ದ್ರಾಕ್ಷಿ ಬೇಕೇ ದ್ರಾಕ್ಷಿ

7

ದ್ರಾಕ್ಷಿ ಬೇಕೇ ದ್ರಾಕ್ಷಿ

Published:
Updated:
ದ್ರಾಕ್ಷಿ ಬೇಕೇ ದ್ರಾಕ್ಷಿ

ವಿಪರೀತ ಹಸಿದಿದ್ದ ನರಿಯೊಂದು ದ್ರಾಕ್ಷಿ ತಿನ್ನಲು ಯತ್ನಿಸಿ ಅದು ನಿಲುಕದಿದ್ದಾಗ ‘ದ್ರಾಕ್ಷಿ ವಿಪರೀತ ಹುಳಿ’ ಎಂದು ತನ್ನನ್ನೇ ಸಮಾಧಾನಿಸಿಕೊಂಡು ಹೋಯಿತಂತೆ.

ಆದರೆ ನರಿಗೆ ಬಂದ ಸ್ಥಿತಿ ನಮಗಿಲ್ಲ. ಹುಳಿ ಹಾಗೂ ಸಿಹಿ ತಳಿಯ ದ್ರಾಕ್ಷಿ ಈಗ ಮೆಟ್ರೊ ನಗರಿಗೆ ಬಂದಿದೆ. ಹೀಗಾಗಿ ನರಿ ಸಿನಿಕತನದಿಂದ ಹೇಳಿದ ಮಾತನ್ನು ನಾವು ಹೇಳುವಂತಿಲ್ಲ. ಫೆ. 9ರಿಂದ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್) ನಡೆಸುತ್ತಿರುವ ಒಂದು ತಿಂಗಳ ದ್ರಾಕ್ಷಿ ಮೇಳದಲ್ಲಿ ವೈವಿಧ್ಯಮಯ ದ್ರಾಕ್ಷಿ ಸವಿಯಬಹುದು.

ಗ್ರಾಹಕರಿಗೆ ಗುಣಮಟ್ಟದ ಹಾಗೂ ವೈವಿಧ್ಯಮಯ ತಳಿಯ ದ್ರಾಕ್ಷಿಯನ್ನು ವಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ತರಿಸಿಕೊಂಡು ಇಲ್ಲಿ ಪೂರೈಸಲಾಗುತ್ತದೆ. ವಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆಯುವ ಕೃಷ್ಣಾ, ಕೃಷ್ಣಾ ಶರದ್, ಸೊನಾಕಾ ತಳಿಯ ದ್ರಾಕ್ಷಿಯನ್ನು ಗ್ರಾಹಕರು ಇಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಹೆಚ್ಚಾಗಿ ತರಿಸಲು ಮುತುವರ್ಜಿ ವಹಿಸಿದೆ.

ತರಹೇವಾರಿ ಬಣ್ಣದ ದ್ರಾಕ್ಷಿಗಳು ಗ್ರಾಹಕರ ನಾಲಿಗೆಗೆ ರುಚಿ ತುಂಬುತ್ತಿವೆ. ಹಾಪ್‌ಕಾಮ್ಸ್ ಸಹ ಉತ್ತೇಜಕ ಕ್ರಮವಾಗಿ ಎಲ್ಲ ರೀತಿಯ ದ್ರಾಕ್ಷಿಯ ದರದ ಮೇಲೆ ಶೇ 10ರಷ್ಟು ರಿಯಾಯ್ತಿ ಘೋಷಿಸಿದೆ. ನಗರದ ವಿವಿಧೆಡೆ ಇರುವ 23 ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾರಾಟಕ್ಕೆ ವಿಶೇಷ ವಿಭಾಗಗಳನ್ನೂ ತೆರೆಯಲಾಗಿದೆ.

ತಿನ್ನಲು ಹಾಗೂ ಜ್ಯೂಸ್ ಮಾಡಲು ಬಳಕೆ ಮಾಡುವ ಸೊನಾಕಾ, ಕೃಷ್ಣಾ, ಕೃಷ್ಣಾ ಶರದ್, ಫ್ಲೇಂ ತಳಿಯ ದ್ರಾಕ್ಷಿಗಳನ್ನು ಎರಡು ಕೆ.ಜಿ. ಪಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ವಲ್ಪ ಕಿಸೆಗೆ ದುಬಾರಿಯಾದ ಆಸ್ಟ್ರೇಲಿಯಾ ರೆಡ್‌ಗ್ಲೋಬ್ ತಳಿಯನ್ನು ಮಾತ್ರ ಒಂದು ಕೆ.ಜಿ. ಪಾಕೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ತಂಪಾದ ಸ್ಥಳ ಅಗತ್ಯವಿರುವುದರಿಂದ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಕೆಟ್‌ಗಳಲ್ಲಿ ಇರಿಸಲಾಗಿರುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಬೆಂಗಳೂರು ನೀಲಿ’ ದ್ರಾಕ್ಷಿಯನ್ನು ಬೆಳೆಯುತ್ತದಾದರೂ ಅದಕ್ಕೆ ಅಂಥ ಬೇಡಿಕೆ ಇಲ್ಲ. ಆದ್ದರಿಂದಲೇ ಬೆಲೆಯೂ ಕಡಿಮೆ ಎಂದು ಲಾಲ್‌ಬಾಗ್ ಸಸ್ಯೋದ್ಯಾನದ ಎದುರುಗಡೆ ಹಾಪ್‌ಕಾಮ್ಸ್ ಮಳಿಗೆಯ ಮಾರಾಟ ಪ್ರತಿನಿಧಿಯೊಬ್ಬರು ತಿಳಿಸಿದರು.

ಪೂರೈಕೆ ಕಡಿಮೆ: ಕಳೆದ ಕೆಲ ದಿನಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಿ ದ್ರಾಕ್ಷಿ ಇಳುವರಿ ಕಡಿಮೆ ಇರುವುದರಿಂದ ಇನ್ನು ಕೆಲ ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ.

ಈ ಬಾರಿಯ ಮೇಳದಲ್ಲಿ ಒಟ್ಟು 690 ಮೆಟ್ರಿಕ್ ಟನ್ ದ್ರಾಕ್ಷಿ ವಹಿವಾಟು ನಡೆಸುವ ಉದ್ದೇಶ ಹೊಂದಲಾಗಿದೆ. ಆದರೆ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಗುರಿ ತಲುಪುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಇನ್ನೆರಡು ವಾರ ಕಾಯಬೇಕು. ವರ್ಷದಿಂದ ವರ್ಷಕ್ಕೆ ತನ್ನ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಾಪ್‌ಕಾಮ್ಸ್ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ನೀಡಿ ಖರೀದಿಸುತ್ತಿದೆ.

ವಿವಿಧ ಮಳಿಗೆಗಳಲ್ಲಿ ದ್ರಾಕ್ಷಿ ಹಣ್ಣಿನ ಮಾರಾಟದ ಜೊತೆಗೆ ತಾಜಾ ಹಾಗೂ ತಂಪಾದ ದ್ರಾಕ್ಷಿರಸವನ್ನು ಕೂಡ ರೂ 10ಗೆ ಒಂದು ಗ್ಲಾಸ್‌ನಂತೆ ಮಾರಲಾಗುತ್ತಿದೆ. ಜೊತೆಗೆ ಒಣದ್ರಾಕ್ಷಿಯೂ ಲಭ್ಯ.

ದರಪಟ್ಟಿತಳಿ ಶೇ 10ರ ರಿಯಾಯ್ತಿ ನಂತರ ಬೆಲೆ ಕಿಲೋಗೆಶರದ್                                 62

ಕೃಷ್ಣಾ ಶರದ್                       70

ಆಸ್ಟ್ರೇಲಿಯಾ ರೆಡ್ ಗ್ಲೋಬ್  300

ಬೆಂಗಳೂರು ನೀಲಿ                22

ಥಾಮ್ಸನ್ ಸೀಡ್‌ಲೆಸ್           48

ಫ್ಲೇಂ                                  57

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry