ದಾರ ಇರುವಾಗ ಹಾರದ ಬಗ್ಗೆ ಚಿಂತೆ ಬೇಡ ಎಂಬ ನಂಬಿಕೆಯೂ ಇದೆ.ಯೋಗರಾಜ್‌ ಭಟ್ಟರು ಮತ್ತು ಸೂರಿ ಪಾಳಯದಲ್ಲಿ ಬೆಳೆದ ಗಡ್ಡ ವಿಜಿ ನಿರ್ದೇಶನದ ಚೊಚ್ಚಿಲ ಚಿತ್ರ ‘ದ್ಯಾವ್ರೇ’ ಇಂದು (ಶುಕ್ರವಾರ) ತೆರೆಕಾಣುತ್ತಿದೆ. ಹಾಡುಗಳು ಹಿಟ್‌ ಆಗಿ ‘ದ್ಯಾವ್ರೇ’ ಬಗ್ಗೆ ಪ್ರೇಕ್ಷಕನಲ್ಲಿ ಹೊಸ ನಿರೀಕ್ಷೆ ಮೂಡಿದ್ದರೆ, ಚಿತ್ರದ ಪ್ರೋಮೊಗಳು ಇದು ಎಂದಿನ ಶೈಲಿಯ ಸಿನಿಮಾ ಅಲ್ಲ ಎಂಬ ಅಭಿಪ್ರಾಯಗಳನ್ನು ಹುಟ್ಟುಹಾಕಿವೆ. ‘ನಿಜ. ಇದು ಮಾಮೂಲಿ ಸಿನಿಮಾಗಳಂತಲ್ಲ’ ಎಂದು ತಮ್ಮದು ಪ್ರಯೋಗಾತ್ಮಕ ಸಿನಿಮಾ ಎಂದು ಹೇಳಿಕೊಳ್ಳಲು ಸಂಕೋಚಪಡುತ್ತಲೇ ನುಡಿಯುತ್ತಾರೆ ವಿಜಿ.ಸಾಮಾನ್ಯವಾಗಿ ಸಿನಿಮಾಗಳು ಸೃಷ್ಟಿಯಾಗುವುದು ಒಂದು ಅಥವಾ ಎರಡು ಕತೆ ಹಾಗೂ ಕೆಲವು ಪಾತ್ರಗಳ ಮೇಲೆ. ಆದರೆ ವಿಜಿ ಇಲ್ಲಿ ಆರು ಉಪಕತೆಗಳನ್ನು ಹೆಣೆದಿದ್ದಾರೆ. ಇದೆಲ್ಲವೂ ಕೈದಿಗಳ ಕಥನವಾಗಿರುವುದು ವಿಶೇಷ. ಜೊತೆಗೆ ಪ್ರೀತಿ ಪ್ರೇಮವೂ ಇದೆ. ಬದುಕಿನ ಮತ್ತೊಂದು ಮುಖದ ಚಿತ್ರಣವೂ ಇದೆ.ನೀನಾಸಂ ಸತೀಶ್‌, ರಾಜೇಶ್‌, ಗಂಧರ್ವ, ಅರಸು ಮಹಾರಾಜ್‌, ಸೋನು ಗೌಡ, ಸೋನಿಯಾ ಗೌಡ, ಶ್ರುತಿ ಹರಿಹರನ್‌ ಮುಂತಾದ ಕಲಾವಿದರ ಹಲವು ಪಾತ್ರಗಳು ಈ ಉಪಕತೆಗಳಲ್ಲಿ ಒಡಮೂಡಿವೆ. ಕತೆಗಳಿಗೆ ಬರ ಇದೆ ಎಂಬ ಮಾತನ್ನು ಸುಳ್ಳುಮಾಡುವಂತೆ ಮತ್ತು ಮಾಮೂಲಿ ಸಿನಿಮಾ ಶೈಲಿಗಳನ್ನು ತುಂಡರಿಸಿ, ಹಲವು ಕಥನಗಳನ್ನು ಒಂದುಗೂಡಿಸಿ ಕತೆ ಹೇಳುವ ಸಾಂಪ್ರದಾಯಿಕ ಶೈಲಿಯನ್ನು ಮುರಿದು, ವಿಭಿನ್ನ ರೀತಿಯಲ್ಲಿ ಕತೆಗಳನ್ನು ಜೋಡಿಸುವ ಪ್ರಯತ್ನ ಅವರದು.ಈ ಉಪಕತೆಗಳೆಲ್ಲವೂ ಅಂತ್ಯದಲ್ಲಿ ಜೊತೆಗೂಡುತ್ತವೆ. ಆದರೆ ಜೊತೆಗೂಡಿವೆ ಎಂಬುದನ್ನು ಹೇಳಿಲ್ಲ. ಅದನ್ನು ಅರ್ಥಮಾಡಿಕೊಳ್ಳುವ ಹೊಣೆ ಪ್ರೇಕ್ಷಕರಿಗೆ ಬಿಟ್ಟಿದ್ದು ಎನ್ನುತ್ತಾರೆ ವಿಜಿ. ಹಾಗೆಯೇ ಯೋಗರಾಜ್‌ ಭಟ್ಟರ ಪಾತ್ರ ಕೂಡ. ಕೈದಿಗಳ ವಿರುದ್ಧ ಕಿಡಿಕಾರುವ ಪೊಲೀಸ್‌ ಅಧಿಕಾರಿ ಮತ್ತು ಅವರ ಬಗ್ಗೆ ಮಮತೆಯುಳ್ಳ ಸಹೃದಯಿ ಜೈಲರ್‌, ಈ ಎರಡೂ ಪಾತ್ರಗಳ ನಡುವಿನ ತಿಕ್ಕಾಟದ ನೆಪದಲ್ಲಿ ಕೈದಿಗಳ ಬದುಕು, ಅವರ ಸಮಸ್ಯೆಗಳು, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ಒರೆಗೆಹಚ್ಚುವ ಪುಟ್ಟ ಪ್ರಯತ್ನ ಮಾಡಿದ್ದಾರಂತೆ. ಕೈದಿಗಳ ಕುರಿತು ಬಂದಿರುವ ಸಿನಿಮಾಗಳು ತುಂಬಾ ಕಡಿಮೆ. ಇತ್ತೀಚೆಗಂತೂ ಅತಿ ವಿರಳ. ಹೀಗಾಗಿ ‘ದ್ಯಾವ್ರೇ’ ಹೊಸತು ಎನಿಸಿಕೊಳ್ಳುತ್ತದೆ ಎನ್ನುವುದು ಅವರ ಅಭಿಪ್ರಾಯ.‘ನಿರೂಪಣೆಯ ಬಗೆ ವಿಭಿನ್ನವಾಗಿದ್ದರೂ ಗೊಂದಲ ಉಂಟುಮಾಡುವುದಿಲ್ಲ. ಪ್ರೇಕ್ಷಕನನ್ನು ಗೊಂದಲಕ್ಕೆ ಸಿಲುಕಿಸುವ ಹಕ್ಕು ನಮಗಿಲ್ಲ. ನಾನು ಚಿಕ್ಕಂದಿನಲ್ಲಿ ಸಿನಿಮಾ ನೋಡುವಾಗ ಕತೆ ಹೀಗೆಯೇ ಆಗುತ್ತದೆ ಎಂದು ಹೇಳುತ್ತಿದ್ದೆ. ಹೇಳಿದಂತೆ ಆದಾಗ ಖುಷಿ, ಊಹೆಗೂ ಮೀರಿ ಬದಲಾದಾಗ ಅಚ್ಚರಿ. ಎರಡೂ ಆಗದೆ ಇದ್ದಾಗ ನಿರಾಸೆ ಆಗುತ್ತಿತ್ತು. ನನ್ನ ಸಿನಿಮಾದಲ್ಲಿ ಪ್ರೇಕ್ಷಕನ ನಿರೀಕ್ಷೆಗೆ ಮೋಸವಾಗುವುದಿಲ್ಲ, ಅಲ್ಲಲ್ಲಿ ಆತನ ಕಲ್ಪನೆಗಳು ತಲೆಕೆಳಗಾಗುತ್ತವೆ, ನಿರಾಸೆಯನ್ನಂತೂ ಮೂಡಿಸುವುದಿಲ್ಲ’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಅವರು.‘ದ್ಯಾವ್ರೇ’ ಯೋಗರಾಜ್ ಭಟ್ಟರು ಮೊದಲ ಬಾರಿಗೆ ನಟಿಸಿರುವ ಚಿತ್ರ. ಇದೇ ಕೊನೆಯ ಬಾರಿ ಎಂದೂ ಅವರು ಹೇಳಿದ್ದಾರೆ. ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದಿನ ಕೆಲಸದಲ್ಲಿಯೂ ಭಟ್ಟರು ಶಿಷ್ಯನಿಗೆ ನೆರವಾಗಿದ್ದಾರೆ. ಕತೆ ಬರೆಯುವ ಉತ್ಸಾಹದಲ್ಲಿ ವಿಜಿ 40 ಪಾತ್ರಗಳನ್ನು ಸೃಷ್ಟಿಸಿದ್ದರಂತೆ. ಪ್ರೇಕ್ಷಕರ ಮೇಲೆ ಇಷ್ಟೆಲ್ಲಾ ಪಾತ್ರಗಳನ್ನು ಹೇರಲು ಸಾಧ್ಯವಿಲ್ಲ. ಅವರು ಸಹಿಸಿಕೊಳ್ಳಲಾರರು ಎಂದು ಪಾತ್ರಗಳನ್ನು ಕಡಿಮೆ ಮಾಡಿಸಿದವರು ಭಟ್ಟರು. ಆರಂಭದಲ್ಲಿ ತೆಳುವಾಗಿ ಸಂಭಾಷಣೆ ರಚಿಸಿದ್ದ ವಿಜಿ, ಬಳಿಕ ಅದನ್ನು ಭಟ್ಟರ ಕೈಗೆ ಒಪ್ಪಿಸಿದರು.ಸಂಭಾಷಣೆಯಲ್ಲಿ ಶೇ 80ರಷ್ಟು ಪಾಲು ಭಟ್ಟರದು, ಶೇ 20ರಷ್ಟು ಮಾತ್ರ ತಮ್ಮದು ಎಂದು ಹೇಳುತ್ತಾರೆ ವಿಜಿ. ಭಟ್ಟರ ಸಂಭಾಷಣೆ ಯಾದರೂ ವ್ಯಂಗ್ಯ, ಪನ್‌ಗಳಿಗಿಂತ ಸಹಜ ಮಾತುಗಳಿಗೆ ಒತ್ತು ನೀಡಲಾಗಿದೆಯಂತೆ. ಮಾತಿಗಿಂತ ಇಲ್ಲಿ ಕತೆಗೆ ಆದ್ಯತೆ ನೀಡಿರುವುದರಿಂದ ಭಟ್ಟರ ಶೈಲಿಯ ಸಾಲುಗಳಿದ್ದರೂ ಸಂಭಾಷಣೆಯೇ ವಿಜೃಂಭಿಸುವುದಿಲ್ಲ. ಇನ್ನು ಭಟ್ಟರ ಲೇಖನಿಯಿಂದ ಮೂಡಿದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್‌ ಮತ್ತು ಭಟ್ಟರಿಗೆ ಹೀಗೆಯೇ ಹಾಡುಗಳು ಬೇಕು ಎಂದು ಹೇಳದೆ ಕಥೆಯನ್ನು ಅವರ ಕೈಗೆ ಒಪ್ಪಿಸಿ ನಿರಾಳರಾಗಿದ್ದರು.ಪ್ರತಿ ಕೈದಿ ನಿತ್ಯವೂ ದೇವರನ್ನು ಸ್ಮರಿಸಿಕೊಳ್ಳುತ್ತಾನೆ. ‘ದ್ಯಾವ್ರೇ’ ಸಹಜ ಉದ್ಗಾರದಂತೆ ಕಂಡರೂ, ಅದರಲ್ಲಿ ಭೂತದ ನೆನಪುಗಳಿರುತ್ತದೆ, ವರ್ತಮಾನದ ಆರ್ತನಾದವಿರುತ್ತದೆ ಮತ್ತು ನಾಳೆಗಳ ನಿರೀಕ್ಷೆಯಿರುತ್ತದೆ ಎಂದು ಚಿತ್ರದ ಶೀರ್ಷಿಕೆ ಸಿನಿಮಾಕ್ಕೆ ಎಷ್ಟು ಸೂಕ್ತ ಎನ್ನುವುದನ್ನು ವಿವರಿಸುತ್ತಾರೆ ಅವರು.‘ಒಬ್ಬ ಉತ್ತಮ ನಿರ್ದೇಶಕನಾಗಿ ಗುರ್ತಿಸಿಕೊಳ್ಳಬೇಕು, ನನ್ನನ್ನು ಬೆಳೆಸಿದ ಯೋಗರಾಜ್‌ ಭಟ್ಟರು ಮತ್ತು ಸೂರಿ ಅವರ ಗೌರವಕ್ಕೆ ಧಕ್ಕೆ ಬರಬಾರದು, ನಿರ್ಮಾಪಕರ ಕಿಸೆಯೂ ತುಂಬಬೇಕು. ಈ ಮೂರನ್ನೂ ಮನದಲ್ಲಿಟ್ಟುಕೊಂಡಿದ್ದೇನೆ. ಅದಕ್ಕೆ ತಕ್ಕ ಶ್ರಮವನ್ನೂ ಹಾಕಿದ್ದೇನೆ. ಫಲಿತಾಂಶಕ್ಕೆ ಕಾತರನಾಗಿದ್ದೇನೆ’ ಎನ್ನುತ್ತಾರೆ ವಿಜಿ.

ಪ್ರತಿಕ್ರಿಯಿಸಿ (+)