ದ್ರಾಕ್ಷಿ ಕೃಷಿಕರೀಗ ಗಣೇಶ ಮಾರಾಟಗಾರರು

7
ಕೈ ಕೊಟ್ಟ ಕೃಷಿ; ಪರ್ಯಾಯ ಚಿಂತನೆಯಲ್ಲಿ ಕೃಷಿಕರು

ದ್ರಾಕ್ಷಿ ಕೃಷಿಕರೀಗ ಗಣೇಶ ಮಾರಾಟಗಾರರು

Published:
Updated:

ಚಿಕ್ಕಬಳ್ಳಾಪುರ: `ಒಂದು ವರ್ಷದ ಹಿಂದೆ ಮಳೆಯಿಲ್ಲದೆ ದ್ರಾಕ್ಷಿ ಬೆಳೆ ಹಾಳಾಯಿತು. ತುಂಬಾ ನಷ್ಟವಾಯಿತು. ಅಲ್ಲಿ-ಇಲ್ಲಿ ಹಣ ಇಸಿದುಕೊಂಡು ಗಣೇಶ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡತೊಡಗಿದೆ. ಹೋದ ವರ್ಷ ಕೆಲವು ಮೂರ್ತಿಗಳು ಮಾರಾಟವಾದವು. ಈ ವರ್ಷ ಮಾತ್ರ ಒಂದು ಮೂರ್ತಿಯೂ ಮಾರಾಟವಾಗಿಲ್ಲ. ಮೂರುವರೆ ಲಕ್ಷ ರೂಪಾಯಿ ಸಾಲ ಮಾಡಿ ಬಂಡವಾಳ ಹಾಕಿದ್ದೀನಿ. ಆದರೆ ಬಂಡವಾಳ ಬರುತ್ತೋ ಇಲ್ಲವೋ ಗೊತ್ತಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸೊಲ್ಲ ಅಂತ ಜನರು ಹೇಳ್ತಾರೆ.ಆದರೆ ನಮ್ಮ ಕತೆ ಏನಾಗುತ್ತೋ ಗೊತ್ತಿಲ್ಲ'

ಹೀಗೆ ರೈತರೆಂದು ಹೇಳಿಕೊಳ್ಳಲಾಗದೆ, ಮೂರ್ತಿ ಮಾರಾಟಗಾರರೆಂದು ಗುರುತಿಸಿಕೊಳ್ಳಲಾಗದೆ ಹಲವರು ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆ ಕೈಕೊಟ್ಟಿತು ಎಂದು ದೇವರ ಕೈಯನ್ನು ಹಿಡಿಯಲು ಅವರು ಮುಂದಾದರು. ಆದರೆ ದೇವರು ಕೂಡ ಕೈ ಹಿಡಿಯದಿರುವುದು ಕಂಡು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.ಗೌರಿಬಿದನೂರು ತಾಲ್ಲೂಕು ತೊಂಡೇಭಾವಿ ಸಮೀಪದ ಬುಲಹಳ್ಳಿ ರೈತರಾದ ಸಿ.ನಾಗೇಶ್, ಸಿ.ಸುರೇಶ್ ಮತ್ತು ಕೆ.ರಾಮು ಮೂರ್ತಿಗಳನ್ನು ಮಾರಾಟ ಮಾಡಲಾಗದೆ, ಮೂರ್ತಿಗಳನ್ನು ವಾಪಸ್ ಒಯ್ಯಲಾಗದೆ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ನಗರದ ಬಿ.ಬಿ.ರಸ್ತೆಯ ಎರಡೂ ಬದಿಗಳ ಪಾದಚಾರಿ ಮಾರ್ಗದಲ್ಲಿರುವ ಅವರ ಬಳಿ 500 ರಿಂದ 30 ಸಾವಿರ ರೂಪಾಯಿವರೆಗಿನ ಮೂರ್ತಿಗಳಿವೆ. ಕೊಳ್ಳುವರನ್ನು ಆಸೆಯ ಕಂಗಳಿಂದ ನೋಡುತ್ತ ದಿನ ಕಳೆಯುತ್ತಿದ್ದಾರೆ. ಹಬ್ಬಕ್ಕೆ ಎರಡೇ ದಿನ ಬಾಕಿಯಿದ್ದು, ಅವರ ದುಗುಡ ಹೆಚ್ಚಿಸಿದೆ.`ನಾವು ದ್ರಾಕ್ಷಿ ಬೆಳೆಯುತ್ತಿದ್ದೆವು. ಆದರ ಬೆಲೆ ಕುಸಿಯಿತು. ಮಳೆ ಸರಿಯಾಗಿ ಆಗಲಿಲ್ಲ. ಆಗ ಹೊಲ- ಗದ್ದೆಗಳ ಕೆಲಸವೇ ಬೇಡ ಎಂದು ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡೆವು. ಕಳೆದ ವರ್ಷ ಅಷ್ಟು-ಇಷ್ಟು ಮೂರ್ತಿಗಳು ಮಾರಾಟವಾದವು.ಆದರೆ ಈ ವರ್ಷ ಮಾತ್ರ ಮೂರ್ತಿಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ ಎಂಬ ಕಾರಣಕ್ಕೆ ವಿವಿಧ ಆಕಾರಗಳ ಸಾವಿರಾರು ಮೂರ್ತಿಗಳನ್ನು ತಯಾರಿಸಿದೆವು. ಆದರೆ ಜನರು ಮೂರ್ತಿಗಳ ಬೆಲೆ ಕೇಳುತ್ತಾರೆ ಹೊರತು ಕೊಳ್ಳುತ್ತಿಲ್ಲ' ಎಂದು ಸಿ.ನಾಗೇಶ್ `ಪ್ರಜಾವಾಣಿ'ಗೆ ತಿಳಿಸಿದರು.ಮೂರ್ತಿಗಳನ್ನು ತಯಾರಿಸುವುದು-ಮಾರುವುದು ಸುಲಭದ ಕೆಲಸವೇನಲ್ಲ. ಬತ್ತಿದ ಕೆರೆಗಳನ್ನು ಹುಡುಕಿಕೊಂಡು ಹೋಗಿ ಜೇಡಿ ಮಣ್ಣು ತರಬೇಕು. ಬಣ್ಣಕ್ಕಾಗಿ ಬೆಂಗಳೂರಿಗೆ ಹೋಗಬೇಕು ಮತ್ತು ಫೈಬರ್‌ಗಾಗಿ ಹೈದರಾಬಾದ್‌ಗೆ ಹೋಗಬೇಕು. ಅಲ್ಲಿನ ಮಾರಾಟಗಾರರು ಎಷ್ಟೇ ಬೆಲೆ ಹೇಳಿದರೂ ಚೌಕಾಶಿ ಮಾಡದೆ ತೆಗೆದುಕೊಳ್ಳಬೇಕು.ಒಂದು ವರ್ಷದಿಂದ ಮೂರ್ತಿಗಳ ತಯಾರಿಕೆ ಕೆಲಸ ಬಿಟ್ಟು ಮತ್ತೇನನ್ನೂ ಮಾಡಲಿಲ್ಲ. ಆದರೆ ಇಡೀ ಒಂದು ವರ್ಷ ವ್ಯರ್ಥವಾಯಿತೆಂದು ಹೆದರಿಕೆಯಾಗುತ್ತಿದೆ. ಬಂಡವಾಳ ಹೂಡಿದ ಕಾಲು ಭಾಗದಷ್ಟು ಹಣ ವಾಪಸ್ ಬರುವ ಬಗ್ಗೆಯೇ ಅನುಮಾನವಿದೆಯೆಂದು ಹೇಳಿದರು.ಗಣೇಶನ ಮರೆತರೆ ಸಮಾಜ ಸೇವಕರು?

ಚಿಕ್ಕಬಳ್ಳಾಪುರ: ಕಳೆದ ಬಾರಿ ಗಣೇಶ ಹಬ್ಬದ ಸಂದರ್ಭದಲ್ಲಿ ಎಷ್ಟು ಮೂರ್ತಿಗಳು ಮಾರಾಟವಾಗಿದ್ದವು. ಎಷ್ಟು ಜನರು ಖರೀದಿಸಿದ್ದರು ಎಂಬ ಬಗ್ಗೆ ಮಾಹಿತಿ ಸಿಗಲಿಕ್ಕಿಲ್ಲ. ಆದರೆ  ಜನರಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಕಾರಣಕ್ಕೆ ಆಯಾ ತಾಲ್ಲೂಕಿನ ಸಮಾಜಸೇವಕರೇ ಮೂರ್ತಿಗಳನ್ನು ಕೊಡಿಸಿದ್ದರು. ಜನರಿಗೆ ಮೂರ್ತಿಗಳನ್ನು ಖರೀದಿಸುವ ಪ್ರಮೇಯವೇ ಬಂದಿರಲಿಲ್ಲ.

`ಕಳೆದ ವರ್ಷ ಸಮಾಜಸೇವಕರು ಔದಾರ್ಯ ತೋರಿದ್ದರು. ಜನರು ಬೇಡವೆಂದರೂ ಸ್ವಯಂ ಆಸಕ್ತಿಯಿಂದ ಮೂರ್ತಿಗಳನ್ನು ಕೊಡಿಸುತ್ತಿದ್ದರು. ಮೂರ್ತಿಗಳನ್ನು ಕೊಡಿಸಲು ಸಾಧ್ಯವಾಗದಿದ್ದರೆ ಇಂತಿಷ್ಟು ಹಣ ನೀಡಿ ಕೊಳ್ಳುವಂತೆ ಹೇಳುತ್ತಿದ್ದರು. ಆದರೆ ಈ ಬಾರಿ ಅವರ‌್ಯಾರೂ ಕಾಣಿಸುತ್ತಿಲ್ಲ. ಮೂರ್ತಿಗಳನ್ನು ಕೊಡಿಸಲು ಅಥವಾ ಖರೀದಿಗೆ ಹಣ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಗಣೇಶನನ್ನು ಸಮಾಜಸೇವಕರೇ ಮರೆತಿದ್ದಾರೆಯೇ ಅಥವಾ ಅವರಿಂದ ಗಣೇಶನೇ ದೂರವಾಗಿದ್ದಾನೆಯೇ ಎಂಬುದು ಗೊತ್ತಾಗುತ್ತಿಲ್ಲ' ಎಂದು ಮೂರ್ತಿ ಮಾರಾಟಗಾರ ಅರುಣ್ ತಿಳಿಸಿದರು.ಹಣ ಖರ್ಚಾದರೂ ಮೂರ್ತಿ ಮಾರಾಟವಿಲ್ಲ

ನಾಲ್ಕು ದಿನಗಳಿಂದ ಒಂದು ಮೂರ್ತಿಯೂ ಮಾರಾಟವಾಗಿಲ್ಲ. ಆದರೆ ಪಾದಚಾರಿಗಳ ಮೇಲೆ ಮೂರ್ತಿಗಳನ್ನು ಇಡಲು ಸುಂಕ ಕಟ್ಟಿದ್ದೇನೆ. ನಾಲ್ಕು ಸಾವಿರ ರೂಪಾಯಿವರೆಗೆ ಖರ್ಚಾಗಿದೆ ಹೊರತು ನಮ್ಮ ಕೈಗೆ ಏನೂ ಸಿಕ್ಕಿಲ್ಲ.

  -ಸಿ.ನಾಗೇಶ್

ಆಶಾಭಾವನೆ ಈಡೇರುವುದಿಲ್ಲ

ದ್ರಾಕ್ಷಿ ಬೆಳೆಯಿಂದ ಜೀವನ ನಡೆಸುವುದು ದುಸ್ತರವಾಯಿತು. ಗಣೇಶನ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿದರೆ ಒಂದಿಡೀ ವರ್ಷ ಹೇಗೋ ಬದುಕಬಹುದು ಎಂಬ ಆಶಾಭಾವನೆ ಇತ್ತು. ಆದರೆ ಮೂರ್ತಿಗಳು ಮಾರಾಟವಾಗದ ಕಾರಣ ಆಶಾಭಾವನೆ ಕೂಡ ಈಡೇರುವುದಿಲ್ಲ ಅಂತ ಅನ್ನಿಸುತ್ತಿದೆ.

 -ಸಿ.ಸುರೇಶ್ಮೂರ್ತಿಗಳ ಮಾರಾಟಕ್ಕೆ ಪ್ರಾರ್ಥನೆ

ಮೂರ್ತಿಗಳನ್ನು ಖರೀದಿಸಲು ಜನರು ಅಷ್ಟೇಕೆ ನಿರಾಸಕ್ತಿ ತೋರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.  ಮೂರ್ತಿಗಳು ಹಬ್ಬದ ವೇಳೆಗೆ ಮಾರಾಟವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ.

-ಕೆ.ರಾಮು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry