ಭಾನುವಾರ, ನವೆಂಬರ್ 17, 2019
28 °C
ರಾಯಲ್ ಚಾಲೆಂಜರ್ಸ್-ರಾಯಲ್ಸ್ ನಡುವೆ ಇಂದು ಪೈಪೋಟಿ, ಆರ್‌ಸಿಬಿಗೆ ಪ್ರತಿಷ್ಠೆಯ ಪಂದ್ಯ

ದ್ರಾವಿಡ್ ಆಟಕ್ಕೆ ತುಡಿದಿದೆ ಮನ

Published:
Updated:
ದ್ರಾವಿಡ್ ಆಟಕ್ಕೆ ತುಡಿದಿದೆ ಮನ

ಬೆಂಗಳೂರು: `ರಾಯಲ್  ಚಾಲೆಂಜರ್ಸ್ ಬೆಂಗಳೂರು ಅಥವಾ ರಾಜಸ್ತಾನ ರಾಯಲ್ಸ್ ಯಾವ ತಂಡವಾದರೂ ಗೆಲ್ಲಲಿ. ಆದರೆ, `ದ ವಾಲ್' ಖ್ಯಾತಿಯ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿ...'-ಹೀಗೊಂದು ತುಡಿತ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹೊಯ್ದಾಡುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದ್ರಾವಿಡ್ ನಿವೃತ್ತಿ ಪ್ರಕಟಿಸಿ ಒಂದು ವರ್ಷ ಮುಗಿದಿದೆ. ಅವರ ಕಲಾತ್ಮಕ ಬ್ಯಾಟಿಂಗ್ ಸೊಬಗನ್ನು ಕ್ರೀಡಾಂಗಣದಲ್ಲಿಯೇ ನೇರವಾಗಿ ನೋಡುವ ಅವಕಾಶಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಮುಹೂರ್ತವೂ ನಿಗದಿಯಾಗಿದೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ರಾಯಲ್ಸ್ ಮುಖಾಮುಖಿಯಾಗಲಿವೆ.ವಿಶ್ವಾಸದ ಗಣಿ: ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಈ ಟೂರ್ನಿಯ ಆರಂಭದ ಪಂದ್ಯಗಳಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ದ್ರಾವಿಡ್ ನಾಯಕತ್ವದ ರಾಯಲ್ಸ್ ಕೂಡಾ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುತ್ತಿದೆ. ಆದ್ದರಿಂದ ಉಭಯ ತಂಡಗಳು ವಿಶ್ವಾಸದ ಚಿಲುಮೆಯಾಗಿವೆ. ಆದ್ದರಿಂದ ಈ ಪಂದ್ಯ `ಕೊಹ್ಲಿ-  ದ್ರಾವಿಡ್'ಗೆ ಬಳಗಕ್ಕೆ ಪ್ರತಿಷ್ಠೆಯ ಪಂದ್ಯವಾಗಿದೆ. ಸತತ ಗೆಲುವು ಪಡೆಯುತ್ತಿರುವ ಉಭಯ ತಂಡಗಳಲ್ಲಿ ಯಾವ ತಂಡದ ಗೆಲುವಿನ ಓಟಕ್ಕೆ ಲಗಾಮು ಬೀಳಲಿದೆ ಎನ್ನುವ ಪ್ರಶ್ನೆಗೂ ಉತ್ತರ ಸಿಗಲಿದೆ.ಐದು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಜಯ ಸಾಧಿಸಿರುವ ರಾಯಲ್ಸ್ ಎಂಟು ಅಂಕಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ್ದು ತಂಡದ ವಿಶ್ವಾಸವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ.ರಾಯಲ್ ಚಾಲೆಂಜರ್ಸ್ ಕೂಡಾ ಗೆಲುವಿನ ಸವಿಯಿಂದ ಹಿಂದೆ ಬಿದ್ದಿಲ್ಲ. ಇದೇ ಕ್ರೀಡಾಂಗಣದಲ್ಲಿ ಮೂರು ದಿನಗಳ ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್ ಎದುರು `ಸೂಪರ್' ಗೆಲುವು ಪಡೆದ ಕೊಹ್ಲಿ ಬಳಗವೂ ವಿಶ್ವಾಸದ ಗಣಿಯಾಗಿದೆ. ಈ ಆವೃತ್ತಿಯ ಮೊದಲ ಸೂಪರ್ ಓವರ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎದುರಾಗಿದ್ದ ನಿರಾಸೆಯನ್ನೂ ಆರ್‌ಸಿಬಿ ಮರೆತಿದೆ. ಆ ಪಂದ್ಯದಲ್ಲಿ ಆರ್‌ಸಿಬಿ ಬೌಲಿಂಗ್‌ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿತ್ತು. ಆದರೆ, ಡೇರ್‌ಡೆವಿಲ್ಸ್ ಎದುರು ಆರ್.ಪಿ. ಸಿಂಗ್ ರಾಯಲ್ ಚಾಲೆಂಜರ್ಸ್‌ಗೆ ಗೆಲುವು ತಂದುಕೊಟ್ಟಿದ್ದರು.ಗೇಲ್, ಕೊಹ್ಲಿ ಮೇಲೆ ಅವಲಂಬಿತವಿಲ್ಲ: `ಗೇಲ್ ಹಾಗೂ ಕೊಹ್ಲಿ ಅವರ ಮೇಲೆಯೇ ಬ್ಯಾಟಿಂಗ್ ಅವಲಂಬಿತವಾಗಿಲ್ಲ. ಬೇರೆ ಬ್ಯಾಟ್ಸ್‌ಮನ್‌ಗಳು ಕೂಡಾ ತಮ್ಮ  ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಾರೆ' ಎಂದು ಆರ್‌ಸಿಬಿ ತಂಡದ ಕೋಚ್ ರೇ ಜೆನಿಂಗ್ಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಆದರೆ, ಅವರ ಮಾತಿಗೆ ತದ್ವಿರುದ್ಧದಂತೆ ಆರ್‌ಸಿಬಿ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಇದೇ ಇಬ್ಬರು ಆಟಗಾರರನ್ನೇ ನೆಚ್ಚಿಕೊಂಡಿದ್ದೆ. ಹಿಂದಿನ ಪಂದ್ಯಗಳಲ್ಲಿನ ಫಲಿತಾಂಶಗಳೇ ಇದಕ್ಕೆ ಸಾಕ್ಷಿ. ಗೇಲ್ ಮತ್ತು ಕೊಹ್ಲಿ ಆರ್ಭಟಿಸಿದರೆ ಮಾತ್ರ ಆರ್‌ಸಿಬಿಗೆ ಗೆಲುವು ಎನ್ನುವುದು ಪ್ರೇಕ್ಷಕರ ಮನದಲ್ಲೂ ಅಚ್ಚೊತ್ತಿಂದತೆ ಕಾಣುತ್ತದೆ. ಆದ್ದರಿಂದ ಈ ಇಬ್ಬರ ಆಟಗಾರರ ಹೊರತಾಗಿಯೂ ಇನ್ನಿತರ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯಿಂದ ರನ್ ಗಳಿಸಬೇಕಿದೆ. ಆ ನಿರಾಸೆ ಮತ್ತೆ ಕಾಡದಿರಲಿ:  ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಎದುರಾಗಿದ್ದ ನಿರಾಸೆ ಮತ್ತೊಮ್ಮೆ ಕಾಡದಿರಲಿ. ಆ ಪಂದ್ಯದಲ್ಲಿ ಆರ್‌ಸಿಬಿ ಇದೇ ಕ್ರೀಡಾಂಗಣದಲ್ಲಿ ಅನುಭವಿಸಿದ್ದ ಹೀನಾಯ ಸೋಲು ನರಾವರ್ತನೆಯಾಗದಿರಲಿ ಎನ್ನುವುದೇ ಕ್ರಿಕೆಟ್ ಪ್ರಿಯರ ಪ್ರಾರ್ಥನೆ. ಏಕೆಂದರೆ, ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೇವಲ 60 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ್ದರು. ಈ ಆಂಶವೇ ಕೊಹ್ಲಿ ಬಳಗದಲ್ಲಿ ಈಗ ಕೊಂಚ ಆತಂಕ ಮೂಡಿಸಿದೆ.ಏಕೆಂದರೆ, ರಹಾನೆ ಈ ಋತುವಿನಲ್ಲೂ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಗಳಿಸಿದ್ದರು. ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಕೂಡಾ ತಂಡದ ಬಲ ಎನಿಸಿದ್ದಾರೆ. ಇನ್ನುಳಿದಂತೆ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ, ದಿನೇಶ್ ಯಾಗ್ನಿಕ್ ಬ್ರಾಡ್ ಹಾಡ್ಜ್, ದ್ರಾವಿಡ್ ಬ್ಯಾಟಿಂಗ್ ವಿಭಾಗದ ಬಲಿಷ್ಠ ಶಕ್ತಿ. ಇವರನ್ನೆಲ್ಲಾ ಕಟ್ಟಿ ಹಾಕುವ ಸವಾಲು ರಾಯಲ್ ಚಾಲೆಂಜರ್ಸ್‌ನ ವೇಗಿಗಳಾದ ಆರ್.ಪಿ.ಸಿಂಗ್, ವಿನಯ್ ಕುಮಾರ್, ಉನದ್ಕತ್ ಅವರ ಮೇಲಿದೆ.ಉರಿಬಿಸಿಲು, ಬಾಂಬ್ ಸ್ಪೋಟದ ಆತಂಕವೆಲ್ಲಾ ಮರೆತು ನೆಮ್ಮದಿಯಿಂದ ಕೊಹ್ಲಿ, ದ್ರಾವಿಡ್, ಗೇಲ್ ಬ್ಯಾಟಿಂಗ್ ಸವಿ ಅನುಭವಿಸುವ ಅವಕಾಶ ಕ್ರಿಕೆಟ್ ಪ್ರಿಯರಿಗೆ ಲಭಿಸಿದೆ. ಯಾರೇ ಸೋಲಲಿ, ಗೆಲ್ಲಲಿ ಕ್ರಿಕೆಟ್ ಪ್ರಿಯರಿಗಂತೂ ಭರಪೂರ ಮನರಂಜನೆ ಕಟ್ಟಿಟ್ಟ ಬುತ್ತಿ.

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಆ್ಯಂಡ್ರ್ಯೂ ಮೆಕ್ ಡೂನಾಲ್ಡ್, ಚೇತೇಶ್ವರ ಪೂಜಾರ, ಕ್ರಿಸ್ಟೋಫರ್ ಬಾರ್ನ್‌ವೆಲ್, ಡೇನಿಯಲ್ ವೆಟೋರಿ, ಹರ್ಷಲ್ ಪಟೇಲ್, ಕೆ.ಪಿ. ಅಪ್ಪಣ್ಣ, ಮೊಯ್ಸಿಸ್ ಹೆನ್ರಿಕ್ಸ್, ಕ್ರಿಸ್ ಗೇಲ್, ಮಯಂಕ್ ಅಗರ್‌ವಾಲ್, ಡೇನಿಯನ್ ಕ್ರಿಸ್ಟಿಯನ್, ಕರುಣ್ ನಾಯರ್, ಅರುಣ್ ಕಾರ್ತಿಕ್, ಜಯದೇವ್ ಉನದ್ಕತ್, ಆರ್. ವಿನಯ್ ಕುಮಾರ್, ಮುರಳಿ ಕಾರ್ತಿಕ್, ಪಂಕಜ್ ಸಿಂಗ್ ಹಾಗೂ ಪಿ. ಪ್ರಶಾಂತ್.ರಾಜಸ್ತಾನ ರಾಯಲ್ಸ್

ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ, ಎಸ್. ಶ್ರೀಶಾಂತ್, ಶಾನ್ ಟೈರ್ಟ್, ಸಿದ್ಧಾರ್ಥ್ ತ್ರಿವೇದಿ, ಶೇನ್ ವ್ಯಾಟ್ಸನ್, ದಿಶಾಂತ್ ಯಾಗ್ನಿಕ್, ಅಜಿತ್ ಚಾಂಡಿಲಾ, ಅಂಕಿತ್ ಚವ್ಹಾಣ್, ಕೆವೊನ್ ಕೂಪರ್, ಫಿಡೆಲ್ ಎಡ್ವರ್ಡ್ಸ್, ಜೇಮ್ಸ ಫುಲ್ಕನೆರ್, ಶ್ರೀವತ್ಸ ಗೋಸ್ವಾಮಿ, ಸ್ಯಾಮುಯೆಲ್ ಬದ್ರಿ, ಹರ್ಮಿತ್ ಸಿಂಗ್, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ವಿಕ್ರಮಜಿತ್ ಮಲಿಕ್, ಅಶೋಕ್ ಮೆನಾರಿಯಾ, ಕುಶಾಲ್ ಪೆರೆರಾ, ಸಚಿನ್ ಬೇಬಿ, ಸಂಜು ಸ್ಯಾಮ್ಸನ್, ಓವೇಸ್ ಶಾ, ರಾಹುಲ್ ಶುಕ್ಲಾ, ಅಮಿತ್ ಸಿಂಗ್ ಮತ್ತು ಪ್ರವೀಣ್ ತಾಂಬೆ.

ಪ್ರತಿಕ್ರಿಯಿಸಿ (+)