ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ ಪಕ್ಷಗಳಾಚೆಗಿನ ಆಯ್ಕೆ ತೆರೆದಿಟ್ಟ ಚುನಾವಣೆ

Last Updated 7 ಆಗಸ್ಟ್ 2018, 16:29 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ರಾಜಕಾರಣವೆಂದರೆ ಎರಡು ದ್ರಾವಿಡ ಪಕ್ಷಗಳಲ್ಲಿ ಒಂದು ಅಧಿಕಾರಕ್ಕೇರುವುದು ಎಂಬ ಸರಳ ಲೆಕ್ಕಾಚಾರ ಕೊನೆಗೊಳ್ಳುತ್ತಿದೆಯೇ? ಇಂಥದ್ದೊಂದು ಪ್ರಶ್ನೆ 2011ರಲ್ಲಿ ಡಿಎಂಕೆ ಸೋತಾಗಲೇ ಕೇಳಿಬಂದಿತ್ತು. ತಮಿಳುನಾಡಿನ ಹದಿನೈದನೇ ವಿಧಾನಸಭೆಗಾಗಿ ನಡೆಯುತ್ತಿರುವ ಚುನಾವಣೆ ಈ ಪ್ರಶ್ನೆಗೆ ಒಗಟಿನಂಥ ಉತ್ತರವೊಂದನ್ನು ಮುಂದಿಡುತ್ತಿದೆ.

1967ರಲ್ಲಿ ರಾಷ್ಟ್ರೀಯ ಪಕ್ಷಗಳ ನೆಲೆ ಬೇರು ಸಮೇತ ಕಿತ್ತು ಹೋದ ನಂತರ ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವ ಧೈರ್ಯ ಮಾಡಿದ ಪಕ್ಷಗಳು ಕಡಿಮೆ. ಆದರೆ ಈ ಬಾರಿ ಪಿಎಂಕೆ, ಬಿಜೆಪಿ ಮತ್ತು ನಾಮ್ ತಮಿಳರ್ ಎಂಬ ಮೂರು ಪಕ್ಷಗಳು ಹಾಗೂ ನಟ ವಿಜಯಕಾಂತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವ ‘ಮಕ್ಕಳ್ ನಾಲ ಕೂಟ್ಟಣಿ’ (ಜನಕಲ್ಯಾಣ ಒಕ್ಕೂಟ) ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ರಾಷ್ಟ್ರೀಯ ಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳು ಡಿಎಂಕೆ ಅಥವಾ ಎಐಎಡಿಎಂಕೆಗಳಲ್ಲಿ ಒಂದರ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿಯುವುದು ಇಲ್ಲಿಯ ತನಕದ ಚುನಾವಣೆಗಳಲ್ಲಿ ಕಾಣಿಸುತ್ತಿದ್ದ ಸಾಮಾನ್ಯ ವಿದ್ಯಮಾನ. ಈ ಬಾರಿಯೂ ಅಂಥದ್ದೇ ಸಂಭವಿಸಬಹುದು ಎಂಬ ಲೆಕ್ಕಾಚಾರವೇ ಇತ್ತು. ವಿಜಯಕಾಂತ್ ಯಾವ ಕಡೆ ಹೋಗುತ್ತಾರೋ ಆ ಪಕ್ಷ ಸುಲಭವಾಗಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರ ಅನೇಕ ಚುನಾವಣಾ ಪಂಡಿತರದ್ದಾಗಿತ್ತು.

ಜನವರಿಯಲ್ಲಿ ಲೊಯೊಲಾ ಕಾಲೇಜಿನ ಬಹುಶಿಸ್ತೀಯ ಅಧ್ಯಯನ ಕೇಂದ್ರ ಪೀಪಲ್ ಸ್ಟಡೀಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೂ ಎಐಎಡಿಎಂಕೆ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಭವಿಷ್ಯ ನುಡಿದಿತ್ತು. ಆದರೆ ಪ್ರಚಾರ ಬಿಸಿಯೇರುವ ಹೊತ್ತಿಗೆ ಚಿತ್ರಣ ಬದಲಾಗಿದೆ.

ಪೀಪಲ್ ಸ್ಟಡೀಸ್‌ನ ನಿರ್ದೇಶಕ ಡಾ.ರಾಜನಾಯಗಂ ಅವರು ಈಗ ತಮ್ಮದೇ ಸಮೀಕ್ಷೆಯ ಫಲಿತಾಂಶಗಳನ್ನು ಸಂಶಯದಿಂದ ನೋಡುತ್ತಿದ್ದಾರೆ. ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು ‘ಜನವರಿಯಲ್ಲಿ ನಾವು ಸಮೀಕ್ಷೆ ನಡೆಸಿದಾಗ ಇದ್ದ ಸ್ಥಿತಿಗೂ ಈಗಿನ ವಾತಾವರಣಕ್ಕೂ ಬಹಳ ವ್ಯತ್ಯಾಸವಿದೆ. ಚುನಾವಣಾ ಸಮೀಕ್ಷೆಗಳಲ್ಲಿ ಇದು ಸಾಮಾನ್ಯ. ನಮ್ಮ ಮತ್ತೊಂದು ಸಮೀಕ್ಷೆ ಈಗ ಚಾಲನೆಯಲ್ಲಿದೆ. ಮೇ 13ರಂದು ಬಿಡುಗಡೆಯಾಗಲಿರುವ ಹೊಸ ಸಮೀಕ್ಷೆ ಸಂಪೂರ್ಣ ಭಿನ್ನ ಚಿತ್ರಣ ನೀಡಬಹುದಾದ ಸಾಧ್ಯತೆ ಇದೆ’ ಎಂದರು.

ದ್ರಾವಿಡ ಪಕ್ಷಗಳ ರಾಜಕಾರಣ ದುರ್ಬಲಗೊಳ್ಳುತ್ತಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ದ್ರಾವಿಡ ಪಕ್ಷಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈ ಚುನಾವಣೆ ದ್ರಾವಿಡ ಪಕ್ಷಗಳ ಭವಿಷ್ಯದ ಕುರಿತಂತೆ ಬಹುಮುಖ್ಯ ಮುನ್ಸೂಚನೆಗಳನ್ನೂ ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಈ ಬಾರಿ ಏನು ಸಂಭವಿಸುತ್ತದೆ ಎಂಬುದು ಮುಖ್ಯವಲ್ಲ ಎಂಬ ನಿಲುವು ದ್ರಾವಿಡ ಪಕ್ಷಗಳಿಗೆ ಪರ್ಯಾಯವನ್ನು ನೀಡುವ ಉತ್ಸಾಹದಲ್ಲಿರುವ ಎಲ್ಲಾ ರಾಜಕಾರಣಿಗಳಲ್ಲಿಯೂ ಇದೆ. ಜಯಲಲಿತಾ ಅವರ ವಿರುದ್ಧ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಿಂದ ‘ನಾಮ್ ತಮಿಳರ್ ಪಕ್ಷದ’ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ವಾಸಂತಿ ದೇವಿ ಕೂಡಾ ಇದೇ ಮಾತುಗಳನ್ನು ಹೇಳುತ್ತಾರೆ ‘ಚುನಾವಣೆಯನ್ನು ಗೆಲ್ಲುವುದಷ್ಟೇ ಮುಖ್ಯವಲ್ಲ. ಜನರು ಪರ್ಯಾಯಗಳ ಕುರಿತು ಚಿಂತಿಸುವಂತೆ ಮಾಡುವುದೂ ಬಹಳ ಮುಖ್ಯ’ ಎನ್ನುವ ಅವರು, ಈ ಚುನಾವಣೆ ತಮಿಳುನಾಡಿಗೆ ಹೊಸ ರಾಜಕಾರಣವೊಂದನ್ನು ಪರಿಚಯಿಸುತ್ತದೆ ಎಂಬ ಭರವಸೆಯಲ್ಲಿದ್ದಾರೆ.

ತಮಿಳುನಾಡಿಗೆ ಹೊಸ ರಾಜಕಾರಣವನ್ನು ಪರಿಚಯಿಸಲೇ ಬೇಕಾದ ಒತ್ತಡ ಈ ಬಾರಿ ಸ್ವತಂತ್ರವಾಗಿ ಕಣಕ್ಕಿಳಿದಿರುವ ಎಲ್ಲರಿಗೂ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ 2019ರ ಲೋಕಸಭಾ ಚುನಾವಣೆ ಮತ್ತು 2021ರ ವಿಧಾನಸಭಾ ಚುನಾವಣೆಗಳೆರಡನ್ನೂ ದೃಷ್ಟಿಯಲ್ಲಿಟ್ಟುಕೊಂಡಿದೆ. ಸೀಮನ್ ನೇತೃತ್ವದ ‘ನಾಮ್ ತಮಿಳರ್’ ತಮಿಳು ಅನನ್ಯತೆಯ ರಾಜಕಾರಣಕ್ಕೆ ದ್ರಾವಿಡ ಪಕ್ಷಗಳ ಆಚೆಗಿನ ಅರ್ಥವೊಂದನ್ನು ಹುಡುಕುತ್ತಿದೆ. ಪಟ್ಟಾಳಿ ಮಕ್ಕಳ್ ಕಚ್ಚಿಯ ಅನ್ಬುಮಣಿ ರಾಮದಾಸ್ ತಮ್ಮ ವಿದ್ಯಾವಂತ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಪಕ್ಷಕ್ಕಿರುವ ‘ವಣ್ಣಿಯರ್ ಜಾತಿಯ ಪಕ್ಷ’ ಎಂಬ ಇಮೇಜ್ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆರಂಭದ ದಿನಗಳಲ್ಲಿ ದ್ರಾವಿಡ ಪಕ್ಷಗಳಿಗೆ ನಿಜವಾದ ಪರ್ಯಾಯ ಎಂಬಂತೆ ರಂಗಕ್ಕೆ ಬಂದ ಡಿಎಂಡಿಕೆಯ (ದೇಸೀಯ ಮರುಪೊಕ್ಕು ದ್ರಾವಿಡ ಕಳಗಂ) ವಿಜಯಕಾಂತ್ ತಮ್ಮದೇ ಆದ ತಪ್ಪುಗಳಿಂದ ಮಾಧ್ಯಮಗಳಿಂದ ಟೀಕೆಗೆ ಒಳಗಾಗಿದ್ದಾರೆ. ಆದರೆ ಇವರ ಹಿಂದೆ ಇರುವುದು ಕೇವಲ ಅವರ ಪಕ್ಷ ಮಾತ್ರವಲ್ಲ. ಎಡಪಕ್ಷಗಳೂ ಸೇರಿದಂತೆ ಎಂಡಿಎಂಕೆ, ದಲಿತರ ನಡುವೆ ಪ್ರಭಾವ ಇರುವ ವಿಡುದಲೈ ಮಕ್ಕಳ್ ಕಚ್ಟಿ ಕೂಡಾ ಇವೆ. ಜನಕಲ್ಯಾಣ ಒಕ್ಕೂಟ ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ಈ ಕೂಟ ಕಳೆದ ಚುನಾವಣೆಗಳಲ್ಲಿ 29 ಸ್ಥಾನಗಳಲ್ಲಿ ಗೆದ್ದಿತ್ತು ಎಂಬ ಅಂಶವನ್ನೂ ಇಲ್ಲಿ ಮರೆಯುವಂತೆ ಇಲ್ಲ.

ಪರ್ಯಾಯ ರಾಜಕಾರಣದ ಒತ್ತಡಗಳನ್ನು ಮೀರುವುದಕ್ಕಾಗಿ ಎರಡೂ ದ್ರಾವಿಡ ಪಕ್ಷಗಳು ತಮ್ಮದೇ ಆದ ತಂತ್ರವನ್ನು ಹೆಣೆದಿವೆ. ಜಾತಿ ಲೆಕ್ಕಾಚಾರದಲ್ಲಿ ಡಿಎಂಕೆ ಬಹಳ ಮುಂದಿದೆ. ದಲಿತರು ಮತ್ತು ಮುಸ್ಲಿಮರಿಗೆ ಗಮನಾರ್ಹ ಸಂಖ್ಯೆ ಟಿಕೆಟ್‌ಗಳನ್ನು ನೀಡಿದೆ.

ಇದರ ಜೊತೆ ಜೊತೆಯಲ್ಲಿಯೇ ಬಿಜೆಪಿಯ ಜೊತೆಗೆ ಗುರುತಿಸಿಕೊಂಡಿರುವ ನಾಡಾರ್ ಸಮುದಾಯವನ್ನು ಸೆಳೆಯುವುದಕ್ಕೆ ಅಗತ್ಯವಿರುವ ತಂತ್ರದ ಭಾಗವಾಗಿ ಕರುಣಾನಿಧಿ ತಮ್ಮ ಕುಟುಂಬ ರಾಜಕಾರಣವನ್ನು ವಿಶಿಷ್ಟ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪುತ್ರಿ ಕನ್ನಿಮೊಳಿ ಅವರ ಮೂಲಕ ನಾಡಾರ್ ಸಮುದಾಯವನ್ನು ಸೆಳೆಯುವ ತಂತ್ರ ಅವರದ್ದು.

ಕೊನೆಯ ಕ್ಷಣದಲ್ಲಿ ಪ್ರಣಾಳಿಕೆಯ ಬಿಡುಗಡೆ ಮಾಡುವ ಮೂಲಕ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸಿರುವ ಜಯಲಲಿತಾ ಅವರ ತಂತ್ರ ಮತ್ತೊಂದು ಬಗೆಯದ್ದು. ಬಿಜೆಪಿಯಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದ ಕ್ಷಣದಿಂದಲೂ ಜಯಲಲಿತಾ ಅವರ ಹೆಜ್ಜೆಗಳು ನಿಗೂಢವೇ. ವಿಜಯಕಾಂತ್ ಅವರ ಡಿಎಂಡಿಕೆ ಮತ್ತು ಡಿಎಂಕೆ ನಡುವಣ ಮೈತ್ರಿ ಸಂಭವಿಸದೇ ಇರುವುದೂ ಜಯಲಲಿತಾ ಅವರಿಗೆ ಅನುಕೂಲ ಕಲ್ಪಿಸಬಹುದು ಎಂಬ ಅಂದಾಜುಗಳೂ ಇವೆ.

ಕೊನೆಗೂ ಎರಡು ದ್ರಾವಿಡ ಪಕ್ಷಗಳಲ್ಲಿ ಒಂದರದ್ದೇ ಎಂಬ ಸ್ಥಿತಿ ಈ ಬಾರಿ ಬದಲಾಗುವುದಿಲ್ಲ ಎಂಬುದು ದ್ರಾವಿಡ ಪಕ್ಷಗಳ ರಾಜಕೀಯ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿರುವ ‘ಪುದಿಯ ಮುನ್ನೋಡಿ’ ಎಂಬ ಮಾರ್ಕ್ಸ್ ಒಲವಿನ ವಿದ್ವತ್ಪತ್ರಿಕೆಯನ್ನು ಸಂಪಾದಿಸುತ್ತಿರುವ ಭಾಸ್ಕರನ್ ಅವರದ್ದು. ‘ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಮಾತ್ರಕ್ಕೆ ಹೊಸ ಸಾಧ್ಯತೆಗಳು ತೆರೆದುಕೊಳ್ಳುವುದಿಲ್ಲ. ಈ ಪಕ್ಷಗಳಿಗೆ ಒಂದು ಅಖಿಲ ತಮಿಳುನಾಡು ಸ್ವರೂಪವೇ ಇಲ್ಲ. ಈ ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳಿಗಾಗಿ ತಿಣುಕಾಡಿವೆ ಎಂಬುದೇ ಇವುಗಳು ಏನು ಮಾಡಬಹುದು ಎಂಬುದನ್ನು ಸೂಚಿಸುತ್ತವೆ’ ಎಂಬುದು ಅವರ ಅಭಿಪ್ರಾಯ.

ತಮಿಳುನಾಡಿನ ಚುನಾವಣಾ ಉಸ್ತುವಾರಿಯನ್ನು ಹೊತ್ತಿರುವ ಸಿ.ಟಿ.ರವಿ ಬಿಜೆಪಿಯ ಸಾಧ್ಯತೆಗಳ ಕುರಿತು ವಾಸ್ತವವಾದಿಯಾಗಿಯೇ ಪ್ರತಿಕ್ರಿಯಿಸಿದರು.

‘ಚುನಾವಣಾ ಪೂರ್ವ ಹೊಂದಾಣಿಕೆಯಲ್ಲಿ ನಾವು ನಿರೀಕ್ಷಿಸಿದ್ದು ಸಂಭವಿಸಲಿಲ್ಲ. ಆದರೆ ಇದನ್ನೊಂದು ಕೊರತೆಯಾಗಿ ಕಾಣುವುದರ ಬದಲಿಗೆ ನಾವು ಸಾಧ್ಯತೆಯಾಗಿ ಪರಿಗಣಿಸಿ ಮುಂದುವರಿಯುತ್ತಿದ್ದೇವೆ. ತಮಿಳುನಾಡಿನಲ್ಲಿ ಕಮಲವನ್ನು ಅರಳಿಸುವ ಸಾಧ್ಯತೆಯುಳ್ಳ ಮತದಾರರನ್ನು ತಲುಪಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದ ಅವರು ‘ಎರಡಂಕೆಯ ಸ್ಥಾನಗಳಲ್ಲಿ ನಮ್ಮ ಪ್ರಭಾವವಿರುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ತಮಿಳುನಾಡಿನ ಸಾಮಾಜಿಕ ಸಮಸ್ಯೆಗಳ ರಾಜಕೀಯ ಸ್ವರೂಪವನ್ನು ವಿಶಿಷ್ಟವಾಗಿ ಮುಂದಿಡುವ ಸಾಕ್ಷ್ಯ ಚಿತ್ರಗಳ ಮೂಲಕ ಪ್ರಸಿದ್ಧರಾಗಿರುವ ಅಮುದನ್ ಅವರ ಬಹಳ ಭಿನ್ನವಾದ ದೃಷ್ಟಿಕೋನವೊಂದನ್ನು ಮುಂದಿಡುತ್ತಾರೆ. ಅವರು ಹೇಳುವಂತೆ ‘ಈ ಬಾರಿಯ ಚುನಾವಣೆ ಬಹಳ ಭಿನ್ನವಾದ ವಾತಾವರಣವೊಂದನ್ನು ಸೃಷ್ಟಿಸುತ್ತಿದೆ ಎಂಬುದು ನಿಜ. ಆದರೆ ಅದು ದ್ರಾವಿಡ ರಾಜಕಾರಣವನ್ನು ಅಪ್ರಸ್ತುತಗೊಳಿಸುವುದಿಲ್ಲ. ಬದಲಿಗೆ ತಮಿಳು ಅನನ್ಯತೆಯ ರಾಜಕಾರಣಕ್ಕೆ ಹೊಸ ತಿರುವನ್ನು ನೀಡಬಹುದು. ಅದೂ ಈ ಚುನಾವಣೆಯ ಫಲಿತಾಂಶದಲ್ಲಿ ಕಾಣಿಸುವುದಿಲ್ಲ. ಅದಕ್ಕೆ ಇನ್ನೂ ಒಂದು ದಶಕವಾದರೂ ಬೇಕು’.

(ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಗಸ್ಟ್ 5, 2016 ಪ್ರಕಟವಾಗಿದ್ದ ಲೇಖನವನ್ನು ಮರುಪ್ರಕಟಿಸಲಾಗಿದೆ)

ಇದನ್ನೂ ಓದಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT