ಶುಕ್ರವಾರ, ಫೆಬ್ರವರಿ 26, 2021
30 °C

ದ್ವಿತೀಯ ಪಿಯುಸಿ: ಕಡೇ ಸ್ಥಾನ, ಮತ್ತದೇ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ವಿತೀಯ ಪಿಯುಸಿ: ಕಡೇ ಸ್ಥಾನ, ಮತ್ತದೇ ಬೇಸರ

ಬೀದರ್: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಗಡಿ ಜಿಲ್ಲೆ ಬೀದರ್್ ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದ್ದು, ಮತ್ತದೇ ಬೇಸರ ಆವರಿಸಿದೆ.ಜಿಲ್ಲೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ 44.95ರಷ್ಟು ಫಲಿತಾಂಶ ಪಡೆದಿದ್ದು, ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ 31ನೇ ಸ್ಥಾನದಲ್ಲಿದೆ. 2013ನೇ ಸಾಲಿನಲ್ಲಿ ಜಿಲ್ಲೆ 27ನೇ ಸ್ಥಾನದಲ್ಲಿತ್ತು. ಹೊಸದಾಗಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 52.75ರಷ್ಟು ಇದ್ದು, ಕಳೆದ ಬಾರಿ ಶೇ 55.94ರಷ್ಟು ಇತ್ತು.‘ಅಂಕಿ–ಅಂಶಗಳನ್ನು ಬದಿಗಿಟ್ಟು ನೋಡಿದರೆ ಶೇ 50ರಷ್ಟು ವಿದ್ಯಾರ್ಥಿ­ಗಳು ಅನುತ್ತೀರ್ಣರಾಗಿದ್ದಾರೆ ಎಂಬುದು ಬೇಸರದ ಸಂಗತಿ. ಪ್ರಸಕ್ತ ವರ್ಷ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್‌ ಪ್ರತಿಕ್ರಿಯಿಸಿದ್ದಾರೆ.‘ದ್ವಿತೀಯ ಪಿಯುಸಿ ಫಲಿತಾಂಶವನ್ನು ಸುಧಾರಿಸಲು ನಿರಂತರವಾಗಿ ವಿಫಲ­ವಾಗುತ್ತಿರುವ ಪಿಯು ಕಾಲೇಜುಗಳ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ  ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ. ಉಳಿದಂತೆ ಪುನರಾವರ್ತಿತ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ ಕಳೆದ ವರ್ಷ ಇದ್ದ ಶೇ 20ರಿಂದ ಈ ವರ್ಷ ಶೇ 30.01ಕ್ಕೆ ಏರಿದೆ. ಅಂತೆಯೇ ಖಾಸಗಿ ಅಭ್ಯರ್ಥಿಗಳ ಫಲಿತಾಂಶ ಕುಸಿದಿದ್ದು, ಕಳೆದ ವರ್ಷ ಶೇ 23 ಇದ್ದರೆ, ಈ ವರ್ಷ ಶೇ 21.43ರಷ್ಟಿದೆ.ಮಾರ್ಚ್ ಎರಡನೇ ವಾರ ನಡೆದ ಪರೀಕ್ಷೆಗೆ ಜಿಲ್ಲೆಯಲ್ಲಿ 17,299 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 11,814 ಮಂದಿ ಮೊದಲ ಬಾರಿ ಪರೀಕ್ಷೆ ಎದುರಿಸಿದ್ದರೆ, ಇದರಲ್ಲಿ ಮರು ಪರೀಕ್ಷೆಗೆ ಹಾಜರಾದವರು 4,295 ಮತ್ತು 1,190 ಮಂದಿ ಖಾಸಗಿ ಅಭ್ಯರ್ಥಿಗಳು ಸೇರಿದ್ದರು.ಪರೀಕ್ಷೆಗೆ ಹಾಜರಾಗಿದ್ದ  ಒಟ್ಟು 17,299 ವಿದ್ಯಾರ್ಥಿಗಳಲ್ಲಿ 7,776 ಮಂದಿ ಉತ್ತೀರ್ಣರಾಗಿದ್ದು, ತೇರ್ಗಡೆ ಪ್ರಮಾಣ ಶೇ 44.95 ಆಗಿದೆ.

ಬಾಲಕಿಯರು ಮೇಲುಗೈ ಸಾಧಿಸಿದ್ದು, ಉತ್ತೀರ್ಣ ಪ್ರಮಾಣ ಶೇ 48.61ಇದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ 40.99 ಇದೆ. ಪರೀಕ್ಷೆಗೆ ಹಾಜರಾಗಿದ್ದ 8,988 ಬಾಲಕಿಯರಲ್ಲಿ 4369 ಮಂದಿ ತೇರ್ಗಡೆಯಾಗಿದ್ದು, 8,311 ಬಾಲಕರ ಪೈಕಿ 3,407 ಮಂದಿ ತೇರ್ಗಡೆ ಅಗಿದ್ದಾರೆ.ಕಲಾ ವಿಭಾಗದಲ್ಲಿ ಶೇ 40.9 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ 47.62 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 49.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತೆಯೇ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಈ ವರ್ಷ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಹೆಚ್ಚಾಗಿದೆ ಎಂಬುದು ಗಮನಾರ್ಹ. ನಗರದ ಪ್ರದೇಶದಲ್ಲಿ ಶೇ 43.92ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ49.71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.‘ಫಲಿತಾಂಶದ ಪೂರ್ಣ ವಿವರ ಶುಕ್ರವಾರ ತಿಳಿಯಲಿದೆ. ಎಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿ, ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ವಿವರ ನಿರೀಕ್ಷಿಸಲಾಗುತ್ತಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೆಚ್ಚುವರಿ ಉಪ ನಿರ್ದೇಶಕ ಎಂ.ಕೆ.ಗಾದಗೆ ತಿಳಿಸಿದರು.ಮಾರ್ಚ್‌ 12 ರಿಂದ 27ರ ವರೆಗೆ ಜಿಲ್ಲೆಯಲ್ಲಿ 29 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಅವ್ಯವಹಾರ ಮತ್ತು ನಕಲು ಕುರಿತ ಎಂಟು ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.