ಗುರುವಾರ , ಮೇ 13, 2021
24 °C

ದ್ರಾವಿಡ್ ಏಕದಿನ ಆಟಕ್ಕೆ ಇಂದು ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್: ಭಾರತ ತಂಡಕ್ಕೆ `ದುರಂತ~ವಾಗಿ ಪರಿಣಮಿಸಿದ ಇಂಗ್ಲೆಂಡ್ ಪ್ರವಾಸದ ಕೊನೆಯಲ್ಲೊಂದು ಜಯ ಲಭಿಸುವುದೇ? ವೃತ್ತಿಜೀವನದ ಅಂತಿಮ ಏಕದಿನ ಪಂದ್ಯವನ್ನಾಡಲಿರುವ ರಾಹುಲ್ ದ್ರಾವಿಡ್‌ಗೆ ಗೆಲುವಿನ ಉಡುಗೊರೆ ದೊರೆಯುವುದೇ? ದೇಶದ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಗಳಿವು.ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ದ್ರಾವಿಡ್ ಈ ಮೊದಲೇ ಪ್ರಕಟಿಸಿದ್ದರು. ಆದ್ದರಿಂದ ಕಾರ್ಡಿಫ್‌ನಲ್ಲಿ ಶುಕ್ರವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಪಂದ್ಯ ಅವರಿಗೆ ವೃತ್ತಿಜೀವನದ ಅಂತಿಮ ಏಕದಿನ ಎನಿಸಲಿದೆ.ಕರ್ನಾಟಕದ ಈ ಬ್ಯಾಟ್ಸ್‌ಮನ್ ಇದುವರೆಗೆ 343 ಏಕದಿನ ಪಂದ್ಯಗಳನ್ನಾಡಿದ್ದು, 39ರ ಸರಾಸರಿಯಲ್ಲಿ 10, 820 ರನ್ ಕಲೆಹಾಕಿದ್ದಾರೆ. 12 ಶತಕ ಹಾಗೂ 82 ಅರ್ಧಶತಕಗಳು ಇದರಲ್ಲಿ ಸೇರಿವೆ. ದ್ರಾವಿಡ್ ಅಂತಿಮ ಪಂದ್ಯದಲ್ಲಿ ಗೆಲುವಿನ ಇನಿಂಗ್ಸ್ ಕಟ್ಟುವರೇ? ಅಥವಾ ಸಹ ಆಟಗಾರರು ಸಂಘಟಿತ ಪ್ರಯತ್ನದಿಂದ ಅವರಿಗಾಗಿ ಸ್ಮರಣೀಯ ಗೆಲುವು ತಂದುಕೊಡುವರೇ ಎಂಬುದು ಕುತೂಹಲದ ವಿಚಾರ.ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಅಷ್ಟು ಪ್ರಭಾವಿ ಎನಿಸಿಲ್ಲ. ಇದುವರೆಗಿನ ನಾಲ್ಕು ಪಂದ್ಯಗಳಲ್ಲಿ ಒಟ್ಟು 51 ರನ್ ಮಾತ್ರ ಕಲೆಹಾಕಿದ್ದಾರೆ. `ಗೋಡೆ~ ಎಂದೇ ಖ್ಯಾತಿ ಪಡೆದಿರುವ 38ರ ಹರೆಯದ ಈ ಬ್ಯಾಟ್ಸ್‌ಮನ್ ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಏಕದಿನ ತಂಡದ ಉಡುಪು ತೊಟ್ಟು ಕೊನೆಯ ಬಾರಿ ಕಾಣಿಸಿಕೊಳ್ಳಲಿದ್ದಾರೆ.ದ್ರಾವಿಡ್‌ಗೆ ಕೊನೆಯ ಪಂದ್ಯ ಎಂಬ ಕಾರಣಕ್ಕೆ ಮಾತ್ರ ಐದನೇ ಏಕದಿನ ಪಂದ್ಯಕ್ಕೆ ಮಹತ್ವ ಬಂದಿದೆ. ಫಲಿತಾಂಶದ ದೃಷ್ಟಿಯಲ್ಲಿ ಪಂದ್ಯಕ್ಕೆ ಮಹತ್ವ ಇಲ್ಲ. ಏಕೆಂದರೆ ಐದು ಪಂದ್ಯಗಳ ಸರಣಿಯನ್ನು ಅಲಸ್ಟರ್ ಕುಕ್ ಬಳಗ ಈಗಾಗಲೇ 2-0 ರಲ್ಲಿ  ಗೆದ್ದುಕೊಂಡಿದೆ.ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಪ್ರಸಕ್ತ ಇಂಗ್ಲೆಂಡ್ ಪ್ರವಾಸದ ಕೊನೆಯ ಪಂದ್ಯವಿದು. ಅಭ್ಯಾಸ ಪಂದ್ಯಗಳಲ್ಲಿ ಗೆಲುವು ಪಡೆದಿದ್ದನ್ನು ಬಿಟ್ಟರೆ ಭಾರತದ ಸಾಧನೆ ಶೂನ್ಯ. ಆತಿಥೇಯ ತಂಡದ ವಿರುದ್ಧ ಒಂದೂ ಗೆಲುವು ಲಭಿಸಿಲ್ಲ. ಟೆಸ್ಟ್ ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಏಕೈಕ ಟ್ವೆಂಟಿ-20 ಪಂದ್ಯವನ್ನೂ ಎದುರಾಳಿಗೆ ಒಪ್ಪಿಸಿತ್ತು.ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿದ್ದರೆ, ಮುಂದಿನ ಎರಡು ಪಂದ್ಯಗಳನ್ನು ಇಂಗ್ಲೆಂಡ್ ಜಯಿಸಿದೆ. ನಾಲ್ಕನೇ ಪಂದ್ಯ `ಟೈ~ನಲ್ಲಿ ಅಂತ್ಯಗೊಂಡಿದೆ. ಶುಕ್ರವಾರ ನಡೆಯುವ ಅಂತಿಮ ಏಕದಿನ `ಮಹಿ~ ಬಳಗಕ್ಕೆ ಆತಿಥೇಯರನ್ನು ಮಣಿಸಲು ಕೊನೆಯ ಅವಕಾಶ ನೀಡಿದೆ. ಕೇವಲ ನಿರಾಸೆಯನ್ನು ಮಾತ್ರ ಉಂಟುಮಾಡಿದ ಸರಣಿಯ ಕೊನೆಯಲ್ಲೊಂದು ಗೆಲುವು ಪಡೆದು ಸಮಾಧಾನದ ನಿಟ್ಟುಸಿರು ಬಿಡುವುದು ಭಾರತದ ಗುರಿ.ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅಗತ್ಯ. ಈ ಕಾರಣ ದೋನಿ ಅಂತಿಮ ಇಲೆವೆನ್‌ನಲ್ಲಿ ಹೊಸಬರಿಗೆ ಅವಕಾಶ ನೀಡುವರೇ ಎಂಬ ಕೂತೂಹಲ ಉಂಟಾಗಿದೆ. ವರುಣ್ ಆ್ಯರನ್, ವಿನಯ್ ಕುಮಾರ್, ಮನೋಜ್ ತಿವಾರಿ ಮತ್ತು ಸುಬ್ರಮಣ್ಯಂ ಬದರೀನಾಥ್ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಲಭಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಏಕದಿನ ಸರಣಿಯಲ್ಲಿ ಭಾರತ ಸೋಲು ಅನುಭವಿಸಿದರೂ, ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಕೆಲವು ಪಂದ್ಯಗಳಲ್ಲಿ ಭಾರತ ಗೆಲುವಿನ ಸನಿಹ ಬಂದಿತ್ತು. ಆದರೆ ಮಳೆರಾಯ ಅಡ್ಡಿ ಉಂಟುಮಾಡಿದ್ದ. ಒಟ್ಟಿನಲ್ಲಿ ಅದೃಷ್ಟ ದೋನಿ ಪಡೆಯ ಪರವಾಗಿರಲಿಲ್ಲ.ಮತ್ತೊಂದೆಡೆ ಇಂಗ್ಲೆಂಡ್ ಕೂಡಾ ಗೆಲುವಿನ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಸ್ಟುವರ್ಟ್ ಬ್ರಾಡ್ ಸೇವೆ ಲಭಿಸುತ್ತಿಲ್ಲ. ಆದರೆ ಅದ್ಭುತ ಫಾರ್ಮ್‌ನಲ್ಲಿರುವ ತಂಡದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರದು.

 

ತಂಡಗಳು ಇಂತಿವೆ...

ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ಆಜಿಂಕ್ಯ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮನೋಜ್ ತಿವಾರಿ, ಸುರೇಶ್ ರೈನಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್‌ಪಿ ಸಿಂಗ್, ವಿನಯ್ ಕುಮಾರ್, ಆರ್. ಅಶ್ವಿನ್, ಅಮಿತ್ ಮಿಶ್ರಾ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ವರುಣ್ ಆ್ಯರನ್.

ಇಂಗ್ಲೆಂಡ್: ಅಲಸ್ಟರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್‌ಸನ್, ಇಯಾನ್ ಬೆಲ್, ರವಿ ಬೋಪಾರ, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೆಗ್ ಕೀಸ್‌ವೆಟರ್, ಸಮಿತ್ ಪಟೇಲ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್, ಜೊನಾಥನ್ ಟ್ರಾಟ್.

ಪಂದ್ಯದ ಆರಂಭ: (ಭಾರತೀಯ ಕಾಲಮಾನ) ಸಂಜೆ 6.30ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.