ದ್ವಿಪತ್ನಿತ್ವ: ಕುಮಾರಸ್ವಾಮಿ ವಿರುದ್ಧದ ರಿಟ್ ವಜಾ

ಬೆಂಗಳೂರು (ಪಿಟಿಐ): ದ್ವಿಪತ್ನಿತ್ವ ಕಾರಣಕ್ಕಾಗಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಲೋಕಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದು ಕೋರಿದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತಳ್ಳಿ ಹಾಕಿತು.
ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ನೇತೃತ್ವದ ದ್ವಿಸದಸ್ಯ ಪೀಠವು ನಗರದ ವಕೀಲ ಶಶಿಧರ ಬೆಳಗುಂಬ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಾಕ್ಷ್ಯಾಧಾರದ ಕೊರತೆ ನೆಲೆಯಲ್ಲಿ ವಜಾ ಮಾಡಿತು.
ಬೆಳಗುಂಬ ಅವರು 2011ರಲ್ಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಕುಮಾರ ಸ್ವಾಮಿ ಅವರು ಕನ್ನಡ ಚಿತ್ರ ನಟಿ ರಾಧಿಕಾ ಅವರನ್ನು ಎರಡನೇ ಪತ್ನಿಯಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದ್ದರು. ಮೊದಲ ಪತ್ನಿ ಅನಿತಾ ಅವರು ಜೀವಂತ ಇರುವಾಗಲೇ ಮರುಮದುವೆ ಮಾಡಿಕೊಳ್ಳುವ ಮೂಲಕ ~ಅಪರಾಧ~ ಎಸಗಿರುವುದರಿಂದ ಜನತಾದಳ (ಎಸ್) ನಾಯಕ ಹಾಗೂ ಲೋಕಸಭಾ ಸದಸ್ಯರೂ ಆಗಿರುವ ಕುಮಾರಸ್ವಾಮಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಅವರು ವಾದಿಸಿದ್ದರು.
ಭಾರತೀಯ ದಂಡ ಸಂಹಿತೆಯ 494ನೇ ಸೆಕ್ಷನ್ ನ್ನು (ಗಂಡ ಅಥವಾ ಹೆಂಡತಿ ಜೀವಂತ ಇದ್ದಾಗಲೇ ಬೇರೊಬ್ಬರನ್ನು ಮರುಮದುವೆಯಾಗುವುದು) ಮತ್ತು ರಾಧಿಕಾ ಅವರು ಪತ್ರಿಕೆಗಳಲ್ಲಿ ಈ ವಿಚಾರವಾಗಿ ಒಪ್ಪಿಕೊಂಡದ್ದು ಹಾಗೂ ಕುಮಾರಸ್ವಾಮಿ ಅವರು ಇದನ್ನು ದೃಢಪಡಿಸಿದ್ದನ್ನು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ರಾಧಿಕಾ ಅವರ ಮಗುವಿಗೆ ತಾನು ತಂದೆಯಾಗಿರುವುದಾಗಿಯೂ ಜೆಡಿ(ಎಸ್) ನಾಯಕ ದೃಢಪಡಿಸಿದ್ದನ್ನೂ ಉಲ್ಲೇಖಿಸಿದ ಅರ್ಜಿದಾರರು ಹಿಂದುವಾಗಿ ಇಬ್ಬರು ಪತ್ನಿಯರನ್ನು ಹೊಂದುವುದಕ್ಕೆ ಕುಮಾರಸ್ವಾಮಿ ಅವರಿಗೆ ನಿಷೇಧವಿದೆ ಎಂದು ವಾದಿಸಿದ್ದರು.
ಏನಿದ್ದರೂ ಜೆಡಿ(ಎಸ್) ನಾಯಕನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ತಾವು ಕೋರುತ್ತಿಲ್ಲ ಎಂದೂ ಅರ್ಜಿದಾರರು ತಿಳಿಸಿದ್ದರು. ಪ್ರತಿಯೊಬ್ಬ ನಾಗರೀಕನನ್ನೂ ಸಮಾನವಾಗಿ ಕಾಣಬೇಕು. ಸಂವಿಧಾನದ 14ನೇ ವಿಧಿ ಹೇಳುವಂತೆ ಕಾನೂನು ಎಲ್ಲರಿಗೂ ಏಕರೂಪವಾಗಿಯೇ ಅನ್ವಯಿಸುತ್ತದೆ~ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.