ಬುಧವಾರ, ನವೆಂಬರ್ 20, 2019
20 °C
ಶೇ7.5 ಆಮದು ಸುಂಕ ಪ್ರಸ್ತಾವನೆಗೆ `ಸಿಎಐಟಿ' ವಿರೋಧ

ದ್ವಿದಳ ಧಾನ್ಯ ಶೇ20 ತುಟ್ಟಿ ಸಂಭವ

Published:
Updated:

ನವದೆಹಲಿ(ಪಿಟಿಐ): ಪ್ರಮುಖ ಆಹಾರ ಪದಾರ್ಥಗಳಾದ ಬೇಳೆ ಮತ್ತು ಕಾಳು ಸೇರಿದಂತೆ ದ್ವಿದಳ ಧಾನ್ಯಗಳು ದೇಶದ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ತುಟ್ಟಿಯಾಗುವ ಸಂಭವವಿದೆ.ದ್ವಿದಳ ಧಾನ್ಯಗಳ ಆಮದು  ವಹಿವಾಟಿಗೆ ಶೇ 7.5ರಷ್ಟು ಸುಂಕ ವಿಧಿಸುವ ಪ್ರಸ್ತಾವನೆಯನ್ನು  ಕೇಂದ್ರ ಆಹಾರ ಸಚಿವಾಲಯ ಸಲ್ಲಿಸಿದೆ. ಇನ್ನೊಂದೆಡೆ, ಈ ಪ್ರಸ್ತಾವನೆಯನ್ನು ವಿರೋಧಿಸಿರುವ `ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ'(ಸಿಎಐಟಿ), ಸರ್ಕಾರದ ಈ ಕ್ರಮದಿಂದ ದೇಶದ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಧಾರಣೆ ಕನಿಷ್ಠ ಶೇ 20ರಷ್ಟು ತುಟ್ಟಿಯಾಗಲಿದೆ ಎಂದು ಗಮನ ಸೆಳೆದಿದೆ.ಮೊದಲ ಸುಂಕ ಇರಲಿಲ್ಲ

ದ್ವಿದಳ ಧಾನ್ಯಗಳಿಗೆ ಈ ಮೊದಲು ಆಮದು ಸುಂಕ ಇರಲಿಲ್ಲ. ಈಗ ಒಮ್ಮೆಲೇ ಶೇ 7.5ರಷ್ಟು ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಪ್ರಧಾನಿ ಕಚೇರಿ(ಪಿಎಂಒ) ತಕ್ಷಣ ಮಧ್ಯಪ್ರವೇಶಿಸಬೇಕು. ಸುಂಕ ಪ್ರಸ್ತಾವನೆ ಕೈಬಿಡುವಂತೆ ಆಹಾರ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದೂ `ಸಿಎಐಟಿ' ಒತ್ತಾಯಿಸಿದೆ.`ಸಿಎಸಿಪಿ' ಶಿಫಾರಸು

ದೇಶದ ರೈತರ ಹಿತರಕ್ಷಣೆಗಾಗಿ ದ್ವಿದಳ ಧಾನ್ಯಗಳ ಆಮದು ನಿಯಂತ್ರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆಮದು ಸುಂಕ ವಿಧಿಸಬೇಕು ಎಂದು `ಕೃಷಿ ಉತ್ಪಾದನಾ ವೆಚ್ಚ ಮತ್ತು ಧಾರಣೆ ಆಯೋಗ'(ಸಿಎಸಿಪಿ) ಶಿಫಾರಸು ಮಾಡಿತ್ತು. ಅದರನ್ವಯ ಕೇಂದ್ರ ಆಹಾರ ಸಚಿವಾಲಯ ಆಮದು ಸುಂಕದ ಪ್ರಸ್ತಾವನೆ ಮಾಡಿದೆ.`ಆಹಾರ ಸಚಿವಾಲಯದ ಪ್ರಸ್ತಾವನೆ ನೋಡಿದರೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ನಡುವೆ ಸಮನ್ವಯ ಮತ್ತು ಸಂವಹನದ ಕೊರತೆ ಇದೆ ಎಂಬುದು ಎದ್ದು ಕಾಣುತ್ತದೆ. ಅಲ್ಲದೆ, ಪ್ರತಿ ಸಚಿವಾಲಯವೂ ತನಗೆ ಸಂಬಂಧಿಸಿದ ವಿಚಾರಗಳ ಬಗೆಗಷ್ಟೇ ಆಲೋಚಿಸುತ್ತದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆ ಮೇಲಾಗುವ ಪರಿಣಾಮಗಳ ಬಗ್ಗೆ ಚಿಂತಿಸುವುದೇ ಇಲ್ಲ ಎನಿಸುತ್ತಿದೆ' ಎಂದು `ಸಿಎಐಟಿ' ಹೇಳಿಕೆ ಮೂಲಕ ಕಿಡಿಕಾರಿದೆ.ಭಾರತ ಅತಿದೊಡ್ಡ ದ್ವಿದಳ ಧಾನ್ಯ ಉತ್ಪಾದಕ ರಾಷ್ಟ್ರ ಎನಿಸಿಕೊಂಡಿದ್ದರೂ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸುವ ಸಲುವಾಗಿ ಪ್ರತಿವರ್ಷ 30 ಲಕ್ಷ ಟನ್‌ನಷ್ಟು ಬೇಳೆಕಾಳುಗಳನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 2006ರಿಂದಲೂ ದ್ವಿದಳ ಧಾನ್ಯಗಳ ಆಮದು ಮೇಲೆ ಯಾವುದೇ ಸುಂಕ ವಿಧಿಸುತ್ತಿರಲಿಲ್ಲ.ಕನಿಷ್ಠ ಬೆಂಬಲ ಬೆಲೆ

ಆದರೆ, ಆಮದು ಮಾಡಿಕೊಳ್ಳುತ್ತಿರುವುದರಿಂದ ತೊಗರಿ ಬೇಳೆ ಮೊದಲಾದ ಕೆಲವು ಬೇಳೆ-ಕಾಳುಗಳ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಇದು ಇನ್ನೊಂದೆಡೆ ದೇಶದಲ್ಲಿನ ದ್ವಿದಳ ಧಾನ್ಯ ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ದೇಶದ ರೈತರ ಹಿತಕಾಯುವ ಸಲುವಾಗಿ ಕೆಲವು ದ್ವಿದಳ ಧಾನ್ಯಗಳಿಗೆ ಸರ್ಕಾರ `ಕನಿಷ್ಠ ಬೆಂಬಲ ಬೆಲೆ'ಯನ್ನೂ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿಯೇ `ಸಿಎಸಿಪಿ' ದ್ವಿದಳ ಧಾನ್ಯದ ಮೇಲೆ ಆಮದು ಸುಂಕ ವಿಧಿಸಬೇಕಾದ್ದು ಅಗತ್ಯ ಎಂಬ ಶಿಫಾರಸನ್ನು ಮಾಡಿದೆ.

ಪ್ರತಿಕ್ರಿಯಿಸಿ (+)