ದ್ರಾವಿಡ್‌ ಕ್ರಿಕೆಟ್ ಪಾಠ

7

ದ್ರಾವಿಡ್‌ ಕ್ರಿಕೆಟ್ ಪಾಠ

Published:
Updated:

ರಾಹುಲ್‌ ದ್ರಾವಿಡ್ ಸದ್ಯ ಕ್ರೀಡಾಂಗಣದಲ್ಲಿ ಕಾಲ ಕಳೆಯುವುದಕ್ಕಿಂತ ಮಕ್ಕಳಿಗೆ ಪಾಠ ಹೇಳುವುದನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ.  

ವಿದ್ಯಾಭಾಸದ ಹಂತದಲ್ಲಿ ಕ್ರೀಡೆಯನ್ನು ಹವ್ಯಾಸವಾಗಿ ತೆಗೆದುಕೊಳ್ಳಬೇಕೆ ಹೊರತು ಅದೇ ಪ್ರಧಾನವಾಗಬಾರದು. ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಿ ಎಂಬ ಕಿವಿಮಾತಿನ ಜೊತೆಗೆ ಕ್ರೀಡಾ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ಕಲೆಯನ್ನು ಕಲಿಸುತ್ತಿದ್ದಾರೆ.ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ಗೆ ಕಲಿಸುವ ಬಯಕೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ  ಐಪಿಎಲ್ ಟೂರ್ನಿಯಲ್ಲಿ ಆಡಿದ್ದಾರೆ.ಈಗ ಅವರ ಜ್ಞಾನ ಕೌಶಲವನ್ನು ಧಾರೆ ಎರೆಯಲು ಆಯ್ಕೆ ಮಾಡಿಕೊಂಡಿರುವುದು ಚಿಣ್ಣರನ್ನು. ಅಂಗಳದಲ್ಲಿ ಚಿಣ್ಣರ ಚಟುವಟಿಕೆಗಳನ್ನು ಇಮ್ಮಡಿಗೊಳಿಸಲು ಶ್ರಮಿಸುವ ಶಿಕ್ಷಕರಾಗಿದ್ದಾರೆ. ದ್ರಾವಿಡ್‌ರ ಶಿಕ್ಷಕ ವೃತ್ತಿ ಆರಂಭಕ್ಕೆ ಸಾಕ್ಷಿಯಾಗಿದ್ದು   ನಗರದ ಎಕ್ಸ್‌ಎಲ್‌ಆರ್8  ಮೈದಾನ.ಇಎಸ್‌ಪಿಎನ್ ಕ್ರಿಕ್ ಇನ್ಫೋ, ಐಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಕ್ಯಾಂಪ್ ವಿತ್ ದಿ ಚಾಂಪ್’ ಕಾರ್ಯಕ್ರಮದಲ್ಲಿ ಅವರು  ಈ ವಿದ್ಯಾಲೋಕ, ಯುವ ಬೆಂಗಳೂರು ಪ್ರತಿಷ್ಠಾನ ಮತ್ತು ಮ್ಯಾಜಿಕ್‌ಒಸ್ ಎನ್‌ಜಿಒಗಳ ಒಟ್ಟು 25 ಮಕ್ಕಳಿಗೆ ಕ್ರಿಕೆಟ್ ಕೌಶಲದ ಪಾಠ ಹೇಳಿದರು. ಕೊಯಮತ್ತೂರಿನ ಬುಡಕಟ್ಟು ಸಮುದಾಯದ ಐದು ಮಕ್ಕಳು ಪಾಲ್ಗೊಂಡಿದ್ದು ವಿಶೇಷ. ಕ್ರೀಡಾಂಗಣದಲ್ಲಿ ಕಸರತ್ತಿನ ಬಗೆಗಳನ್ನು ಹೇಳಿಕೊಟ್ಟ ಅವರು ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಉತ್ತರಿಸಿದರು. ಅಂತಿಮವಾಗಿ ‘ಮೆಟ್ರೊ’ ಜತೆ ಮಾತಿಗಿಳಿದು ತಮ್ಮ ಹೊಸ ಆಟ– ಪಾಠದ ಅನುಭವವನ್ನು ಬಿಚ್ಚಿಟ್ಟರು.ಮಕ್ಕಳೊಂದಿಗಿನ ಈ ಹೊಸ ಅನುಭವ ಹೇಗಿತ್ತು? 

ಕ್ರಿಕೆಟ್‌ನಲ್ಲಿ ವಿನೋದವಿರಬೇಕು. ಇಲ್ಲಿ ಸಾಕಷ್ಟು ಎಂಜಾಯ್ ಮಾಡಿದೆವು. ಆರಂಭದಲ್ಲಿ ನಾನು ಕಲಿಸಲು ಮುಂದಾದಾಗ ಮಕ್ಕಳು ನಾಚಿಕೊಳ್ಳುತ್ತಿದ್ದರು. ನಂತರ ಹೊಂದಿಕೊಂಡರು. ಅವರ ಮುಗ್ಧತೆ ಮತ್ತು ಮುಗ್ಧ ಪ್ರಶ್ನೆಗಳು ನನಗೆ ಖುಷಿಯೆನ್ನಿಸಿತು. ನಿವೃತ್ತಿ ನಂತರದ ಬದುಕು ಹೇಗಿದೆ?

ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಿದ್ದೇನೆ. ಅದಕ್ಕಾಗಿ ಸಮಯವನ್ನೂ ಮೀಸಲಿಟ್ಟಿದ್ದೇನೆ. ದೀರ್ಘಕಾಲದ ವೃತ್ತಿ ಬದುಕು ಸ್ವಲ್ಪ ಒತ್ತಡ ಎನಿಸಿತ್ತು. ಈಗ ವಿಶ್ರಾಂತಿ ಅವಧಿ ಹೆಚ್ಚಿಸಿಕೊಂಡಿದ್ದೇನೆ. ಕ್ರಿಕೆಟ್‌ನಲ್ಲಿ ನೀವು ಪ್ರಮುಖ ಸ್ಥಾನದಲ್ಲಿದ್ದವರು. ಆ ವೃತ್ತಿಯಲ್ಲಿಯೇ ನಿಮ್ಮಗೆ ಇಷ್ಟವಾದವರು ಯಾರು?

ಭಾರತವೇ ಆರಾಧಿಸುವ ಸಚಿನ್ ತೆಂಡೂಲ್ಕರ್, ಮೊದಲ ಬಾರಿ ವಿಶ್ವಕಪ್ ಮುಡಿಗೇರಿಸಿದ ಕಪಿಲ್ ದೇವ್.ಕೋಚ್ ಆಗುವಂತಹ ಯೋಜನೆ ಇದೆಯಾ?

ಸದ್ಯಕ್ಕೆ ಅಂತಹ ಯೋಜನೆಗಳೇನು ಇಲ್ಲ. ಮುಂದಿನ ಚಾಂಪಿಯನ್ಸ್ ಲೀಗ್‌ ಟೂರ್ನಮೆಂಟ್ಗೆ ತಯಾರಿ ನಡೆಸುತ್ತಿದ್ದೇನೆ. ನಂತರ ಆ ಕುರಿತು ನಿರ್ಧರಿಸುವೆ.ಫಿಟ್‌ನೆಸ್ ಹೇಗೆ ಕಾಪಾಡುತ್ತೀರಿ?

ಮೊದಲೆಲ್ಲ ಡಯಟ್ ಮಾಡುತ್ತಿದ್ದೆ. ನಿವೃತ್ತಿ ನಂತರ ಸಾಧ್ಯವಾಗುತ್ತಿಲ್ಲ. ಜೀಮ್‌ಗೆ ಹೋಗಿ ದೇಹ ದಂಡಿಸುತ್ತೇನೆ. ಅಲ್ಲದೆ ಟೆನ್ನಿಸ್, ಫುಟ್‌ಬಾಲ್ ಆಡುತ್ತೇನೆ. ಅದೇ ಫಿಟ್‌ನೆಸ್ ಕಾಪಾಡುತ್ತದೆ.ಕ್ರಿಕೆಟ್ ಹೊರತು ಜೀವನದ ಅವಿಸ್ಮರಣೀಯ ಘಟನೆ?

ನನ್ನ ಮಕ್ಕಳು ಹುಟ್ಟಿದ ಸಂದರ್ಭ.ಯುವ ಕ್ರೀಡಾಳುಗಳಿಗೆ ನಿಮ್ಮ ಸಲಹೆ?

ಯಶಸ್ಸಿಗೆ ಪರಿಶ್ರಮ ಅಗತ್ಯ. ಹಾಗಾಗಿ ಯುವ ಕ್ರೀಡಾಳುಗಳು ಸತತ ಅಭ್ಯಾಸ  ನಡೆಸಬೇಕು. ಇಂದು ಸ್ಪರ್ಧೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಸಾಮರ್ಥ್ಯದಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಸಾಧನೆಯಲ್ಲಿ ಸಫಲತೆ ಕಂಡುಕೊಂಡರೆ ಮಾತ್ರವೇ ಜನ ಗುರುತಿಸುತ್ತಾರೆ.ಹವ್ಯಾಸಗಳು?

ಜನರೊಂದಿಗೆ ಬೆರೆಯುವುದು. ಊರೂರು ಸುತ್ತುವುದು, ವಿವಿಧ ಪ್ರದೇಶದ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವುದೆಂದರೆ ನನಗೆ ಅತೀವ ಆಸಕ್ತಿ. ಅದರ ಜತೆಗೆ ಪುಸ್ತಕಗಳನ್ನು ಓದುತ್ತೇನೆ.ಸಂಚಾರ ದಟ್ಟಣೆ ನಿಯಂತ್ರಣದ ರಾಯಭಾರಿಯಾಗಿ ನಿಮ್ಮ ಸಲಹೆ?

ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು.  ವಾಹನಗಳ ಬಳಕೆ ಕಡಿಮೆ ಮಾಡಬೇಕು. ವಿದೇಶದಲ್ಲಿರುವಂತೆ ನಮ್ಮಲ್ಲೂ ಕಾರು ಪೂಲಿಂಗ್ ವ್ಯವಸ್ಥೆ ಬರಬೇಕು. ಇದರಿಂದ ವಾಹನಗಳ ಬಳಕೆ ಕಡಿಮೆಯಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry